×
Ad

ಸಾಂಗ್ಲಿಯಲ್ಲಿ ದಲಿತ ಮಹಾಸಂಘದ ಅಧ್ಯಕ್ಷನ ಕೊಲೆ: ಎಂಟು ಜನರ ವಿರುದ್ಧ ಪ್ರಕರಣ ದಾಖಲು

Update: 2025-11-13 11:06 IST

ಸಾಂದರ್ಭಿಕ ಚಿತ್ರ

ಸಾಂಗ್ಲಿ: ಮಹಾರಾಷ್ಟ್ರದ ದಲಿತ ಮಹಾಸಂಘದ ಸ್ಥಾಪಕ ಅಧ್ಯಕ್ಷ ಉತ್ತಮ್ ಮೋಹಿತೆ (38) ಅವರನ್ನು ಮನೆಯಲ್ಲಿ ನಡೆದ ಹುಟ್ಟುಹಬ್ಬದ ಆಚರಣೆಯ ವೇಳೆ ದಾಳಿ ಮಾಡಿ ಕೊಲೆ ಮಾಡಿದ ಘಟನೆ ಮಂಗಳವಾರ ಮಧ್ಯರಾತ್ರಿ ಸಾಂಗ್ಲಿ ನಗರದಲ್ಲಿ ನಡೆದಿದೆ. ಈ ಸಂಬಂಧ ಎಂಟು ಜನರ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.

ಗಾರ್ಪಿರ್ ದರ್ಗಾ ಚೌಕ್ ಹತ್ತಿರ ಮೋಹಿತೆ ಅವರ ನಿವಾಸದಲ್ಲಿ ರಾತ್ರಿ ಹುಟ್ಟುಹಬ್ಬದ ಸಮಾರಂಭ ನಡೆಯುತ್ತಿತ್ತು. ಕಾರ್ಯಕ್ರಮ ಮುಗಿದು ಅತಿಥಿಗಳು ಹೊರಟ ಬಳಿಕ, ಚಾಕು, ಕಬ್ಬಿಣದ ರಾಡ್ ಹಾಗೂ ದೊಣ್ಣೆಗಳಿಂದ ಶಸ್ತ್ರಸಜ್ಜಿತರಾದ ಯುವಕರ ಗುಂಪು ಮನೆಗೆ ನುಗ್ಗಿ ಮೋಹಿತೆ ಮೇಲೆ ನಿಂದನೆ ಮಾಡಿ ದಾಳಿ ನಡೆಸಿದರೆಂದು ಪೊಲೀಸರಿಂದ ತಿಳಿದುಬಂದಿದೆ.

ಆರೋಪಿಗಳಿಂದ ತಪ್ಪಿಸಿಕೊಳ್ಳಲು ಮೋಹಿತೆ ಮನೆಯ ಒಳಗೆ ಓಡಿದ್ದರೂ, ಗುಂಪು ಒಳಗೆ ನುಗ್ಗಿ ಅವರ ಹೊಟ್ಟೆ ಮತ್ತು ಎದೆಗೆ ಅನೇಕ ಬಾರಿ ಇರಿದು, ತಲೆ-ತೋಳುಗಳಿಗೆ ಕಬ್ಬಿಣದ ರಾಡ್‌ಗಳಿಂದ ಹೊಡೆದಿದೆ. ತೀವ್ರ ಗಾಯಗೊಂಡ ಮೋಹಿತೆ ಅವರನ್ನು ಅವರ ಸೋದರಳಿಯ ತಕ್ಷಣ ಸಾಂಗ್ಲಿ ಸಿವಿಲ್ ಆಸ್ಪತ್ರೆಗೆ ಕರೆದೊಯ್ದರೂ, ಚಿಕಿತ್ಸೆ ಫಲಿಸದೆ ಬುಧವಾರ ಬೆಳಗ್ಗೆ ಅವರು ಮೃತಪಟ್ಟರು ಎಂದು ತಿಳಿದು ಬಂದಿದೆ.

ಘರ್ಷಣೆಯ ವೇಳೆ ಆರೋಪಿಗಳಲ್ಲಿ ಒಬ್ಬನಾದ ಶಾರುಖ್ ರಫೀಕ್ ಶೇಖ್ (26)ಗೆ ತೊಡೆಯ ಮೇಲೆ ತೀವ್ರ ಗಾಯವಾಗಿದ್ದು, ನಂತರ ಆತ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಹುಟ್ಟುಹಬ್ಬದ ಕಾರ್ಯಕ್ರಮದ ವೇಳೆ ಮೋಹಿತೆ ಹಾಗೂ ಆರೋಪಿಗಳಲ್ಲಿ ಒಬ್ಬನಾದ ಗಣೇಶ್ ಮೋರೆ ನಡುವೆ ವಾಗ್ವಾದ ನಡೆದಿದ್ದು, ಸ್ಥಳದಿಂದ ಹೊರಡುವಾಗ “ಬಿಡುವುದಿಲ್ಲ” ಎಂದು ಬೆದರಿಕೆ ಹಾಕಿದ್ದನು ಎನ್ನಲಾಗಿದೆ.

ಮೋಹಿತೆ ಅವರ ಪತ್ನಿ ಜ್ಯೋತಿ ನೀಡಿದ ದೂರಿನ ಮೇರೆಗೆ, ಇಂದಿರಾನಗರದ ನಿವಾಸಿಗಳಾದ ಗಣೇಶ್ ಮೋರೆ, ಸತೀಶ್ ಲೋಖಂಡೆ, ಶಾರುಖ್ ಶೇಖ್ (ಮೃತ), ಯಶ್ ಅಲಿಯಾಸ್ ಬನ್ಯಾ ಲೋಂಧೆ, ಅಜಯ್ ಘಾಡ್ಗೆ, ಜಿತೇಂದ್ರ ಲೋಂಧೆ, ಯೋಗೇಶ್ ಶಿಂಧೆ ಮತ್ತು ಸಮೀರ್ ಧೋಲೆ ವಿರುದ್ಧ ಕೊಲೆ ಸೇರಿದಂತೆ ಹಲವು ಸೆಕ್ಷನ್ಗಳಲ್ಲಿ ಪ್ರಕರಣ ದಾಖಲಿಸಲಾಗಿದೆ.

ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News