ʼಎರಡನೆ ಪತ್ನಿʼಯೊಂದಿಗಿನ ವಿಡಿಯೊ ವೈರಲ್ ಬೆನ್ನಲ್ಲೇ ಬಿಜೆಪಿ ನಾಯಕ ಸುರೇಶ್ ರಾಥೋಡ್ ಪಕ್ಷದಿಂದ ಉಚ್ಚಾಟನೆ
ಸುರೇಶ್ ರಾಥೋಡ್ (Photo credit: Facebook)
ಡೆಹ್ರಾಡೂನ್: ಅಸಭ್ಯ ವರ್ತನೆ ತೋರಿದ ಆರೋಪದ ಮೇಲೆ ಜ್ವಾಲಾಪುರ್ ನ ಮಾಜಿ ಶಾಸಕ ಸುರೇಶ್ ರಾಥೋಡ್ ರನ್ನು ಆರು ವರ್ಷಗಳ ಕಾಲ ಬಿಜೆಪಿ ಪಕ್ಷದಿಂದ ಉಚ್ಚಾಟಿಸಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ರಾಜ್ಯ ಮಾಧ್ಯಮ ಉಸ್ತುವಾರಿ ಮನ್ವೀರ್ ಸಿಂಗ್ ಚೌಹಾಣ್, “ಸುರೇಶ್ ರಾಥೋಡ್ ತಮ್ಮ ಮೊದಲ ಪತ್ನಿಗೆ ವಿಚ್ಛೇದನ ನೀಡದೆ, ತಮ್ಮ ಎರಡನೆ ಪತ್ನಿಯೊಂದಿಗಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವುದನ್ನು ಪಕ್ಷ ಗಂಭೀರವಾಗಿ ಪರಿಗಣಿಸಿದೆ. ಇದು ಅಸಭ್ಯ ವರ್ತನೆಯಾಗಿದ್ದು, ತಮ್ಮ ವರ್ತನೆ ಕುರಿತು ಸ್ಪಷ್ಟನೆ ನೀಡುವಂತೆ ಅವರಿಗೆ ಪಕ್ಷ ಶೋಕಾಸ್ ನೋಟಿಸ್ ಜಾರಿಗೊಳಿಸಿದೆ” ಎಂದು ತಿಳಿಸಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದ ವಿಡಿಯೊದಲ್ಲಿ ಬಿಜೆಪಿಯ ಮಾಜಿ ಶಾಸಕರೂ ಆದ ಸುರೇಶ್ ರಾಥೋಡ್, ಸಹರಣ್ ಪುರ್ ಮೂಲದ ನಟಿ ಊರ್ಮಿಳಾ ಸನಾವರ್ ರೊಂದಿಗಿರುವುದು ಹಾಗೂ ಆಕೆಯನ್ನು ಅವರು ತಮ್ಮ ಎರಡನೆ ಪತ್ನಿ ಎಂದು ಪರಿಚಯಿಸುತ್ತಿರುವುದು ಕಂಡು ಬಂದಿತ್ತು. ಈ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದ ವಿಪಕ್ಷ ಕಾಂಗ್ರೆಸ್, ಇದು ಏಕರೂಪ ನಾಗರಿಕ ಸಂಹಿತೆಯ ಉಲ್ಲಂಘನೆಯಾಗಿದೆ ಎಂದು ಟೀಕಿಸಿತ್ತು.
ತಮ್ಮ ವಿಡಿಯೊಗೆ ಸಂಬಂಧಿಸಿದಂತೆ ವಿವಾದ ಭುಗಿಲೇಳುತ್ತಿದ್ದಂತೆಯೇ, ತಮ್ಮ ಹೇಳಿಕೆಯಿಂದ ಹಿಂದೆ ಸರಿದಿರುವ ಸುರೇಶ್ ರಾಥೋಡ್, ಆ ಹೇಳಿಕೆ ಚಿತ್ರವೊಂದರ ಚಿತ್ರೀಕರಣದ ಭಾಗವಾಗಿತ್ತು ಎಂದು ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಕಾಂಗ್ರೆಸ್ ವಕ್ತಾರೆ ಗರಿಮಾ ದಸೌನಿ, ಇದು ಬಿಜೆಪಿಯ ಅನೈತಿಕ ರಾಜಕಾರಣ ಮತ್ತು ದ್ವಿಮುಖ ನೀತಿಗೆ ಒಂದು ಉದಾಹರಣೆಯಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. “ಒಂದು ವೇಳೆ ಇದು ನಿಜಕ್ಕೂ ನಟನೆಯೇ ಆಗಿದ್ದರೆ, ಬಿಜೆಪಿ ನಾಯಕರ ಪ್ರತಿ ವರ್ತನೆಯನ್ನೂ ಚಲನಚಿತ್ರದ ಚಿತ್ರಕತೆಯಂತೆ ಹೆಣೆಯಲಾಗಿದೆಯೆ? ಅಥವಾ ಇದು ವಾಸ್ತವವೇ ಆಗಿದ್ದರೆ, ಬಿಜೆಪಿ ಜಾರಿಗೊಳಿಸಿರುವ ಶೋಕಾಸ್ ನೋಟಿಸ್ ಒಂದು ಪ್ರಹಸನವೇ?” ಎಂದು ವ್ಯಂಗ್ಯವಾಡಿದ್ದಾರೆ.