ಸಮಾನನಾಗರಿಕ ಸಂಹಿತೆ ಕರಡು ಸಿದ್ಧ, ಶೀಘ್ರದಲ್ಲೇ ಸರಕಾರಕ್ಕೆ ಸಲ್ಲಿಕೆ: ದೇಸಾಯಿ ಸಮಿತಿ ಮಾಹಿತಿ
Ranjana Prakash Desai | Photo: PTI
ಡೆಹ್ರಾಡೂನ್: ಉತ್ತರಾಖಂಡ ಸಮಾನ ನಾಗರಿಕಸಂಹಿತೆಯ ಕರಡು ಸಿದ್ಧಗೊಂಡಿದ್ದು, ಶೀಘ್ರದಲ್ಲೇ ಮುದ್ರಣಕ್ಕೆ ಕಳುಹಿಸಲಾಗುವುದು ಎಂದು ಸುಪ್ರೀಂಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ರಂಜನ್ ಮೂರ್ತಿ ಅವರ ನೇತೃತ್ವದ ಪಂಚ ಸದಸ್ಯ ಸಮಿತಿ ಶುಕ್ರವಾರ ತಿಳಿಸಿದೆ. ಮುದ್ರಣದ ಆನಂತರ ಕರಡಿನ ಒಂದು ಪ್ರತಿಯನ್ನು ರಾಜ್ಯ ಸರಕಾರಕ್ಕೆ ಹಸ್ತಾಂತರಿಸಲಾಗುವುದು ಎಂದು ಅದು ಹೇಳಿದೆ.
ಉತ್ತರಾಖಂಡಕ್ಕೆ ಸಮಾನನಾಗರಿಕ ಸಂಹಿತೆಯನ್ನು ರೂಪಿಸುವ ಕರಡನ್ನು ರಚಿಸುವ ಹೊಣೆ ಈ ಸಮಿತಿಗೆ ರಾಜ್ಯ ಸರಕಾರವು ವಹಿಸಿತ್ತು.
‘‘ಉತ್ತರಾಖಂಡಕ್ಕೆ ಪ್ರಸ್ತಾವಿತ ಸಮಾನನಾಗರಿಕ ಸಂಹಿತೆಯ ಕರಡು ತಯಾರಿಕೆ ಈಗ ಪೂರ್ಣಗೊಂಡಿದೆಯೆಂದು ನಿಮಗೆ ತಿಳಿಸಲು ಅಗಾಧ ಸಂತಸವಾಗುತ್ತಿದೆ. ಕರಡು ಸಂಹಿತೆಯ ಜೊತೆಗೆ ಸಮಿತಿಯ ವರದಿಯನ್ನು ಕೂಡಾ ಉತ್ತರಾಖಂಡ ಸರಕಾರಕ್ಕೆ ಸಲ್ಲಿಸಲಾಗುವುದು’’ ಎಂದು ಸಮಿತಿಯ ಅಧ್ಯಕ್ಷ ದೇಸಾಯಿ ಅವರು ಹೊಸದಿಲ್ಲಿಯಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಲ್ಲಿ ತಿಳಿಸಿದ್ದಾರೆ.
ಬುಧವಾರ 10 ತಾಸುಗಳಿಗೂ ಅಧಿಕ ಸಮಯ ನಡೆದ ಸಭೆಯಲ್ಲಿ ಸಮಾನ ನಾಗರಿಕ ಸಂಹಿತೆಯ ನಿರ್ಣಾಯಕ ಅಂಶಗಳ ಬಗ್ಗೆ ಚರ್ಚಿಸಲಾಯಿತು ಹಾಗೂ ಅಂತಿಮಗೊಳಿಸಲಾಯಿತು. ಶೀಘ್ರದಲ್ಲೇ ಕರಡು ಮುದ್ರಣಕ್ಕೆ ಹೋಗಲಿದ್ದು, ತರುವಾಯ ಕರಡಿನ ಒಂದು ಪ್ರತಿಯನ್ನು ರಾಜ್ಯ ಸರಕಾರಕ್ಕೆ ಹಸ್ತಾಂತರಿಸಲಾಗುವುದು ಎಂದು ವರದಿ ತಿಳಿಸಿದೆ.
ಸಮಿತಿಯು ಸಿದ್ಧಪಡಿಸಿರುವ ಸಮಾನನಾಗರಿಕ ಸಂಹಿತೆಯ ಕರಡು, ಲಿಂಗ ಸಮಾನತೆಯನ್ನು ಉತ್ತೇಜಿಸಲಿದೆ ಹಾಗೂ ಆರ್ಥಿಕ, ಸಾಮಾಜಿಕ ಹಾಗೂ ಧಾರ್ಮಿಕ ಸಮಾನತೆಯನ್ನು ಉತ್ತೇಜಿಸಲಿದೆ ಎಂದು ದೇಸಾಯಿ ಈ ಮೊದಲು ತಿಳಿಸಿದ್ದರು.
ಸಮಾನನಾಗರಿಕ ಸಂಹಿತೆಯ ಕರಡಿನಲ್ಲಿ ಮಹಿಳೆಯರು, ಮಕ್ಕಳು, ಭಿನ್ನಸಾಮರ್ಥ್ಯದವರ ಹಿತಾಸಕ್ತಿಗಳ ರಕ್ಷಣೆಗೆ ಆದ್ಯತೆ ನೀಡಲಾಗಿದ್ದು, ವಿವಾಹ, ವೈವಾಹಿಕ ವಿಚ್ಛೇದನ, ಪೋಷಕತ್ವ,ಪಾಲನೆ, ಉತ್ತರಾಧಿಕಾರದ ಬಗ್ಗೆ ಹೆಚ್ಚಿನ ಗಮನ ನೀಡಿದ್ದೇವೆ. ಲಿಂಗ ಸಮಾನತೆಗಾಗಿ ಶ್ರಮಿಸಿದ್ದೇವೆ’’ ಎಂದು ದೇಸಾಯಿ ತಿಳಿಸಿದ್ದಾರೆ.
ಮಂಗಳವಾರ ಮಧ್ಯಪ್ರದೇಶದ ಭೋಪಾಲ್ನಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶದಲ್ಲಿ ಸಮಾನನಾಗರಿಕ ಸಂಹಿತೆ ಜಾರಿಗೊಳಿಸುವ ಅಗತ್ಯವಿದೆಯೆಂದು ಪ್ರತಿಪಾದಿಸಿದ್ದಾರೆ.ಆದರೆ ಕಾಂಗ್ರೆಸ್ ಸೇರಿಂತೆ ಪ್ರಮಖ ಪ್ರತಿಪಕ್ಷಗಳು ಪ್ರಧಾನಿಯ ಹೇಳಿಕೆಯನ್ನು ಟೀಕಿಸಿದ್ದವು. ಸಾರ್ವಜನಿಕ ಸಮಸ್ಯೆಗಳಿಂದ ಜನರ ಗಮನನವನ್ನು ಬೇರೆಡೆ ಸೆಳೆಯುವ ಬಿಜೆಪಿಯ ಉದ್ದೇಶ ಇದಾಗಿದೆಯೆಂದು ಅವು ಟೀಕಿಸಿದ್ದವು.