ರಾಡ್‌ನಿಂದ ಹಲ್ಲೆ, ಅರೆ ಬೆತ್ತಲೆ ಗೊಳಿಸಿ ಮೈಮೇಲೆ ಮೂತ್ರ ವಿಸರ್ಜನೆ: ಮಹಾರಾಷ್ಟ್ರ ಸರಪಂಚ್ ಕೊಲೆಯ ಭೀಕರತೆ ತನಿಖೆಯಲ್ಲಿ ಬಹಿರಂಗ!
ಸಂತೋಷ್ ದೇಶ್ ಮುಖ್ (Photo credit: dainikprabhat.com)
ಮುಂಬೈ: ಡಿಸೆಂಬರ್ 9ರಂದು ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಹಳ್ಳಿಯೊಂದರ ಸರಪಂಚ್ ಸಂತೋಷ್ ದೇಶ್ ಮುಖ್ ಅವರನ್ನು ಅಪಹರಿಸಿ ಚಿತ್ರಹಿಂಸೆ ನೀಡಿ ಕೊಲೆ ಮಾಡಲಾಗಿದೆ. ಕೊಲೆ ಕುರಿತ ತನಿಖೆಯ ವೇಳೆ ಸಂತೋಷ್ ದೇಶ್ ಮುಖ್ ಅವರನ್ನು ರಾಡ್‌ನಿಂದ ಹೊಡೆದು ಚಿತ್ರಹಿಂಸೆ ನೀಡಿ ಕ್ರೂರವಾಗಿ ಕೊಲೆ ಮಾಡಿರುವುದು ಬಯಲಾಗಿದೆ.
ಘಟನೆ ನಡೆದು ಸುಮಾರು ಮೂರು ತಿಂಗಳ ನಂತರ ಮಹಾರಾಷ್ಟ್ರದ ಸಚಿವ ಧನಂಜಯ್ ಮುಂಡೆ ರಾಜೀನಾಮೆ ನೀಡಿದ್ದಾರೆ. ಧನಂಜಯ್ ಮುಂಡೆ ಆಪ್ತ ವಾಲ್ಮಿಕ್ ಕರಡ್ ಕೊಲೆಯ ಪ್ರಮುಖ ಸೂತ್ರಧಾರಿ ಎಂದು ತನಿಖೆಯಲ್ಲಿ ಬಯಲಾಗಿದೆ.
ಬೀಡ್ ಜಿಲ್ಲೆಯಲ್ಲಿ ವಿಂಡ್ಮಿಲ್ ಎನರ್ಜಿ ಸಂಸ್ಥೆಯನ್ನು ಗುರಿಯಾಗಿಸಿಕೊಂಡು ನಡೆಸಲ್ಪಡುತ್ತಿದ್ದ ಸುಲಿಗೆ ಯತ್ನವನ್ನು ನಿಲ್ಲಿಸಲು ಸಂತೋಷ್ ದೇಶ್ ಮುಖ್ ಪ್ರಯತ್ನಿಸಿದ್ದರು. ಇದೇ ಕಾರಣಕ್ಕೆ ಅವರನ್ನು ಕೊಲೆ ಮಾಡಲಾಗಿದೆ ಎನ್ನುವುದು ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ.
2 ಕೋಟಿ ಸುಲಿಗೆಗೆ ಯತ್ನ:
ಮುಂಬೈ ಮೂಲದ ನವೀಕರಿಸಬಹುದಾದ ಇಂಧನ ಕಂಪೆನಿ ʼಅವಾಡಾʼ, ಬೀಡ್ ಜಿಲ್ಲೆಯ ಮಸ್ಸಾಜೋಗ್ ಗ್ರಾಮದಲ್ಲಿ ಯೋಜನೆಯೊಂದನ್ನು ಕೈಗೊಂಡಿತ್ತು. ಇದರಿಂದ ಬೀಡ್ ಮತ್ತು ಪಕ್ಕದ ಜಿಲ್ಲೆಗಳು ಕಳೆದ ಕೆಲವು ವರ್ಷಗಳಿಂದ ಆರ್ಥಿಕ ಉತ್ತೇಜನವನ್ನು ಕಂಡಿವೆ. ಆದರೆ, ಇದನ್ನೇ ಬಳಸಿಕೊಂಡು ಸ್ಥಳೀಯ ಕ್ರಿಮಿನಲ್‌ಗಳು ಹಣ ವಸೂಲಿ ಮತ್ತು ಅಪಹರಣ ಕೃತ್ಯಗಳಿಗೆ ಇಳಿದಿದ್ದರು.
ಕಳೆದ ಮೇ ತಿಂಗಳಲ್ಲಿ ಅಂದರೆ ದೇಶ್ ಮುಖ್ ಹತ್ಯೆಗೆ ಆರು ತಿಂಗಳ ಮೊದಲು, ಬೀಡ್ ಜಿಲ್ಲೆಯಲ್ಲಿ ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದ ಸುದರ್ಶನ್ ಘೂಲೆ ಎಂಬಾತ ʼಅವಾಡಾʼ(Avaada)ʼ ಕಂಪೆನಿಯ ಯೋಜನಾಧಿಕಾರಿ ಸುನೀಲ್ ಶಿಂಧೆ ಅವರನ್ನು ಅಪಹರಿಸಿದ್ದ. ಈ ಬಗ್ಗೆ ಶಿಂಧೆ ಪೊಲೀಸರಿಗೆ ದೂರು ನೀಡಿದ್ದರು.
ಪೊಲೀಸರ ಪ್ರಕಾರ, ಕೊಲೆ ಪ್ರಕರಣದ ಇನ್ನೋರ್ವ ಆರೋಪಿ ವಿಷ್ಣು ಚಾಟೆ, ಸಚಿವ ಧನಂಜಯ್ ಮುಂಡೆ ಅವರ ಆಪ್ತ ವಾಲ್ಮಿಕ್ ಕರಾಡ್ ಸೂಚನೆ ಮೇರೆಗೆ ʼಅವಾಡಾʼ ಅಧಿಕಾರಿಗಳಿಗೆ ಕರೆ ಮಾಡಿ 2 ಕೋಟಿ ರೂ. ನೀಡಬೇಕು, ಇಲ್ಲವಾದಲ್ಲಿ ಕಂಪೆನಿಯನ್ನು ಮುಚ್ಚುವಂತೆ ಬೆದರಿಕೆ ಹಾಕಿದ್ದಾನೆ. ಇದನ್ನು ತಿಳಿದ ಸ್ಥಳೀಯ ಸರಪಂಚ್ ಸಂತೋಷ್ ದೇಶ್ ಮುಖ್, ಬೆದರಿಕೆ, ಸುಲಿಗೆಯಿಂದ ಅವಾಡಾ ಕಂಪೆನಿ ಮಸ್ಸಾಜೋಗ್ ನಲ್ಲಿ ಕಾರ್ಯಚರಣೆ ನಿಲ್ಲಿಸಬಹುದು. ಇದು ಸ್ಥಳೀಯ ಜನರ ಜೀವನೋಪಾಯದ ಮೇಲೆ ಪರಿಣಾಮ ಬೀರಬಹುದು ಎಂದು ಆತಂಕಗೊಂಡರು. ಇದನ್ನು ತಡೆಯಲು ಮುಂದಾದ ಸಂತೋಷ್ ದೇಶ್ ಮುಖ್ ಅವರು ಸುದರ್ಶನ್ ಘುಲೆ ವಿರುದ್ಧ ಹೋರಾಟ ಆರಂಭಿಸಿದರು.
ಡಿಸೆಂಬರ್ 6ರಂದು, ಹತ್ಯೆಯ ಮೂರು ದಿನ ಮೊದಲು, ಘುಲೆ ಮತ್ತು ಇತರರು ಅವಾಡಾದ ಸ್ಥಳೀಯ ಕಚೇರಿಯ ಕೆಲವು ಉದ್ಯೋಗಿಗಳ ಮೇಲೆ ಹಲ್ಲೆ ನಡೆಸಿದ್ದರು. ಸಂತೋಷ್ ದೇಶ್ ಮುಖ್ ಮತ್ತು ಇತರರು ಸ್ಥಳಕ್ಕೆ ತೆರಳಿ ಇದನ್ನು ತಡೆಯಲು ಪ್ರಯತ್ನಿಸಿದ್ದರು. ಇದರಿಂದಾಗಿ ಆರೋಪಿಗಳು ಸಂತೋಷ್ ದೇಶ್ ಮುಖ್ ತಮ್ಮ ಕೃತ್ಯಕ್ಕೆ ಅಡ್ಡಿಯಾಗುತ್ತಿದ್ದಾನೆ ಎಂದು ಆತನನ್ನು ಕೊಲೆ ಮಾಡಲು ನಿರ್ಧರಿಸಿದರು. ಕೊಲೆ ಪ್ರಕರಣದ ಸೂತ್ರಧಾರಿ ವಾಲ್ಮಿಕ್ ಕರಾಡ್, ಹಣ ವಸೂಲಿಗೆ ಅಡ್ಡಿಪಡಿಸಲು ಯಾರೇ ಅಡ್ಡ ಬಂದರೂ ಅವರನ್ನು ಕೊಲೆ ಮಾಡುವಂತೆ ಆರೋಪಿಗಳಿಗೆ ಹೇಳಿದ್ದಾನೆ.
ದೇಶ್ ಮುಖ್ ಅವರಿಗೆ ಈ ಮೊದಲು ಬೆದರಿಕೆ ಹಾಕಲಾಗಿತ್ತು. ಆದರೆ, ಅವರು ತಮ್ಮ ಹೋರಾಟವನ್ನು ಮುಂದುವರಿಸಿದರು. ಇದರಿಂದಾಗಿ ಅವರನ್ನು ಅಪಹರಿಸಿ ಕೊಲೆ ಮಾಡಲಾಗಿದೆ. ದೇಶ್ ಮುಖ್ ಹತ್ಯೆಗೂ ಮೊದಲು ಮತ್ತು ನಂತರ ಘುಲೆ, ಕರಾಡ್ ಮತ್ತು ವಿಷ್ಣು ಚಾಟೆ ಪರಸ್ಪರ ಸಂಪರ್ಕದಲ್ಲಿದ್ದರು ಎಂದು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಚಿತ್ರಹಿಂಸೆ, ಆಘಾತಕಾರಿ ವೀಡಿಯೊಗಳು :
ಡಿಸೆಂಬರ್ 9ರಂದು ಮಧ್ಯಾಹ್ನ ಡೊಂಗಾವ್ ಟೋಲ್ ಪ್ಲಾಜಾದಲ್ಲಿ ಸಂತೋಷ್ ದೇಶ್ ಮುಖ್ ಅವರನ್ನು ಎಸ್‌ಯುವಿ ಕಾರಿನಲ್ಲಿ ಬಂದ ಆರು ಜನರ ತಂಡ ಅಪಹರಿಸಿ ಕೇಜ್ ತಾಲೂಕಿನ ಕಡೆಗೆ ಕರೆದೊಯ್ದಿದ್ದರು. ಅಂದು ಸಂಜೆ ದೈತ್ನಾ ಶಿವಾರದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ದೇಶ್ ಮುಖ್ ಪತ್ತೆಯಾದರು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆಸ್ಪತ್ರೆಯಲ್ಲಿ ಅವರನ್ನು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು.
ಪೊಲೀಸರ ಪ್ರಕಾರ, ಸಂತೋಷ್ ದೇಶ್ ಮುಖ್ ಅವರನ್ನು ಗ್ಯಾಸ್ ಪೈಪ್, ಕಬ್ಬಿಣದ ರಾಡ್, ಮರದ ಕೋಲುಗಳು ಮತ್ತು ಹರಿತವಾದ ಆಯುಧಗಳಿಂದ ಎರಡು ಗಂಟೆಗಳ ಕಾಲ ಥಳಿಸಿ ಕೊಲೆ ಮಾಡಲಾಗಿದೆ.
ಚಾರ್ಜ್‌ಶೀಟ್‌ನಲ್ಲಿ ಏನಿದೆ?
ಸಂತೋಷ್ ದೇಶ್ ಮುಖ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ 1200 ಪುಟಗಳ ಆರೋಪಪಟ್ಟಿಯನ್ನು ಸಲ್ಲಿಸಿದ ಪೊಲೀಸರು, ಅದರಲ್ಲಿ ಮಹತ್ವದ ಅಂಶಗಳನ್ನು ಉಲ್ಲೇಖಿಸಿದ್ದಾರೆ.
ದೇಶ್ ಮುಖ್ ಅವರಿಗೆ ಕೊಲೆ ಮಾಡುವ ಮೊದಲು ಚಿತ್ರಹಿಂಸೆ ನೀಡಿ ದುಷ್ಕರ್ಮಿಗಳು 15 ವೀಡಿಯೊಗಳನ್ನು ರೆಕಾರ್ಡ್ ಮಾಡಿದ್ದಾರೆ. 8 ಫೋಟೋಗಳನ್ನು ಕ್ಲಿಕ್ ಮಾಡಿದ್ದಾರೆ ಮತ್ತು ಎರಡು ವೀಡಿಯೊ ಕರೆಗಳನ್ನು ಮಾಡಿದ್ದಾರೆ. ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾದ ವೀಡಿಯೊವೊಂದರಲ್ಲಿ, ಐವರು ಆರೋಪಿಗಳು ದೇಶ್ ಮುಖ್ ಅವರನ್ನು ಬಿಳಿ ಪೈಪ್ ಮತ್ತು ದೊಣ್ಣೆಯಿಂದ ಥಳಿಸುತ್ತಿರುವುದು ಮತ್ತು ಒದೆಯುವುದು ಕಂಡುಬಂದಿದೆ. ದೇಶ್ ಮುಖ್ ಅವರಿಗೆ ಅರೆಬೆತ್ತಲೆ ಮಾಡಿ ಮೈಮೇಲೆ ಮೂತ್ರ ವಿಸರ್ಜನೆ ಮಾಡುವುದು, ಅವರ ದೇಹದಲ್ಲಿ ರಕ್ತಸ್ರಾವವಾಗುವುದು ವೀಡಿಯೊದಲ್ಲಿ ಸೆರೆಯಾಗಿದೆ.
ದೇಶ್ ಮುಖ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ವಾಲ್ಮಿಕ್ ಕರಾಡ್ ಎನ್‌ಸಿಪಿ ನಾಯಕ ಮತ್ತು ಸಚಿವ ಧನಂಜಯ್ ಮುಂಡೆ ಅವರ ಆಪ್ತ ಸಹಾಯಕ. ಕೊಲೆಯಲ್ಲಿ ಕರಾಡ್ ಪಾತ್ರ ಬಹಿರಂಗವಾಗುತ್ತಿದ್ದಂತೆ ಪ್ರತಿಪಕ್ಷಗಳು ಮಹಾರಾಷ್ಟ್ರ ಸರಕಾರದ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿವೆ. ದೇಶ್ ಮುಖ್ ಅವರಿಗೆ ಚಿತ್ರಹಿಂಸೆಯ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಟಿವಿ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಸಾರವಾದವು. ಇದನ್ನು ಗಮನಿಸಿದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಎನ್‌ಸಿಪಿ ಮುಖ್ಯಸ್ಥ ಅಜಿತ್ ಪವಾರ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದರು. ಆ ಬಳಿಕ ದೇಶ್ ಮುಖ್ ಅವರಿಗೆ ರಾಜೀನಾಮೆಗೆ ಸೂಚಿಸಲಾಗಿದೆ.
ಕೃಪೆ: NDTV