×
Ad

'ಪಪ್ಪು' ಎಂದು ಜರೆಯುತ್ತಿದ್ದವನ ಬಗ್ಗೆ ಈಗ ಇಷ್ಟೊಂದು ತಲೆಕೆಡಿಸಿಕೊಂಡಿರುವುದು ಯಾಕೆ ?

Update: 2023-10-15 16:39 IST

ಮೋದಿಯನ್ನು ದೊಡ್ಡ ಸುಳ್ಳುಗಾರ, ಜುಮ್ಲಾ ಬಾಯ್ ಎಂದು ಕಾಂಗ್ರೆಸ್ ಟೀಕಿಸಿತು. ಅದಾದ ಬೆನ್ನಲ್ಲೇ ಅತ್ಯಂತ ಕೊಳಕು ಮನಸ್ಸಿನ ಪ್ರತಿಕ್ರಿಯೆಯೆಂಬಂತೆ ರಾಹುಲ್ ಅವರಿಗೆ ಹತ್ತು ತಲೆಗಳನ್ನು ಜೋಡಿಸಿ ರಾವಣನನ್ನಾಗಿ ಚಿತ್ರಿಸಿದ ಪೋಸ್ಟರ್ ಒಂದನ್ನು ಬಿಜೆಪಿ ಪ್ರಕಟಿಸಿತು.

ಇದಾದ ಬಳಿಕ ಮೋದಿ ​ಸಂಪೂರ್ಣವಾಗಿ ಅದಾನಿ​ ಹಿಡಿತದಲ್ಲಿದ್ದಾರೆ ಎಂದು ​ತೋರಿಸಲಾದ ಪೋಸ್ಟರ್ ಒಂದನ್ನು ಕಾಂಗ್ರೆಸ್ ಪ್ರಕಟಿಸಿದ್ದು, ಅದಾನಿ ಹಿಡಿತದಲ್ಲಿ ಮೋದಿ ಇದ್ದಾರೆ ಎಂದು ಪರೋಕ್ಷವಾಗಿ ಬಿಂಬಿಸಿತು. ಮಾತ್ರವಲ್ಲದೆ, ಮೋದಿಯನ್ನು ಮೋದಾನವ ಎಂಬ ಮತ್ತೊಂದು ಪೋಸ್ಟರ್ ಅನ್ನೂ ಕಾಂಗ್ರೆಸ್ ಪ್ರಕಟಿಸಿದೆ.

ಐದು ರಾಜ್ಯಗಳ ವಿಧಾನಸಭೆಗೆ ಇನ್ನು ಕೆಲವೇ ವಾರಗಳಿರುವಾಗ ಎರಡೂ ಪಕ್ಷಗಳ ನಡುವೆ ಎಕ್ಸ್ ಮೈಕ್ರೋಬ್ಲಾಗಿಂಗ್ ವೇದಿಕೆಯಲ್ಲಿ ಇಂಥದೊಂದು ಪೋಸ್ಟರ್ ವಾರ್ ನಡೆದಿದೆ. ಇಲ್ಲಿ ಒಂದು ವಿಷಯ ಗಮನಿಸಬೇಕು. ಆದರೆ, ಕಾಂಗ್ರೆಸ್ ಸತ್ಯಾಂಶಗಳನ್ನು ಇಟ್ಟುಕೊಂಡು​ ಪ್ರಧಾನಿ ಮೋದಿಯನ್ನು ಟೀಕಿಸುತ್ತಿರುವುದಕ್ಕೂ, ಮೋದಿ ಮತ್ತವರ ಸರ್ಕಾರದ ವಿರುದ್ಧ ಮಾತನಾಡುವ ಮತ್ತು ಪ್ರಶ್ನಿಸುವ ರಾಹುಲ್ ಗಾಂಧಿಯವರ ಬಗ್ಗೆ ಬಿಜೆಪಿ ಪ್ರಚೋದನಾತ್ಮಕವಾಗಿ ಪೋಸ್ಟ್ ಹಾಕಿರುವುದಕ್ಕೂ ಅಜಗಜಾಂತರವಿದೆ.

ಒಂದು ಕಾಲದಲ್ಲಿ ಇದೇ ಬಿಜೆಪಿ ರಾಹುಲ್ ಗಾಂಧಿಯವರನ್ನು ಪಪ್ಪು ಎಂದು ​ಜರೆದು, ಅವ​ರು ಯಾವುದಕ್ಕೂ ಸಲ್ಲದವರು ಎಂಬಂತಹ ಇಮೇಜನ್ನು ಹರಡಲು ವ್ಯವಸ್ಥಿತವಾಗಿ ​ಪ್ರಯತ್ನಿಸಿತ್ತು ಎಂಬುದೂ ಗೊತ್ತಿರುವ ಸತ್ಯವೇ ಆಗಿದೆ. ಸಾಮಾಜಿಕ ಜಾಲತಾಣದಲ್ಲಿನ ಚಮತ್ಕಾರವನ್ನೆಲ್ಲ ಬಳಸಿ ರಾಹುಲ್ ಅವರನ್ನು ವ್ಯವಸ್ಥಿತವಾಗಿ ಹಣಿಯಲು,​ ಅವರು ನಾಲಾಯಕ್ ಎಂದು ಬಿಂಬಿಸಲು, ಅವರ​ ಪಕ್ಷದ ಕಾರ್ಯಕರ್ತರ ಧೈರ್ಯಗೆಡಿಸಲು ಬಿಜೆಪಿಯೂ ಸೇರಿದಂತೆ ​ಇಡೀ ಸಂಘ​ ಪರಿವಾರವೇ ಹವಣಿಸಿತ್ತು.

ಆದರೆ ಅದನ್ನೆಲ್ಲ ದಾಟಿಕೊಂಡು​ ಬಂದ ರಾಹುಲ್​ ಗಾಂಧಿ ರಾಜಕೀಯವಾಗಿ ಪ್ರಬುದ್ಧತೆ ತೋರಿದರು. ಯಾರನ್ನು ಪಪ್ಪು ಎಂದು ಆಡಿಕೊಂಡು ಬಿಜೆಪಿ ನಕ್ಕಿತ್ತೊ ಅದೇ ರಾಹುಲ್ ಬಿಜೆಪಿಯ ಎಲ್ಲ ಹುಳುಕುಗಳನ್ನೂ​ ಒಂದೊಂದಾಗಿ ಎತ್ತಿ ತೋರಿಸುತ್ತ ಪ್ರಶ್ನಿಸಬಲ್ಲವರಾಗಿರುವುದು, ತಮ್ಮ ಪ್ರತಿಪಾದನೆಗಳ ಮೂಲಕ ದೊಡ್ಡ ರಾಜಕೀಯ ಪ್ರತಿಸ್ಪರ್ಧಿಯಾಗಿರುವುದು ಮೋದಿಯವರಿಗೂ ಬಿಜೆಪಿಗೂ ಈಗ ಸಹಿಸಲಾರದ ಮತ್ತು ಭಯ ಹುಟ್ಟಿಸಿರುವ ಸಂಗತಿಯಾಗಿದೆಯೆ?.

ಈಗ ಈ ಭಯದಿಂದಾಗಿಯೇ​ ಬಿಜೆಪಿ ಇನ್ನಷ್ಟು ಕೀಳುಮಟ್ಟಕ್ಕೆ ಇಳಿಯುತ್ತಿದೆಯೆ?. ತನ್ನ ಕೀಳು ಅಭಿರುಚಿಯ ಮೂಲಕ ಬಿಜೆಪಿ ರಾಜಕೀಯವನ್ನೂ​, ಚರ್ಚೆಯ ಮಟ್ಟವನ್ನೂ ಇನ್ನೆಷ್ಟು ಅಧಪತನದ ಕಡೆಗೆ ಕೊಂಡೊಯ್ಯಲಿದೆ?. ಅದರ ಅಹಂಕಾರದ ಮತ್ತು ಆಕ್ರಮಣಕಾರಿಯಾದ ನಡೆ ಈಗ ಕಾಂಗ್ರೆಸ್ ಆರೋಪಿಸುತ್ತಿರುವಂತೆ ಹಿಂಸೆಯನ್ನು ಪ್ರಚೋದಿಸುವ ಉದ್ದೇಶವನ್ನೇ ನಿಜವಾಗಿಯೂ ಹೊಂದಿದೆಯೆ?.

ಈಗಲೇ ಇಷ್ಟು ಕೆಳಮಟ್ಟಕ್ಕೆ ಇಳಿದಿರುವ ಅದು ಚುನಾವಣೆ ಹತ್ತಿರವಾಗುತ್ತಿದ್ದಂತೆ ಇನ್ನೂ ಎಂಥೆಂಥ ರೀತಿಯಲ್ಲಿ ವೈಯಕ್ತಿಕ ದಾಳಿಗೆ ಇಳಿಯಲಿದೆ? ಇನ್ನೂ ಏನೇನೆಲ್ಲವನ್ನೂ ನೋಡಬೇಕಾಗಿ ಬರಬಹುದು?. ಸೋಲಿನ ಭೀತಿಯಿಂದ ಉಂಟಾಗಿರುವ ರಾಜಕೀಯ ದಿವಾಳಿತನವೆ ಇದು​ ?. ಮೊದಲಿಗೆ ಕಾಂಗ್ರೆಸ್ನ ಮೂರೂ ಟೀಕೆಗಳನ್ನು ಗಮನಿಸಿದರೆ ಕಾಣಿಸುವುದೇನು ಎಂಬುದನ್ನು ನೋಡೋಣ.

ಅದು ಮೋದಿಯನ್ನು ದೊಡ್ಡ ಸುಳ್ಳುಗಾರ ಎಂದಿತು. ಪಿಎಂ ನರೇಂದ್ರ ಮೋದಿ ಜುಮ್ಲಾಬಾಯ್ ಎಂಬ ಇನ್ನೊಂದು ಪೋಸ್ಟರ್ ಅನ್ನು ಕೂಡ ಅದು ಪ್ರಕಟಿಸಿತು. ಬಳಿಕ ಬಿಜೆಪಿ ರಾವಣ ಪೋಸ್ಟರ್ಗೆ ಪ್ರತಿಕ್ರಿಯೆಯಾಗಿ ಅದು ಮೋದಾನವ ಎಂಬ ಪೋಸ್ಟರ್ ಒಂದನ್ನು ಹಾಕಿ, ಭ್ರಷ್ಟ ಜುಮ್ಲೇಬಾಜಿ ಪಾರ್ಟಿ ಅದನ್ನು ನಿರ್ಮಿಸುತ್ತಿದೆ ಎಂದೂ, ಪರಮ ಮಿತ್ರ ಅದಾನಿ ನಿರ್ದೇಶನ ಎಂದೂ ಹೇಳಿದೆ.

ಈತ ದುಷ್ಟ, ಪ್ರಜಾಪ್ರಭುತ್ವ ವಿರೋಧಿ, ಸಂವಿಧಾನ ವಿರೋಧಿ, ಮಾನವೀಯತೆಯ ವಿರೋಧಿ, ಈತನ ಏಕೈಕ ಗುರಿ ಭಾರತ ಮತ್ತು ಅದರ ಪರಿಕಲ್ಪನೆಯನ್ನು ನಾಶಪಡಿಸುವುದು ಎಂದು ಬರೆಯಿತು. ಇನ್ನೊಂದು ಪೋಸ್ಟ್ನಲ್ಲಿ​ ಅದಾನಿಯ ಕೈಗೊಂಬೆ ಎಂಬಂತೆ ಮೋದಿಯನ್ನು ಚಿತ್ರಿಸಿತು.

ಈ ಮೂರರಲ್ಲೂ ಕಾಂಗ್ರೆಸ್ ಕಾಂಗ್ರೆಸ್ ಹೇಳಿರುವುದು ವಾಸ್ತವಾಂಶಗಳನ್ನು ಮಾತ್ರ. ಕಾಂಗ್ರೆಸ್ ಹೇಳಿರುವ ಈ ಎಲ್ಲ ಅಂಶಗಳನ್ನು ಮೋದಿ​ಯವರ ಕಳೆದೊಂದು ದಶಕದ ರಾಜಕೀಯ ಗೊತ್ತಿರುವ ಎಲ್ಲರೂ ಈಗಾಗಲೇ ಹೇಳಿದ್ದಾರೆ.

ಆದರೆ, ಕಾಂಗ್ರೆಸ್ ಹೇಳಿರುವ ಸತ್ಯಕ್ಕೆ ಬಿಜೆಪಿಯ ಪ್ರತಿಕ್ರಿಯೆ ಎಂಥ ಬಗೆಯದು ಎಂದು ನೋಡುತ್ತಿದ್ದರೆ ಅದರ ರಾಜಕೀಯ ದಿವಾಳಿತನ ಬಯಲಾಗುತ್ತದೆ. ಅದಕ್ಕೆ ಸತ್ಯದ ನೆಲೆಯಲ್ಲಿ ಟೀಕಿಸುವ ಯಾವ ಆಧಾರಗಳೂ ಇಲ್ಲ. ಗೆಲ್ಲುವುದಕ್ಕೂ ಆಳುವುದಕ್ಕೂ ಮತ್ತು ವಿರೋಧಿಗಳನ್ನು ಹಣಿಯುವುದಕ್ಕೂ ಅದು ನೆಚ್ಚಿರುವುದು ಬರೀ ಸುಳ್ಳು​ ಮತ್ತು ದ್ವೇಷಗಳ​ನ್ನು. ಜನರನ್ನು ಭ್ರಮೆಯಲ್ಲಿ ಕೆಡವಿಯೇ ತಾನು ಬದುಕುವ, ಜನರಿಗೆ ಸತ್ಯಗಳೊಂದೂ ತಿಳಿಯದ ಹಾಗೆ ಕಾಲಕಾಲಕ್ಕೆ ಏನೇನೋ ಭಾವನಾತ್ಮಕ ಕೋಲಾಹಲಗಳನ್ನು ಸೃಷ್ಟಿಸಿಕೊಂಡು ಬಚಾವಾಗುವ, ಅದನ್ನೇ ಬಂಡವಾಳವಾಗಿಸಿಕೊಳ್ಳುವ ಅದರ ಚಾಳಿಯನ್ನು ಈ ಒಂಬತ್ತು ವರ್ಷಗಳಲ್ಲಿ ದೇಶ ನೋಡಿಕೊಂಡೇ ಬಂದಿದೆ.

ಮೋದಿಯನ್ನು ಸುಳ್ಳುಗಾರ, ಜುಮ್ಲಾ ಬಾಯ್ ಎಂದು ವರ್ತಮಾನದ ವಾಸ್ತವವನ್ನು, ಸತ್ಯವನ್ನು ಹೇಳಿದ್ದಕ್ಕೆ ಅದು ಪುರಾಣದ ರಾವಣನನ್ನು ತಂದು ನಿಲ್ಲಿಸಿಬಿಟ್ಟಿತು. ರಾಹುಲ್ ಗಾಂಧಿಯವರನ್ನು ಆಧುನಿಕ ರಾವಣ ಎಂದು ಹೇಳಿತು. ಈ ಆಧುನಿಕ ರಾವಣ ದುಷ್ಟ. ಧರ್ಮ ವಿರೋಧಿ, ರಾಮನ ವಿರೋಧಿ. ಅವನ ಗುರಿ ಭಾರತವನ್ನು ನಾಶ ಮಾಡುವುದು ಎಂದು ಟೀಕಿಸಿತು.

ಮೋದಿ ವಿರುದ್ಧವೂ, ಮೋದಿ ಸರ್ಕಾರದ ವಿರುದ್ಧವೂ ಮಾತನಾಡುವ, ಮೋದಿಯವರ ಪ್ರೀತಿಪಾತ್ರ ಗೌತಮ್‌ ಅದಾನಿ ವಿರುದ್ಧ ಕೂಡ ಹಲವು ಅಕ್ರಮಗಳ ಆರೋಪ ಹೊರಿಸಿರುವ ಅಮೆರಿಕದ ಉದ್ಯಮಿ ಜಾರ್ಜ್ ಸೊರೋಸ್ ಅವರನ್ನೂ ಇಲ್ಲಿ ಎಳೆದು ತರಲಾಯಿತು. ಇಲ್ಲಿ ಕಾಂಗ್ರೆಸ್ ಮಾಡಿದ್ದು ರಾಜಕೀಯ ಆರೋಪ. ಆ ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆಯೂ ಆಗಿದೆ. ಸಾಕಷ್ಟು ದಾಖಲೆಗಳೂ ಬಹಿರಂಗವಾಗಿವೆ. ಆದರೆ ಅದಕ್ಕೆ ಬಿಜೆಪಿ ಪ್ರತಿಕ್ರಿಯಿಸಿದ್ದು ಹೇಗೆ ?

ಎಷ್ಟು ಬೇಗ ಬಿಜೆಪಿ ಒಂದು ಸಂಗತಿಯನ್ನು ಧಾರ್ಮಿಕ​, ಸಾಂಸ್ಕೃತಿಕ ಆಯಾಮ ಕೊಟ್ಟು ಪ್ರಚೋದಿಸುವ ಕಡೆ ಹೋಗಿಬಿಡಬಲ್ಲದು ಎಂಬುದಕ್ಕೆ ಇದೊಂದು ಉದಾಹರಣೆ. ​ಬಿಜೆಪಿ ಈ ರೀತಿ ಅಧಿಕೃತವಾಗಿಯೇ ದ್ವೇಷ ಪ್ರಸಾರ ಮಾಡುತ್ತಿರುವಾಗ ಅದರ ಅಂಧ ಭಕ್ತರು ಐಟಿ ಸೆಲ್ ನಿಂದ ಬಿಡುಗಡೆಯಾದ ನಕಲಿ ಫೋಟೋ ವನ್ನು ವಾಟ್ಸ್ ಆಪ್ ಹಾಗು ಫೇಸ್ ಬುಕ್ ಗಳಲ್ಲಿ ಹಾಕಿ ರಾಜೀವ್ ಗಾಂಧಿ ಇಸ್ಲಾಮಿಕ್ ವಿಧಿ ವಿಧಾನಗಳ ಮೂಲಕ ಸೋನಿಯಾ ಗಾಂಧಿಯನ್ನು ಮದುವೆಯಾದರು ಎಂದು ಹಸಿ ಸುಳ್ಳನ್ನು ಮತ್ತೆ ಮತ್ತೆ ಹರಡುತ್ತಿದ್ದಾರೆ.

ಅಂದರೆ , ಇವರಲ್ಲಿ ರಾಜಕೀಯ ವಿರೋಧಿಗಳನ್ನು ವಿರೋಧಿಸಲು ರಾಜಕೀಯ ಬಂಡವಾಳವಿಲ್ಲ, ಹೇಳಲು ಸತ್ಯವಿಲ್ಲ. ಇವರ ಬಳಿ ಇರುವುದು ಕೇವಲ ಸುಳ್ಳು ಮತ್ತು ದ್ವೇಷದ ಮೂಲಕ ಪ್ರತಿಯೊಂದಕ್ಕೂ ಧಾರ್ಮಿಕ ಆಯಾಮ ಕೊಡಬಲ್ಲ ಮನಸ್ಸು ಮಾತ್ರ. ಧರ್ಮ ವಿರೋಧಿ, ರಾಮನ ವಿರೋಧಿ ಎಂದು ಹೇಳುವ ಮೂಲಕ ರಾಹುಲ್ ವಿರುದ್ಧ ​ಬಿಜೆಪಿ ಯಾರನ್ನು ಎತ್ತಿಕಟ್ಟಲು ಹೊರಟಿದೆ ಎಂಬುದು ತಿಳಿಯದ ಸಂಗತಿಯೇನಲ್ಲ.

ಅಲ್ಲದೆ, ಮೋದಿ ವಿರುದ್ಧ ಹೇಳಿಕೆ ನೀಡುವ, ಭಾರತ ವಿರೋಧಿ ಹೇಳಿಕೆ ನೀಡಿದ್ದಾರೆಂಬ ಆರೋಪ ಹೊತ್ತಿರುವ ಜಾರ್ಜ್‌ ಸೊರೋಸ್‌ ಅವರೊಡನೆ ರಾಹುಲ್ ಹೆಸರು ಜೋಡಿಸುವ ಮೂಲಕವೂ ಅದು ಏನನ್ನು ಬಿಂಬಿಸಲು ಯತ್ನಿಸುತ್ತಿದೆ ಎಂಬುದು ಸ್ಪಷ್ಟ. ಅಂತೂ ರಾಹುಲ್ ದೇಶವಿರೋಧಿಯೆಂದೂ​, ಹಿಂದುತ್ವದ ವಿರೋಧಿಯೆಂದೂ​, ರಾಮನೆಂದರೆ ಅವರಿಗೆ ಆಗುವುದಿಲ್ಲವೆಂದೂ ಬಿಂಬಿಸಿ ಜನರನ್ನು ಪ್ರಚೋದಿಸುವ ಉದ್ದೇಶ ಅದರದ್ದಾಗಿದೆಯೆ?.

ಯಾಕೆ ಬಿಜೆಪಿಗೆ ಸತ್ಯವನ್ನು​ ಎದುರಿಸಲು ಆಗುತ್ತಿಲ್ಲ ಮತ್ತು ಸತ್ಯವನ್ನು ಸತ್ಯದಿಂದ ಎದುರಿಸಲಾಗದೆ ಧಾರ್ಮಿಕತೆಯನ್ನು ಮುಂದೆ ಮಾಡಿ ತನ್ನನ್ನು ​ತಾನೇ ಈ ದೇಶ ಹಾಗು ಧರ್ಮವೆಂದು ಬಿಂಬಿಸಿಕೊಳ್ಳಲು ಮುಂದಾಗುತ್ತದೆ?. ಇನ್ನೂ ಒಂದು ಸೂಕ್ಷ್ಮವನ್ನು ಗಮನಿಸಬೇಕು. ಮೋದಿಯನ್ನು ಸುಳ್ಳುಗಾರ, ಜುಮ್ಲಾ ಬಾಯ್ ಎಂದ ಕೂಡಲೇ ಅದು ನೇರವಾಗಿ ದಾಳಿಗಿಳಿದದ್ದು ರಾಹುಲ್ ವಿರುದ್ಧ. ಅದರ ಅರ್ಥವೇನೆಂದರೆ, ಬಿಜೆಪಿಗೆ, ಮೋದಿಗೆ ಈಗ ಭಯ ಶುರುವಾಗಿರುವುದೇ ರಾಹುಲ್ ಕಾರಣದಿಂದಾಗಿ.

ರಾಹುಲ್ ಇತ್ತೀಚಿನ ದಿನಗಳಲ್ಲಿ ಎತ್ತಿರುವ ಪ್ರಶ್ನೆ​ಗಳಿಗೆ ಉತ್ತರಿಸಲಾರದೆ ತತ್ತರಿಸಿ ಹೋಗಿರುವ ಬಿಜೆಪಿಗೆ ಮತ್ತು ಮೋದಿ ಸರ್ಕಾರಕ್ಕೆ, ಹೇಗೆ ರಾಹುಲ್ ಅವರನ್ನು ಮಣಿಸುವುದು ಎಂಬುದೇ ದೊಡ್ಡ ಚಿಂತೆಯಾಗಿರುವ ಹಾಗಿದೆ. ಮೋದಿ ಉಪನಾಮ ಕುರಿತ ಟೀಕೆ ಪ್ರಕರಣದಲ್ಲಿ ಸಿಕ್ಕ ಎಲ್ಲ ಅವಕಾಶಗಳನ್ನೂ ಅದು ಬಳಸಿಕೊಂಡಿತು. ರಾಹುಲ್ ಸಂಸತ್ ಸದಸ್ಯತ್ವವನ್ನು ಒಂದು ಗಳಿಗೆಯೂ ತಡೆಯದೆ ಕಿತ್ತುಕೊಂಡು ಸಂಭ್ರಮಿಸಿತ್ತು. ಅವರಿಗೆ ನೀಡಲಾಗಿದ್ದ ಮನೆಯನ್ನೂ ಖಾಲಿ ಮಾಡಿಸಲಾಯಿತು.

ಅಷ್ಟೆಲ್ಲ ಆದರೂ, ನ್ಯಾಯದ ಹೋರಾಟದಲ್ಲಿ ರಾಹುಲ್ ಗೆದ್ದರು. ಮತ್ತೆ ಸಂಸತ್ತಿನೊಳಗೆ ಬಂದರು. ಅನರ್ಹಗೊಳಿಸಿ ಗೆದ್ದೆ​ನೆಂದುಕೊಂಡಿದ್ದ ಬಿಜೆಪಿಗೆ ಮತ್ತೆ ಚಿಂತೆಯಾಯಿತು. ರಾಹುಲ್ ವಿಚಾರದಲ್ಲಿ ಬಿಜೆಪಿಯ ಆ ಚಿಂತೆ, ಆ ಭಯ ಯಾವ ಮಟ್ಟದ್ದೆಂದರೆ, ಅದರ ಮನಸ್ಸಿನ ತುಂಬ ​ದ್ವೇಷವೇ ತುಂಬಿಹೋಗಿದೆ. ​ಅದು ಎಂಥಹ ಕೀಳುಮಟ್ಟಕ್ಕಿಳಿಯುವುದಕ್ಕೂ ಹೇಸದ ರೀತಿಯದ್ದೂ ಆಗಿದೆ. ಬಿಜೆಪಿಯ ರಾವಣ ಪೋಸ್ಟರ್ ಹಿಂದಿರುವುದು, ತನ್ನ ಕಟು ಟೀಕಾಕಾರ ರಾಹುಲ್ ಅವರನ್ನು ಕೊಲ್ಲುವ ಉದ್ದೇಶವೇ ಆಗಿದೆ ಎಂದು ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ.

ಬಿಜೆಪಿಯವರ ಕೆಟ್ಟ ಉದ್ದೇಶಗಳು ಸ್ಪಷ್ಟವಾಗಿವೆ. ಅವರು ರಾಹುಲ್ ಅವರನ್ನು ಕೊಲ್ಲಲು ಬಯಸಿದ್ದಾರೆ. ಅವರ ಅಜ್ಜಿ ಮತ್ತು ತಂದೆ ಹತ್ಯೆಯಾಗಿದ್ಧಾರೆ. ಹೀಗಿರುವಾಗಲೂ, ರಾಹುಲ್ ಅವರಿಗೆ ನೀಡಲಾಗಿದ್ದ ಎಸ್ಪಿಜಿ ಭದ್ರತೆಯನ್ನೂ ಕ್ಷುಲ್ಲಕ ರಾಜಕೀಯಕ್ಕಾಗಿ ಸರ್ಕಾರ ಹಿಂಪಡೆಯಿತು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಹೇಳಿದ್ದಾರೆ. ತಮ್ಮನ್ನು ವಿರೋಧಿಸುವ ಟೀಕಾಕಾರನ್ನು ತೊಡೆದುಹಾಕಲು ಬಿಜೆಪಿ ಯೋಜಿತ ಪಿತೂರಿ ನಡೆಸುತ್ತಿದೆ ಎಂಬುದನ್ನೇ ಇದು ಸೂಚಿಸುತ್ತದೆ ಎಂದು ಅವರು ಆರೋಪಿಸಿದ್ದಾರೆ.

ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ, ರಾಜಕೀಯ ಮತ್ತು ಚರ್ಚೆಯನ್ನು ಯಾವ ಮಟ್ಟಕ್ಕೆ ಕೊಂಡೊಯ್ಯಲು ಬಯಸುತ್ತೀರಿ? ಹಿಂಸಾತ್ಮಕ ಮತ್ತು ಪ್ರಚೋದನಕಾರಿ ಟ್ವೀಟ್ಗಳನ್ನು ನೀವು ಒಪ್ಪುತ್ತೀರಾ ಎಂದು ಕೇಳಿದ್ದಾರೆ. ರಾಹುಲ್ ಅವರನ್ನು ರಾವಣನಂತೆ ಬಿಂಬಿಸುವ ನಿಮ್ಮ ಉದ್ದೇಶವೇನು ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಕೂಡ ಪ್ರಶ್ನಿಸಿದ್ದಾರೆ. ಈ ಎಲ್ಲ ಪ್ರಶ್ನೆಗಳಿಗೆ ಬಿಜೆಪಿ ಉತ್ತರ ಕೊಡಬೇಕಿದೆಯೆ ಹೊರತು, ರಾವಣ ಪೋಸ್ಟರ್ ಥರದ ಕೀಳು ಪ್ರತಿಕ್ರಿಯೆಯನ್ನಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಆರ್. ಜೀವಿ

contributor

Similar News