ಅನ್ನ ಈಗ ಅನುಭವವಲ್ಲ; ಅದು ಒಂದು ಉತ್ಪನ್ನ!
ಒಂದು ಕಾಲದಲ್ಲಿ ಆಹಾರ ಅನ್ನುವುದು ಸಂಬಂಧಗಳ ಜಾಲವಾಗಿತ್ತು. ಹೊಲ, ಮನೆ, ಅಡುಗೆಮನೆ, ಅಂಗಳ, ಮನೆಮಂದಿ-ಎಲ್ಲವೂ ಆ ಸರಣಿಯ ಭಾಗ. ಆ ಸಾಲಲ್ಲಿ ಪ್ರತಿಯೊಂದು ಹಂತಕ್ಕೂ ಹೆಸರು ಇತ್ತು, ಮುಖ ಇತ್ತು, ನೆನಪು ಇತ್ತು. ಅಕ್ಕಿ ಅನ್ನವಾಗುವ ಮುನ್ನ ಅದರ ಮೇಲೆ ಮಳೆ ಬಿದ್ದಿತ್ತು, ಬಿಸಿಲು ಸುಟ್ಟಿತ್ತು, ಬೆವರಿನ ಕೈಗಳು ಹಾದುಹೋಗಿದ್ದವು. ಅದನ್ನು ತಿನ್ನುವಾಗ ಆ ನೆನಪುಗಳು ಮಾತಾಡದಿದ್ದರೂ ಮೌನವಾಗಿ ಜೊತೆಯಲ್ಲೇ ಇರುತ್ತಿದ್ದವು. ಉಣ್ಣುವಾಗ ತಿನ್ನುವಾಗ ಬಟ್ಟಲಿನಿಂದ ಹೊರ ಬಿದ್ದ ಒಂದು ಅನ್ನಕ್ಕೆ ನನ್ನಮ್ಮ ನೂರು ಕಥೆ ಹೇಳಿದ್ದು ನನಗೆ ಈಗಲೂ ನೆನಪಿದೆ.ಇವತ್ತು ಆ ಸರಣಿ ತುಂಡಾಗಿದೆ. ನಾವು ಅನ್ನದ ಕೊನೆಯ ಹಂತದ ಜೊತೆ ಮಾತ್ರ ಬದುಕುತ್ತಿದ್ದೇವೆ.
ವಿಮಾನದಲ್ಲೋ ರೈಲಲ್ಲೋ ನಾವು ಪ್ರಯಾಣಿಸುವಾಗ ಒಂದು ವಿಚಿತ್ರ ಅನುಭವಕ್ಕೆ ಒಳಗಾಗುತ್ತೇವೆ. ನೆಲದಿಂದ ಮೇಲಕ್ಕೆ ಏರಿದ ಕ್ಷಣದಿಂದಲೇ ಅಥವಾ ಯಾವುದೋ ದುರ್ಗಮ ಪಶ್ಚಿಮ ಘಟ್ಟದ ನಡುವಿನ ಹಳಿಗಳ ಮೇಲೆ ಓಡತೊಡಗಿದಾಗಲೇ ನಾಗರಿಕ ಜಗತ್ತಿನಿಂದ ಸ್ವಲ್ಪ ದೂರ ಸರಿದಂತೆ ಭಾಸವಾಗುತ್ತದೆ. ಊರು, ಮನೆ, ಅಡುಗೆಮನೆ, ಕೈಗಳು-ಎಲ್ಲವೂ ಹಿಂದಕ್ಕೆ ಸರಿಯುತ್ತವೆ. ನಾವು ಒಂದು ಮುಚ್ಚಿದ ಲೋಕಕ್ಕೆ ಪ್ರವೇಶಿಸುತ್ತೇವೆ. ಆ ಲೋಕದಲ್ಲಿ ಸಮಯಕ್ಕೂ ನೆಲಕ್ಕೂ ಬೇರೆ ಬೇರೆ ಅರ್ಥ.
ಅಲ್ಲಿಯೇ ನಮ್ಮ ಕೈಗೆ ಆಹಾರದ ಪೊಟ್ಟಣ ಬರುತ್ತದೆ. ಆ ಊಟವನ್ನು ತಂದುಕೊಡುವ ಕೈಗಳು ಮಾತ್ರ ನಮ್ಮ ಎದುರಿರುತ್ತವೆ; ಆದರೆ ಅದನ್ನು ತಯಾರಿಸಿದ ಕೈಗಳು ಸಂಪೂರ್ಣವಾಗಿ ಅಜ್ಞಾತ. ಯಾವ ಊರಿನಲ್ಲಿ, ಯಾವ ಅಡುಗೆಮನೆಗಳಲ್ಲಿ, ಯಾವ ಒಲೆಯಲ್ಲಿ, ಯಾವ ಹೊತ್ತಿನಲ್ಲಿ, ಯಾವ ಮನಸ್ಥಿತಿಯಲ್ಲಿ ಅದು ರೂಪುಗೊಂಡಿತೋ-ನಮಗೆ ಯಾವ ಪೂರ್ವ ಮಾಹಿತಿಯೂ ಇರುವುದಿಲ್ಲ. ಆ ಅನ್ನಕ್ಕೆ ಕಥೆಯಿಲ್ಲ, ನೆನಪಿಲ್ಲ, ಮುಖವಿಲ್ಲ. ಕೇವಲ ಟ್ರೇಯಲ್ಲಿ ಬಂದು ನಮ್ಮ ಮುಂದೆ ಇಳಿಯುತ್ತದೆ.
ನಾವು ಕೂಡ ಅಷ್ಟೇ ನಿರ್ಲಿಪ್ತರಾಗುತ್ತೇವೆ.
ಎಲ್ಲಿ ಬೆಳೆದ ಅಕ್ಕಿ, ಯಾವ ನೀರಿನಲ್ಲಿ ಬೆಳೆದ ತರಕಾರಿ, ಯಾವ ಹೊಲದಿಂದ ಬಂದ ಸೊಪ್ಪು, ಯಾವ ಕೆರೆಯ ಮೀನು, ಯಾವ ಚಪ್ಪರದ ಬಸಳೆ -ಇವೆಲ್ಲ ನಮಗೆ ಪ್ರಶ್ನೆಗಳೇ ಆಗುವುದಿಲ್ಲ. ‘ಚೆನ್ನಾಗಿದೆ’ ಅಥವಾ ’ಇಲ್ಲ’ ಅನ್ನುವ ಎರಡು ಪ್ರತಿಕ್ರಿಯೆಗಳಲ್ಲಿ ಎಲ್ಲ ಕಥೆ ಮುಗಿದುಹೋಗುತ್ತದೆ. ಆಹಾರ ಮತ್ತು ತಿನ್ನುವವರ ನಡುವೆ ಇರುವ ಸಮ್ಮುಖ ಸಂಬಂಧ ಅಲ್ಲಿ ಸಂಪೂರ್ಣವಾಗಿ ಕಡಿದುಹೋಗಿರುತ್ತದೆ.
ಹಾಗೆ ನೋಡಿದರೆ ಇದು ವಿಮಾನ ಅಥವಾ ರೈಲು ಮಾತ್ರವಲ್ಲ. ನಮ್ಮ ದಿನನಿತ್ಯದ ಅಡುಗೆಮನೆಯೂ ನಿಧಾನವಾಗಿ ಅದೇ ದಿಕ್ಕಿಗೆ ಸಾಗುತ್ತಿದೆ.
ನಾವು ಬಳಸುವ ಮೆಣಸಿನ ಪುಡಿ ಯಾವ ಊರಿನ ಹೊಲದಲ್ಲಿ ಹುಟ್ಟಿತೋ ಗೊತ್ತಿಲ್ಲ. ಉಪ್ಪಿನಕಾಯಿಗೆ ಯಾವ ಕೈಗಳಲ್ಲಿ ಉಪ್ಪು ಸೇರಿಸಿಕೊಂಡಿತೋ ನೆನಪಿಲ್ಲ. ಪ್ಯಾಕೆಟ್ಗಳಲ್ಲಿ ಬಂದ ಗೋಧಿ ಪುಡಿ, ಹಾಲು, ಮೊಸರು, ಮಜ್ಜಿಗೆ, ತುಪ್ಪ, ಬ್ರೆಡ್ಡು ಎಲ್ಲವೂ ಮೂಲ ಸಂಬಂಧದ ಕಥೆಯನ್ನು ಕಳೆದುಕೊಂಡೇ ಬರುತ್ತವೆ. ಅಲ್ಲಿ ಅದು ಕೇವಲ ಬ್ರಾಂಡ್ ಇರುತ್ತದೆ; ಅದನ್ನು ಬೆಳೆಸಿದ ಕೈಗಳು, ಹರಿದ ಬೆವರು, ತ್ರಾಣದ ಉಸಿರು, ಊರು ಎಲ್ಲವೂ ಕಾಣೆಯಾಗಿರುತ್ತದೆ.
ಕಾವೇರಿ ತಟದಲ್ಲಿ ಬೆಳೆದ ಭತ್ತ, ಗಂಗಾವತಿಯ ಸೋನಾ, ಗುಲ್ವಾಡಿಯ ಸಣ್ಣಕ್ಕಿ, ಕಬಿನಿ ತೀರದ ತರಕಾರಿ, ಉಡುಪಿಯ ಮಟ್ಟುಗುಳ್ಳ, ಕೋಲಾರದ ಕಲ್ಲಂಗಡಿ, ಕರಾವಳಿಯ ಮೀನು, ಬನ್ನೂರಿನ ಕುರಿ ಎಲ್ಲವೂ ಸೇರಿ ಎಲ್ಲೋ ಒಂದು ಅಜ್ಞಾತ ಸ್ಥಳದಲ್ಲಿ ವ್ಯಂಜನವಾಗುತ್ತವೆ. ಆ ಸ್ಥಳಕ್ಕೆ ನಾವು ಹೋಗುವುದಿಲ್ಲ; ಆ ಕೈಗಳನ್ನು ನಾವು ನೋಡುವುದಿಲ್ಲ. ಆದರೆ ಆ ಆಹಾರ ನಮ್ಮ ದೇಹದೊಳಗೆ ಹೋಗುತ್ತದೆ. ನಮ್ಮ ರಕ್ತವಾಗುತ್ತದೆ. ನಮ್ಮ ನೆನಪಿನ ಭಾಗವಾಗುತ್ತದೆ.
ಇದು ಅಪಾಯವೋ? ಅನುಮಾನವೋ? ಅಥವಾ ಆಧುನಿಕ ಬದುಕಿನ ಅನಿವಾರ್ಯತೆಯೋ?
ನನಗೆ ಉತ್ತರ ಗೊತ್ತಿಲ್ಲ. ಆದರೆ ಒಂದು ಅಸ್ವಸ್ಥತೆ ಮಾತ್ರ ಇರುತ್ತದೆ-ಆಹಾರ ಮತ್ತು ಮನುಷ್ಯನ ನಡುವೆ ಇದ್ದ ನಂಬಿಕೆಯ ಸೂತ್ರ ನಿಧಾನವಾಗಿ ಸಡಿಲವಾಗುತ್ತಿದೆ ಅನ್ನುವ ವಿಷಾದ ಭಾವವದು.
ಹಿಂದೆ ಊಟ ಅಂದರೆ ಅದು ಒಂದು ಊರಿನ ಕಥೆ, ಮನೆ ಮನೆಯ ಕಥೆ, ರೈತರ ಕಥೆ, ಜಾನಪದದ ಕಥೆ, ಪರಂಪರೆಯ ಕಥೆ, ಸಂಭ್ರಮದ ಕಥೆ, ಕೂಡು ಶ್ರಮದ ಕಥೆ. ಇವತ್ತು ಊಟ ಅಂದರೆ ಭಾಗಶಃ ಯಾಂತ್ರಿಕ ವ್ಯವಸ್ಥೆಯ ರೂಪಫಲ ಮಾತ್ರ. ಬಹುಶಃ ಇದೇ ನಾಗರಿಕತೆಯ ಬೆಲೆ ಇರಬೇಕು. ಆದರೆ ಆ ಬೆಲೆಯನ್ನು ನಾವು ಎಷ್ಟು ಅರಿತು ಕಟ್ಟುತ್ತಿದ್ದೇವೆ ಅನ್ನುವುದೇ ಬಹುಮುಖ್ಯ ಪ್ರಶ್ನೆ.
ಒಂದು ಕಾಲ ಇತ್ತು. ಮಲೆನಾಡಿನ ಮನೆಯಲ್ಲಿ ನೆಂಟರು ಬಂದರೆ ಸಾಕು, ಅಡುಗೆಮನೆಯ ನಿರ್ಧಾರ ಸ್ಪಷ್ಟವಾಗಿರುತ್ತಿತ್ತು. ಅಂಗಳದಲ್ಲಿ ಓಡಾಡುತ್ತಿದ್ದ ಕೋಳಿ ಹಿಡಿಯಿರಿ ಎನ್ನುವ ಆಜ್ಞೆ ಬರುತ್ತಿತ್ತು. ನಾಟಿ ಕೋಳಿಯೋ? ಅಯ್ಯೊಬ್ಬ ದೇವರೇ ಬಲ್ಲ, ಅದನ್ನು ಹಿಡಿಯುವುದೆಂದರೆ ಕುತ್ತಿಗೆಗೆ ಬರುತ್ತಿತ್ತು. ಅದೊಂದು ದೊಡ್ಡ ರಾಮಾಯಣವೇ. ಕೋಳಿ ಓಡುತ್ತದೆ, ಮಕ್ಕಳು ಓಡಿಸುತ್ತಾರೆ, ತಾಯಿ ಕಿರುಚುತ್ತಾಳೆ, ತಂದೆ ತೀರ್ಪು ಹೇಳುತ್ತಾನೆ. ಐದಾರು ಮಕ್ಕಳಿದ್ದರೆ ಐದಾರು ದಿಕ್ಕುಗಳಿಂದ ದಾಳಿ. ಕೊನೆಗೆ ಯಾವ ಕೋಳಿ ಹೆಚ್ಚು ಬಲಹೀನವೋ, ಯಾವುದು ಹೆಚ್ಚು ಓಡಲಾಗದೆ ಸೈಡ್ ಹೊಡೆಯಿತೋ, ಅದೇ ಸಿಕ್ಕಿಹಾಕಿಕೊಂಡಿತೋ...ಅದು ಆ ಕ್ಷಣಕ್ಕೆ ಪಡಿಚ್ಚ! ಅವತ್ತು ಕೋಳಿ ಸಾಯುತ್ತದೆ ಅನ್ನುವುದಕ್ಕಿಂತ, ನಾವು ಅದನ್ನು ಸಾಯಿಸುತ್ತಿದ್ದೇವೆ ಅನ್ನುವ ಸ್ಪಷ್ಟ ಅರಿವು ಮನೆಯೊಳಗೇ ಇರುತ್ತಿತ್ತು. ಆಹಾರಕ್ಕೂ ಮರಣಕ್ಕೂ ನಡುವಿನ ಸಂಬಂಧ ಕಣ್ಣಿಗೆ ಕಾಣುತ್ತಿತ್ತು.
ಇವತ್ತು ದೊಡ್ಡ ನಗರಗಳಲ್ಲಿ ಹಚ್ಚಿಟ್ಟ ತರಕಾರಿಗಳು ಸಿಗುತ್ತವೆ. ಕಡೆದಿಟ್ಟ ಮಸಾಲೆ ಸಿಗುತ್ತದೆ. ಕೆಲವೆಡೆ ತೂಕದ ಲೆಕ್ಕದಲ್ಲಿ ಅನ್ನ ಸಿಗುತ್ತದೆ. ನಾವು ಮಾಡುವ ಕೆಲಸ ಅಷ್ಟೇ-ಅದನ್ನು ಬಿಸಿ ಮಾಡುವುದು. ಅಡುಗೆ ಅನ್ನುವುದು ಕ್ರಮೇಣ ತಾಂತ್ರಿಕ ಕ್ರಿಯೆಯಾಗುತ್ತಿದೆ; ಅದೊಂದು ಅನುಭವವಾಗಿ ಪರಂಪರೆಯ ಜ್ಞಾನವಾಗಿ ಉಳಿದಿಲ್ಲ.
ದಿನೇ ದಿನೇ ಇಲ್ಲೂ ನಾವು ಏನೋ ಕಳೆದುಕೊಳ್ಳುತ್ತಿದ್ದೇವೆ. ನಾವು ತಿನ್ನುವ ಆಹಾರದ ಸರಣಿ ನಮ್ಮ ಕಣ್ಣಿಂದ ದೂರವಾಗುತ್ತಿದೆ. ಆಹಾರಕ್ಕೆ ಇದ್ದ ಕಥೆ ಕಾಣೆಯಾಗುತ್ತಿದೆ. ಯಾವ ಮಣ್ಣಿನಲ್ಲಿ ಅದು ಹುಟ್ಟಿತು, ಯಾವ ಹೊಲದಲ್ಲಿ ಅದು ಬೆಳೆದಿತು, ಯಾವ ಕೈಗಳು ಅದನ್ನು ಕತ್ತರಿಸಿದವು-ಈ ಎಲ್ಲವೂ ನಮ್ಮ ನೆನಪಿನಿಂದ ಹೊರ ಹೋಗುತ್ತಿದೆ.
ಅಜ್ಞಾತ ನೆಲೆಯಲ್ಲಿ ತಯಾರಾದ ಆಹಾರ, ಅಜ್ಞಾತ ಕೈಗಳಲ್ಲಿ ರೂಪುಗೊಂಡ ಅನ್ನ, ಈ ಮುಖಗಳಿಲ್ಲದ ನಿರ್ವಾತ ವ್ಯವಸ್ಥೆಯಲ್ಲಿ ನಾವು ಅದನ್ನು ತಿನ್ನುತ್ತೇವೆ; ಆದರೆ ಅದರ ಮೂಲ ನಮ್ಮೊಳಗೆ ಪ್ರವೇಶಿಸುವುದಿಲ್ಲ.
ಇವತ್ತು ‘‘ನಮ್ಮ ಆಹಾರ, ಹಾಲು ಎಲ್ಲಿಂದ ಬರುತ್ತದೆ?’’ ಅನ್ನುವ ಪ್ರಶ್ನೆ ಬಂದರೆ ನಮಗೆ ನೆನಪಾಗುವುದು ಮಣ್ಣು, ನೆಲ, ಹೊಲ, ಗದ್ದೆ ಅಲ್ಲ. ಶಾರದೆ, ಕಪಿಲೆ, ಗೋಪಿ ಅಲ್ಲ, ಪ್ಯಾಕೆಟ್ಗಳು ನೆನಪಾಗುತ್ತವೆ. ಹೆಸರುಗಳು ನೆನಪಾಗುತ್ತವೆ. ಬ್ರಾಂಡುಗಳು ನೆನಪಾಗುತ್ತವೆ. ಆರ್ಗಾನಿಕ್, ಸೂಪರ್ಫುಡ್, ಪ್ರೊಟೀನ್-ಇವುಗಳೆಲ್ಲ ಭಾಷೆಯಾಗಿವೆ; ಆದರೆ ಕೃಷಿ ಭಾಷೆ ಮಾತ್ರ ಮೌನವಾಗಿದೆ.
ಹಾಲು ಕೊಟ್ಟ ಹಸುವಿಗೆ ಹುಲ್ಲು ಕೊಟ್ಟ ಹೊಲವನ್ನು ನೋಡದ, ಅನ್ನ ಕೊಟ್ಟ ತೆನೆ ಪೈರಿನ ಬುಡದ ಮಣ್ಣು ನೋಡದ, ಹಣ್ಣು ಕೊಟ್ಟ ಗಿಡಗಳನ್ನು ನೋಡದ ಮನಸ್ಥಿತಿಯಲ್ಲಿ ಇದ್ದೇವೆ. ಇದು ಸುಖವೋ, ದೂರವೋ, ಅಪಾಯವೋ ನನಗೆ ಖಚಿತವಾಗಿ ಹೇಳಲು ಆಗುವುದಿಲ್ಲ. ಆದರೆ ಇಲ್ಲಿ ಒಂದು ಅಂತರ ಸ್ಪಷ್ಟವಾಗಿದೆ. ಮೂಲ ನಮ್ಮ ಕಣ್ಣಳತೆಯ ದೂರವನ್ನು ಕಳೆದುಕೊಳ್ಳುತ್ತಿದೆ. ಮಲೆನಾಡಿನ ಆ ಕೋಳಿ ನಮ್ಮ ಕೈ ಮುಂದೆ ಓಡುತ್ತಿದ್ದ ಕಾಲದಲ್ಲಿ, ಅಂಗಳದ ಮೂಲೆಯಲ್ಲಿ ತೊಂಡೆ ಚಪ್ಪರ ಇದ್ದಷ್ಟು ದಿನ, ಹೊಳೆ ಅಂಚಿನ ಭತ್ತದ ಗದ್ದೆಗಳು ಹರಬಿದ್ದಷ್ಟು ದಿನ, ಆಹಾರ ನಮ್ಮ ಮುಂದೆ ಬದುಕಿತ್ತು. ಇವತ್ತು ಅದು ಪ್ಯಾಕೆಟ್ನಲ್ಲಿ ಮೌನವಾಗಿದೆ.
ಬಹುಶಃ ಈ ಮೌನವೇ ನಮ್ಮ ಕಾಲದ ಅತಿ ದೊಡ್ಡ ವ್ಯಂಜನ. ಅದನ್ನು ನಾವು ಪ್ರತಿದಿನ ಪ್ರತಿಕ್ಷಣ ಬಿಸಿ ಮಾಡಿಕೊಂಡು ತಿನ್ನುತ್ತಿದ್ದೇವೆ. ಈ ಬದಲಾವಣೆಯನ್ನು ನಾವು ಸಾಮಾನ್ಯವಾಗಿ ‘ಸೌಲಭ್ಯ’ ಅನ್ನುವ ಒಂದೇ ಪದದಲ್ಲಿ ಮುಚ್ಚಿಬಿಡುತ್ತೇವೆ. ಸಮಯ ಉಳಿಯುತ್ತದೆ, ಶ್ರಮ ಕಡಿಮೆಯಾಗುತ್ತದೆ, ಆಯ್ಕೆಗಳು ಹೆಚ್ಚಾಗುತ್ತವೆ-ಇವುಗಳೆಲ್ಲ ನಿಜವೇ. ಆದರೆ ಸೌಲಭ್ಯ ಎಂದರೆ ಯಾವಾಗಲೂ ಲಾಭ ಮಾತ್ರವೇ? ಸೌಲಭ್ಯ ನಮ್ಮಿಂದ ಏನನ್ನೂ ಕಿತ್ತುಕೊಳ್ಳುವುದಿಲ್ಲವೇ? ಈ ಪ್ರಶ್ನೆ ಇಲ್ಲಿ ಬಹಳ ಮುಖ್ಯ.
ಒಂದು ಕಾಲದಲ್ಲಿ ಆಹಾರ ಅನ್ನುವುದು ಸಂಬಂಧಗಳ ಜಾಲವಾಗಿತ್ತು. ಹೊಲ, ಮನೆ, ಅಡುಗೆಮನೆ, ಅಂಗಳ, ಮನೆಮಂದಿ-ಎಲ್ಲವೂ ಆ ಸರಣಿಯ ಭಾಗ. ಆ ಸಾಲಲ್ಲಿ ಪ್ರತಿಯೊಂದು ಹಂತಕ್ಕೂ ಹೆಸರು ಇತ್ತು, ಮುಖ ಇತ್ತು, ನೆನಪು ಇತ್ತು. ಅಕ್ಕಿ ಅನ್ನವಾಗುವ ಮುನ್ನ ಅದರ ಮೇಲೆ ಮಳೆ ಬಿದ್ದಿತ್ತು, ಬಿಸಿಲು ಸುಟ್ಟಿತ್ತು, ಬೆವರಿನ ಕೈಗಳು ಹಾದುಹೋಗಿದ್ದವು. ಅದನ್ನು ತಿನ್ನುವಾಗ ಆ ನೆನಪುಗಳು ಮಾತಾಡದಿದ್ದರೂ ಮೌನವಾಗಿ ಜೊತೆಯಲ್ಲೇ ಇರುತ್ತಿದ್ದವು. ಉಣ್ಣುವಾಗ ತಿನ್ನುವಾಗ ಬಟ್ಟಲಿನಿಂದ ಹೊರ ಬಿದ್ದ ಒಂದು ಅನ್ನಕ್ಕೆ ನನ್ನಮ್ಮ ನೂರು ಕಥೆ ಹೇಳಿದ್ದು ನನಗೆ ಈಗಲೂ ನೆನಪಿದೆ.
ಇವತ್ತು ಆ ಸರಣಿ ತುಂಡಾಗಿದೆ. ನಾವು ಅನ್ನದ ಕೊನೆಯ ಹಂತದ ಜೊತೆ ಮಾತ್ರ ಬದುಕುತ್ತಿದ್ದೇವೆ. ಉಳಿದ ಎಲ್ಲ ಹಂತಗಳು ‘ನಾಗರಿಕತೆ ಎಂಬ ವ್ಯವಸ್ಥೆ’ ಅನ್ನುವ ಅಜ್ಞಾತ ಪದದ ಒಳಗೆ ಕರಗಿಹೋಗಿವೆ. ಆಹಾರ ಈಗ ಅನುಭವವಲ್ಲ; ಅದು ಒಂದು ಉತ್ಪನ್ನ. ಉತ್ಪನ್ನಕ್ಕೆ ಕಥೆ ಬೇಕಾಗಿಲ್ಲ, ನಂಬಿಕೆಯ ಮುಖ ಬೇಕಾಗಿಲ್ಲ. ಅದಕ್ಕೆ ಒಂದೇ ಸಾಕು-ಪ್ಯಾಕೆಟ್, ದಿನಾಂಕ, ಬ್ರಾಂಡ್.
ಇಲ್ಲಿ ಒಂದು ಸೂಕ್ಷ್ಮ ಅಪಾಯ ಇದೆ. ಆಹಾರವನ್ನು ಉತ್ಪನ್ನವಾಗಿ ನೋಡತೊಡಗಿದ ಕ್ಷಣದಿಂದಲೇ, ನಾವು ಅದನ್ನು ನೈತಿಕ ಪ್ರಶ್ನೆಯಿಂದ ಹೊರತೆಗೆದು ಬಿಡುತ್ತೇವೆ. ‘‘ಇದು ಹೇಗೆ ಬೆಳೆಯಿತು?’’ ಅನ್ನುವ ಪ್ರಶ್ನೆಗಿಂತ ‘‘ಇದು ಎಷ್ಟು ಕ್ಯಾಲೊರಿ ಕೊಡುತ್ತದೆ?’’ ಅನ್ನುವ ಪ್ರಶ್ನೆ ದೊಡ್ಡದಾಗುತ್ತದೆ. ‘‘ಯಾರು ಇದನ್ನು ಬೆಳೆಸಿದರು?’’ ಅನ್ನುವುದಕ್ಕಿಂತ ‘‘ಇದು ಯಾವ ಮಾಲಲ್ಲಿ ಸಿಗುತ್ತದೆ? ಡಿಸ್ಕೌಂಟ್ನಲ್ಲಿ ಇದೆಯಾ?’’ ಅನ್ನುವುದು ಮುಖ್ಯವಾಗುತ್ತದೆ. ಆಹಾರ ಮತ್ತು ಜವಾಬ್ದಾರಿಯ ನಡುವಿನ ಸಂಬಂಧ ಇಲ್ಲಿ ನಿಧಾನವಾಗಿ ಸಡಿಲವಾಗುತ್ತದೆ.
ವಿಮಾನದಲ್ಲೋ ರೈಲಲ್ಲೋ ಬರುವ ಊಟ ಇದಕ್ಕೆ ಅತ್ಯಂತ ಸ್ಪಷ್ಟ ಉದಾಹರಣೆ. ಅಲ್ಲಿ ಆಹಾರ ನಮ್ಮ ಮುಂದೆ ಬರುತ್ತದೆ, ಅದರ ಹಿಂದೆ ಇರುವ ಬದುಕು ಕಸುವು ಕಾಣುವುದಿಲ್ಲ. ಅದೊಂದು ತಾಂತ್ರಿಕವಾಗಿ ಪರಿಪೂರ್ಣವಾದ ವ್ಯವಸ್ಥೆ-ಸ್ವಚ್ಛ, ಸಮಯಕ್ಕೆ ಸರಿಯಾಗಿ, ನಿರ್ದಿಷ್ಟ ಪ್ರಮಾಣದಲ್ಲಿ. ಆದರೆ ಆ ಪರಿಪೂರ್ಣತೆಯ ಒಳಗೆ ದೊಡ್ಡ ಮೌನವಿದೆ. ಆ ಮೌನವೇ ನಮ್ಮ ಅಸ್ವಸ್ಥತೆಯ ಮೂಲ.
ನಗರದ ಮನೆಯ ಅಡುಗೆಮನೆಯೂ ಇದಕ್ಕಿಂತ ಭಿನ್ನವಾಗಿಲ್ಲ. ಹೊಸ ಮನೆಗಳಲ್ಲಿ ಈಗ ಅಡುಗೆ ಮನೆಯೇ ಇಲ್ಲ. ಇಂದು ಅಡುಗೆ ಅನ್ನುವುದು ಕತ್ತರಿಸಬೇಕಿಲ್ಲ, ತೊಳೆಯಬೇಕಿಲ್ಲ, ಆಯ್ಕೆ ಮಾಡಬೇಕಿಲ್ಲ. ಎಲ್ಲವೂ ಮುಂಚೆಯೇ ನಿರ್ಧಾರಗೊಂಡಿದೆ. ನಾವು ಮಾಡುವ ಕೆಲಸ ಅಷ್ಟೇ-ಗ್ಯಾಸು ಆನ್ ಮಾಡುವುದು. ಈ ಪ್ರಕ್ರಿಯೆಯಲ್ಲಿ ನಾವು ಕಳೆದುಕೊಳ್ಳುವುದು ಸಮಯವಲ್ಲ; ನಾವು ಕಳೆದುಕೊಳ್ಳುವುದು ಸಂಬಂಧ.
ಹೀಗಾದರೆ ಹಿಂದಿನದ್ದೇ ಉತ್ತಮವಿತ್ತಾ? ಹಳೆಯದಕ್ಕೆ ಮರಳಬೇಕಾ? ಅಲ್ಲಿ ಕೂಡ ಪ್ರಶ್ನೆಗಳಿವೆ. ಆ ಕಾಲದಲ್ಲಿ ಶ್ರಮ ಜಾಸ್ತಿ ಇತ್ತು, ಅನಿಶ್ಚಿತತೆ ಇತ್ತು, ಕೊರತೆ ಇತ್ತು. ಎಲ್ಲರೂ ನೆಮ್ಮದಿಯಿಂದ ಬದುಕಿದ್ದರು ಅನ್ನುವುದೂ ಸತ್ಯವಲ್ಲ. ಹೀಗಾಗಿ ಇದನ್ನು ಸರಳವಾಗಿ ‘‘ಹಳೆಯದು ಒಳ್ಳೆಯದು, ಹೊಸದು ಕೆಟ್ಟದು’’ ಅನ್ನುವ ಚೌಕಟ್ಟಿನಲ್ಲಿ ನೋಡಲು ಸಾಧ್ಯವಿಲ್ಲ.
ಆದರೆ ಒಂದು ಸಂಗತಿ ಸ್ಪಷ್ಟ. ಹಿಂದಿನ ಕಾಲದಲ್ಲಿ ಆಹಾರ ನಮ್ಮ ಮುಂದೆ ಬದುಕಾಗಿತ್ತು. ಇವತ್ತು ಅದು ನಮ್ಮ ಮುಂದೆ ಮೌನವಾಗಿದೆ. ಈ ಮೌನವನ್ನು ನಾವು ಗಮನಿಸದೆ ತಿನ್ನುತ್ತಿದ್ದೇವೆ. ಇದು ಅಪಾಯವೇ? ಬಹುಶಃ ತಕ್ಷಣದ ಅಪಾಯ ಅಲ್ಲ. ಆದರೆ ಇದು ನಿಧಾನವಾದ ದೂರ. ಆಹಾರದಿಂದ ದೂರ, ಮಣ್ಣಿನಿಂದ ದೂರ, ಕೈಗಳಿಂದ ದೂರ.
ಒಂದು ಸಮಾಜ ಆಹಾರವನ್ನು ಹೇಗೆ ನೋಡುತ್ತದೆ ಅನ್ನುವುದು ಆ ಸಮಾಜ ತನ್ನ ಬದುಕನ್ನು ಹೇಗೆ ನೋಡುತ್ತದೆ ಅನ್ನುವುದರ ಸೂಚನೆ. ಆಹಾರ ಕೇವಲ ಇಂಧನವಾದರೆ, ಬದುಕೂ ಕೇವಲ ಓಟವಾಗುತ್ತದೆ. ಆಹಾರ ಕಥೆಯಾಗಿದ್ದರೆ, ಬದುಕಿಗೂ ಅರ್ಥ ಇರುತ್ತದೆ.
ಮಲೆನಾಡಿನ ಆ ಕೋಳಿ ಓಡುತ್ತಿದ್ದ ಅಂಗಳದಲ್ಲಿ, ನಾವು ಕೇವಲ ಮಾಂಸ ತಿನ್ನಲಿಲ್ಲ. ನಾವು ಒಂದು ಸಂಬಂಧವನ್ನು ಒಪ್ಪಿಕೊಂಡು ತಿಂದೆವು. ಮರಣದ ಅರಿವಿನ ಜೊತೆ ಅನ್ನ ತಿಂದೆವು. ಇವತ್ತು ಆ ಅರಿವು ನಮ್ಮಿಂದ ದೂರ ಸರಿದಿದೆ. ನಾವು ತಿನ್ನುತ್ತೇವೆ; ಆದರೆ ಒಪ್ಪಿಕೊಳ್ಳುವುದಿಲ್ಲ.
ಬಹುಶಃ ಈ ಮೌನವನ್ನು ಮುರಿಯುವುದು ನಮ್ಮ ಕೈಯಲ್ಲಿದೆ. ಮತ್ತೆ ಅಂಗಳಕ್ಕೆ ಮರಳಲು ಸಾಧ್ಯವಿಲ್ಲದಿದ್ದರೂ, ಕನಿಷ್ಠ ಪ್ರಶ್ನೆ ಕೇಳಲು ಸಾಧ್ಯವಿದೆ. ‘‘ಇದು ಎಲ್ಲಿಂದ ಬಂದಿದೆ?’’ ಅನ್ನುವ ಸರಳ ಪ್ರಶ್ನೆಯಿಂದಲೇ ಮೌನಕ್ಕೆ ಬಿರುಕು ಬೀಳುತ್ತದೆ.
ಇಲ್ಲದಿದ್ದರೆ ನಾನು ಮೊದಲೇ ಹೇಳಿದಂತೆ ಈ ಮೌನವೇ ನಮ್ಮ ಕಾಲದ ಅತಿ ದೊಡ್ಡ ವ್ಯಂಜನವಾಗಿ ಉಳಿಯುತ್ತದೆ. ನಾವು ಅದನ್ನು ಪ್ರತಿದಿನ ಬಿಸಿ ಮಾಡಿಕೊಂಡು ತಿನ್ನುತ್ತಲೇ ಇರುತ್ತೇವೆ. ರುಚಿ ಗೊತ್ತಾಗದೆ. ಕಥೆ ಕೇಳದೆ.