ಕಾರ್ಯಕ್ರಮದ ವೇದಿಕೆಯಲ್ಲೇ ಕುಸಿದು ಬಿದ್ದ ತಮಿಳು ನಟ ವಿಶಾಲ್
Photo | freepressjournal
ಚೆನ್ನೈ : ತಮಿಳುನಾಡಿನ ವಿಲ್ಲುಪುರಂನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ತಮಿಳು ನಟ ವಿಶಾಲ್ ವೇದಿಕೆಯಲ್ಲೇ ಕುಸಿದು ಬಿದ್ದಿದ್ದಾರೆ ಎಂದು ವರದಿಯಾಗಿದೆ. ಅವರನ್ನು ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ವೈರಲ್ ವಿಡಿಯೋದಲ್ಲಿ, ವೇದಿಕೆಯ ಮೇಲೆ ಸಂವಹನ ನಡೆಸುತ್ತಿದ್ದ ವಿಶಾಲ್ ಇದ್ದಕ್ಕಿದ್ದಂತೆ ಕುಸಿದು ಬೀಳುವುದು ಕಂಡು ಬಂದಿದೆ. ಇದು ಕಾರ್ಯಕ್ರಮದಲ್ಲಿ ಹಾಜರಿದ್ದವರ ಆತಂಕಕ್ಕೆ ಕಾರಣವಾಗಿತ್ತು. ಅವರನ್ನು ತಕ್ಷಣ ಮಾಜಿ ಸಚಿವ ಕೆ. ಪೊನ್ಮುಡಿ ಮತ್ತು ಕಾರ್ಯಕ್ರಮ ನಿರ್ವಹಣಾ ತಂಡವು ಆಸ್ಪತ್ರೆಗೆ ದಾಖಲಿಸಿದೆ.
ಮ್ಯಾನೇಜರ್ ಹರಿ ಕೃಷ್ಣನ್ ಅವರ ಪ್ರಕಾರ, ವಿಶಾಲ್ ತೀವ್ರ ಜ್ವರ ಮತ್ತು ಆಯಾಸದಿಂದ ಬಳಲುತ್ತಿದ್ದರು. ಅವರು ಮಧ್ಯಾಹ್ನ ಊಟ ಮಾಡಿರಲಿಲ್ಲ. ಪ್ರಸ್ತುತ ಅವರ ಆರೋಗ್ಯ ಸ್ಥಿರವಾಗಿದೆ ಮತ್ತು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.
ವದಂತಿಗಳ ಬಗ್ಗೆ ಪ್ರತಿಕ್ರಿಯಿಸಿದ ವಿಶಾಲ್, ʼನನಗೆ ಇತ್ತೀಚೆಗೆ ಜ್ವರ ಬಂದಿತ್ತು. ನಾನು ಈಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದೇನೆ. ನಾನು ಮೂರು ಅಥವಾ ಆರು ತಿಂಗಳು ಕೆಲಸ ಮಾಡಲು ಸಾಧ್ಯವಾಗುವುದಿಲ್ಲ ಎಂದು ಸುಳ್ಳು ಮಾಹಿತಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಅದು ಸತ್ಯಕ್ಕೆ ದೂರವಾದುದು ಎಂದು ಹೇಳಿದರು.