×
Ad

ಆರಿದ ಕುಲುಮೆ ಮತ್ತು ಮಾಂಗಲ್ಯದ ಭಾಷೆ!

Update: 2026-03-08 11:39 IST

ಕೊರಳ ಮಾಲೆಯ ಆ ಘಟನೆ ಕೇವಲ ಎ.ಐ. ಮಾಡಿದ ಸಣ್ಣ ತಿದ್ದುಪಡಿ ಅಲ್ಲ; ಅದು ನಮ್ಮ ಕಾಲದ ರೂಪಕ. ಇಂದು ಕೃತಕ ಬುದ್ಧಿಮತ್ತೆ ಸುಲಭವಾಗಿ ಚಿತ್ರ ಬದಲಾಯಿಸುತ್ತದೆ, ಧ್ವನಿ ನಕಲಿಸುತ್ತದೆ, ಹಾಡು-ಕವನ ರಚಿಸುತ್ತದೆ, ಕೃಷಿ ಸಲಹೆ ನೀಡುತ್ತದೆ. ಅದು ಅಳೆಯುತ್ತದೆ, ಹೋಲಿಕೆ ಮಾಡುತ್ತದೆ, ಸರಿಹೊಂದುವ ಉತ್ತರ ಕೊಡುತ್ತದೆ. ಆದರೆ ಅದಕ್ಕೆ ಒಳಗಣ್ಣು ಮತ್ತು ಹೃದಯದ ಅನುಭವದ ಭಾಷೆ ಇದೆಯೇ?

ಗೆಳೆಯರೊಬ್ಬರು ತನ್ನ ಹೊಸ ಮನೆಯ ಗೋಡೆಗೇರಿಸಲು ಎ.ಐ.ಗೆ ತನ್ನ ಮಡದಿಯ ಬಣ್ಣದ ಫೋಟೊ ಒಂದನ್ನು ಕೊಟ್ಟು ಅದನ್ನೇ ಹಳೆಯ ಕಪ್ಪು ಬಿಳುಪು ಕಲಾತ್ಮಕ ಚಿತ್ರವನ್ನಾಗಿ ಬದಲಾಯಿಸಲು ಸೂಚನೆ ಕೊಟ್ಟರು. ಕ್ಷಣಾರ್ಧದಲ್ಲಿ ಕೃತಕ ಬುದ್ಧಿಮತ್ತೆ ಅದ್ಭುತ ಚಿತ್ರವೊಂದನ್ನು ರೂಪಿಸಿತು. ಚಿತ್ರ ನೋಡಿದ ಯಾರೇ ಆಗಲಿ ಬೆರಗಾಗುವುದು ಸಹಜ. ಬೆಳಕು, ನೆರಳು, ಮುಖಭಾವ ಎಲ್ಲವೂ ನಿಖರ. ಆದರೆ ಸೂಕ್ಷ್ಮವಾಗಿ ನೋಡಿದಾಗ ಒಂದು ವಿಚಿತ್ರ ಬದಲಾವಣೆ ಇತ್ತು. ಅವರ ಕುತ್ತಿಗೆಯಲ್ಲಿದ್ದ ಎರಡು ಸರಗಳ ಪೈಕಿ ಕರಿಮಣಿಯೊಂದನ್ನು ಕಳಚಿ ಆ ಜಾಗದಲ್ಲಿ ಮತ್ತೊಂದು ಹೊಸ ವಜ್ರದ ನೆಕ್ಲೆಸ್ ಸೇರಿಕೊಂಡಿತ್ತು. ಯಾರೂ ಕೇಳದೇ, ಯಾರೂ ಹೇಳದೇ ಕೃ.ಬು. ತನ್ನ ಕಲ್ಪನೆಯಿಂದ ಸೇರಿಸಿದ ಆಭರಣವದು.

ಆ ಹೊಸ ಸರ ಯಾವುದು? ಎಲ್ಲಿಂದ ಬಂತು? ಚಲನಚಿತ್ರ ಪ್ರಿಯೆ ಅವರ ಮಡದಿ ಗಮನವಿಟ್ಟು ನೋಡಿದಾಗ ಗೊತ್ತಾದ ಸತ್ಯ, ಅದು ಈ ದೇಶದ ಪ್ರಮುಖ ಹಿಂದಿ ನಟಿಯೊಬ್ಬಳ ಕುತ್ತಿಗೆಯಲ್ಲಿದ್ದ ವಜ್ರದ ಸರ. ಎ.ಐ. ತನ್ನ ಡೇಟಾ ಸಂಗ್ರಹದೊಳಗೆ ಇದ್ದ ಲಕ್ಷಾಂತರ ಚಿತ್ರಗಳೊಳಗಿಂದ ಗೆಳೆಯನ ಮಡದಿಯ ಮುಖ ಕುತ್ತಿಗೆ ದೇಹಾಂಗಗಳನ್ನು ಅಳತೆ ಮಾಡಿ ಅದಕ್ಕೆ ಸೂಕ್ತವಾಗುವ ಸರವನ್ನು ಆರಿಸಿ ಕುತ್ತಿಗೆಗೆ ಹಾಕಿಬಿಟ್ಟಿದೆ!

ಎ.ಐ.ಗೆ ಅದು ಕೇವಲ ವಿನ್ಯಾಸ. ಆಕಾರ. ಹೊಳಪು. ಸೌಂದರ್ಯ. ಆದರೆ ನಮಗೆ? ಕರಿಮಣಿ ಕೇವಲ ಅಲಂಕಾರವಲ್ಲ. ಅದು ವೈವಾಹಿಕ ಸಂಬಂಧದ ಸಂಕೇತ. ಸಂಸ್ಕೃತಿಯ ಗುರುತು. ಕುಟುಂಬದ ಒಳಗಡೆ ಸುಸ್ಥಿರ ಸಾಂಗತ್ಯ ಸಾಗುವ ನೆನಪಿನ ಸರಪಳಿ.ಮದುವೆಯ ಒಪ್ಪಂದ. ಎ.ಐಗೆ ಸದ್ಯ ಆ ಸೂಕ್ಷ್ಮ ಅರಿವು ಇಲ್ಲ. ಅದು ಆಭರಣವನ್ನು ಚಿತ್ರವಾಗಿ ಮಾತ್ರ ನೋಡುತ್ತದೆ. ಅದಕ್ಕೆ ಮಾಲೆಯೊಳಗಿನ ಸಂಸ್ಕೃತಿ, ಭಾವನೆ, ಬಾಂಧವ್ಯ, ನಂಬಿಕೆ - ಯಾವುದೂ ಬಹುಶಃ ಈವರೆಗೆ ಡೇಟಾ ಆಗಿ ದಾಖಲಾಗಿಲ್ಲ. ಆದ್ದರಿಂದ ಅದು ಒಬ್ಬರದ್ದನ್ನು ಇನ್ನೊಬ್ಬರಿಗೆ ಧರಿಸುತ್ತದೆ. ಒಂದು ಸಂಸ್ಕೃತಿಯ ಸಂಕೇತವನ್ನು ಮತ್ತೊಂದು ದೇಹದ ಮೇಲೆ ಅಂಟಿಸುತ್ತದೆ. ಅಲ್ಲಿ ಅರ್ಥ ಇಲ್ಲ. ಕೇವಲ ಬಳಕೆ ಮಾತ್ರ.

ಇದು ಜಾಗತೀಕರಣದ ಯಾಂತ್ರೀಕರಣದ ಮೂಲ ಸ್ವಭಾವ. ಅದು ಎಲ್ಲವನ್ನೂ ಸಂಗ್ರಹಿಸುತ್ತದೆ, ಆದರೆ ಅನುಭವಿಸುವುದಿಲ್ಲ. ಎಲ್ಲವನ್ನೂ ಮಿಶ್ರಣ ಮಾಡುತ್ತದೆ, ಆದರೆ ಮೂಲಬೇರು ಉಳಿಸುವುದಿಲ್ಲ. ಅದು ಸಂಸ್ಕೃತಿ, ಭಾವನೆ, ಸಂವೇದನೆ ಎಲ್ಲವನ್ನೂ ವಸ್ತುವಾಗಿ ನೋಡುತ್ತದೆ. ಅಂದರೆ ಅದಕ್ಕೆ ಎಲ್ಲವೂ ಉಪಯೋಗದ ವಸ್ತು, ಪ್ರದರ್ಶನದ ವಸ್ತು, ಮಾರಾಟದ ವಸ್ತು.

ಈ ದೃಷ್ಟಿಯಲ್ಲಿ ನೋಡಿದರೆ, ಎ.ಐ. ಕುತ್ತಿಗೆಯಲ್ಲಿ ಸೇರಿಸಿದ ಮೂರನೇ ಸರ ಆ ವಜ್ರದ ನೆಕ್ಲಿಸ್ ಇದೆಯಲ್ಲ? ಅದು ಮತ್ತೊಂದು ದೊಡ್ಡ ರೂಪಕ. ಅದು ಹೇಳುವುದು, ನಮ್ಮ ಸಂಸ್ಕೃತಿಯ ಸಂಕೇತಗಳು ಮುಂದೆ ನಿಧಾನವಾಗಿ ತಮ್ಮ ಅರ್ಥ ಕಳೆದುಕೊಂಡು, ಜಾಗತೀಕರಣದ ಮಾರುಕಟ್ಟೆಯೊಳಗೆ ತೇಲುವ ಅಲಂಕಾರಗಳಾಗುತ್ತಿವೆ ಎಂಬ ಸತ್ಯ.

ಇದೇ ಕಥೆಯ ಇನ್ನೊಂದು ಮುಖವನ್ನು ಹೇಳುತ್ತೇನೆ ಕೇಳಿ. ಮಲದೇವಿಹಳ್ಳಿ ಎಂಬುವುದು ಕರ್ನಾಟಕದ ಆ ಚಿಕ್ಕ ಹಳ್ಳಿ. (ಹಾಸನ) ಆ ಹಳ್ಳಿಗೆ ಹಿಂದೊಮ್ಮೆ ಹೋಗಿದ್ದೆ. ಬರೆದಿದ್ದೆ. ಒಂದು ಕಾಲದಲ್ಲಿ ಅಲ್ಲಿಯ ನೆಲದವರ ನಾಟಿ ಜಾಣ್ಮೆ ಈ ದೇಶದ ಕಲಾ ಜಗತ್ತಿಗೆ ಒಂದು ಸುಂದರವಾದ ನಾದವನ್ನು ಕೊಟ್ಟಿತ್ತು. ಅದು ಕೈಚಳಕದ ಜೀವಂತ ಶಾಲೆಯಾಗಿತ್ತು. ಸುಮಾರು ಮೂರ್ನಾಲ್ಕು ದಶಕಗಳ ಹಿಂದೆ ಅಲ್ಲಿಯ ಮೂವತ್ತು-ನಲ್ವತ್ತು ಮನೆಗಳಲ್ಲಿ ಅಡುಗೆಯ ಒಲೆಯ ಬದಿಯಲ್ಲೇ ಪುಟ್ಟ ಪುಟ್ಟ ಕುಲುಮೆಗಳು ಹೊತ್ತಿರುತ್ತಿದ್ದವು. ಆ ಕುಲುಮೆಯಲ್ಲಿ ಹುಟ್ಟುತ್ತಿದ್ದುದು ಶಾಸ್ತ್ರೀಯ ನೃತ್ಯ, ಭರತನಾಟ್ಯದ ಗೆಜ್ಜೆಗಳು, ಗಾಡಿ ಎತ್ತುಗಳ ಕೊರಳಿಗೆ ಕಟ್ಟುವ ಘಂಟೆಗಳು, ದೇವಾಲಯದ ನೃತ್ಯಕ್ಕೆ ಬೇಕಾದ ಲಯದ ನಿನಾದದ ಸಾಧನಗಳು. ನಿಮಗೆ ಶಿವರಾಜ್ ಕುಮಾರ್ ಅವರ ‘ಜನುಮದ ಜೋಡಿ’ ಗೊತ್ತಲ್ಲ? ಆ ಚಲನಚಿತ್ರದಲ್ಲಿ ಒಂದು ಹಳ್ಳಿಯ ಕೆರೆ ದಂಡೆಯ ಮೇಲೆ ನೂರಾರು ಎತ್ತಿನ ಗಾಡಿಗಳು ಸಾಲಾಗಿ ಹೋಗುವಾಗ ‘ಮಣಿ ಮಣಿ ಮಣಿ’ ಎಂಬ ಹಾಡೊಂದಿದೆ. ಆಗ ಸ್ಫುರಿಸುವ ಲಯಬದ್ಧ ಈ ಗೆಜ್ಜೆಗಳ ನಿನಾದ ನಿಮಗೆ ನೆನಪಿರುತ್ತದೆ.

ಅದು ಅಲ್ಲಿ ಕೇವಲ ಉತ್ಪಾದನೆ ಅಲ್ಲ. ಅದು ಸಂಸ್ಕೃತಿಯ ಸೃಷ್ಟಿ. ಆ ಬೆಂಕಿಯ ಮುಂದೆ ಕೂತವರು ಕೇವಲ ಕಾರ್ಮಿಕರಲ್ಲ. ಅವರು ಕಲಾವಿದರು. ಅವರ ಕೈಗಳಲ್ಲಿ ಲಯ ಇತ್ತು. ಅವರ ಕಿವಿಗಳಲ್ಲಿ ತಾಳ ಇತ್ತು. ಅವರ ಮನಸ್ಸಿನಲ್ಲಿ ಶ್ರದ್ಧೆ ಇತ್ತು. ನಾಟ್ಯಪಟುಗಳ ಕಾಲಿಗೆ ಕಟ್ಟುವ ಒಂದು ಜೋಡಿ ಗೆಜ್ಜೆ ಆದ ತಕ್ಷಣ ಅವರು ಅದನ್ನು ದೇವರ ಗದ್ದುಗೆಯ ಮೇಲಿಟ್ಟು ಪೂಜಿಸುತ್ತಿದ್ದರು. ಕಿವಿಯ ಹತ್ತಿರ ಹಿಡಿದು ಅಲುಗಾಡಿಸಿ ಅದರ ಲಯವನ್ನು ಪರೀಕ್ಷಿಸುತ್ತಿದ್ದರು. ಕೆಲವೊಮ್ಮೆ ಕಾಲಿಗೆ ಕಟ್ಟಿ ಆಂಗಿಕವಾಗಿ ಅಭಿನಯಿಸಿ ನಾದದ ಪರೀಕ್ಷೆಯೂ ನಡೆಯುತ್ತಿತ್ತು. ಅದರೊಂದಿಗೆ ಆ ಕ್ಷಣ ಅವರು ಏಕಕಾಲದಲ್ಲಿ ಕಲಾವಿದರೂ ಕುಶಲಕರ್ಮಿಗಳೂ ನಾಟ್ಯಪಟುಗಳೂ ಎಲ್ಲವೂ ಆಗಿ ಪಳಗಿದವರೇ ಆಗಿದ್ದರು.

ಆದರೆ ಯಾವಾಗ ಆ ಗೆಜ್ಜೆಗಳು ಯಂತ್ರದಲ್ಲಿ ಸೃಷ್ಟಿಯಾಗಲು ಆರಂಭಿಸಿದವೋ ಎಲ್ಲವೂ ಬದಲಾಯಿತು. ಯಂತ್ರದ ಬಾಯಲ್ಲಿ ಸಾವಿರ ಗೆಜ್ಜೆಗಳನ್ನು ಒಂದೇ ಗಂಟೆಯಲ್ಲಿ ತಯಾರಿಸುವ ಸಾಧ್ಯತೆ ಬಂತು. ಮಾರುಕಟ್ಟೆಗೆ ವೇಗ ಬೇಕಿತ್ತು. ಕಡಿಮೆ ಬೆಲೆ ಬೇಕಿತ್ತು. ಪ್ರಮಾಣ ಹೆಚ್ಚು ಬೇಕಿತ್ತು. ಆ ಕ್ಷಣದಲ್ಲಿ ಮಲದೇವಿಹಳ್ಳಿಯ ಕುಲುಮೆ ನಿಧಾನವಾಗಿ ಆರಿತು. ಒಂದು ಊರಿನ ಸಂಸ್ಕೃತಿಯ ಉಸಿರು ನಿಂತುಹೋಯಿತು.

ಉದ್ಯೋಗ ಉಳಿಸಿಕೊಳ್ಳಲು, ಬದುಕಲು ಅವರು ಬಿದಿರಿನ ಹಿಂದೆ ಓಡಿದರು. ಹತ್ತಾರು ಕಿಲೋಮೀಟರ್ ದೂರದಿಂದ ಬಿದಿರು ಕಡಿದು ಲಾರಿಗೆ ಏರಿಸಿ ತಂದು ಬುಟ್ಟಿ ಮಾಡಿದರು. ಕೆಲವು ವರ್ಷಗಳ ಕಾಲ ಅದು ಬದುಕಿಗೆ ಆಧಾರವಾಯಿತು. ಆದರೆ ಪ್ಲಾಸ್ಟಿಕ್ ಬಂದಾಗ, ಬಿದಿರಿಗೂ ಮಾರುಕಟ್ಟೆ ಇಲ್ಲವಾಯಿತು. ಆಗ ಅವರು ಊರು ಬಿಟ್ಟು ಬೆಂಗಳೂರು, ಮೈಸೂರು ಕಡೆಗೆ ಕಟ್ಟಡ ಕೆಲಸಕ್ಕೆ ಹೋದರು. ಸೆಂಟ್ರಿಂಗ್, ಕೂಲಿ, ದಿನಗೂಲಿ -ಅವರ ಬದುಕಿನ ಹೊಸ ಅರ್ಥವಾಯಿತು.

ಇಲ್ಲಿ ಆದ ಒಂದು ಸೂಕ್ಷ್ಮ ಬದಲಾವಣೆಯನ್ನು ಗಮನಿಸಿ, ಕುಲುಮೆಯ ಮುಂದೆ ಇದ್ದಾಗ ಇವರೆಲ್ಲ ಕಲಾವಿದರು. ಬಿದಿರ ಬುಟ್ಟಿ ಮಾಡುವಾಗ ಕುಶಲಕರ್ಮಿಗಳು. ಈಗ ನಗರದ ಕಟ್ಟಡದ ಮೇಲೆ ಕೇವಲ ಕಾರ್ಮಿಕರು. ಇದು ಕೇವಲ ಉದ್ಯೋಗ ಬದಲಾವಣೆ ಅಲ್ಲ. ಇದು ಮಾನವ ಗೌರವದ ಕುಸಿತದೊಂದಿಗೆ ಕೌಶಲ್ಯದ ನಾಶ. ಸಂಸ್ಕೃತಿಯ ನಿಧಾನ ಮೌಲ್ಯಹೀನತೆ.

ಜಾಗತೀಕರಣ ಖಂಡಿತ ನಮಗೆ ಕೆಲಸ ಕೊಟ್ಟಿದೆ. ಸುಖದ ಆವಿಷ್ಕಾರಗಳನ್ನು ಮನೆ ಮನೆಯ ಒಳಗಡೆ ರಾಶಿ ಸುರಿದಿದೆ. ಜಗತ್ತನ್ನೇ ಹಳ್ಳಿಯ ಅಂಗಳದಲ್ಲಿ ಕೂತು ನೋಡುವ ದಾರಿ ಮತ್ತು ಯಂತ್ರವನ್ನು ಮೈಗೆ ಕಟ್ಟಿದೆ. ಆದರೆ ಅದು ನಮ್ಮ ಕುಶಲ ಕುಸುರಿ ಕಲೆಗಳನ್ನು ಕಸಿದುಕೊಂಡಿತು. ನವ ನಾಗರಿಕತೆ ತಲೆಗೆ, ಹೊಟ್ಟೆಗೆ ಅನ್ನ- ಬಣ್ಣ ಕೊಟ್ಟಿತು. ಆದರೆ ಆತ್ಮಕ್ಕೆ ಹಸಿವುಂಟುಮಾಡಿತು.

ಎ.ಐ. ಕರಿಮಣಿ ಕಸಿದುಕೊಂಡು ಆ ಜಾಗದಲ್ಲಿಟ್ಟ ಮೂರನೇ ಸರವೂ, ಮಲದೇವಿಹಳ್ಳಿಯ ಆರಿದ ಕುಲುಮೆಯೂ ಒಂದೇ ಕಥೆಯನ್ನು ಹೇಳುತ್ತವೆ. ನಮ್ಮ ಸಂಬಂಧ, ಸೂಕ್ಷ್ಮತೆಗಳನ್ನು ಯಂತ್ರದ ವೇಗದಲ್ಲಿ ನುಚ್ಚು ನೂರಾಗಿಸಲಾದ ವ್ಯಥೆಯ ಕತೆಯದು. ಸಂಸ್ಕೃತಿಯ ಅರ್ಥವನ್ನು ಮಾರುಕಟ್ಟೆಯ ಬೆಲೆಯಲ್ಲಿ ಕರಗಿಸಲಾದ ನೋವದು. ಮಾಲೆ ಕೇವಲ ಈಗ ಅಲಂಕಾರ. ಗೆಜ್ಜೆ ಕೇವಲ ಈಗ ಶಬ್ದ. ಬಿದಿರು ಈಗ ಅಪ್ರಯೋಜಕ ವಸ್ತು.

ನಾವು ಕೇಳಬೇಕಾದ ಪ್ರಶ್ನೆ ಏನೆಂದರೆ - ಈ ವೇಗದ ಬದುಕಿನಲ್ಲಿ ನಾವು ಏನನ್ನು ಕಳೆದುಕೊಳ್ಳುತ್ತಿದ್ದೇವೆ? ನಮ್ಮ ಮಣ್ಣಿನ ವಿವೇಕವನ್ನು, ನಮ್ಮ ಸಂಸ್ಕೃತಿಯ ಸೂಕ್ಷ್ಮತೆಯನ್ನು ಉಳಿಸಿಕೊಳ್ಳದೆ ಹೋದರೆ, ಮುಂದಿನ ತಲೆಮಾರಿಗೆ ಉಳಿಯುವುದು ಕೇವಲ ಡೇಟಾ. ಅನುಭವವಿಲ್ಲದ ನೆನಪು. ಅರ್ಥವಿಲ್ಲದ ಪರಂಪರೆ. ಪ್ರೀತಿ ಇಲ್ಲದ ಸಂಬಂಧ. ಒಳಗೊಳ್ಳುವಿಕೆ ಇಲ್ಲದ ಕೆಲಸ.

ಇನ್ನು ಕೆಲವೇ ದಿನಗಳಲ್ಲಿ ನಮ್ಮ ಮಕ್ಕಳು ಮಾಂಗಲ್ಯವನ್ನು ಕೇವಲ ಫ್ಯಾಷನ್ ಸರವೆಂದೂ, ಗೆಜ್ಜೆಯನ್ನು ಕೇವಲ ಶಬ್ದವೆಂದೂ ನೋಡಬಹುದು. ಈ ಕಾರಣಕ್ಕಾಗಿಯೇ ಖಂಡಿತವಾಗಿಯೂ ಎ.ಐ. ನಮ್ಮ ಬದುಕನ್ನು ವಿಸ್ತರಿಸಿದೆ, ಆದರೆ ನಮ್ಮ ಆತ್ಮವನ್ನು ಮಾತ್ರ ಸಣ್ಣದು ಮಾಡಿದೆ. ಇದು ತಂತ್ರಜ್ಞಾನ ವಿರೋಧಿ ಮಾತಲ್ಲ. ಇದು ಮನುಷ್ಯನ ಪರವಾದ ಭವಿಷ್ಯದ ಎಚ್ಚರಿಕೆ.

ತಂತ್ರಜ್ಞಾನ ಖಂಡಿತವಾಗಿಯೂ ನಮ್ಮ ಬದುಕನ್ನು ಬೆಳಗಿಸಬೇಕು. ಆದರೆ ನಮ್ಮ ಬೇರುಗಳನ್ನು ಸುಡಬಾರದು.ಇಲ್ಲದಿದ್ದರೆ, ಮುಂದೊಂದು ದಿನ ನಮ್ಮದೇ ಸಂಸ್ಕೃತಿಯನ್ನೂ, ನಮ್ಮದೇ ನೆನಪುಗಳನ್ನೂ, ಎ.ಐ. ನಮಗಾಗಿ ಹೊಸದಾಗಿ ರಚಿಸಿ ಕೊಡುವ ದಿನ ಬರುತ್ತದೆ. ಆಗ ನಾವು ನಮ್ಮನ್ನೇ ಗುರುತಿಸಲಾಗದಷ್ಟು ದೂರ ಸರಿದಿರುತ್ತೇವೆ.

ಮೊದಲು ಕೃಷಿ ಅನ್ನಕೇಂದ್ರಿತವಾಗಿದ್ದಾಗ, ರೈತನ ಜೀವನವು ಪ್ರಕೃತಿ, ಕಾಲಚಕ್ರ, ಹಬ್ಬ-ಹರಿದಿನ, ದೇವರು-ದೈವ, ಊರಿನ ಸಂಬಂಧಗಳು, ಪರಸ್ಪರ ಅವಲಂಬನೆ ಇವೆಲ್ಲದರ ಜೊತೆ ನೇರವಾಗಿ ಜೋಡಿಗೊಂಡಿತ್ತು. ಬಿತ್ತನೆ, ಕೊಯ್ಲು, ನಾಟಿ, ಕೊಟ್ಟಿಗೆ, ಅಡುಗೆ-ಎಲ್ಲವೂ ಒಂದು ಸಂಸ್ಕೃತಿಯ ಆಚರಣೆಯಾಗಿತ್ತು. ಅನ್ನವು ಕೇವಲ ಆಹಾರವಲ್ಲ, ಅದು ಬದುಕಿನ ತತ್ವ, ಬದುಕಿನ ನೀತಿ, ಬದುಕಿನ ಮೌಲ್ಯವಾಗಿತ್ತು. ಆದರೆ ಕೃಷಿ ಹಣದ ದಾರಿಗೆ ತಿರುಗಿದ ಕ್ಷಣದಿಂದ, ಭೂಮಿ ತಾಯಿ ಅಲ್ಲ; ಉತ್ಪಾದನಾ ಸಾಧನ ಆಗಿಬಿಟ್ಟಳು. ಬೆಳೆ ಆಹಾರವಲ್ಲ; ಮಾರುಕಟ್ಟೆ ಸರಕಾಯಿತು. ರೈತ ಸಂಸ್ಕೃತಿಯ ಪಾಲಕನಲ್ಲ; ಉತ್ಪಾದಕ ಮತ್ತು ವ್ಯಾಪಾರಿ ಆಗಿ ಬದಲಾಯಿಸಲ್ಪಟ್ಟ. ಇಲ್ಲಿಯೇ ನಮ್ಮ ಭಾಷೆ ಬದಲಾಯಿತು. ಭಾವನೆ ಬದಲಾಯಿತು. ಅದರ ಅರ್ಥ ಬದಲಾಯಿತು. ಸಾಂಸ್ಕೃತಿಕ ಪಲ್ಲಟದ ಮೊದಲ ಬಿರುಕು ಗೋಚರಿಸುತ್ತದೆ. ಒಟ್ಟಾಗಿ ಬಿತ್ತೋಣ, ಒಟ್ಟಾಗಿ ಕೊಯ್ಯೋಣ ಎಂಬ ಕೂಡು ಸಂಸ್ಕೃತಿ ಇದ್ದಲ್ಲಿ, ಈಗ ನನ್ನ ಲಾಭ ಎಷ್ಟು? ನನ್ನ ಕೂಲಿ ಎಷ್ಟು? ದುಡಿಮೆ ಎಷ್ಟು ಗಂಟೆ? ಎಂಬ ಲೆಕ್ಕಾಚಾರ ಪ್ರಬಲವಾಗುತ್ತಿದೆ. ಹಂಚಿಕೆ ಸಂಸ್ಕೃತಿಗೆ ಬದಲು ಸ್ಪರ್ಧಾತ್ಮಕ ಮನೋಭಾವ ವಿಜೃಂಭಿಸುತ್ತಿದೆ. ಸಂಧಿ, ಕಥೆ, ಕಬಿತೆ ಹೇಳಲು ಗದ್ದೆಯ ಕೆಸರಲ್ಲಿ ಸಾಲಾಗಿ ನಿಂತವರೆಲ್ಲ ಒಂದು ಗುಂಪಾಗದೆ ಪ್ರತ್ಯೇಕ ಘಟಕಗಳಾಗಿ ಕಾಣಿಸುತ್ತಾರೆ. ಹಬ್ಬಗಳು, ಜಾತ್ರೆಗಳು, ಆಚರಣೆಗಳು - ಇವುಗಳೂ ಅನ್ನದ ಚಕ್ರದಿಂದ ಹಣದ ವೇಳಾಪಟ್ಟಿಗೆ ಸರಿದಿವೆ. ಮೊದಲು ಹಬ್ಬ ಎಂದರೆ ಕೊಯ್ಲಿನ ಸಂತಸ, ಹಳ್ಳಿಯ ಪಾಲಿಗೆ ಕೂಡೂಟ, ದೇವರಿಗೆ ಕೃತಜ್ಞತೆ. ಈಗ ಹಬ್ಬ ಎಂದರೆ ಮಾರುಕಟ್ಟೆ ಆಫರ್, ಶಾಪಿಂಗ್, ಪ್ರದರ್ಶನ. ಹಬ್ಬದೊಳಗಿನ ಆಧ್ಯಾತ್ಮಿಕತೆ ಸಂಭ್ರಮ ಮಸುಕಾಗಿ, ಪ್ರದರ್ಶನ ಮತ್ತು ಖರ್ಚಿನ ಸಂಸ್ಕೃತಿ ಪ್ರಬಲವಾಗುತ್ತದೆ.

ಹಳ್ಳಿ ಮನೆಗಳ ಆಹಾರ ಪದ್ಧತಿಯಲ್ಲೂ ಭಾರೀ ಪಲ್ಲಟ. ಸ್ಥಳೀಯ ಬೆಳೆ, ಸಾಂಪ್ರದಾಯಿಕ ಆಹಾರ ಪದ್ಧತಿ ಹಿನ್ನಡೆಯಾಗಿ, ಮಾರುಕಟ್ಟೆ ನಿಯಂತ್ರಿತ ಆಹಾರ ಸಂಸ್ಕೃತಿ ಮೆತ್ತಗೆ ಕೈ ಹಿಡಿಯುತ್ತದೆ. ರಾಗಿ, ಜೋಳ, ತೆಂಗು, ಹಲಸು, ಕಾಡುಸೊಪ್ಪು - ಇವೆಲ್ಲವೂ ನಿಧಾನವಾಗಿ ಮರೆತು, ಅಕ್ಕಿ-ಗೋಧಿ-ಪ್ಯಾಕೆಟ್ ಆಹಾರ ಮೇಲುಗೈ ಪಡೆಯುತ್ತದೆ. ಇದರೊಂದಿಗೆ ದೇಹ ಆರೋಗ್ಯ ಮಾತ್ರವಲ್ಲ, ಸಾಂಸ್ಕೃತಿಕ ಸ್ಮತಿಯೂ ಕ್ಷೀಣಿಸುತ್ತದೆ.

ಮೊದಲು ಕೃಷಿ ಸಂಬಂಧಿತ ನುಡಿಗಟ್ಟುಗಳು, ಮಾತು, ಹಾಡುಗಳು ಇದ್ದಲ್ಲಿ, ಈಗ ಮಾರುಕಟ್ಟೆ, ಲಾಭ, ಯೋಜನೆ, ಸಾಲ, ಬಡ್ಡಿ ಇವುಗಳ ಭಾಷೆ ಪ್ರಬಲವಾಗುತ್ತದೆ. ಅತಿದೊಡ್ಡ ಪಲ್ಲಟ ಸಂಭವಿಸುವುದು ರೈತನ ಆತ್ಮಗೌರವದಲ್ಲಿ. ಅನ್ನ ನೀಡುವವನಾಗಿದ್ದ ರೈತ, ಹಣದ ಬಲವಂತದೊಳಗೆ ಸಿಲುಕಿದಾಗ, ತನ್ನನ್ನು ತಾನು ಉತ್ಪಾದನಾ ಯಂತ್ರದ ಒಂದು ಭಾಗವೆಂದು ಕಾಣತೊಡಗುತ್ತಾನೆ. ಇಲ್ಲಿಂದಲೇ ಬೇಸರ, ಅಸಮಾಧಾನ, ಆತಂಕ, ಸಾಲದ ಒತ್ತಡ, ಆತ್ಮಹತ್ಯೆಗಳಂತಹ ದಾರುಣ ಸ್ಥಿತಿಗಳು ಹುಟ್ಟುತ್ತವೆ.

ಕೊರಳ ಮಾಲೆಯ ಆ ಘಟನೆ ಕೇವಲ ಎ.ಐ. ಮಾಡಿದ ಸಣ್ಣ ತಿದ್ದುಪಡಿ ಅಲ್ಲ; ಅದು ನಮ್ಮ ಕಾಲದ ರೂಪಕ. ಇಂದು ಕೃತಕ ಬುದ್ಧಿಮತ್ತೆ ಸುಲಭವಾಗಿ ಚಿತ್ರ ಬದಲಾಯಿಸುತ್ತದೆ, ಧ್ವನಿ ನಕಲಿಸುತ್ತದೆ, ಹಾಡು-ಕವನ ರಚಿಸುತ್ತದೆ, ಕೃಷಿ ಸಲಹೆ ನೀಡುತ್ತದೆ. ಅದು ಅಳೆಯುತ್ತದೆ, ಹೋಲಿಕೆ ಮಾಡುತ್ತದೆ, ಸರಿಹೊಂದುವ ಉತ್ತರ ಕೊಡುತ್ತದೆ. ಆದರೆ ಅದಕ್ಕೆ ಒಳಗಣ್ಣು ಮತ್ತು ಹೃದಯದ ಅನುಭವದ ಭಾಷೆ ಇದೆಯೇ?

ಕರಿಮಣಿಯ ಜಾಗದಲ್ಲಿ ವಜ್ರದ ಸರ ಹಾಕಿದ್ದು ವಿನ್ಯಾಸದ ದೃಷ್ಟಿಯಿಂದ ತಪ್ಪಲ್ಲ. ಆದರೆ ಜೀವನದ ದೃಷ್ಟಿಯಿಂದ ಅದು ಅರ್ಥದ ಕಳವು. ಯಂತ್ರದ ಮನಸ್ಸಿಗದು ಆಕಾರ, ಹೊಳಪು, ಸೌಂದರ್ಯ ಎಲ್ಲವೂ ಹೌದು. ಆದರೆ ನಮಗದು ಸಂಬಂಧ, ಸಂಸ್ಕೃತಿಯ ನೆನಪು. ಇಂದು ಯಂತ್ರ ಮೃದಂಗ ಬಾರಿಸಬಹುದು, ರಾಗ ರಚಿಸಬಹುದು, ನಾಟ್ಯ ಭಂಗಿ ಕಲಿಸಬಹುದು, ಅನ್ನ ಬೇಯಿಸಬಹುದು. ಆದರೆ ಅದು ನಾದದ ಕಂಪನವನ್ನು ಅನುಭವಿಸುವುದಿಲ್ಲ. ಮಣ್ಣಿನ ವಾಸನೆಯನ್ನು ಒಳಗೊಳ್ಳುವುದಿಲ್ಲ. ಮಳೆ ಬಾರದ ರಾತ್ರಿ ರೈತನ ಮನದ ಆತಂಕವನ್ನು ಸ್ಪರ್ಶಿಸುವುದಿಲ್ಲ. ಅದು ಕೇವಲ ಮಾಹಿತಿ ಸಂಗ್ರಹಿಸುತ್ತದೆ; ಬದುಕನ್ನು ಅನುಭವಿಸುವುದಿಲ್ಲ. ನಮ್ಮ ಕೈಯಲ್ಲಿ ಯಂತ್ರ ಇರಲಿ; ಆದರೆ ಯಂತ್ರದ ಕೈಯಲ್ಲಿ ನಮ್ಮ ಅರ್ಥ ಸಿಕ್ಕಿಹಾಕಿಕೊಳ್ಳಬಾರದು. ನಾಳೆ ಎ.ಐ. ನಮ್ಮ ಅಂಗೈಯಲ್ಲೇ ಕೂತು ನಮ್ಮ ಸಂಸ್ಕೃತಿಯನ್ನು ಸುಂದರವಾಗಿ ಚಿತ್ರಿಸಬಹುದು. ಆದರೆ ನಾವು ಅದನ್ನು ಬದುಕದೇ ಹೋದರೆ, ಆ ಚಿತ್ರ ಸತ್ಯವಾಗುವುದಿಲ್ಲ. ಅದೇ ನಮ್ಮ ಕಾಲದ ಸೂಕ್ಷ್ಮ ಮಿತಿ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ನರೇಂದ್ರ ರೈ ದೇರ್ಲ

contributor

Similar News