"11 ವರ್ಷಗಳಾದರೂ ಒಂದೂ ಪತ್ರಿಕಾಗೋಷ್ಠಿಯಿಲ್ಲ": ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ
ಪವನ್ ಖೇರಾ - ಪ್ರಧಾನಿ ಮೋದಿ
ಹೊಸದಿಲ್ಲಿ: ’11 ವರ್ಷಗಳಾದರೂ ಒಂದೂ ಪತ್ರಿಕಾ ಗೋಷ್ಠಿಯಿಲ್ಲ” ಎಂದು ರವಿವಾರ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್ ನಾಯಕ ಪವನ್ ಖೇರಾ, ಪ್ರಧಾನಿ ಮೋದಿ ಅವಧಿಯ ಅಂತ್ಯ ಸಮೀಪಿಸುತ್ತಿದೆ ಎಂದೂ ಭವಿಷ್ಯ ನುಡಿದಿದ್ದಾರೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, “ಹನ್ನೊಂದು ವರ್ಷಗಳಾದರೂ ಒಂದೂ ಪತ್ರಿಕಾ ಗೋಷ್ಠಿಯಿಲ್ಲ. ಅವರ ಅವಧಿಯ ಅಂತ್ಯ ಸಮೀಪಿಸುತ್ತಿದೆ. ಅವರ ರಾಜಕಾರಣ ಜಾಗತಿಕ ಮಟ್ಟದಲ್ಲಿ ಬೆತ್ತಲಾಗಿದೆ. ಅವರ ನೀತಿಗಳು ತಿರುಗುಬಾಣವಾಗಿವೆ. ಈ ಪ್ರಧಾನಿ ಒಂದು ತಮಾಷೆ” ಎಂದು ವ್ಯಂಗ್ಯವಾಡಿದ್ದಾರೆ.
“ಮೋದಿ ಸರಕಾರ ಭಾರತೀಯ ಯೋಧರು ಹಾಗೂ ಪ್ರಜೆಗಳಿಗೆ ಕ್ರಿಮಿನಲ್ ವಿಶ್ವಾಸಘಾತುಕತನ ಮಾಡಿದೆ” ಎಂದೂ ಆರೋಪಿಸಿರುವ ಪವನ್ ಖೇರಾ, ಪಾಕಿಸ್ತಾನವನ್ನು ರಾಜತಾಂತ್ರಿಕವಾಗಿ ಏಕಾಂಗಿಯಾಗಿಸುವಲ್ಲಿನ ವೈಫಲ್ಯದತ್ತ ಬೊಟ್ಟು ಮಾಡಿದ್ದಾರೆ.
“ಪಹಲ್ಗಾಮ್ ನಲ್ಲಿನ ಭೀಕರ ದಾಳಿಯ ನಂತರ, ನಾವು ಬಲಿಷ್ಠ ಕ್ರಮಗಳು ಹಾಗೂ ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನ ಏಕಾಂಗಿಯಾಗುವುದನ್ನು ನಿರೀಕ್ಷಿಸಿದ್ದೆವು. ಆದರೆ, ವಾಸ್ತವವಾಗಿ ಏನಾಗುತ್ತಿದೆ?” ಎಂದೂ ಅವರು ಪ್ರಶ್ನಿಸಿದ್ದಾರೆ.
ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನದ ಸ್ಥಿತಿಯನ್ನು ಬಲಿಷ್ಠಗೊಳಿಸುತ್ತಿರುವ ಹಲವು ಬೆಳವಣಿಗೆಗಳತ್ತ ಬೊಟ್ಟು ಮಾಡಿರುವ ಅವರು, “ಚೀನಾ ಪಿಎಲ್-17 ಕ್ಷಿಪಣಿಗಳಿಂದ ಸಜ್ಜಿತವಾದ ಐದನೆ ತಲೆಮಾರಿನ ಜೆ-35ಎ ರಹಸ್ಯ ಯುದ್ಧ ವಿಮಾನಗಳನ್ನು ಪಾಕಿಸ್ತಾನಕ್ಕೆ ಪೂರೈಸುತ್ತಿದೆ. ಪಾಕಿಸ್ತಾನದ 40 ಜೆಎಫ್-17 ಯುದ್ಧ ವಿಮಾನಗಳಲ್ಲಿ ಅಝರ್ ಬೈಜಾನ್ 2 ಶತಕೋಟಿ ಡಾಲರ್ ಗಳನ್ನು ಹೂಡಿಕೆ ಮಾಡುತ್ತಿದೆ. ಪಾಕಿಸ್ತಾನದ ಅಭಿವೃದ್ಧಿಗಾಗಿ ವಿಶ್ವ ಬ್ಯಾಂಕ್ 40 ಶತಕೋಟಿ ಡಾಲರ್ ಗಳ ನೆರವು ನೀಡಿದೆ. ಅಂತಾರಾಷ್ಟ್ರೀಯ ಹಣಕಾಸು ನಿಧಿಯು ಪಾಕಿಸ್ತಾನಕ್ಕೆ 1 ಶತಕೋಟಿ ಡಾಲರ್ ಗಳ ಸಾಲ ಮನ್ನಾ ಮಾಡಿದೆ. ಕರಾಚಿಯಲ್ಲಿನ ಉಕ್ಕು ಘಟಕವೊಂದನ್ನು ಮರು ನಿರ್ಮಾಣ ಮಾಡಲು ರಶ್ಯ 2.6 ಶತಕೋಟಿ ಡಾಲರ್ ಒಪ್ಪಂದವೊಂದಕ್ಕೆ ಸಹಿ ಮಾಡುತ್ತಿದೆ” ಎಂದು ಅವರು ಸರಣಿ ನಿದರ್ಶನಗಳನ್ನು ಒದಗಿಸಿದ್ದಾರೆ.
“ಪಹಲ್ಗಾಮ್ ದಾಳಿ ನಡೆದ ಕೆಲವೇ ದಿನಗಳ ಅಂತರದಲ್ಲಿ ಪಾಕಿಸ್ತಾನವನ್ನು ವಿಶ್ವ ಸಂಸ್ಥೆ ಭದ್ರತಾ ಮಂಡಳಿಯ ಭಯೋತ್ಪಾದನಾ ನಿಗ್ರಹ ಸಮಿತಿಗೆ ಉಪಾಧ್ಯಕ್ಷ ಸ್ಥಾನಕ್ಕೆ ನೇಮಿಸಲಾಗಿದೆ. ಇದು ಗಂಭೀರ ಸ್ವರೂಪದ ರಾಜತಾಂತ್ರಿಕ ವೈಫಲ್ಯವಾಗಿದೆ” ಎಂದೂ ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಕುರಿತು ಕೇಂದ್ರ ಸರಕಾರ ನೀಡಿದ ಪ್ರತಿಕ್ರಿಯೆಗೆ ಪ್ರತಿಯಾಗಿ ಕಾಂಗ್ರೆಸ್ ನಿಂದ ಈ ಟೀಕೆ ವ್ಯಕ್ತವಾಗಿದೆ.