ಬಹುಪತ್ನಿತ್ವ ನಿಷೇಧ ಮಸೂದೆಗೆ ಅಸ್ಸಾಂ ಸಂಪುಟ ಅಸ್ತು
ಹಿಮಂತ ಬಿಸ್ವ ಶರ್ಮಾ | Photo Credit : PTI
ಗುವಾಹಟಿ: ಅಸ್ಸಾಂ ಬಹುಪತ್ನಿತ್ವ ನಿಷೇಧ ಮಸೂದೆ-2025ಕ್ಕೆ ಅಸ್ಸಾಂ ಸಚಿವ ಸಂಪುಟ ರವಿವಾರ ಅನುಮೋದನೆ ನೀಡಿದೆ. ಈ ತಿಂಗಳ 25ರಂದು ವಿಧಾನಸಭೆಯಲ್ಲಿ ಈ ಮಸೂದೆ ಮಂಡನೆಯಾಗಲಿದ್ದು, ಆದಿವಾಸಿ ಸಮುದಾಯಗಳಿಗೆ ಮತ್ತು ಅವರ ಪ್ರದೇಶಗಳಿಗೆ ಆರನೇ ಶೆಡ್ಯೂಲ್ ಅಡಿಯಲ್ಲಿ ವಿನಾಯ್ತಿ ನೀಡಲಾಗಿದೆ.
ನಿಷೇಧ ಉಲ್ಲಂಘನೆಗೆ ಏಳು ವರ್ಷ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಹೇಳಿದ್ದಾರೆ. ಈ ಹಿಂದಿನ ವಿವಾಹಗಳನ್ನು ಮುಚ್ಚಿಟ್ಟುಕೊಂಡವರು 10 ವರ್ಷ ಶಿಕ್ಷೆ ಅನುಭವಿಸಬೇಕಾಗುತ್ತದೆ. ಇದಕ್ಕೆ ಕುಮ್ಮಕ್ಕು ನೀಡುವ ಖಾಝಿಗಳು, ಅರ್ಚಕರು ಅಥವಾ ಪೋಷಕರು ಕೂಡಾ ಎರಡು ವರ್ಷದ ಜೈಲು ಶಿಕ್ಷೆ ಎದುರಿಸಬೇಕಾಗುತ್ತದೆ.
ಬಹುಪತ್ನಿತ್ವ ಸಂತ್ರಸ್ತ ಮಹಿಳೆಯರಿಗೆ ಪರಿಹಾರ ನೀಡುವ ಸಲುವಾಗಿ ನಿಧಿಯೊಂದನ್ನು ಸ್ಥಾಪಿಸಲಾಗುತ್ತಿದೆ.
"ಸಂಗಾತಿಗಳು ಜೀವಂತ ಇದ್ದರೆ ಅಥವಾ ಕಾನೂನಾತ್ಮಕವಾಗಿ ಬೇರ್ಪಡದೇ ಇದ್ದಲ್ಲಿ ಅಥವಾ ವಿಚ್ಛೇದನ ತೀರ್ಪಿನಡಿ ವೈವಾಹಿಕ ಸಂಬಂಧ ಮುರಿದುಕೊಳ್ಳದೇ ಇದ್ದಲ್ಲಿ ಮತ್ತೊಂದು ವಿವಾಹವಾಗುವುದನ್ನು ನಿಷೇಧಿಸಲಾಗುತ್ತದೆ" ಎಂದು ಅಧಿಕೃತ ಪ್ರಕಟನೆ ತಿಳಿಸಿದೆ.