ಸಿನೆಮಾದಲ್ಲಿ ಅವಕಾಶದ ಭರವಸೆ ನೀಡಿ ದಲಿತೆಯ ಅತ್ಯಾಚಾರ; ನಾಲ್ವರ ವಿರುದ್ಧ ಮೊಕದ್ದಮೆ
ಸಾಂದರ್ಭಿಕ ಚಿತ್ರ
ಥಾಣೆ: ಸಿನೆಮಾಗಳಲ್ಲಿ ನಟಿಸಲು ಉತ್ತಮ ಅವಕಾಶಗಳನ್ನು ಗಳಿಸಿಕೊಡುವ ಆಮಿಶವೊಡ್ಡಿ ಮಹಿಳೆಯೊಬ್ಬರ ಮೇಲೆ ಪದೇ ಪದೇ ಅತ್ಯಾಚಾರಗೈದ ಆರೋಪದಲ್ಲಿ ವ್ಯಕ್ತಿಯೊಬ್ಬನ ವಿರುದ್ಧ ಥಾಣೆ ಪೊಲೀಸರು ಮೊಕದ್ದಮೆ ದಾಖಲಿಸಿದ್ದಾರೆ.
ಥಾಣೆ ನಿವಾಸಿಯಾಗಿರುವ ಸಂತ್ರಸ್ತ ದಲಿತ ಮಹಿಳೆಗೆ ಬೆದರಿಕೆ ಹಾಕಿರುವುದಕ್ಕಾಗಿ ಮತ್ತು ಬ್ಲ್ಯಾಕ್‌ಮೇಲ್ ಮಾಡಿರುವುದಕ್ಕಾಗಿ ಇನ್ನೋರ್ವ ಮಹಿಳೆ, ಆಕೆಯ ಗಂಡ ಮತ್ತು ಅವರ ಮಗಳನ್ನೂ ಈ ಪ್ರಕರಣದಲ್ಲಿ ಆರೋಪಿಗಳಾಗಿ ಹೆಸರಿಸಲಾಗಿದೆ ಎಂದು ಅಧಿಕಾರಿಗಳು ರವಿವಾರ ತಿಳಿಸಿದರು.
ಪ್ರಕರಣದಲ್ಲಿ ಈವರೆಗೆ ಯಾರನ್ನೂ ಬಂಧಿಸಲಾಗಿಲ್ಲ ಎಂದು ಪೊಲೀಸರು ತಿಳಿಸಿದರು.
ಮೂರು ವರ್ಷಗಳ ಹಿಂದೆ ಆರೋಪಿ ಮಹಿಳೆಯು ಸಂತ್ರಸ್ತ ಮಹಿಳೆಯೊಂದಿಗೆ ಸಂಪರ್ಕ ಸಾಧಿಸಿ, ಚಿತ್ರೋದ್ಯಮದಲ್ಲಿ ಉನ್ನತ ಸ್ಥಾನಗಳಲ್ಲಿರುವ ಜನರ ಸಂಪರ್ಕ ತನಗಿದೆ ಎಂದು ಹೇಳಿಕೊಂಡಿದ್ದಳು ಎಂದು ದೂರಿನಲ್ಲಿ ಹೇಳಲಾಗಿದೆ. ಸಂತ್ರಸ್ತೆಯನ್ನು ದೊಡ್ಡ ತಾರೆಯಾಗಿ ಮಾಡುವುದಾಗಿ ಭರವಸೆ ನೀಡಿದ ಆರೋಪಿ ಮಹಿಳೆಯು ಆಕೆಯನ್ನು ಸಿಂಗಾಪುರಕ್ಕೆ ಕರೆದುಕೊಂಡು ಹೋಗಿ ವ್ಯಕ್ತಿಯೊಬ್ಬನಿಗೆ ಪರಿಚಯ ಮಾಡಿಸಿದಳು.
ಆ ವ್ಯಕ್ತಿಯು ಸಂತ್ರಸ್ತೆಯನ್ನು ತನ್ನ ಮನೆಗೆ ಕರೆದುಕೊಂಡು ಹೋಗಿ ಕುಡಿಯಲು ಪಾನೀಯ ನೀಡಿದನು ಎನ್ನಲಾಗಿದೆ. ಆ ವ್ಯಕ್ತಿಯು ಅಲ್ಲೇ ಸಂತ್ರಸ್ತೆಯನ್ನು ಅತ್ಯಾಚಾರಗೈದನು ಎಂದು ಆರೋಪಿಸಲಾಗಿದೆ. ಬಳಿಕ, ಮುಂಬೈ ಮತ್ತು ಇತರ ಸ್ಥಳಗಳಲ್ಲಿ ಹೊಟೇಲ್‌ಗಳಲ್ಲಿ ಹಲವು ಬಾರಿ ಅತ್ಯಾಚಾರ ಮಾಡಿದ್ದಾನೆ ಎನ್ನಲಾಗಿದೆ.
ಸಂತ್ರಸ್ತೆಯು ಆರೋಪಿಯೊಂದಿಗೆ ಇರುವ ಕ್ಷಣಗಳನ್ನು ಆರೋಪಿ ಮಹಿಳೆಯು ಚಿತ್ರಿಸಿಕೊಂಡು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಳು ಎಂದು ಆರೋಪಿಸಲಾಗಿದೆ. ಆರೋಪಿ ಪುರುಷನು ಮಹಿಳೆಯ ಜಾತಿ ನಿಂದನೆ ಮಾಡಿದ್ದಾನೆ ಎನ್ನಲಾಗಿದೆ.