ಜಾರ್ಖಂಡ್ | ಛತ್ ಪೂಜೆ ಆಚರಣೆ ವೇಳೆ ನೀರಿನಲ್ಲಿ ಮುಳುಗಿ ಕನಿಷ್ಠ 15 ಮಂದಿ ಮೃತ್ಯು
Photo | newindianexpress
ರಾಂಚಿ : ಜಾರ್ಖಂಡ್ ನಲ್ಲಿ ಛತ್ ಪೂಜೆ ಆಚರಣೆ ವೇಳೆ ಕನಿಷ್ಠ 15 ಮಂದಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಮೃತರಲ್ಲಿ ಹೆಚ್ಚಿನವರು ಕೊಳ ಮತ್ತು ನದಿಯಲ್ಲಿ ಪ್ರಾರ್ಥನೆ ಅಥವಾ ಸ್ನಾನದ ವೇಳೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು indianexpress ವರದಿ ಮಾಡಿದೆ.
ಹಜಾರಿಬಾಗ್‌ನ ಕಟ್ಕಮ್ಸಾಂಡಿಯ ಶಹಪುರ್ ಪಂಚಾಯತ್ ವ್ಯಾಪ್ತಿಯ ಝಾರ್ದಗ್ ಗ್ರಾಮದ ಕೊಳದಲ್ಲಿ ಒಂದೇ ಕುಟುಂಬಕ್ಕೆ ಸೇರಿದ ನಾಲ್ವರು ಬಾಲಕಿಯರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಛತ್ ಪೂಜೆಯ ನಂತರ ಮಧ್ಯಾಹ್ನ ಬಟ್ಟೆ ಒಗೆಯಲು ಹತ್ತಿರದ ಕೊಳಕ್ಕೆ ಹೋಗಿದ್ದರು. ಈ ವೇಳೆ ಓರ್ವ ಬಾಲಕಿ ಆಕಸ್ಮಿಕವಾಗಿ ಕೊಳಕ್ಕೆ ಬಿದ್ದಳು. ಅವಳನ್ನು ರಕ್ಷಿಸಲು ಪ್ರಯತ್ನಿಸುವಾಗ ಇತರ ಮೂವರು ಕೂಡ ಮೃತಪಟ್ಟಿದ್ದಾರೆ.
ಮೃತ ಬಾಲಕಿಯರನ್ನು ರಿಂಕಿ ಕುಮಾರಿ (16), ಪೂಜಾ ಕುಮಾರಿ (20), ಸಾಕ್ಷಿ ಕುಮಾರ್ (16), ಮತ್ತು ರಿಯಾ ಕುಮಾರಿ (14) ಎಂದು ಗುರುತಿಸಲಾಗಿದೆ.
ಪ್ರತ್ಯೇಕ ಘಟನೆಗಳಲ್ಲಿ ಒಬ್ಬ ಅಪ್ರಾಪ್ತ ಬಾಲಕ, ಇಬ್ಬರು ಪುರುಷರು ನೀರಿನಲ್ಲಿ ಕೊಚ್ಚಿ ಹೋಗಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.
ಹಜಾರಿಬಾಗ್‌ನ ಕೆರೆದಾರಿ ಪೊಲೀಸ್ ಠಾಣಾ ವ್ಯಾಪ್ತಿಯ ಬೇಲಾದ ಗ್ರಾಮದ ಕೊಳದಲ್ಲಿ ಛತ್ ಆಚರಣೆಗಳನ್ನು ಮಾಡುವಾಗ ಗುಂಗುನ್ ಕುಮಾರಿ (11) ಮತ್ತು ರೂಪಾ ತಿವಾರಿ (12) ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಸೋಮವಾರ ಐವರು ಮಕ್ಕಳು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇದರಿಂದಾಗಿ ಹಬ್ಬದ ಸಮಯದಲ್ಲಿ ನೀರಿನಲ್ಲಿ ಮುಳುಗಿ ಮೃತರ ಒಟ್ಟು ಸಂಖ್ಯೆ 15ಕ್ಕೆ ಏರಿಕೆಯಾಗಿದೆ.