ಪಶ್ಚಿಮ ಬಂಗಾಳ| ರಾಮನವಮಿ ಮೆರವಣಿಗೆಯಲ್ಲಿ ಹಿಂಸಾಚಾರ: ಪೊಲೀಸರಿಂದ ಲಾಠಿಚಾರ್ಜ್, ಅಶ್ರುವಾಯು ಪ್ರಯೋಗ

Update: 2024-04-18 14:43 GMT

 PC : X/@PTI_News (Video Screengrab)

ಕೋಲ್ಕತಾ: ಪಶ್ಚಿಮ ಬಂಗಾಳದ ಮುರ್ಶಿದಾಬಾದ್‌ನ ಶಕ್ತಿಪುರ ಪ್ರದೇಶದಲ್ಲಿ ಬುಧವಾರ ರಾತ್ರಿ ಕೋಮು ಘರ್ಷಣೆ ನಡೆದಿದ್ದು, ಹಲವರು ಗಾಯಗೊಂಡಿದ್ದಾರೆ.

ರಾಮನವಮಿ ಆಚರಣೆ ಹಿನ್ನೆಲೆಯಲ್ಲಿ ಸಂಘ ಪರಿವಾರ ಮೆರವಣಿಗೆ ಆಯೋಜಿಸಿತ್ತು. ಈ ಸಂದರ್ಭ ಜನರು ತಮ್ಮ ಮನೆಯ ಛಾವಣಿಗಳ ಮೇಲೆ ನಿಂತು ಮೆರವಣಿಗೆಯ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಕಲ್ಲು ತೂರಾಟದ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ ಎಂದು ವರದಿ ಹೇಳಿದೆ.

ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸರು ಲಾಠಿಚಾರ್ಜ್ ನಡೆಸಿದ್ದಾರೆ ಹಾಗೂ ಗಲಭೆಯಲ್ಲಿ ತೊಡಗಿದ್ದ ಗುಂಪನ್ನು ಚದುರಿಸಲು ಅಶ್ರುವಾಯು ಸೆಲ್‌ಗಳನ್ನು ಸಿಡಿಸಿದ್ದಾರೆ.

ಗಾಯಗೊಂಡವನ್ನು ಬಹರಾಮ್‌ಪುರದ ಮುರ್ಶಿದಾಬಾದ್ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಘರ್ಷಣೆಯ ಹಿಂದಿರುವ ಪ್ರೇರಕ ಶಕ್ತಿ ಮಮತಾ ಬ್ಯಾನರ್ಜಿ ಅವರ ಸರಕಾರ ಎಂದು ಹೇಳಿರುವ ರಾಜ್ಯ ಬಿಜೆಪಿ ಘಟಕ, ಮೆರವಣಿಗೆಯ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ ಹಾಗೂ ಅಂಗಡಿಗಳನ್ನು ಧ್ವಂಸಗೊಳಿಸಲಾಗಿದೆ ಎಂದು ಆರೋಪಿಸಿದೆ.

‘‘ಆಡಳಿತದಿಂದ ಎಲ್ಲಾ ಪರವಾನಿಗೆಗಳನ್ನು ಪಡೆದುಕೊಂಡು ಶಾಂತಿಯುತವಾಗಿ ನಡೆಸಿದ ರಾಮ ನವಮಿ ಮೆರವಣಿಗೆ ಮೇಲೆ ಮುರ್ಶಿದಾಬಾದ್ ಬೆಲ್ಡಂಗ-2ನೇ ಬ್ಲಾಂಕ್‌ನ ಶಕ್ತಿಪುರದಲ್ಲಿ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ವಿಚಿತ್ರ ಎಂದರೆ, ಈ ಬಾರಿ ಮಮತಾ ಅವರ ಪೊಲೀಸರು ಕೂಡ ದುಷ್ಕರ್ಮಿಗಳೊಂದಿಗೆ ಸೇರಿ ದಾಳಿ ನಡೆಸಿದ್ದಾರೆ. ರಾಮ ಭಕ್ತರ ಮೇಲೆ ಅಶ್ರುವಾಯು ಸೆಲ್‌ಗಳನ್ನು ಪ್ರಯೋಗಿಸಿದ್ದಾರೆ’’ ಎಂದು ಪಶ್ಚಿಮಬಂಗಾಳ ವಿಧಾನ ಸಭೆಯಲ್ಲಿ ಪ್ರತಿಪಕ್ಷದ ನಾಯಕ ಸುವೇಂದು ಅಧಿಕಾರಿ ತಿಳಿಸಿದ್ದಾರೆ.

ʼಬಿಜೆಪಿಯಿಂದ ಹಿಂಸಾಚಾರಕ್ಕೆ ಪ್ರಚೋದನೆʼ:

ರಾಜ್ಯದಲ್ಲಿ ರಾಮನವಮಿ ಆಚರಣೆಯ ಸಂದರ್ಭ ಬಿಜೆಪಿ ಹಿಂಸಾಚಾರವನ್ನು ಪ್ರಚೋದಿಸಿದೆ ಎಂದು ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ ಆರೋಪಿಸಿದ್ದಾರೆ.

ಮುರ್ಶಿದಾಬಾದ್ ಜಿಲ್ಲೆಯಲ್ಲಿ ನಡೆದ ಹಿಂಸಾಚಾರ ಪೂರ್ವ ಯೋಜಿತ ಎಂದು ಅವರು ಹೇಳಿದ್ದಾರೆ. ಅಲ್ಲದೆ, ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ಇದನ್ನು ಆಯೋಜಿಸಿದೆ ಎಂದು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News