×
Ad

Fact Check: ಪಟಾಕಿ ಸಿಡಿಯುತ್ತಿರುವ ಈ ವೀಡಿಯೊ ಚಾಂಪಿಯನ್​ಟ್ರೋಫಿ ಫೈನಲ್​ನಲ್ಲಿ ಭಾರತ ಗೆದ್ದ ನಂತರದ್ದಲ್ಲ

Update: 2025-03-12 17:37 IST


Claim: ಚಾಂಪಿಯನ್ ಟ್ರೋಫಿ ಫೈನಲ್​ನಲ್ಲಿ ಭಾರತ ಗೆದ್ದಾಗ ಪಟಾಕಿಗಳನ್ನು ಪ್ರದರ್ಶಿಸುವುದನ್ನು ವೀಡಿಯೊ ತೋರಿಸುತ್ತದೆ.

Fact: 2024ರ ಡಿಸೆಂಬರ್​ನಲ್ಲಿ ಕುವೈತ್‌ನಲ್ಲಿ ನಡೆದ ಫುಟ್‌ಬಾಲ್ ಚಾಂಪಿಯನ್‌ಶಿಪ್‌ನ ಉದ್ಘಾಟನಾ ಸಮಾರಂಭದಲ್ಲಿ ಪಟಾಕಿ ಸಿಡಿಸಿರುವ ವೀಡಿಯೊ ಇದಾಗಿದೆ.

ಮಾರ್ಚ್ 9, 2025 ರಂದು ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಐಸಿಸಿ ಚಾಂಪಿಯನ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಭಾರತ ತಂಡ ನ್ಯೂಝಿಲೆಂಡ್ ವಿರುದ್ಧ 4 ವಿಕೆಟ್​ಗಳ ಜಯ ಸಾಧಿಸುವ ಮೂಲಕ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಇದಾದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಪಟಾಕಿ ಸಿಡಿಯುತ್ತಿರುವ ವೀಡಿಯೊ ಒಂದು ವೈರಲ್ ಆಗುತ್ತಿದೆ. ಟೀಮ್ ಇಂಡಿಯಾ ಗೆದ್ದ ಸಂದರ್ಭ ಪಟಾಕಿಗಳನ್ನು ಪ್ರದರ್ಶಿಸಲಾಗಿದೆ ಎಂದು ಅನೇಕರು ಹೇಳಿಕೊಳ್ಳುತ್ತಿದ್ದಾರೆ.

ಫೇಸ್​ಬುಕ್ ಬಳಕೆದಾರರೊಬ್ಬರು ಮಾರ್ಚ್ 9, 2025 ರಂದು ಈ ವೀಡಿಯೊವನ್ನು ಹಂಚಿಕೊಂಡು, ‘‘ನೆನ್ನೆ ಭಾರತ ಗೆದ್ದಾಗ ಹೊರಗಿನಿಂದ ಕ್ರೀಡಾಂಗಣದ ಅದ್ಭುತ ದೃಶ್ಯ ಈ ರೀತಿ ಇತ್ತು’’ ಎಂದು ಬರೆದುಕೊಂಡಿದ್ದಾರೆ. (Archive)



ಇದೇರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.

Fact Check:

ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಚಾಂಪಿಯನ್ ಟ್ರೋಫಿ ಫೈನಲ್​ನಲ್ಲಿ ಭಾರತ ಗೆದ್ದಾಗ ಪಟಾಕಿ ಸಿಡಿಸಿದ ವೀಡಿಯೊ ಇದಲ್ಲ. 2024ರ ಡಿಸೆಂಬರ್​ನಲ್ಲಿ ಕುವೈತ್‌ನಲ್ಲಿ ನಡೆದ ಫುಟ್‌ಬಾಲ್ ಚಾಂಪಿಯನ್‌ಶಿಪ್‌ನ ಉದ್ಘಾಟನಾ ಸಮಾರಂಭದಲ್ಲಿ ಪಟಾಕಿ ಸಿಡಿಸಿರುವ ವೀಡಿಯೊ ಇದಾಗಿದೆ.

ನಿಜಾಂಶವನ್ನ ತಿಳಿಯಲು ನಾವು ವೈರಲ್ ವೀಡಿಯೊದ ಸ್ಕ್ರೀನ್ ಶಾಟ್ ತೆಗೆದುಕೊಂಡು ಗೂಗಲ್​ನಲ್ಲಿ ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ. ಆಗ ಡಿಸೆಂಬರ್ 22, 2024 ರಂದು @bcarekw ಎಂಬ ಇನ್​ಸ್ಟಾಗ್ರಾಮ್​ ಪೋಸ್ಟ್‌ಗೆ ನಮ್ಮನ್ನು ಕರೆದೊಯ್ಯಿತು. ಇದು ಅದೇ ವೈರಲ್ ಕ್ಲಿಪ್‌ನ ಸ್ವಲ್ಪ ಉದ್ದವಾದ ಆವೃತ್ತಿಯನ್ನು ಒಳಗೊಂಡಿದೆ. ಇದರಲ್ಲಿ ಈ ವೀಡಿಯೊ ಕುವೈತ್‌ನದ್ದು ಎಂದು ಬರೆಯಲಾಗಿದೆ.

ರಿವರ್ಸ್ ಇಮೇಜ್ ಸರ್ಚ್ ವೇಳೆ ಡಿಸೆಂಬರ್ 2024 ರಲ್ಲಿ ಹಲವಾರು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು ಇದೇ ವೈರಲ್ ವೀಡಿಯೊವನ್ನು ಹಂಚಿಕೊಂಡು ಈ ವೀಡಿಯೊ ಕುವೈತ್‌ನಿಂದ ಬಂದಿದೆ ಎಂದು ಬರೆದಿರುವುದು ನಾವು ಕಂಡುಕೊಂಡಿದ್ದೇವೆ.

ಈ ಮಾಹಿತಿಯನ್ನು ಬಳಸಿಕೊಂಡು, ನಾವು ಗೂಗಲ್​ನಲ್ಲಿ ‘ಕುವೈತ್ ಕ್ರೀಡಾಂಗಣ’ ಮತ್ತು ‘ಪಟಾಕಿ’ ಎಂದು ಅರೇಬಿಕ್‌ ಭಾಷೆಯಲ್ಲಿ ಬರೆದು ಇತ್ತೀಚಿನ ಸುದ್ದಿಯನ್ನು ಹುಡುಕಿದೆವು. ಆಗ "26ನೇ ಗಲ್ಫ್ ಕಪ್ ಉದ್ಘಾಟನಾ ಸಮಾರಂಭದಲ್ಲಿ ಜಾಬರ್ ಅಲ್-ಅಹ್ಮದ್ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪಟಾಕಿಗಳು ಸಿಡಿದವು " ಎಂದು ಕುವೈತ್ ಮೂಲದ ಅಲ್ ರೈ ಮೀಡಿಯಾ ಗ್ರೂಪ್ ಡಿಸೆಂಬರ್ 21, 2024 ರಂದು ಇನ್‌ಸ್ಟಾಗ್ರಾಮ್ ಪೋಸ್ಟ್‌ ಹಂಚಿಕೊಂಡಿರುವುದು ಕಂಡುಬಂತು. ಇದು ವೈರಲ್ ವೀಡಿಯೊದಲ್ಲಿ ಕಂಡುಬರುವ ಕ್ರೀಡಾಂಗಣವನ್ನು ಹೋಲುವ ಚಿತ್ರಗಳನ್ನು ಒಳಗೊಂಡಿದೆ.

ನಂತರದ ತನಿಖೆಯು ಡಿಸೆಂಬರ್ 21, 2024 ರಂದು ಕುವೈತ್ ನ್ಯೂಸ್ ಏಜೆನ್ಸಿ (KUNA) ಪ್ರಕಟಿಸಿದ X ಪೋಸ್ಟ್‌ಗೆ ನಮ್ಮನ್ನು ಕರೆದೊಯ್ಯಿತು. ಇದರಲ್ಲಿ ಕ್ರೀಡಾಂಗಣದಲ್ಲಿ ಪಟಾಕಿ ಸಿಡಿಸುವ ದೃಶ್ಯವಿದ್ದು, ಇದು ಕೂಡ ವೈರಲ್ ವೀಡಿಯೊಕ್ಕೆ ಹೋಲುವಂತಿದೆ. "ಅರೇಬಿಯನ್ ಗಲ್ಫ್ ಕಪ್ ಫುಟ್‌ಬಾಲ್ ಚಾಂಪಿಯನ್‌ಶಿಪ್‌ನ ಉದ್ಘಾಟನಾ ಸಮಾರಂಭದ ಸಮಯದಲ್ಲಿ ಕಲಾತ್ಮಕ ಮತ್ತು ಪರಂಪರೆಯ ಪ್ರದರ್ಶನಗಳು" ಎಂದು ಪೋಸ್ಟ್​ಗೆ ಕ್ಯಾಪ್ಶನ್ ನೀಡಲಾಗಿದೆ.

X ಪೋಸ್ಟ್‌ನಲ್ಲಿ ಕಾಣಿಸಿಕೊಂಡಿರುವ ಕ್ರೀಡಾಂಗಣದ ಚಿತ್ರಗಳನ್ನು ವೈರಲ್ ವೀಡಿಯೊದ ಕೀಫ್ರೇಮ್‌ಗಳೊಂದಿಗೆ ಹೋಲಿಸಿದಾಗ, ಎರಡೂ ಒಂದೇ ರಚನೆಯನ್ನು ತೋರಿಸಿವೆ.



ಡಿಸೆಂಬರ್ 21, 2024 ರಂದು ಕುವೈತ್ ನಗರದ ಜಾಬರ್ ಅಲ್ ಅಹ್ಮದ್ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ 26 ನೇ ಆವೃತ್ತಿಯ ಅರೇಬಿಯನ್ ಗಲ್ಫ್ ಕಪ್ ಫುಟ್ಬಾಲ್ ಚಾಂಪಿಯನ್‌ಶಿಪ್‌ನ ಉದ್ಘಾಟನಾ ಸಮಾರಂಭದಲ್ಲಿ ಪಟಾಕಿ ಸಡಿಸಿರುವುದನ್ನು ಕಾಣಬಹುದು ಎಂದು ಬರೆಯಲಾದ ಡಿಸೆಂಬರ್ 2024 ರ ಹಲವಾರು ಮಾಧ್ಯಮ ವರದಿಗಳನ್ನು ಇಲ್ಲಿ, ಇಲ್ಲಿ ನೋಡಬಹುದು.

ಇದಲ್ಲದೆ, ಮಾರ್ಚ್ 9, 2025 ರಂದು ಭಾರತ ಮತ್ತು ನ್ಯೂಝಿಲೆಂಡ್ ನಡುವಿನ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯ ನಡೆದ ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಇಂತಹ ಸಂಭ್ರಮಾಚರಣೆಯ ಪಟಾಕಿಗಳ ಬಗ್ಗೆ ನಮಗೆ ಯಾವುದೇ ವಿಶ್ವಾಸಾರ್ಹ ವರದಿಗಳು ಕಂಡುಬಂದಿಲ್ಲ.

ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ ಕುವೈತ್‌ನಲ್ಲಿ ನಡೆದ ಫುಟ್‌ಬಾಲ್ ಚಾಂಪಿಯನ್‌ಶಿಪ್‌ನ ಉದ್ಘಾಟನಾ ಸಮಾರಂಭದ ಸಂದರ್ಭದಲ್ಲಿ ನಡೆದ ಪಟಾಕಿ ಸಂಭ್ರಮದ ವೀಡಿಯೊವನ್ನು ಭಾರತ vs ನ್ಯೂಝಿಲೆಂಡ್ ಫೈನಲ್ ಪಂದ್ಯ ಮುಗಿದ ಬಳಿಕದ ವೀಡಿಯೊ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.


Claim Review:ಚಾಂಪಿಯನ್ ಟ್ರೋಫಿ ಫೈನಲ್ನಲ್ಲಿ ಭಾರತ ಗೆದ್ದಾಗ ಪಟಾಕಿಗಳನ್ನು ಪ್ರದರ್ಶಿಸುವುದನ್ನು ವೀಡಿಯೊ ತೋರಿಸುತ್ತದೆ.

Claimed By:Facebook User

Claim Reviewed By:NewsMeter

Claim Fact Check:False

Fact:2024ರ ಡಿಸೆಂಬರ್​ನಲ್ಲಿ ಕುವೈತ್‌ನಲ್ಲಿ ನಡೆದ ಫುಟ್‌ಬಾಲ್ ಚಾಂಪಿಯನ್‌ಶಿಪ್‌ನ ಉದ್ಘಾಟನಾ ಸಮಾರಂಭದಲ್ಲಿ ಪಟಾಕಿ ಸಿಡಿಸಿರುವ ವೀಡಿಯೊ ಇದಾಗಿದೆ.

ಈ ಲೇಖನವನ್ನು ಮೊದಲು 'newsmeter.in'ಪ್ರಕಟಿಸಿದೆ. ʼಶಕ್ತಿ ಕಲೆಕ್ಟಿವ್‌ʼನ ಭಾಗವಾಗಿ ವಾರ್ತಾ ಭಾರತಿ ಪ್ರಕಟಿಸಿದೆ.

 


 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - newsmeter.in

contributor

Similar News