ಮಂಗಟ್ಟೆಯ ತಪಸ್ಸು ಮತ್ತು ಮನುಷ್ಯತ್ವದ ಪಾಠ...
ಕಳೆದ ಹದಿನೈದು ವರ್ಷಗಳಲ್ಲಿ ದಿನೇಶ್ ಹೊಳ್ಳರು ಮಾಡಿದ ಸೇವೆ ಕಾಡಿನೊಳಗಿನ ಮಕ್ಕಳ ಕಣ್ಣುಗಳಲ್ಲಿ ಇಂದು ಕಾಣಿಸುವ ಬೆಳಕು, ಮಂಗಟ್ಟೆ ಹಕ್ಕಿಯ ಗೂಡಿನೊಳಗಿನ ಸುರಕ್ಷತೆಯಂತಿದೆ. ಈ ಕಾಡು ಉಳಿದರೆ ಮಾತ್ರ ಮಂಗಟ್ಟೆ ಉಳಿಯುತ್ತದೆ. ಮಂಗಟ್ಟೆ ಉಳಿದರೆ ಮಾತ್ರ ಈ ಕಾಡಿನ ಜೀವಚಕ್ರ ಉಳಿಯುತ್ತದೆ. ಅದೇ ರೀತಿ, ಈ ಮಕ್ಕಳಿಗೆ ಶಿಕ್ಷಣ ಸಿಕ್ಕರೆ ಮಾತ್ರ ಈ ಕಾಡಿನ ಭವಿಷ್ಯ ಸುರಕ್ಷಿತ. ಇದು ನಮ್ಮ ಸಮಾಜದ ಹೊಣೆಗಾರಿಕೆಯ ಕಥೆ. ಮಂಗಟ್ಟೆ ಹಕ್ಕಿಯ ತಪಸ್ಸು ನಮಗೆ ಕಲಿಸಬೇಕಾದ ಪಾಠ ಒಂದೇ - ಮುಂದಿನ ತಲೆಮಾರಿಗೆ ನಾವು ಎಷ್ಟು ಪ್ರೀತಿಯಿಂದ, ಎಷ್ಟು ಶ್ರಮದಿಂದ, ಎಷ್ಟು ಜವಾಬ್ದಾರಿಯಿಂದ ಬದುಕನ್ನು ಕಟ್ಟಿಕೊಡುತ್ತೇವೆ ಎಂಬುದೇ ನಮ್ಮ ಮಾನವೀಯತೆಯ ಅಳತೆ.
ಮಂಗಟ್ಟೆ ಹಕ್ಕಿಯ ಕಥೆ ಉತ್ತರ ಕನ್ನಡದ ಕಾಡಿಗೆ ಕೇವಲ ಒಂದು ಪ್ರಕೃತಿ ವಿಸ್ಮಯದ ವಿವರವಾಗಿ ಸೇರಿಲ್ಲ. ಹಾರ್ನ್ ಬಿಲ್ ಆ ಪ್ರದೇಶದಲ್ಲಿ ಸಮೃದ್ಧವಾಗಿದೆ ಎಂದರೆ, ಅದರ ಹಿಂದೆ ಆಹಾರ ಸರಪಳಿಯ ಸಂಪೂರ್ಣ ವ್ಯವಸ್ಥೆ ಆರೋಗ್ಯಕರವಾಗಿದೆ ಎಂದೇ ಅರ್ಥ. ಕಾವು ಕೂತ ಮಡದಿಯ ಬಾಯಿಗೆ ದಿನಕ್ಕೆ ನೂರಾರು ಹಣ್ಣುಗಳನ್ನು ಸುರಿಯುವ ಗಂಡು ಹಾರ್ನ್ ಬಿನ್ ಹಕ್ಕಿಯ ತಪಸ್ಸು, ಆ ಕಾಡಿನೊಳಗೆ ಹಣ್ಣು-ಹಂಪಲುಗಳ ಅಪಾರ ಸಮೃದ್ಧಿ ಇರುವುದರ ಜೀವಂತ ಸಾಕ್ಷಿ. ದಾಂಡೇಲಿ, ಜೋಯಿಡಾ, ಯಲ್ಲಾಪುರದ ಕಾಡುಗಳು ಇನ್ನೂ ಉಸಿರಾಡುತ್ತಿವೆ ಎಂಬುದಕ್ಕೆ ಇಂತಹ ಸಮೃದ್ಧ ಮಂಗಟ್ಟೆಯೇ ಸಾಕ್ಷಿ.
ಈ ಕಾಡಿನೊಳಗೆ ವಾಸಿಸುವ ಹಾಲಕ್ಕಿ, ಕುಣುಬಿ, ಸಿದ್ದಿ ಮುಂತಾದ ಬುಡಕಟ್ಟು ಜನಾಂಗದ ಬದುಕು ಕೂಡ ಇದೇ ಜೀವಚಕ್ರದ ಭಾಗ. ಅವರ ಬದುಕು ಕಾಡಿನಿಂದ ಬೇರ್ಪಟ್ಟದ್ದಲ್ಲ. ವರ್ಷಕ್ಕೆ ಒಂದು ಬಾರಿ ಮಾಡುವ ಭತ್ತದ ಕೃಷಿ, ಉಳಿದ ದಿನಗಳಲ್ಲಿ ಗೋವಾದ ಗೋಡಂಬಿ ಕಾರ್ಖಾನೆಗಳಿಗೆ ದುಡಿಯಲು ಹೋಗುವ ದುಡಿಮೆ, ಮಧ್ಯೆ ಮಧ್ಯೆ ಕಾಡಿನೊಳಗಿನ ಚಿಕ್ಕ ಚಿಕ್ಕ ವಾಸಸ್ಥಾನಗಳ ಮೌನ-ಇವೆಲ್ಲವೂ ಅವರ ದಿನಚರಿ. ಇವರ ಮಕ್ಕಳ ಬದುಕೂ ಕೂಡ ಭಾಗಶಃ ಇದೇ ದಾರಿಯಲ್ಲೇ ಸಾಗಿದೆ. ಕಾಡಿನೊಳಗಿನ ಈ ಮಲೆ ಮಕ್ಕಳನ್ನು ‘‘ನೀವು ಮುಂದೆ ಏನು ಆಗಬೇಕು?’’ ಎಂದು ಕೇಳಿದರೆ ಬರುವ ಉತ್ತರಗಳು ಅತ್ಯಂತ ಸರಳ. ‘‘ನಾನು ಟೈಲರ್ ಆಗ್ತೇನೆ, ಬಸ್ ಡ್ರೈವರ್ ಆಗ್ತೇನೆ, ಪ್ರೈಮರಿ ಸ್ಕೂಲಿನ ಮೇಷ್ಟ್ರು ಆಗ್ತೇನೆ’’ ಹೊರತು ನಗರ ಕೇಂದ್ರಿತ ಬಣ್ಣ ಮೋಹಿತ ಶ್ರೀಮಂತ ಉದ್ಯೋಗದ ಯಾವ ಕನಸುಗಳೂ ಅವರ ಬಾಯಲ್ಲಿ ಇಲ್ಲ. ಏಕೆಂದರೆ ಅವರು ನೋಡುವ ಪ್ರಪಂಚವೇ ಅಷ್ಟೇ. ಅವರ ಸುತ್ತಲಿನ ಬದುಕಿನಲ್ಲಿ ಇವರೆಲ್ಲ ನೋಡಿರುವ ವೃತ್ತಿಗಳು ಇವಷ್ಟೇ.
ಹುಟ್ಟಿದ್ದು ಕಾಡಿನಲ್ಲಿ, ಬೆಳೆದದ್ದು ಕಾಡಿನಲ್ಲಿ, ನೋಡಿದ್ದು ಕಾಡಿನ ಜೀವಜಗತ್ತು. ಆದರೆ ಈ ಬದುಕಿನಲ್ಲಿ ಇವರಿಗೆಲ್ಲ ಉನ್ನತ ಶಿಕ್ಷಣ ಎಂಬ ಪದವೇ ಅತಿಥಿಯಂತೆ. ಕಲಿಯಬೇಕೆಂಬ ಆಸೆ ಇದ್ದರೂ, ಆ ಆಸೆಗೆ ದಾರಿ ತೋರಿಸುವ ಸ್ಪಷ್ಟ ಕೈಗಳು ಇಲ್ಲ.
ಅಂತಹ ಸಂದರ್ಭದಲ್ಲಿ ಈ ಕಾಡಿನೊಳಗೆ ಒಮ್ಮೆ ಚಾರಣದ ದಾರಿಯಲ್ಲಿ ದಾರಿ ತಪ್ಪದೇ ಬಂದವರು ಮಂಗಳೂರಿನ ದಿನೇಶ್ ಹೊಳ್ಳರು. ಪರಿಸರವಾದಿ, ಕಲಾವಿದ. ಕಾಡು, ಬೆಟ್ಟ, ನದಿ, ಹೊಳೆಗಳನ್ನು ನಿರಂತರ ನೋಡುತ್ತಾ ಅರಣ್ಯದ ಬದಲಾಗುತ್ತಿರುವ ಮುಖವನ್ನು ಸೂಕ್ಷ್ಮವಾಗಿ ಗಮನಿಸಿದವರು. ಆದರೆ ಅವರ ಗಮನವನ್ನು ಸಂಪೂರ್ಣವಾಗಿ ಸೆಳೆದದ್ದು ಈ ಅಡವಿ ಮಕ್ಕಳು.
ಕಾಡಿನ ನಡುವೆ ಬೆಳೆದ ಈ ಮಕ್ಕಳ ಕಣ್ಣುಗಳಲ್ಲಿ ಕಲಿಯಬೇಕೆಂಬ ಹಸಿವು ಇತ್ತು. ಆದರೆ ಅದನ್ನು ಪೂರ್ಣ ತಣಿಸುವ ವ್ಯವಸ್ಥೆ ಪ್ರಭುತ್ವದ ಕಡೆಯಿಂದ ನಡೆದಿರಲಿಲ್ಲ. ಈ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಕ್ಕರೆ, ನಾಳೆ ಇದೇ ಮಕ್ಕಳು ಕಾಡಿನ ಪ್ರತಿನಿಧಿಗಳಾಗಿ ಅರಣ್ಯ ಇಲಾಖೆಗೆ ಸೇರಬಹುದು, ಕಾಡನ್ನು ಉಳಿಸುವ ಜವಾಬ್ದಾರಿಯನ್ನು ಹೊತ್ತುಕೊಳ್ಳಬಹುದು ಎಂಬ ಆಸೆ ಹೊಳ್ಳರಲ್ಲಿ ಬಲವಾಯಿತು. ಅದೇ ಆಶಯ 2006ರಿಂದ ಜೋಯಿಡಾದೊಂದಿಗೆ ಅವರ ಸಂಬಂಧವನ್ನು ಗಟ್ಟಿಗೊಳಿಸಿತು.
ತಮ್ಮ ಹುಟ್ಟಿದ ದಿನವನ್ನು ಅವರು ಊರಲ್ಲಿ ಎಂದಿಗೂ ಆಚರಿಸಲಿಲ್ಲ. ಅದು ಜೂನ್ 15 - ಶಾಲೆಗಳ ಆರಂಭದ ದಿನ. ಆ ದಿನವನ್ನು ಅವರು ಅಡವಿ ಮಕ್ಕಳೊಂದಿಗೆ ಹಂಚಿಕೊಂಡರು. ಓದುಪರಿಕರಗಳನ್ನು ಹೊತ್ತು ಅಡವಿಯೊಳಗಡೆಯೇ ಶಾಲೆಗಳಿಗೆ ಹೋದರು. ಮೊದಲಿಗೆ ಒಂದು ಶಾಲೆ, ನಂತರ ಹತ್ತು, ಇಪ್ಪತ್ತು, ನಲವತ್ತು, ನೂರು. ಶಾಲೆಗಳ ಅಂಗಳದಲ್ಲಿ ಪರಿಸರ ಶಿಕ್ಷಣದ ಶಿಬಿರಗಳು, ಚಿತ್ರಕಲೆ, ಕ್ರಾಫ್ಟ್, ಕಥೆ, ಸಂಭಾಷಣೆ - ಮಕ್ಕಳೊಳಗಿನ ಕುತೂಹಲವನ್ನು ಉಕ್ಕಿಸುವ ಪ್ರಯತ್ನ. ಕಾಡು ಅವರದ್ದೇ ಮನೆ, ಆದರೆ ಕಾಡನ್ನು ತಿಳಿದುಕೊಳ್ಳುವ ಬೌದ್ಧಿಕ ದಾರಿಯನ್ನು ಹೊಳ್ಳರು ಮತ್ತಷ್ಟು ವಿಸ್ತರಿಸಿದರು.
2019ರಲ್ಲಿ ಕೋವಿಡ್ ಬಂದಾಗ ಈ ಮಕ್ಕಳ ಬದುಕು ಸಂಪೂರ್ಣವಾಗಿ ನಿಂತಂತಾಯಿತು. ನಗರ ಮಕ್ಕಳಿಗೆ ಆನ್‌ಲೈನ್ ಪಾಠಗಳು ದೊರಕಿದಾಗ, ಕಾಡಿನ ಮಕ್ಕಳಿಗೆ ಶಿಕ್ಷಣದ ಎಲ್ಲ ದಾರಿಗಳು ಮುಚ್ಚಿದವು. ಶಾಲೆ ಬಂದ್, ಶಿಕ್ಷಕರು ದೂರ, ಪಾಠಗಳು ಇಲ್ಲ. ಮಕ್ಕಳು ಮತ್ತೆ ತಮ್ಮ ಹೆತ್ತವರ ಹಾದಿಯಲ್ಲೇ ಕಾಡಲ್ಲಿ ಬಂಧಿಯಾಗುವ ಅಪಾಯ ಎದುರಾಯಿತು. ಆ ಸಂದರ್ಭದಲ್ಲಿ ದಿನೇಶ್ ಹೊಳ್ಳರು ‘ವನ ಬೆಳಕು’ ಎನ್ನುವ ಕಾರ್ಯಕ್ರಮವನ್ನು ಆರಂಭಿಸಿದರು. ಲಾಕ್‌ಡೌನ್ ಮುಗಿಯುವವರೆಗೂ ಮಕ್ಕಳ ಆಸಕ್ತಿಯನ್ನು ಜೀವಂತವಾಗಿಟ್ಟುಕೊಂಡರು. ಮತ್ತೆ ಶಾಲೆಗಳು ಆರಂಭವಾದಾಗ ‘ವನ ಚೇತನ’ ಎಂಬ ಕಾರ್ಯಕ್ರಮ ಹುಟ್ಟಿತು. ಇದು ಕೇವಲ ಪಾಠವಲ್ಲ; ಶಿಕ್ಷಣಕ್ಕೆ ಬೇಕಾದ ಸಂಪನ್ಮೂಲಗಳನ್ನು ಒದಗಿಸುವ ಮಹಾಯಜ್ಞ. ಶಾಲೆಗಳಿಗೆ ಹೋಗಿ ಶಿಕ್ಷಕರೊಂದಿಗೆ ಮಾತುಕತೆ, ಅಗತ್ಯಗಳ ಪಟ್ಟಿಯನ್ನು ಸಂಗ್ರಹಣೆ, ದಾನಿಗಳ ಕೈಯಿಂದ ಸಹಾಯ ಸಂಗ್ರಹಿಸಿ ಪುಸ್ತಕ, ಪೆನ್, ಚೀಲ, ಕ್ರೀಡಾ ಪರಿಕರಗಳನ್ನು ಮಕ್ಕಳಿಗೆ ತಲುಪಿಸುವ ಕೆಲಸ. ಸರಕಾರದಿಂದ ಬುಡಕಟ್ಟು ಜನಾಂಗಕ್ಕೆ ಸಿಗುವ ಅನುದಾನವನ್ನು ಸರಿಯಾಗಿ ಅವರಿಗೆ ತಲುಪಿಸುವ ಸೇತುವೆ. ಕಳೆದ ಹದಿನಾರು ವರ್ಷಗಳಲ್ಲಿ ನೂರರಿಂದ ನೂರೈವತ್ತು ಶಾಲೆಗಳವರೆಗೆ ಹೊಳ್ಳರ ಬಳಗ ಈ ಸೇವೆಯ ಕೈಚಾಚಿದೆ.
ಅದೇ ದುರ್ಗಮ ಕಾಡಲ್ಲಿ ನಿಂತು ನಾನು ದಿನೇಶರನ್ನು ಕೇಳಿದೆ - ಇಲ್ಲಿಯ ಮಕ್ಕಳ ಹಿನ್ನಡೆಗೆ ಕಾಡಿನ ಪರಿಸರವೋ, ಹೆತ್ತವರೋ ಅಥವಾ ನಮ್ಮ ಪ್ರಭುತ್ವ ಕಾರಣವೋ ಎಂದು. ‘‘ಈ ಜನಾಂಗದವರಿಗೆ ಸಹಜವಾಗಿಯೇ ಹೊರಗೆ ಬರಬೇಕೆಂಬ, ಬೌದ್ಧಿಕವಾಗಿ ಬೆಳೆಯಬೇಕೆಂಬ ಆಸೆ ಕಡಿಮೆ. ನಮಗೆ ಏನು ಕಮ್ಮಿ? ನಾವು ಶಿಕ್ಷಣವಿಲ್ಲದೆ ಬದುಕಿಲ್ಲವೇ? ಎಂಬ ಹೆತ್ತವರ ನಿರ್ಲಿಪ್ತ ಮನೋಭಾವವೇ ಮಕ್ಕಳ ಹಿನ್ನಡೆಗೆ ದೊಡ್ಡ ಕಾರಣ’’. ಈ ಮಾತಿನಲ್ಲಿ ಆರೋಪಕ್ಕಿಂತ ಅರ್ಥೈಸುವ ಪ್ರಯತ್ನ ಹೆಚ್ಚು ಇತ್ತು. ಬದುಕಿನ ಅನಿವಾರ್ಯತೆಗಳು ಅವರ ಕನಸುಗಳನ್ನು ಸೀಮಿತಗೊಳಿಸಿದ್ದವು.
ಇಲ್ಲಿಂದಲೇ ಮಂಗಟ್ಟೆ ಹಕ್ಕಿಯ ರೂಪಕ ಮತ್ತೆ ನಮ್ಮ ಮುಂದೆ ಬರುತ್ತದೆ. ಮಂಗಟ್ಟೆ ತನ್ನ ಮಡದಿಯನ್ನು ಗೂಡಿನೊಳಗೆ ಸುರಕ್ಷಿತವಾಗಿ ಇರಿಸಿ, ದಿನದ ಇಡೀ ಶ್ರಮವನ್ನು ಅವಳಿಗಾಗಿ ಮೀಸಲಿಡುತ್ತದೆ. ತನ್ನ ಸಂತತಿಯ ಭವಿಷ್ಯಕ್ಕಾಗಿ ತಾನು ಹಸಿದು ದುಡಿಯುತ್ತದೆ. ಆದರೆ ನಾವು? ನಮ್ಮ ಮಕ್ಕಳ ಭವಿಷ್ಯಕ್ಕಾಗಿ ಇಷ್ಟು ತಪಸ್ಸು ಮಾಡುತ್ತಿದ್ದೇವೆಯೇ ಎಂಬ ಪ್ರಶ್ನೆಯನ್ನು ಈ ಕಾಡು ನಮ್ಮ ಮುಂದೆ ಇಡುತ್ತದೆ.
ಒಂದು ಕಾಲದಲ್ಲಿ ಇದೇ ಕಾಡಿನಲ್ಲಿ ಅಲ್ಲೊಂದು ಇಲ್ಲೊಂದು ಮಂಗಟ್ಟೆ ಹಕ್ಕಿಯನ್ನು ಬೇಟೆಯಾಡುತ್ತಿದ್ದ ಕೈಗಳು, ಇಂದು ಅದೇ ಕಾಡಿನೊಳಗಿನ ಶಾಲೆಯ ಅಂಗಳದಲ್ಲಿ ಚಿತ್ರ ಬಿಡಿಸುತ್ತಿವೆ. ದಿನೇಶ್ ಹೊಳ್ಳರು ಹೀಗೆ ಮಕ್ಕಳು ಬಿಡಿಸಿದ ನೂರಾರು ಚಿತ್ರಗಳನ್ನು ಮಂಗಳೂರಿಗೆ ತಂದು, ಚೌಕಟ್ಟು ಕೂರಿಸಿ, ಪ್ರದರ್ಶನ ಏರ್ಪಡಿಸಿದರು. ‘‘ನೀವು ಖರೀದಿಸುವ ಪ್ರತಿಯೊಂದು ಚಿತ್ರದ ಖರೀದಿ ಮೊತ್ತವು ಮತ್ತೆ ಇದೇ ಮಕ್ಕಳ ಶಿಕ್ಷಣಕ್ಕೆ ಹೋಗುತ್ತದೆ’’ ಎಂದು ಹೇಳಿದರು. ಕರಾವಳಿಯ ಕಲಾಪ್ರಿಯರು ಕಾಳಜಿಯಿಂದ ಮುಗಿಬಿದ್ದು ಚಿತ್ರಗಳನ್ನು ಖರೀದಿಸಿದರು. ಮೊದಲ 75 ಚಿತ್ರಗಳು ಮುಗಿದಾಗ, ಇನ್ನಷ್ಟು ಚಿತ್ರಗಳಿಗೆ ಚೌಕಟ್ಟು ಹಾಕಲಾಯಿತು. ಇದು ಕೇವಲ ಕಲಾ ಪ್ರದರ್ಶನವಲ್ಲ; ಅಡವಿ ಮಕ್ಕಳ ಭವಿಷ್ಯಕ್ಕೆ ಕಟ್ಟಿದ ಸೇತುಬಂಧ.
ಕಳೆದ ಹದಿನೈದು ವರ್ಷಗಳಲ್ಲಿ ದಿನೇಶ್ ಹೊಳ್ಳರು ಮಾಡಿದ ಸೇವೆ ಕಾಡಿನೊಳಗಿನ ಮಕ್ಕಳ ಕಣ್ಣುಗಳಲ್ಲಿ ಇಂದು ಕಾಣಿಸುವ ಬೆಳಕು, ಮಂಗಟ್ಟೆ ಹಕ್ಕಿಯ ಗೂಡಿನೊಳಗಿನ ಸುರಕ್ಷತೆಯಂತಿದೆ. ಈ ಕಾಡು ಉಳಿದರೆ ಮಾತ್ರ ಮಂಗಟ್ಟೆ ಉಳಿಯುತ್ತದೆ. ಮಂಗಟ್ಟೆ ಉಳಿದರೆ ಮಾತ್ರ ಈ ಕಾಡಿನ ಜೀವಚಕ್ರ ಉಳಿಯುತ್ತದೆ. ಅದೇ ರೀತಿ, ಈ ಮಕ್ಕಳಿಗೆ ಶಿಕ್ಷಣ ಸಿಕ್ಕರೆ ಮಾತ್ರ ಈ ಕಾಡಿನ ಭವಿಷ್ಯ ಸುರಕ್ಷಿತ. ಇದು ನಮ್ಮ ಸಮಾಜದ ಹೊಣೆಗಾರಿಕೆಯ ಕಥೆ. ಮಂಗಟ್ಟೆ ಹಕ್ಕಿಯ ತಪಸ್ಸು ನಮಗೆ ಕಲಿಸಬೇಕಾದ ಪಾಠ ಒಂದೇ - ಮುಂದಿನ ತಲೆಮಾರಿಗೆ ನಾವು ಎಷ್ಟು ಪ್ರೀತಿಯಿಂದ, ಎಷ್ಟು ಶ್ರಮದಿಂದ, ಎಷ್ಟು ಜವಾಬ್ದಾರಿಯಿಂದ ಬದುಕನ್ನು ಕಟ್ಟಿಕೊಡುತ್ತೇವೆ ಎಂಬುದೇ ನಮ್ಮ ಮಾನವೀಯತೆಯ ಅಳತೆ.
ಇವತ್ತಿಗೂ ಹೊಳ್ಳರು ಮತ್ತು ಅವರ ಗೆಳೆಯರ ಕೈಯಲ್ಲಿ ಏನೇ ಕೊಟ್ಟರೂ ಅದು ಸರಿಯಾದ ದಾರಿಯಲ್ಲಿ, ಸೇರಬೇಕಾದ ಕೈಗಳಿಗೆ ಸೇರುತ್ತದೆ ಎಂಬ ನಂಬಿಕೆ ದಾನಿಗಳ ಮನಸ್ಸಿನಲ್ಲಿ ಸಹಜವಾಗಿ ಹುಟ್ಟಿಕೊಂಡದ್ದು. ಅದು ಯಾವುದೇ ರಿಜಿಸ್ಟರ್ಡ್ ಸಂಸ್ಥೆಯ ಮುದ್ರೆಯಿಂದ ಬಂದ ವಿಶ್ವಾಸವಲ್ಲ. ಅದು ಪಾರದರ್ಶಕ ಬದುಕಿನಿಂದ, ನಿರಂತರ ಪ್ರಾಮಾಣಿಕ ನಡೆಗಳಿಂದ ನಿರ್ಮಿತವಾದ ನಂಬಿಕೆ. ಹೊಳ್ಳರ ಕೆಲಸಕ್ಕೆ ಯಾವುದೇ ಭಾರೀ ಕಚೇರಿ ವ್ಯವಸ್ಥೆ ಇಲ್ಲ, ಬ್ಯಾಂಕ್ ಖಾತೆಗಳ ಜಟಿಲತೆ ಇಲ್ಲ, ಲೆಕ್ಕಪತ್ರಗಳ ಭಾರೀ ಪ್ರದರ್ಶನ ಇಲ್ಲ. ಆದರೆ ಇದೆಲ್ಲಕ್ಕೂ ಮೀರಿದ ಒಂದು ನೈತಿಕ ವ್ಯವಸ್ಥೆ ಇದೆ. ಕೊಟ್ಟ ಹಣ, ಕೊಟ್ಟ ವಸ್ತು, ಕೊಟ್ಟ ಸಮಯ - ಎಲ್ಲವೂ ಗುರಿಯ ಕಡೆಗೆ ನೇರವಾಗಿ ಸಾಗುತ್ತವೆ ಎಂಬ ನಿಶ್ಚಿತತೆ. ಅದಕ್ಕೇ ಜನ ಸ್ವಯಂಪ್ರೇರಿತವಾಗಿ ಕೈ ಚಾಚುತ್ತಾರೆ.
ಅವರು ಮಾಡಿದ್ದು ಒಂದೇ - ಕಾಡಿನೊಳಗಿನ ಸಮುದಾಯದ ಸಮಸ್ಯೆಗಳನ್ನು ಜನರಿಗೆ ಹೇಳಿಕೊಟ್ಟರು. ಅಲ್ಲಿ ಮಕ್ಕಳ ಬದುಕು ಹೇಗಿದೆ, ಅವರ ಅಗತ್ಯಗಳೇನು, ಶಿಕ್ಷಣದ ಕೊರತೆ ಇವೆಲ್ಲ ಅವರ ಭವಿಷ್ಯವನ್ನು ಹೇಗೆ ಕಟ್ಟಿ ಹಾಕುತ್ತಿದೆ ಎಂಬುದನ್ನು ಸರಳವಾಗಿ ವಿವರಿಸಿದರು. ಜನ ತಮ್ಮ ಸಾಮರ್ಥ್ಯದೊಳಗೆ ಸಹಾಯ ಮಾಡಲು ಮುಂದಾದರು. ಇಲ್ಲಿ ದಾನ ಒಂದು ಕರ್ತವ್ಯವಾಗಿ ಬಂದಿಲ್ಲ; ಅದು ಸಂಬಂಧವಾಗಿ, ಹೊಣೆಗಾರಿಕೆಯಾಗಿ ಮೂಡಿತು.
ದಿನೇಶ್ ಹೊಳ್ಳರು ಕೇವಲ ಸಮಾಜಸೇವಕರಲ್ಲ. ಅವರು ಒಬ್ಬ ಕಲಾವಿದ. ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ತಮ್ಮದೇ ಆದ ಗುರುತನ್ನು ಗಳಿಸಿದವರು. ಗಾಳಿಪಟ ಹಾರಾಟದ ಅಂತರ್‌ರಾಷ್ಟ್ರೀಯ ಪ್ರದರ್ಶನ ಮೇಳಗಳಲ್ಲಿ ಭಾಗವಹಿಸಿ, ಹಲವು ದೇಶಗಳನ್ನು ಸುತ್ತಿದವರು. ಕಲೆ, ಪ್ರಕೃತಿ, ಚಾರಣ, ಪರಿಸರ - ಇವರ ಆಸಕ್ತಿಗಳ ವ್ಯಾಪ್ತಿ ವಿಶಾಲ. ಆದರೆ ಆ ಎಲ್ಲ ಪ್ರಯಾಣ, ಪ್ರದರ್ಶನಗಳಿಂದ, ಗಳಿಸಿದ ಆದಾಯದ ದೊಡ್ಡ ಭಾಗವನ್ನು ಅವರು ತಮ್ಮದೇ ಬದುಕಿಗೆ ಮೀಸಲಿಡಲಿಲ್ಲ. ಕನಿಷ್ಠ ಮೂರನೇ ಒಂದು ಭಾಗದಷ್ಟು ಹಣವನ್ನು ವನಚೇತನಕ್ಕೆ ವಿನಿಯೋಗಿಸುತ್ತಲೇ ಬಂದಿದ್ದಾರೆ. ಕಾಡಿನೊಳಗಿನ ಮಕ್ಕಳ ಶಿಕ್ಷಣಕ್ಕೆ, ಅವರ ಬದುಕಿನ ದಿಕ್ಕು ಬದಲಿಸಲು ಬಳಸಿದ್ದಾರೆ. ಅವರ ಪ್ರಕಾರ ಇದು ದಾನವಲ್ಲ. ಇದು ವಾಪಸಿ. ಕಾಡು ಕೊಟ್ಟ ಉಸಿರಿಗೆ, ಕಾಡು ಕೊಟ್ಟ ನೆಮ್ಮದಿಗೆ, ಕಾಡು ಕೊಟ್ಟ ಪ್ರೇರಣೆಗೆ ನೀಡುವ ಪ್ರತಿಫಲ. ಪ್ರಮುಖ ಪ್ರಾಯೋಜಕರಾಗಿ ಇವರೊಂದಿಗೆ ನಿರಂತರ ಕೈಜೋಡಿಸಿದವರು ವಾಸುದೇವ ಐತಾಳರು,
ಬೆಂಗಳೂರಿನ ಎಚ್‌ಎಎಲ್, ಸಾಫ್ರಾನ್ ಟೆಕ್ನಾಲಜಿ, ಮಂಗಳೂರಿನ ಎಂಸಿಎಫ್ ಮತ್ತು ಒಂದಷ್ಟು ಸಮಾನ ಮನಸ್ಕ ಗೆಳೆಯರಿಗೆ ಹೊಳ್ಳರು ನಿರಂತರ ಕೃತಜ್ಞರಾಗಿದ್ದಾರೆ.
ಇಂಥವರ ಕೈಯಲ್ಲಿ ಸೇರಿದ ನೆರವು, ಮಂಗಟ್ಟೆ ಹಕ್ಕಿಯ ತಪಸ್ಸಿನಂತೆ ನೇರವಾಗಿ ಗೂಡಿನೊಳಗೆ ತಲುಪುತ್ತದೆ. ಅಲ್ಲಿ ಅದು ಮಕ್ಕಳ ಕಣ್ಣುಗಳಲ್ಲಿ ಬೆಳಕಾಗಿ ಮಿಂಚುತ್ತದೆ. ಟೈಲರ್, ಡ್ರೈವರ್, ಮೇಷ್ಟ್ರು ಎನ್ನುವ ಸರಳ ಕನಸುಗಳ ಪಕ್ಕದಲ್ಲಿ, ನಿಧಾನವಾಗಿ ತಾವು ಇನ್ನೇನೋ ಆಗಬೇಕೆನ್ನುವ ಪದಗಳು ಮೊಳಕೆಯೊಡೆಯಲು ಆರಂಭಿಸುತ್ತವೆ. ಇದೇ ವನ ಚೇತನದ ಅರ್ಥ. ಇದೇ ದಿನೇಶ್ ಹೊಳ್ಳರ ನಿಜವಾದ ಸಾಧನೆ.
ಮೊನ್ನೆ ದಿನೇಶ್ ಹೊಳ್ಳರ ಕಾಡಿನ ಜಾಡಿನಲ್ಲಿ ಹೆಜ್ಜೆ ಇಡುವ ಸೌಭಾಗ್ಯ ಮಂಗಳೂರಿನ ಸಾವಯವ ಕೃಷಿ ಬಳಗಕ್ಕೆ ಸಿಕ್ಕಿತು. ರತ್ನಾಕರ ಕುಳಾಯಿ ಮತ್ತು ಅವರ ಜೊತೆಯಲ್ಲಿದ್ದ ಮೂವತ್ತೈದು ಮಂದಿ ಸೇರಿ ಜೋಯಿಡಾದ ಕಾರ್ಟೂಳಿ, ಅಣಶಿ, ಖಾನಗಾಂವ, ವಾಗೇಲಿ ಮುಂತಾದ ಶಾಲೆಗಳಿಗೆ ತೆರಳಿ, ಅಲ್ಲಿನ ಮಕ್ಕಳಿಗೆ ಕೆಲವು ಅಗತ್ಯ ವಸ್ತುಗಳನ್ನು ವಿತರಿಸಲಾಯಿತು. ಆದರೆ ಅದಕ್ಕಿಂತ ದೊಡ್ಡದು ಎರಡು ದಿನ ಆ ಮಕ್ಕಳ ಜೊತೆ, ಆ ಕಾಡಿನ ಜೊತೆ, ಆ ಬದುಕಿನ ಜೊತೆ ಬೆರೆತು ಬದುಕುವುದು. ಆ ಅವಕಾಶ ನನಗೂ ಒದಗಿ ಬಂತು. ಆ ಕಾಡಿನೊಳಗಿನ ಹಳ್ಳಿಯಲ್ಲಿ ಎರಡು ದಿನ ಕಳೆಯುವುದು ಎಂದರೆ, ಕೇವಲ ಹಸಿರು ಪ್ರವಾಸವಲ್ಲ; ಅದು ನಮ್ಮೊಳಗಿನ ಮನುಷ್ಯನನ್ನು ಮತ್ತೆ ಹುಡುಕಿಕೊಳ್ಳುವ ಪ್ರಯಾಣ.
ಈ ದೇಶದಲ್ಲಿ ದಟ್ಟ ಹಸಿರು ಕಾಡುಗಳು ಸಿಗುತ್ತವೆ. ಸುಸಜ್ಜಿತ ವ್ಯವಸ್ಥೆಗಳಿರುವ ಗ್ರಾಮಗಳು ಸಿಗುತ್ತವೆ. ಆದರೆ ಅದರೊಳಗೆ ಇರುವ ನಿರ್ಮಲ ಮನಸ್ಸಿನ, ಶುದ್ಧ ಅಂತಃಕರಣದ ಮನುಷ್ಯರು ಸಿಗುವುದು ಅತ್ಯಂತ ಅಪರೂಪ. ಸಂಪರ್ಕಕ್ಕೂ, ಸಂವಹನಕ್ಕೂ ಮೀರಿದ ಆ ಹಳ್ಳಿಯಲ್ಲಿ, ನೆಟ್‌ವರ್ಕ್‌ನ ರೇಂಜಿಗೂ ಸಿಗದ ಆ ಕಾಡಿನ ನಡುವೆ ಎರಡು ದಿನ ಬದುಕಿ, ಭಾರತದ ಹಳ್ಳಿಯ ಶುದ್ಧ ಅಂತಃಕರಣವನ್ನು ನೇರವಾಗಿ ಮುಟ್ಟಿ ನೋಡುವ ಅವಕಾಶವಾಯಿತು. ಅಲ್ಲಿ ಬದುಕು ಸರಳ, ಆದರೆ ಸಂಬಂಧಗಳು ಆಳ. ಮಾತು ಕಡಿಮೆ, ಮಮತೆ ಹೆಚ್ಚು. ಅಗತ್ಯ ಕಡಿಮೆ, ಹಂಚಿಕೆ ಅಪಾರ.
ಮಕ್ಕಳ ನಗುವಿನಲ್ಲಿ ನಿಷ್ಕಪಟತೆ ಇತ್ತು. ಹಿರಿಯರ ನೋಟದಲ್ಲಿ ಮಮಕಾರ ಇತ್ತು. ಕಾಡಿನ ನಿಶ್ಶಬ್ದದಲ್ಲೂ ಒಂದು ಮೌನ ಸಂಗೀತ ಹರಿಯುತ್ತಿತ್ತು. ಮಣ್ಣಿನ ವಾಸನೆ, ಬೆಂಕಿಯ ಉರಿ, ಅನ್ನದ ತಾಪ - ಎಲ್ಲವೂ ಬದುಕಿನ ಮೂಲ ಅರ್ಥವನ್ನು ಮತ್ತೆ ನೆನಪಿಸುತ್ತಿತ್ತು. ಇಲ್ಲಿ ಮನುಷ್ಯ ಇನ್ನೂ ಮನುಷ್ಯನಾಗಿಯೇ ಉಳಿದಿದ್ದಾನೆ. ಸ್ಪರ್ಧೆಯಿಲ್ಲ, ಪ್ರದರ್ಶನವಿಲ್ಲ, ತೋರಿಕೆಯಿಲ್ಲ. ಇದೆಲ್ಲಕ್ಕೂ ದೂರವಾಗಿ, ಬದುಕನ್ನು ಬದುಕುವ ಕಲೆ ಮಾತ್ರ ಅಲ್ಲಿತ್ತು.
ಎರಡು ದಿನಗಳ ನಂತರ ಊರಿಗೆ ಮರಳುವಾಗ ಮನಸ್ಸಿನಲ್ಲಿ ಒಂದು ವಿಚಿತ್ರ ಖಾಲಿತನ. ಏನೋ ಕಳೆದುಕೊಂಡೆವು ಎಂಬ ಭಾವ. ಆದರೆ ಅದೇ ಕ್ಷಣದಲ್ಲಿ ಒಂದು ದೃಢ ನಂಬಿಕೆ - ಇಂಥ ಕಾಡುಗಳು ಉಳಿಯಬೇಕು, ಇಂಥ ಮಕ್ಕಳು ಬೆಳೆಯಬೇಕು, ಇಂಥ ಮನುಷ್ಯರು ನಮ್ಮ ಸಮಾಜದ ಮಧ್ಯೆ ನಿಂತಿರಬೇಕು. ದಿನೇಶ್ ಹೊಳ್ಳರ ಹೆಜ್ಜೆಗಳು ಕೇವಲ ಕಾಡಿನ ದಾರಿಯಲ್ಲಿ ಅಲ್ಲ; ನಮ್ಮೊಳಗಿನ ಮನುಷ್ಯತ್ವದ ಕಡೆಗೆ ಸಾಗುವ ದಾರಿಯಲ್ಲಿ. ಆ ದಾರಿಯಲ್ಲಿ ಒಂದಷ್ಟು ಹೆಜ್ಜೆ ಹಾಕುವ ಅವಕಾಶ ಸಿಕ್ಕಿದರೆ ಸಾಕು, ಬದುಕು ಇನ್ನಷ್ಟು ಅರ್ಥಪೂರ್ಣವಾಗುತ್ತದೆ.