×
Ad

ಅಮೆರಿಕದಿಂದ 22 ಲಕ್ಷ ಟನ್ ಎಲ್‌ಪಿಜಿ ಆಮದಿಗೆ ಒಪ್ಪಂದ

Update: 2025-11-18 07:35 IST

PC: x.com/Poojagupta

ಹೊಸದಿಲ್ಲಿ: ಅಮೆರಿಕದಿಂದ ಮುಂದಿನ ಒಂದು ವರ್ಷದಲ್ಲಿ 22 ಲಕ್ಷ ಟನ್ ಅಡುಗೆ ಅನಿಲ ಆಮದು ಮಾಡಿಕೊಳ್ಳುವ ಸಂಬಂಧ ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಸಂಸ್ಥೆಗಳು ಒಪ್ಪಂದ ಮಾಡಿಕೊಂಡಿವೆ. ಇದು ಭಾರತದ ಒಟ್ಟು ಎಲ್‌ಪಿಜಿ ಆಮದಿನ ಶೇಕಡ 10ರಷ್ಟಾಗಿದೆ. ಇದು ಟ್ರಂಪ್ ಆಡಳಿತದ ಪ್ರಮುಖ ಆರೋಪವಾಗಿರುವ ವ್ಯಾಪಾರ ಅಸಮತೋಲನವನ್ನು ಕಡಿಮೆ ಮಾಡಲಿದೆ.

"ಇದೊಂದು ಐತಿಹಾಸಿಕ ಪ್ರಥಮ. ವಿಶ್ವದ ಅತಿದೊಡ್ಡ ಮತ್ತು ವೇಗವಾಗಿ ಬೆಳೆಯುತ್ತಿರುವ ಎಲ್‌ಪಿಜಿ ಮಾರುಕಟ್ಟೆ ಅಮೆರಿಕಕ್ಕೆ ತೆರೆದುಕೊಂಡಿದೆ. ಭಾರತದ ಜನತೆಗೆ ಕೈಗೆಟುಕುವ ದರದಲ್ಲಿ ಪೂರೈಕೆ ಮಾಡುವ ನಿಟ್ಟಿನಲ್ಲಿ, ನಾವು ನಮ್ಮ ಎಲ್‌ಪಿಜಿ ಮೂಲವನ್ನು ವೈವಿಧ್ಯಮಯಗೊಳಿಸುತ್ತಿದ್ದೇವೆ" ಎಂದು ಪೆಟ್ರೋಲಿಯಂ ಖಾತೆ ಸಚಿವ ಹರ್ದೀಪ್ ಪುರಿ ಎಕ್ಸ್ ಪೋಸ್ಟ್ ನಲ್ಲಿ ಹೇಳಿದ್ದಾರೆ. ಇದನ್ನು ಅಮೆರಿಕದ ಕೊಲ್ಲಿ ಕರಾವಳಿಯಿಂದ ಆಮದು ಮಾಡಿಕೊಳ್ಳಲಾಗುತ್ತದೆ ಹಾಗೂ 2026 ಖರೀದಿಗೆ ಬೆಂಚ್‌ಮಾರ್ಕ್ ದರ ಮೊಂಟ್ ಬೆಲ್‌ವೀವ್‌ಗೆ ಸಂಪರ್ಕಿತವಾಗಿರುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

ನಿಖರ ಅಂಕಿ ಅಂಶಗಳು ರಹಸ್ಯವಾಗಿದ್ದು, ವಿಶ್ಲೇಷಕರ ಪ್ರಕಾರ ಮೊಂಟ್ ಬೆಲ್‌ವೀವ್‌ ಪ್ರೊಪೇನ್ ನ ಟನ್ ದರ 650 ರಿಂದ 700 ಡಾಲರ್ ಆಗಿರುತ್ತದೆ ಎಂದು ಹೇಳಲಾಗಿದೆ. ಬ್ಯೂಟೇನ್ ದರ ಟನ್ ಗೆ 550 ರಿಂದ 600 ಡಾಲರ್‌ಗಳಾಗಿವೆ.

ಭಾರತ ತನ್ನ ಎಲ್‌ಪಿಜಿಗೆ ಬಹುತೇಕ ಕೊಲ್ಲಿ ರಾಷ್ಟ್ರಗಳನ್ನು ಅವಲಂಬಿಸಿದ್ದು, ಖತರ್, ಯುಎಇ ಹಾಗೂ ಸೌದಿಯಿಂದ ಒಟ್ಟು ಬೇಡಿಕೆಯ ಶೇಕಡ 80ನ್ನು ಆಮದು ಮಾಡಿಕೊಳ್ಳುತ್ತಿದೆ. 2012-13ರಲ್ಲಿ ಇದ್ದ ಶೇಕಡ 32ಕ್ಕೆ ಹೋಲಿಸಿದರೆ ಇದೀಗ ಶೇಕಡ 27ಕ್ಕೆ ಇಳಿದಿದ್ದರೂ, ಖತರ್ ಸಿಂಹಪಾಲು ಹೊಂದಿದೆ. ಉಳಿದಂತೆ ಯುಎಇ ಶೇಕಡ 26ರಷ್ಟು ಹಾಗೂ ಸೌದಿ ಅರೇಬಿಯಾ ಶೇಕಡ 19ರಷ್ಟು ಪ್ರಮಾಣವನ್ನು ರಫ್ತು ಮಾಡುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News