×
Ad

ಪೈಲಟ್‌ಗಳ ನಿವೃತ್ತಿ ವಯಸ್ಸನ್ನು 58 ರಿಂದ 65ಕ್ಕೇರಿಸಿದ ಏರ್‌ ಇಂಡಿಯಾ

Update: 2025-08-10 08:10 IST

ಹೊಸದಿಲ್ಲಿ: ಪೈಲಟ್ ಗಳ ನಿವೃತ್ತಿ ವಯಸ್ಸನ್ನು 58 ರಿಂದ 65ಕ್ಕೇರಿಸಿರುವ ಏರ್‌ ಇಂಡಿಯಾ, ಇತರ ಸಿಬ್ಬಂದಿಯ ನಿವೃತ್ತಿ ವಯಸ್ಸನ್ನು ಕೂಡಾ 58 ರಿಂದ 60ಕ್ಕೇರಿಸಿದೆ.

ಈ ಹಿಂದೆ ವಿಸ್ತಾರ ಏರ್‌ಲೈನ್ಸ್‌ನಲ್ಲೂ ಪೈಲಟ್ ಗಳ ನಿವೃತ್ತಿ ವಯಸ್ಸು 65 ಆಗಿತ್ತು ಎಂದು ಮೂಲಗಳು ಹೇಳಿವೆ. "ಕಳೆದ ನವೆಂಬರ್ ನಲ್ಲಿ ವಿಸ್ತಾರ, ಏರ್‌ ಇಂಡಿಯಾ ಜತೆಗೆ ವಿಲೀನವಾದ ಹಿನ್ನೆಲೆಯಲ್ಲಿ ಸಮಾನತೆ ತರುವ ಉದ್ದೇಶದಿಂದ ಏರ್‌ ಇಂಡಿಯಾದಲ್ಲಿ ಪೈಲಟ್ ಗಳ ನಿವೃತ್ತಿ ವಯಸ್ಸನ್ನು 65ಕ್ಕೇರಿಸಲಾಗಿದೆ" ಎಂದು ಮೂಲಗಳು ವಿವರಿಸಿವೆ.

ಏರ್‌ ಇಂಡಿಯಾದಲ್ಲಿ 3600 ಪೈಲಟ್ ಗಳು ಮತ್ತು 9500 ಮಂದಿ ವೈಮಾನಿಕ ತಂತ್ರಜ್ಞರು ಸೇರಿದಂತೆ 24 ಸಾವಿರ ಉದ್ಯೋಗಿಗಳಿದ್ದಾರೆ. ಪೈಲಟ್ ಗಳ ನಿವೃತ್ತಿ ವಯಸ್ಸು ಏರಿಸಿದಂತೆ ಕ್ಯಾಬಿನ್ ತಂತ್ರಜ್ಞರ ನಿವೃತ್ತಿ ವಯಸ್ಸನ್ನೂ ಹೆಚ್ಚಿಸಲಾಗಿದೆಯೇ ಎಂಬ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ.

ಏರ್‌ಲೈನ್ಸ್‌ನ ಟೌನ್‌ಹಾಲ್‌ನಲ್ಲಿ ಉದ್ಯೋಗಿಗಳನ್ನು ಉದ್ದೇಶಿಸಿ ಮಾತನಾಡಿ ಸಿಇಓ ಮತ್ತು ಎಂಡಿ ಕ್ಯಾಂಪ್ಬೆಲ್ ವಿಲ್ಸನ್ ಅವರು ನಿವೃತ್ತಿ ವಯಸ್ಸು ಹೆಚ್ಚಿಸುವ ನಿರ್ಧಾರ ಪ್ರಕಟಿಸಿದರು ಎಂದು ತಿಳಿದು ಬಂದಿದೆ. 65 ವರ್ಷ ವಯಸ್ಸಿನವರೆಗೂ ಪೈಲಟ್ ಗಳು ವಿಮಾನ ಚಲಾಯಿಸಲು ವಿಮಾನಯಾನ ಮಹಾ ನಿರ್ದೇಶನಾಲಯ ಅವಕಾಶ ಕಲ್ಪಿಸಿದೆ.

"ಏರ್‌ ಇಂಡಿಯಾ ಮತ್ತು ವಿಸ್ತಾರ ಪೈಲಟ್ ಗಳ ನಡುವೆ ನಿವೃತ್ತಿ ವಯಸ್ಸೂ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಅಸಮಾಧಾನ ಇತ್ತು; ಇದೀಗ ಎಲ್ಲವನ್ನೂ ಬಗೆಹರಿಸಲಾಗಿದೆ" ಎಂದು ಮೂಲಗಳು ಹೇಳಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News