×
Ad

‘ಒಂದು ರಾಷ್ಟ್ರ ಒಂದು ಚುನಾವಣೆ’ ನೀತಿ ನಿಷ್ಕ್ರಿಯತೆಯನ್ನು ತಡೆಯಬಲ್ಲದು : ಗಣರಾಜ್ಯೋತ್ಸವ ಭಾಷಣದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು

Update: 2025-01-25 19:31 IST

ದ್ರೌಪದಿ ಮುರ್ಮು | PC :,PTI  

ಹೊಸದಿಲ್ಲಿ: 76ನೇ ಗಣರಾಜ್ಯೋತ್ಸವದ ಮುನ್ನಾದಿನವಾದ ಶನಿವಾರ ‘ಒಂದು ರಾಷ್ಟ್ರ ಒಂದು ಚುನಾವಣೆ’ ಉಪಕ್ರಮವನ್ನು ಪ್ರತಿಪಾದಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು, ಅದು ಆಡಳಿತದಲ್ಲಿ ಸ್ಥಿರತೆಯನ್ನು ಉತ್ತೇಜಿಸುವ, ನೀತಿ ನಿಷ್ಕ್ರಿಯತೆಯನ್ನು ತಡೆಯುವ, ಅನ್ಯ ಉದ್ದೇಶಗಳಿಗೆ ಸಂಪನ್ಮೂಲಗಳ ಬಳಕೆಯನ್ನು ತಗ್ಗಿಸುವ ಮತ್ತು ಸರಕಾರದ ಮೇಲಿನ ಹಣಕಾಸು ಹೊರೆಗಳನ್ನು ನಿವಾರಿಸುವ ಮೂಲಕ ದೇಶದಲ್ಲಿ ‘ಉತ್ತಮ ಆಡಳಿತವನ್ನು’ ಮರುವ್ಯಾಖ್ಯಾನಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಒತ್ತಿ ಹೇಳಿದರು.

ದೇಶವನ್ನುದ್ದೇಶಿಸಿ ಮಾಡಿದ ತನ್ನ ಭಾಷಣದಲ್ಲಿ ಮುರ್ಮು, ದೇಶದಲ್ಲಿ ದಶಕಗಳಿಂದಲೂ ಉಳಿದುಕೊಂಡಿರುವ ವಸಾಹತುಶಾಹಿ ಮನಃಸ್ಥಿತಿಯ ಪಳೆಯುಳಿಕೆಗಳನ್ನು ತೊಡೆದುಹಾಕಲು ಸರಕಾರದ ನಿರಂತರ ಪ್ರಯತ್ನಗಳಿಗೆ ಒತ್ತು ನೀಡಿದರು ಮತ್ತು ಬ್ರಿಟಿಷರ ಕಾಲದ ಕ್ರಿಮಿನಲ್ ಕಾನೂನುಗಳ ಬದಲು ತರಲಾಗಿರುವ ಮೂರು ನೂತನ ಆಧುನಿಕ ಕಾನೂನುಗಳನ್ನು ಉಲ್ಲೇಖಿಸಿದರು.

ಸಂವಿಧಾನದ ಮಹತ್ವವನ್ನು ಪ್ರತಿಬಿಂಬಿಸಿದ ರಾಷ್ಟ್ರಪತಿಗಳು ಕಳೆದ 75 ವರ್ಷಗಳಲ್ಲಿ ದೇಶವು ಸಾಧಿಸಿದ ಪ್ರಗತಿಯನ್ನು ಎತ್ತಿ ತೋರಿಸಿದರು. ದೇಶದ ಪ್ರಗತಿಯಲ್ಲಿ ರೈತರು ಮತ್ತು ಕಾರ್ಮಿಕರ ಕೊಡುಗೆಗಳನ್ನೂ ಅವರು ಉಲ್ಲೇಖಿಸಿದರು.

ಇದು ದೇಶದ ಎಲ್ಲ ಪ್ರಜೆಗಳಿಗೆ ಸಾಮೂಹಿಕ ಸಂಭ್ರಮಾಚರಣೆ ಮತ್ತು ಹೆಮ್ಮೆಯ ಸಂದರ್ಭವಾಗಿದೆ ಎಂದು ಹೇಳಿದ ಅವರು,75 ವರ್ಷಗಳು ದೇಶವೊಂದರ ಜೀವನದಲ್ಲಿ ಸಣ್ಣ ಘಳಿಗೆಯೆಂಬಂತೆ ತೋರುತ್ತಿದ್ದರೂ ಅದು ಭಾರತದ ಪಾಲಿಗೆ ಮಹತ್ವದ ಅವಧಿಯಾಗಿದೆ ಎಂದರು.

►ರಾಷ್ಟ್ರಪತಿಗಳ ಭಾಷಣದ ಮುಖ್ಯಾಂಶಗಳು

► ಒಂದು ರಾಷ್ಟ್ರ ಒಂದು ಚುನಾವಣೆ’ ಪರಿಕಲ್ಪನೆಯು ವರ್ಧಿತ ಆಡಳಿತ ಮತ್ತು ಕಡಿಮೆ ಆರ್ಥಿಕ ಒತ್ತಡ ಸೇರಿದಂತೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ.

► ಬ್ರಿಟಿಷರ ಕಾಲದ ಐಪಿಸಿ, ಸಿಆರ್‌ಪಿಸಿ ಮತ್ತು ಭಾರತೀಯ ಸಾಕ್ಷ್ಯಕಾಯ್ದೆಯ ಬದಲು ಭಾರತೀಯ ಸಂಪ್ರದಾಯಗಳನ್ನು ಪ್ರತಿಬಿಂಬಿಸುವ ಕಾನೂನುಗಳು ಅಗತ್ಯವಾಗಿದ್ದವು.

► ನೂತನ ಮೂರು ಕ್ರಿಮಿನಲ್ ಕಾನೂನುಗಳಾದ ಭಾರತೀಯ ನ್ಯಾಯ ಸಂಹಿತಾ,ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ್ ಇವು ಕೇವಲ ದಂಡನೆಗಿಂತ ನ್ಯಾಯದ ವಿತರಣೆಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತವೆ ಮತ್ತು ಮಹಿಳೆಯರು ಹಾಗೂ ಮಕ್ಕಳ ವಿರುದ್ಧ ಅಪರಾಧಗಳನ್ನು ಪರಿಹರಿಸಲು ಹೆಚ್ಚಿನ ಒತ್ತು ನೀಡುತ್ತವೆ.

► ಭಾರತೀಯ ಆರ್ಥಿಕತೆಯು ಈಗ ಜಾಗತಿಕ ಆರ್ಥಿಕ ಪ್ರವೃತ್ತಿಗಳಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ ಮತ್ತು ಈ ರೂಪಾಂತರವು ಸಂವಿಧಾನವು ಸ್ಥಾಪಿಸಿರುವ ಚೌಕಟ್ಟಿನಲ್ಲಿ ಬೇರೂರಿದೆ.

► ಇತ್ತೀಚಿನ ವರ್ಷಗಳಲ್ಲಿ ಆರ್ಥಿಕ ಬೆಳವಣಿಗೆ ದರವು ನಿರಂತರವಾಗಿ ಹೆಚ್ಚುತ್ತಿದ್ದು, ಇದು ಉದ್ಯೋಗಾವಕಾಶಗಳನ್ನು ಸೃಷ್ಟಿಸಿದೆ,ರೈತರು ಮತ್ತು ಕಾರ್ಮಿಕರ ಆದಾಯವನ್ನು ಹೆಚ್ಚಿಸಿದೆ ಮತ್ತು ಅನೇಕರನ್ನು ಬಡತನದಿಂದ ಮೇಲಕ್ಕೆತ್ತಿದೆ.

► ಸರಕಾರವು ಶೋಷಿತ ಸಮುದಾಯಗಳ,ವಿಶೇಷವಾಗಿ ಎಸ್‌ಸಿ/ಎಸ್‌ಟಿ ಮತ್ತು ಒಬಿಸಿಗಳಿಗೆ ಬೆಂಬಲವಾಗಿದ್ದು,ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನಗಳು, ರಾಷ್ಟ್ರೀಯ ಫೆಲೋಶಿಪ್‌ಗಳು ಸೇರಿದಂತೆ ವಿವಿಧ ಉಪಕ್ರಮಗಳು ಮತ್ತು ಈ ಸಮುದಾಯಗಳ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗಾಗಿ ಸಮರ್ಪಿತ ಯೋಜನೆಗಳನ್ನು ಅನುಷ್ಠಾನಿಸಲಾಗಿದೆ.

► ನ್ಯಾಯ,ಸ್ವಾತಂತ್ರ್ಯ,ಸಮಾನತೆ ಮತ್ತು ಭ್ರಾತೃತ್ವ ಕೇವಲ ಆಧುನಿಕ ಪರಿಕಲ್ಪನೆಗಳಲ್ಲ. ಅವು ಯಾವಾಗಲೂ ನಮ್ಮ ನಾಗರಿಕತೆಯ ಪರಂಪರೆಯ ಅವಿಭಾಜ್ಯ ಅಂಶಗಳಾಗಿವೆ.

► ವಿಶ್ವದ ಅನೇಕ ಭಾಗಗಳಲ್ಲಿ ಮಹಿಳಾ ಸಮಾನತೆಯು ದೂರದ ಗುರಿಯಾಗಿದ್ದಾಗ ಭಾರತೀಯ ಮಹಿಳೆಯರು ದೇಶದ ಭವಿಷ್ಯವನ್ನು ರೂಪಿಸುವಲ್ಲಿ ಸಕ್ರಿಯರಾಗಿದ್ದರು.

► ಸಂವಿಧಾನವು ಕಳೆದ 75 ವರ್ಷಗಳಲ್ಲಿ ಭಾರತದ ಸಾಮೂಹಿಕ ಅನನ್ಯತೆಯ ಅಡಿಪಾಯವಾಗಿ ಕಾರ್ಯ ನಿರ್ವಹಿಸುವ ಜೀವಂತ ದಾಖಲೆಯಾಗಿ ವಿಕಸನಗೊಂಡಿದೆ ಮತ್ತು ದೇಶದ ಪ್ರಗತಿಗೆ ಮಾರ್ಗದರ್ಶನ ನೀಡಿದೆ.

► ಸರಕಾರವು ಶಿಕ್ಷಣ ಕ್ಷೇತ್ರದಲ್ಲಿ ಹೂಡಿಕೆಗಳನ್ನು ಹೆಚ್ಚಿಸಿದೆ, ಇದರ ಪರಿಣಾಮವಾಗಿ ಕಲಿಕೆಯ ಗುಣಮಟ್ಟ ಮತ್ತು ಡಿಜಿಟಲ್ ಸೇರ್ಪಡೆಯಲ್ಲಿ ಗಣನೀಯ ಸುಧಾರಣೆಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News