×
Ad

ಕೇರಳದ ಮಾಜಿ ಸಿಎಂ ಅಚ್ಯುತಾನಂದನ್ ಗೆ ಹೃದಯಾಘಾತ; ಆಸ್ಪತ್ರೆಗೆ ದಾಖಲು

Update: 2025-06-23 21:00 IST

ವಿ.ಎಸ್.ಅಚ್ಯುತಾನಂದನ್ | PC : X 

ತಿರುವನಂತಪುರ: ಹಿರಿಯ ಸಿಪಿಎಂ ನಾಯಕ ಹಾಗೂ ಕೇರಳದ ಮಾಜಿ ಮುಖ್ಯಮಂತ್ರಿ ವಿ.ಎಸ್.ಅಚ್ಯುತಾನಂದನ್(101) ಅವರು ಸೋಮವಾರ ಹೃದಯಾಘಾತಕ್ಕೆ ತುತ್ತಾಗಿದ್ದು,ಅವರನ್ನು ಇಲ್ಲಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ದೇಹಸ್ಥಿತಿ ಸ್ಥಿರವಾಗಿದೆ ಎಂದು ಕುಟುಂಬಕ್ಕೆ ನಿಕಟ ಮೂಲಗಳು ತಿಳಿಸಿವೆ.

2019ರಲ್ಲಿ ಪಾರ್ಶ್ವವಾಯು ಪೀಡಿತರಾದಾಗಿನಿಂದ ಹಾಸಿಗೆ ಹಿಡಿದಿರುವ ಅಚ್ಯುತಾನಂದನ್ ಅವರಿಗೆ ಸೋಮವಾರ ಬೆಳಿಗ್ಗೆ ಹೃದಯಾಘಾತವಾಗಿತ್ತು,ಉಸಿರಾಟಕ್ಕೆ ತೊಂದರೆಯನ್ನು ಎದುರಿಸಿದ್ದರು. ಅವರನ್ನು ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಗಿದ್ದು,ವೈದ್ಯರು ಅವರ ಆರೋಗ್ಯದ ಮೇಲೆ ನಿಕಟ ನಿಗಾಯಿರಿಸಿದ್ದಾರೆ.

ತನ್ನ ರಾಜಕೀಯ ಜೀವನದಲ್ಲಿ 10 ಚುನಾವಣೆಗಳನ್ನು ಎದುರಿಸಿರುವ ಅಚ್ಯುತಾನಂದನ್ ಏಳು ಬಾರಿ ಶಾಸಕರಾಗಿದ್ದು,2006ರಿಂದ 2011ರವರೆಗೆ ರಾಜ್ಯದ ಮುಖ್ಯಮಂತ್ರಿಯಾಗಿದ್ದರು.

1964ರಲ್ಲಿ ಭಾರತೀಯ ಕಮ್ಯುನಿಸ್ಟ್ ಪಕ್ಷ(ಮಾರ್ಕ್ಸ್ವಾದಿ)ವನ್ನು ರಚಿಸಲು ಭಾರತೀಯ ಕಮ್ಯುನಿಸ್ಟ್ ಪಕ್ಷ (ಸಿಪಿಐ)ವನ್ನು ತೊರೆದಿದ್ದ 32 ನಾಯಕರಲ್ಲಿ ಅಚ್ಯುತಾನಂದನ್ ಮಾತ್ರ ಬದುಕುಳಿದಿದ್ದಾರೆ. ಕೇರಳ ವಿಧಾನಸಭೆಯಲ್ಲಿ ಮೂರು ಸಲ ಪ್ರತಿಪಕ್ಷ ನಾಯಕರಾಗಿದ್ದ ಅವರು ಹಲವಾರು ವರ್ಷಗಳ ಕಾಲ ಸಿಪಿಎಂ ರಾಜ್ಯ ಘಟಕದ ಕಾರ್ಯದರ್ಶಿಯಾಗಿದ್ದರು. 2021ರವರೆಗೂ ಅವರು ಕೇರಳ ವಿಧಾನಸಭೆಯ ಸಕ್ರಿಯ ಸದಸ್ಯರಾಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News