ಕ್ರಿಕೆಟ್ ವಿಶ್ವಕಪ್ ಉದ್ಘಾಟನಾ ಪಂದ್ಯಕ್ಕೆ ಜನರೇ ಬಂದಿಲ್ಲ ಯಾಕೆ ?
ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳು ಕಾಯುತ್ತಿದ್ದ ಕ್ರಿಕೆಟ್ ವಿಶ್ವಕಪ್ ಮಹಾಸಮರ ಭಾರತದಲ್ಲೇ ಶುರುವಾದದ್ದೇನೋ ಹೌದು. ಆದರೆ ಯಾವ ರೀತಿಯಲ್ಲಿ?. ಎಷ್ಟು ನೀರಸ ರೀತಿಯಲ್ಲಿ?. ನೋಡುವುದಕ್ಕೆ ಜನರೇ ಇಲ್ಲದೆ, ಸ್ಟೇಡಿಯಂ ಬಿಕೋ ಎನ್ನುತ್ತಿದ್ದ ಸ್ಥಿತಿಯಲ್ಲಿ ವಿಶ್ವಕಪ್ ಉದ್ಘಾಟನಾ ಪಂದ್ಯ ನಡೆಯುವ ಸ್ಥಿತಿ ತಲೆದೋರಿತು ಎಂದರೆ ಇದೆಂಥ ಅವಸ್ಥೆ ?. ಇಷ್ಟು ದೊಡ್ಡ ಜಾಗತಿಕ ಚಾಂಪಿಯನ್ ಶಿಪ್ ಪ್ರಾರಂಭವಾಗುವಾಗ ಅದಕ್ಕೆ ಸೂಕ್ತ ಒಂದು ಉದ್ಘಾಟನಾ ಸಮಾರಂಭವೂ ಇರಲಿಲ್ಲ ಯಾಕೆ ?.
ವಿಶ್ವಕಪ್‌ಗೆ ಗುರುವಾರ ಅಧಿಕೃತ ಚಾಲನೆ ಸಿಕ್ಕಿತು. ಆದರೆ ಉದ್ಘಾಟನಾ ಪಂದ್ಯಕ್ಕೆ 1,32,000 ವೀಕ್ಷಕರು ಕುಳಿತುಕೊಳ್ಳುವ ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣ ಖಾಲಿ ಹೊಡೆಯುತ್ತಿತ್ತು ಎಂದರೆ ದುಡ್ಡಿನ ಮದದಲ್ಲಿ ಮುಳುಗಿ ಹೋಗಿರುವ ಬಿಸಿಸಿಐಗೆ ಮತ್ತದರ ಹಿಂದಿರುವ ಮಂದಿಗೆ ನಾಚಿಕೆಯಾಗಬೇಕಲ್ಲವೆ ?.
ಇಂಗ್ಲೆಂಡ್ ಹಾಗೂ ನ್ಯೂಝೀಲ್ಯಾಂಡ್ ತಂಡಗಳು ಉದ್ಘಾಟನಾ ಪಂದ್ಯದಲ್ಲಿ ಮುಖಾಮುಖಿಯಾದಾಗ ಸಂಪೂರ್ಣ ಖಾಲಿ ಖಾಲಿಯಾಗಿದ್ದ ಸ್ಟೇಡಿಯಂನ ಫೋಟೋಗಳು ಎಲ್ಲೆಡೆ ವೈರಲ್ ಆಗಿರುವುದು, ಟಿಕೆಟ್ಗಳು ಸೋಲ್ಡ್ಔಟ್ ಆಗಿವೆ ಎಂದು ಹೇಳಿಕೊಂಡಿದ್ದ ಬಿಸಿಸಿಐ ಮುಖಕ್ಕೆ ರಾಚುವ ಹಾಗಿದೆ. 2015 ರ ವಿಶ್ವ ಕಪ್ ಉದ್ಘಾಟನಾ ಪಂದ್ಯ ಆಸ್ಟ್ರೇಲಿಯಾದ ಮೆಲ್ಬರ್ನ್ ಕ್ರಿಕೆಟ್ ಗ್ರೌಂಡ್ ನಲ್ಲಿ ನಡೆದಾಗ ಸೇರಿದ್ದ 90 ಸಾವಿರಕ್ಕೂ ಹೆಚ್ಚಿನ ಭಾರೀ ಜನಸ್ತೋಮದ ಚಿತ್ರ ಈಗ ವೈರಲ್ ಆಗುತ್ತಿದೆ. 2019 ರ ಉದ್ಘಾಟನಾ ಪಂದ್ಯ ಇಂಗ್ಲೆಂಡ್ ನ ಓವಲ್ ಕ್ರೀಡಾಂಗಣದಲ್ಲಿ ನಡೆದಾಗಲೂ ಅದೇ ರೀತಿ ದೊಡ್ಡ ಸಂಖ್ಯೆಯ ಕ್ರಿಕೆಟ್ ಅಭಿಮಾನಿಗಳು ಸೇರಿದ್ದರು.
ಅದಕ್ಕೆ ಹೋಲಿಸಿದರೆ ವಿಶ್ವದ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂ ಎಂಬ ಹೆಗ್ಗಳಿಕೆ ಪಡೆದಿರುವ, ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಸಂಸ್ಥೆ ಬಿಸಿಸಿಐ ನ ಉಸ್ತುವಾರಿಯಲ್ಲಿ, ಅತ್ಯಂತ ಹೆಚ್ಚು ಕ್ರಿಕೆಟ್ ಪ್ರೇಮಿಗಳು ಇರುವ ದೇಶ ಭಾರತದಲ್ಲಿ ನಿನ್ನೆ ನಡೆದ ಉದ್ಘಾಟನಾ ಪಂದ್ಯ ನೋಡಿದವರಿಗೆ ಆಘಾತವಾಗಿದೆ. ಈ ರೀತಿ ಯಾವುದಾದರೂ ವಿಶ್ವಕಪ್ ಉದ್ಘಾಟನಾ ಪಂದ್ಯ ನಡೆಯುತ್ತದೆಯೇ ಎಂದು ಎಲ್ಲರೂ ಹುಬ್ಬೇರಿಸುತ್ತಿದ್ದಾರೆ.
ವಿಶ್ವಕಪ್ ಅದ್ಧೂರಿ ಉದ್ಘಾಟನಾ ಸಮಾರಂಭದ ಬಗ್ಗೆಲ್ಲ ಟಾಂ ಟಾಂ ಮಾಡಿದ್ದ ಬಿಸಿಸಿಐ ಕೊನೇ ಗಳಿಗೆಯಲ್ಲಿ ಅಂಥ ಸಮಾರಂಭವನ್ನೂ ಕೈಬಿಟ್ಟಿತ್ತು. ಕಡೆಗೆ, ಉದ್ಘಾಟನಾ ಪಂದ್ಯ ಕೂಡ ನೋಡುವುದಕ್ಕೆ ಜನರಿಲ್ಲದೆ ನಡೆದುಹೋಯಿತು.
ವಿಶ್ವಕಪ್ ಬಗ್ಗೆ ಜನರಿಗೆ ಎಷ್ಟೊಂದು ಕ್ರೇಜ್ ಇರುತ್ತದೆ ಎಂಬುದು ಗೊತ್ತೇ ಇರುವ ವಿಚಾರ. ಅದೂ ಭಾರತದಲ್ಲಿ ಕ್ರಿಕೆಟ್ ಅಂದ್ರೆ ಒಂದು ಧರ್ಮದ ಹಾಗೆ ಅಂತಾರೆ ವಿಶ್ಲೇಷಕರು. ಅಷ್ಟೊಂದು ಕ್ರಿಕೆಟ್ ಹುಚ್ಚು ಈ ದೇಶದಲ್ಲಿದೆ. ಅಂಥದ್ದರಲ್ಲಿ ಜನರೇ ಇಲ್ಲದೆ ಉದ್ಘಾಟನಾ ಪಂದ್ಯ ನಡೆಯುವಂತಾದದ್ದು ಹೇಗೆ?. ಹಾಗಾದರೆ ಬಿಸಿಸಿಐ ಅನ್ನು ಸಂಪೂರ್ಣವಾಗಿ ನಿಯಂತ್ರಿಸುವ ಅದರ ಕಾರ್ಯದರ್ಶಿ ಜಯ್ ಶಾ ಕಡಿದು ಕಟ್ಟೆ ಹಾಕಿದ್ದೇನು ?.
ಹಾಗೆ ನೋಡಿದರೆ, ಇದು ಉದ್ಘಾಟನೆಗೆ ಮಾತ್ರ ಸಂಬಂಧಿಸಿದ ಅವಾಂತರವಲ್ಲ. ವಿಶ್ವಕಪ್ ಆಯೋಜನೆಯ ಉದ್ದಕ್ಕೂ ಎಡವಟ್ಟು ಮಾಡಿಕೊಂಡೇ ಬಂದಿರುವ ಆರೋಪ ಬಿಸಿಸಿಐ ಮೇಲಿತ್ತು. ಕಡೆಗೆ ಇಂಥದೊಂದು ನಾಚಿಕೆಗೇಡಿನ, ತೀರಾ ಮುಜುಗರದ ಸನ್ನಿವೇಶವನ್ನು ನೋಡುವ ಹಾಗಾಯಿತು.
ಸ್ಟೇಡಿಯಂ ಸಾಮರ್ಥ್ಯದ ಶೇ.10ರಷ್ಟು ಪ್ರೇಕ್ಷಕರು ಎಂದುಕೊಂಡರೂ, 13,200 ಮಂದಿ ಸ್ಟೇಡಿಯಂನಲ್ಲಿ ಇರಬೇಕಿತ್ತು. ಅಂತಾರಾಷ್ಟ್ರೀಯ ಪಂದ್ಯವೊಂದಕ್ಕೆ ಸೇರುವ ಸರಾಸರಿ ಪ್ರೇಕ್ಷಕರ ಸಂಖ್ಯೆ ಅದು.
ಆದರೆ ಮೋದಿ ಸ್ಟೇಡಿಯಂನಲ್ಲಿ ಉದ್ಘಾಟನಾ ಪಂದ್ಯಕ್ಕೆ ಇದ್ದದ್ದು ಕೇವಲ 3 ರಿಂದ 4 ಸಾವಿರ ಜನ, ಅಂದರೆ ಕೇವಲ ಶೇ.3 ರಷ್ಟು ಮಂದಿ ಎಂದು ವರದಿಗಳು ಹೇಳುತ್ತಿವೆ. ಅಷ್ಟು ದೊಡ್ಡ ಕ್ರೀಡಾಂಗಣದಲ್ಲಿ ಈ ಉದ್ಘಾಟನಾ ಪಂದ್ಯ ಆಯೋಜನೆ ಮಾಡಿ ಮುಜುಗರಕ್ಕೆ ಒಳಗಾಗುವ ಅಗತ್ಯವಿತ್ತಾ ಎಂದು ಈಗ ಜನ ಕೇಳುವ ಹಾಗಾಗಿದೆ.
ಪ್ರೇಕ್ಷಕರು ಬರುವುದಿಲ್ಲವೆಂಬುದು ಗೊತ್ತಾಗಿಯೇ ಉದ್ಘಾಟನಾ ಸಮಾರಂಭವನ್ನು ಬಿಸಿಸಿಐ ದಿಢೀರೆಂದು ರದ್ದು ಮಾಡಿರಬೇಕು ಎಂದೂ ಅಭಿಮಾನಿಗಳು ಟೀಕೆ ಮಾಡಿದ್ದಾರೆ. 2023ರ ವಿಶ್ವಕಪ್ ಆರಂಭಕ್ಕೂ ಮೊದಲೇ ಹಲವು ವಿವಾದಗಳಿಗೆ ತುತ್ತಾಗಿತ್ತು ಎನ್ನುವುದೂ ಗೊತ್ತಿರುವ ವಿಚಾರ. ಟೂರ್ನಿಯ ವೇಳಾಪಟ್ಟಿ ವಿಳಂಬದಿಂದ ಹಿಡಿದು, ಟಿಕೆಟ್ ಮಾರಾಟದವರೆಗೂ ಎಲ್ಲವೂ ಅವ್ಯವಸ್ಥೆಯ ಆಗರವಾಗಿತ್ತು. ಹಲವು ಅನಗತ್ಯ ವಿವಾದಗಳನ್ನು ಐಸಿಸಿ ಹಾಗೂ ಬಿಸಿಸಿಐ ಮೈಮೇಲೆ ಎಳೆದುಕೊಂಡಿದ್ದವು.
ಮೊದಲನೆಯದಾಗಿ, ವೇಳಾಪಟ್ಟಿ ಪ್ರಕಟಣೆ ಸಿಕ್ಕಾಪಟ್ಟೆ ತಡವಾಗಿತ್ತು. ಸಾಮಾನ್ಯವಾಗಿ ವಿಶ್ವಕಪ್ ಆರಂಭಕ್ಕೆ ಒಂದು ವರ್ಷ ಮೊದಲು ಟೂರ್ನಿಯ ವೇಳಾಪಟ್ಟಿ ಪ್ರಕಟಗೊಳ್ಳಬೇಕು. ಆದರೆ ಈ ಬಾರಿ ಕೆಲವೇ ತಿಂಗಳುಗಳು ಬಾಕಿ ಇರುವಾಗಲೂ ವೇಳಾಪಟ್ಟಿ ಪ್ರಕಟಗೊಂಡಿರಲಿಲ್ಲ. ಕಚ್ಚಾಟದಲ್ಲೇ ಮುಳಗಿಹೋದವರಿಗೆ ತಮ್ಮ ಹೊಣೆಗಾರಿಕೆಯ ಅರಿವೇ ಇದ್ದಂತಿರಲಿಲ್ಲ.
ಎರಡನೆಯದಾಗಿ, ವಿಶ್ವಕಪ್ ಪಂದ್ಯಗಳ ಆತಿಥ್ಯ ಸಿಗದ ರಾಜ್ಯ ಕ್ರಿಕೆಟ್ ಮಂಡಳಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ಬಿಸಿಸಿಐ ವಿಫಲವಾಗಿತ್ತು.
ವಿಶ್ವಕಪ್ ಪಂದ್ಯಗಳ ಆತಿಥ್ಯ ಸಿಗದ್ದಕ್ಕೆ ಹಲವು ರಾಜ್ಯ ಕ್ರಿಕೆಟ್ ಸಂಸ್ಥೆಗಳು ಬಿಸಿಸಿಐ ಮೇಲೆ ಸಿಟ್ಟಾಗಿದ್ದವು. ಮೊಹಾಲಿ, ರಾಜ್‌ಕೋಟ್, ರಾಂಚಿ, ಇಂದೋರ್ ಸೇರಿ ಕೆಲ ಪ್ರಮುಖ ನಗರಗಳಿಗೆ ಪಂದ್ಯಗಳು ಕೈತಪ್ಪುತ್ತಿದ್ದಂತೆ ಆಯಾ ರಾಜ್ಯ ಸಂಸ್ಥೆಗಳ ಅಧಿಕಾರಿಗಳು ಬಹಿರಂಗವಾಗಿ ಬಿಸಿಸಿಐ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮೂರನೆಯ ಬಲು ದೊಡ್ಡ ಯಡವಟ್ಟೆಂದರೆ, ವೇಳಾಪಟ್ಟಿ ಪದೇ ಪದೇ ಬದಲಾದದ್ದು. ಒಮ್ಮೆ ಪ್ರಕಟಗೊಂಡ ವೇಳಾಪಟ್ಟಿ ಬದಲಾಗುವುದು ಅಪರೂಪ. ಆದರೆ ಬಿಸಿಸಿಐ ಒಮ್ಮೆಯಲ್ಲ, ಹಲವು ಬಾರಿ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಿತು. ಇದರಿಂದಾಗಿ, ತಂಡಗಳಿಗೆ ಮಾತ್ರವಲ್ಲ ಪಂದ್ಯ ವೀಕ್ಷಿಸಬೇಕು ಎಂದು ಯೋಜನೆ ಹಾಕಿಕೊಂಡಿದ್ದ ಅಭಿಮಾನಿಗಳಿಗೂ ಸಮಸ್ಯೆಯಾಯಿತು. ಒಂದೊ ಎರಡೊ ಪಂದ್ಯಗಳಲ್ಲ, ಐದು ಪಂದ್ಯಗಳ ವೇಳಾಪಟ್ಟಿಯನ್ನು ಬಿಸಿಸಿಐ ಬದಲಿಸಿತ್ತು.
ನಾಲ್ಕನೆಯದಾಗಿ, ಟಿಕೆಟ್ ಮಾರಾಟ ಗೊಂದಲವೂ ಟೀಕೆಗೆ ಗುರಿಯಾಯಿತು. ವಿಶ್ವಕಪ್ ಪಂದ್ಯಗಳ ಟಿಕೆಟ್ ಮಾರಾಟ ಗೊಂದಲದ ಗೂಡಾಗಿತ್ತು. ಇದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಯಿತು. ಕಡೆಗೆ ಟಿಕೆಟ್ಗಳ ಆನ್ಲೈನ್ ಮಾರಾಟಕ್ಕೆ ಬಿಸಿಸಿಐ ಮುಂದಾಯಿತು. ವೆಂಕಟೇಶ್ ಪ್ರಸಾದ್ ಸೇರಿದಂತೆ ಕೆಲ ಮಾಜಿ ಆಟಗಾರರು ಕೂಡ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದರು.
ಹೀಗೆಲ್ಲ ಒಂದರ ಬೆನ್ನಲ್ಲೊಂದು ಯಡವಟ್ಟು ಮಾಡುತ್ತಲೇ ಹೋಯಿತು ಬಿಸಿಸಿಐ. ಬಿಸಿಸಿಐ ಮೇಲೆ ಅಥವಾ ಕ್ರಿಕೆಟ್ ಮೇಲೆ ಪರೋಕ್ಷ ಹಿಡಿತವಿರುವ ಬಿಜೆಪಿಯ ನಡೆಗಳು ಎಲ್ಲವನ್ನೂ ಹಾಸ್ಯಾಸ್ಪದವಾಗಿಸಿಬಿಟ್ಟವು. ಬಿಜೆಪಿ ಮುಖಂಡರು ಉದ್ಘಾಟನಾ ಪಂದ್ಯದ ಟಿಕೆಟ್ಗಳನ್ನು ಉಚಿತವಾಗಿ ವಿತರಿಸಿದ್ದರು ಎಂದೂ ಹೇಳಲಾಗುತ್ತಿದೆ.
ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರಗೊಂಡಿರುವ ಹಿನ್ನೆಲೆಯಲ್ಲಿ ಸುಮಾರು 40 ಸಾವಿರ ಟಿಕೆಟ್‌ಗಳನ್ನು ಗುಜರಾತ್‌ನ ಮಹಿಳೆಯರಿಗೆ ಉಚಿತವಾಗಿ ಹಂಚಿದ್ದೇವೆ. ಜೊತೆಗೆ ಊಟದ ಕೂಪನ್ ಕೂಡ ವಿತರಿಸಿದ್ದೇವೆ. ಅವರೆಲ್ಲರೂ ಉದ್ಘಾಟನಾ ಪಂದ್ಯ ವೀಕ್ಷಿಸಲಿದ್ದಾರೆ ಎಂದು ಗುಜರಾತ್ ನ ಸ್ಥಳೀಯ ಬಿಜೆಪಿ ನಾಯಕ ಲಲಿತ್ ವಾಧ್ವಾನ್ ಹೇಳಿದ್ದರ ಬಗ್ಗೆ ವರದಿಯಾಗಿತ್ತು. ಆದರೆ, ಬಿಜೆಪಿ ವಿತರಿಸಿದ್ದ 40 ಸಾವಿರ ಟಿಕೆಟ್‌ಗಳ ಪೈಕಿ ಅರ್ಧದಷ್ಟು ಜನರೂ ಪಂದ್ಯ ವೀಕ್ಷಿಸಲು ಸ್ಟೇಡಿಯಂಗೆ ಬರಲಿಲ್ಲ.
ಇನ್ನೊಂದೆಡೆ, ಇದೆಲ್ಲಕ್ಕೂ ಬಿಸಿಸಿಐ ಕಾರ್ಯದರ್ಶಿ, ಅಮಿತ್ ಶಾ ಅವರ ಪುತ್ರ ಜಯ್ ಶಾ ಕಾರಣ ಎಂದು ಅಭಿಮಾನಿಗಳು ಕಿಡಿ ಕಾರುತ್ತಿರುವ ಬಗ್ಗೆಯೂ ವರದಿಗಳಾಗಿವೆ. ಅಮಿತ್ ಶಾ ಪುತ್ರನ ದುರಾಡಳಿತವೇ ಕ್ರಿಕೆಟ್ ಅನ್ನು ಈ ಸ್ಥಿತಿಗೆ ತಂದು ನಿಲ್ಲಿಸಿದೆ ಎನ್ನುವ ಟೀಕೆಗಳು ವ್ಯಕ್ತವಾಗಿವೆ.
ಪ್ರಧಾನಿ ಮೋದಿ ಹಾಗೂ ಬಿಜೆಪಿಯವರು ಕ್ರೀಡೆಯಲ್ಲೂ ಹಸ್ತಕ್ಷೇಪ ಮಾಡಿದರೆ ಈ ರೀತಿಯ ಪರಿಣಾಮ ಉಂಟಾಗದೇ ಇರುತ್ತದೆಯೆ ಎಂದೂ ಕೆಲವರು ಪ್ರಶ್ನಿಸುತ್ತಿದ್ದಾರೆ.
ಮೋದಿ ರಾಜಕಾರಣಕ್ಕೆ ವೇದಿಕೆಯಾಗುವ ಮೂಲಕವೇ ಹೆಸರು ಬದಲಿಸಿಕೊಂಡು ಉದ್ಘಾಟನೆಗೊಂಡಿದ್ದ ಸ್ಟೇಡಿಯಂನಲ್ಲಿ ವಿಶ್ವಕಪ್ ಪಂದ್ಯದ ಹೊತ್ತಲ್ಲೂ ಬಿಜೆಪಿಯ ಅದೇ ಹೊಲಸು ರಾಜಕಾರಣವೇ ಮುಂದುವರಿದಿತ್ತು ಎಂಬುದು ಇದೆಲ್ಲದರಿಂದ ಗೊತ್ತಾಗುತ್ತದೆ. ಇಷ್ಟೆಲ್ಲ ಆದಮೇಲೂ ಕೇಂದ್ರ ಸರ್ಕಾರಕ್ಕೆ ಹಾಗೂ ಬಿಸಿಸಿಐಗೆ ಮುಜುಗರ ಆಗಿದೆಯೊ ಇಲ್ಲವೊ ಗೊತ್ತಿಲ್ಲ. ಆದರೆ ಕ್ರಿಕೆಟ್ ಅಭಿಮಾನಿಗಳಿಗಂತೂ ಇದು ಅತ್ಯಂತ ಬೇಸರ ತಂದಿರುವ ವಿದ್ಯಮಾನವಾಗಿದೆ.