ನಿತೀಶ್ ಸಂಪುಟದಲ್ಲಿ ಬಿಜೆಪಿಗೆ ಸಿಂಹಪಾಲು; ಜೆಡಿಯುಗೆ ದಕ್ಕಿದ್ದು 8 ಸಚಿವ ಸ್ಥಾನ
PC: x.com/narendramodi
ಪಾಟ್ನಾ: ಬಿಹಾರದಲ್ಲಿ 10ನೇ ಬಾರಿಗೆ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಅವರು 26 ಮಂದಿ ಸಚಿವರೊಂದಿಗೆ ಪ್ರಮಾಣ ವಚನ ಸ್ವೀಕರಿಸಿದ್ದು, ಈ ಪೈಕಿ 14 ಮಂದಿ ಬಿಜೆಪಿಯವರು. ನಿತೀಶ್ ನೇತೃತ್ವದ ಸಂಯುಕ್ತ ಜನತಾದಳ ಕೇವಲ ಏಳು ಸಚಿವ ಸ್ಥಾನಗಳನ್ನು ಪಡೆದಿದೆ. ಇತರ ಮೂರು ಘಟಕ ಪಕ್ಷಗಳ ನಾಲ್ವರು ಸಂಪುಟಕ್ಕೆ ಸೇರ್ಪಡೆಯಾಗಿದ್ದಾರೆ.
ಸಂಪುಟದಲ್ಲಿ ಮೂವರು ಮಹಿಳೆಯರು ಸೇರ್ಪಡೆಯಾಗಿದ್ದರೆ, ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿರುವ 10 ಮಂದಿಗೂ ಸಚಿವರಾಗುವ ಭಾಗ್ಯ ದೊರಕಿದೆ. ಮೊದಲ ಬಾರಿಗೆ ಆಯ್ಕೆಯಾದ ಬಿಜೆಪಿಯ ಏಳು ಮಂದಿ ಶಾಸಕರು ಸಚಿವ ಪದವಿ ಪಡೆದಿದ್ದರೆ, ಜೆಡಿಯು ಹಳಬರಿಗೆ ಮಣೆ ಹಾಕಿದೆ. ಜೆಡಿಯುನಿಂದ ಸಚಿವರಾದ ಎಲ್ಲರೂ ನಿತೀಶ್ ಅವರ ನಿಕಟವರ್ತಿಗಳು.
ಜೆಡಿಯು ಕೋಟಾದಡಿ ನಿತೀಶ್ ಸೇರಿದಂತೆ ಕೇವಲ ಎಂಟು ಮಂದಿ ಸಚಿವರಿದ್ದು, ಪಕ್ಷದ ಭದ್ರನೆಲೆ ಎನಿಸಿದ ಕುಶ್ವಾಹ ಸಮುದಾಯದಿಂದ ಯಾರೂ ಸಚಿವರಾಗದಿರುವುದು ಹಲವರ ಹುಬ್ಬೇರಿಸಿದೆ. 36 ಸದಸ್ಯಬಲದ ಸಂಪುಟದಲ್ಲಿ ಉಳಿದಿರುವ ಸ್ಥಾನಗಳನ್ನು ಭರ್ತಿ ಮಾಡುವ ಬಗ್ಗೆ ಮತ್ತಷ್ಟು ಮಾತುಕತೆ ನಡೆಯಲಿದೆ ಎಂದು ಮುಖಂಡರೊಬ್ಬರು ಹೇಳಿದ್ದಾರೆ.
ಮೇಲ್ವರ್ಗದ ಎಂಟು ಮಂದಿ, ಇತರ ಹಿಂದುಳಿದ ವರ್ಗಗಳ ಆರು ಮಂದಿ, ಐವರು ದಲಿತರು ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ. ಸಂಯುಕ್ತ ಜನತಾದಳ ಶಾಸಕ ಝಾಮಾ ಖಾನ್, ಅಲ್ಪಸಂಖ್ಯಾತ ವರ್ಗದ ಏಕೈಕ ಪ್ರತಿನಿಧಿಯಾಗಿದ್ದಾರೆ. 33 ಶಾಸಕರನ್ನು ಹೊಂದಿರುವ ರಜಪೂತ ಸಮುದಾಯ ಗರಿಷ್ಠ ಪ್ರಾತಿನಿಧ್ಯ ಪಡೆದಿದ್ದು, ಬ್ರಾಹ್ಮಣ, ಯಾದವ ಕುರ್ಮಿ, ಕುಶ್ವಾಹ ಮತ್ತು ನಿಷದ ಸಮುದಾಯದ ತಲಾ ಇಬ್ಬರು ಸಂಪುಟದಲ್ಲಿದ್ದಾರೆ.
ಬಿಜೆಪಿ ಶಾಸಕ ಹಾಗೂ ಓಬಿಸಿ ಮುಖಂಡ ಸಮರ್ಥ್ ಚೌಧರಿ ಹಾಗೂ ಮೇಲ್ವರ್ಗದ ಭೂಮಿಹಾರ್ ಸಮುದಾಯಕ್ಕೆ ಸೇರಿದ ವಿಜಯಕುಮಾರ್ ಸಿನ್ಹಾ ಉಪ ಮುಖ್ಯಮಂತ್ರಿಗಳಾಗಿ ಸ್ಥಾನ ಉಳಿಸಿಕೊಂಡಿದ್ದಾರೆ.
ಆರ್‌ಎಲ್ಎಂ ಮುಖ್ಯಸ್ಥ ಉಪೇಂದ್ರ ಕುಶ್ವಾಹ ತಮ್ಮ ಮಗ ದೀಪಕ್ ಪ್ರಕಾಶ್ ಅವರನ್ನು ಸಂಪುಟಕ್ಕೆ ಸೇರ್ಪಡೆಗೊಳಿಸಿದ್ದು, ಸಾರ್ವಜನಿಕವಾಗಿ ಅಪರಿಚಿತರಾಗಿರುವ ಅವರು ಇನ್ನೂ ಯಾವುದೇ ಸದನದ ಸದಸ್ಯರಾಗಿಲ್ಲ. ಕುಶ್ವಾಹ ಪತ್ನಿ ಸ್ನೇಹಲತಾ ಕುಶ್ವಾಹ ಶಾಸಕಿಯಾಗಿ ಆಯ್ಕೆಯಾಗಿದ್ದಾರೆ. ಕೇಂದ್ರ ಸಚಿವ ಜಿತನ್ ರಾಮ್ ಮಾಂಝಿ ಅವರ ಪುತ್ರ ಸಂತೋಷ್ ಕುಮಾರ್ ಸುಮನ್ ಎಚ್ಎಎಂ(ಎಸ್) ಪ್ರತಿನಿಧಿಯಾಗಿ ಸಂಪುಟದಲ್ಲಿ ಮುಂದುವರಿಯಲಿದ್ದಾರೆ.