ಬಿಹಾರ ಚುನಾವಣೆ | RJD ಟಿಕೆಟ್ ನಿರಾಕರಣೆ: ಬಟ್ಟೆ ಹರಿದುಕೊಂಡು ಕಣ್ಣೀರಿಟ್ಟ ಟಿಕೆಟ್ ಆಕಾಂಕ್ಷಿ
Screengrab:X/@ANI
ಪಾಟ್ನಾ: ರವಿವಾರ RJD ವರಿಷ್ಠ ಲಾಲೂ ಪ್ರಸಾದ್ ಯಾದವ್ ನಿವಾಸದೆದುರು ಬಿಹಾರ ವಿಧಾನಸಭಾ ಚುನಾವಣೆಗೆ ಪಕ್ಷದ ಟಿಕೆಟ್ ನಿಂದ ವಂಚಿತರಾದ ಆಕಾಂಕ್ಷಿಯೊಬ್ಬರು, ಬಟ್ಟೆ ಹರಿದುಕೊಂಡು, ಕಣ್ಣೀರಿಡುತ್ತಾ, ರಸ್ತೆಯ ಮೇಲೆಲ್ಲ ಉರುಳಾಡಿರುವ ಘಟನೆ ನಡೆದಿದೆ.
ಟಿಕೆಟ್ ವಂಚಿತ ಆಕಾಂಕ್ಷಿ ಮದನ್ ಶಾ ಅವರ ವರ್ತನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
“ನಾನು ದೀರ್ಘಕಾಲದಿಂದ ಪಕ್ಷದೊಂದಿಗೆ ಸಂಬಂಧ ಹೊಂದಿದ್ದೇನೆ. ಹೀಗಾಗಿ, ನಾನು ಮಧುಬನ್ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದೆ” ಎಂದು ಅವರು ಅಳಲು ತೋಡಿಕೊಂಡಿದ್ದಾರೆ. 2020ರಲ್ಲಿ ನಡೆದಿದ್ದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯೆದುರು ಅಲ್ಪ ಅಂತರದಲ್ಲಿ ಪರಾಭವಗೊಂಡಿದ್ದ ಅವರು, ಎರಡನೆ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು.
“ಟಿಕೆಟ್ ನೀಡಲು ನನ್ನ ಬಳಿ 2.70 ಕೋಟಿ ರೂಪಾಯಿಗೆ ಬೇಡಿಕೆ ಇಡಲಾಗಿತ್ತು. ನಾನು ನನ್ನ ಮಕ್ಕಳ ವಿವಾಹವನ್ನು ಮುಂದೆ ಹಾಕುವ ಮೂಲಕ, ಆ ಮೊತ್ತವನ್ನು ನೀಡುವಲ್ಲಿ ಯಶಸ್ವಿಯಾಗಿದ್ದೆ. ನಾನೀಗ ಮುಗಿದು ಹೋಗಿದ್ದೇನೆ. ಕನಿಷ್ಠ ಅವರು ನನ್ನ ದುಡ್ಡನ್ನು ಮರಳಿಸಬೇಕು” ಎಂದು ಅವರು ಆಗ್ರಹಿಸಿದ್ದಾರೆ.
ಆದರೆ, ಚುನಾವಣಾ ಆಕಾಂಕ್ಷಿಗಳಿಗೆ ಟಿಕೆಟ್ ನೀಡಲು ಹಣಕ್ಕೆ ಬೇಡಿಕೆ ಇಡಲಾಗಿದೆ ಎಂಬ ಆರೋಪಗಳ ಕುರಿತು RJD ನಾಯಕರು ಇದುವರೆಗೆ ತುಟಿ ಬಿಚ್ಚಿಲ್ಲ.
ಬಿಹಾರ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ನಾಮಪತ್ರಗಳನ್ನು ಸಲ್ಲಿಸಲು ನಾಳೆ ಕೊನೆಯ ದಿನವಾಗಿದ್ದು, ಮಧುಬನ್ ವಿಧಾನಸಭಾ ಕ್ಷೇತ್ರದಿಂದ RJD ಪಕ್ಷವೇ ಸ್ಪರ್ಧಿಸಲಿದೆಯೊ ಅಥವಾ ಅದರ ಮೈತ್ರಿ ಪಕ್ಷಗಳು ಸ್ಪರ್ಧಿಸಲಿವೆಯೊ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.