×
Ad

ಸುಪ್ರೀಂ ಕೋರ್ಟ್ ಅಂಗಳದಲ್ಲೇ ಇವಿಎಂ ಮರುಎಣಿಕೆ: ಹರಿಯಾಣ ಪಂಚಾಯತ್ ಚುನಾವಣೆ ಫಲಿತಾಂಶ ಉಲ್ಟಾಪಲ್ಟಾ!

Update: 2025-08-14 20:56 IST

ಸಾಂದರ್ಭಿಕ ಚಿತ್ರ | PC : PTI 

ಹೊಸದಿಲ್ಲಿ: ಚುನಾವಣಾ ಇತಿಹಾಸದಲ್ಲೇ ಅಪರೂಪದ ವಿದ್ಯಮಾನವೊಂದರಲ್ಲಿ, ಸುಪ್ರೀಂ ಕೋರ್ಟ್ ತನ್ನ ಆವರಣದೊಳಗೆಯೇ ವಿದ್ಯುನ್ಮಾನ ಮತಯಂತ್ರಗಳ (EVM) ಮರುಎಣಿಕೆ ನಡೆಸಿ, ಹರಿಯಾಣದ ಗ್ರಾಮ ಪಂಚಾಯಿತಿ ಚುನಾವಣೆಯ ಫಲಿತಾಂಶವನ್ನೇ ಬದಲಿಸಿದೆ. ಈ ಐತಿಹಾಸಿಕ ಪ್ರಕ್ರಿಯೆಯ ಮೂಲಕ, ಈ ಹಿಂದೆ ಸೋತಿದ್ದ ಅಭ್ಯರ್ಥಿಯನ್ನೇ ಇದೀಗ ವಿಜೇತರೆಂದು ಘೋಷಿಸಲಾಗಿದೆ.

ಹರಿಯಾಣದ ಪಾಣಿಪತ್ ಜಿಲ್ಲೆಯ ಬುವಾನಾ ಲಖು ಗ್ರಾಮ ಪಂಚಾಯಿತಿಗೆ 2022ರ ನವೆಂಬರ್ 2ರಂದು ನಡೆದ ಚುನಾವಣೆಯಲ್ಲಿ ಕುಲದೀಪ್ ಸಿಂಗ್ ಅವರು ಮೋಹಿತ್ ಕುಮಾರ್ ವಿರುದ್ಧ ಗೆಲುವು ಸಾಧಿಸಿದ್ದರು. ಈ ಫಲಿತಾಂಶವನ್ನು ಒಪ್ಪದ ಮೋಹಿತ್ ಕುಮಾರ್, ಸ್ಥಳೀಯ ಚುನಾವಣಾ ನ್ಯಾಯಮಂಡಳಿಯ ಮೊರೆ ಹೋಗಿದ್ದರು.

ನ್ಯಾಯಮಂಡಳಿಯು ಕೇವಲ ಒಂದು ಮತಗಟ್ಟೆಯ (ಬೂತ್ ನಂ. 69) ಮರುಎಣಿಕೆಗೆ ಆದೇಶಿಸಿತ್ತಾದರೂ, ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಆ ಆದೇಶವನ್ನು ರದ್ದುಗೊಳಿಸಿತ್ತು. ಅಂತಿಮವಾಗಿ ಈ ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತು.

ಪ್ರಕರಣದ ಗಂಭೀರತೆಯನ್ನು ಪರಿಗಣಿಸಿದ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿ ದೀಪಂಕರ್ ದತ್ತ ಮತ್ತು ನ್ಯಾಯಮೂರ್ತಿ ಎನ್. ಕೋಟೀಶ್ವರ್ ಸಿಂಗ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು, ಐತಿಹಾಸಿಕ ಆದೇಶವೊಂದನ್ನು ನೀಡಿತು.

ಕೇವಲ ಒಂದು ಬೂತ್ ಅಲ್ಲ, ಬದಲಿಗೆ ವಿವಾದಿತ ಚುನಾವಣೆಯ ಎಲ್ಲಾ ಮತಗಟ್ಟೆಗಳ (65 ರಿಂದ 70) ಇವಿಎಂಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಆದೇಶಿಸಿತು. ಇಡೀ ಮರುಎಣಿಕೆ ಪ್ರಕ್ರಿಯೆಯನ್ನು ನ್ಯಾಯಾಲಯದ ರಿಜಿಸ್ಟ್ರಾರ್ ಕಾವೇರಿ ಅವರ ಉಸ್ತುವಾರಿಯಲ್ಲಿ, ಎರಡೂ ಪಕ್ಷಗಳ ಸಮ್ಮುಖದಲ್ಲಿ ವಿಡಿಯೋ ಚಿತ್ರೀಕರಣದೊಂದಿಗೆ ನಡೆಸಲಾಯಿತು.

ಸುಪ್ರೀಂ ಕೋರ್ಟ್ ರಿಜಿಸ್ಟ್ರಾರ್ ನೇತೃತ್ವದಲ್ಲಿ ನಡೆದ ಪಾರದರ್ಶಕ ಮರುಎಣಿಕೆಯ ನಂತರ, ಫಲಿತಾಂಶವು ಸಂಪೂರ್ಣವಾಗಿ ಬದಲಾಯಿತು. ಒಟ್ಟು ಚಲಾವಣೆಯಾದ 3,767 ಮತಗಳ ಅಂತಿಮ ಲೆಕ್ಕಾಚಾರ ಹೀಗಿದೆ:

* ಮೋಹಿತ್ ಕುಮಾರ್ (ಅರ್ಜಿದಾರ): 1,051 ಮತಗಳು

* ಕುಲದೀಪ್ ಸಿಂಗ್ (ಪ್ರತಿಸ್ಪರ್ಧಿ): 1,000 ಮತಗಳು

ಈ ವರದಿಯನ್ನು ಒಪ್ಪಿಕೊಂಡ ಪೀಠವು, ಮೋಹಿತ್ ಕುಮಾರ್ ಅವರನ್ನೇ ಬುವಾನಾ ಲಖು ಗ್ರಾಮ ಪಂಚಾಯಿತಿಯ ನೂತನ ಸರಪಂಚರೆಂದು ಘೋಷಿಸಿತು. "ಎರಡು ದಿನಗಳೊಳಗೆ ಅಧಿಕೃತ ಅಧಿಸೂಚನೆ ಹೊರಡಿಸಿ, ಮೋಹಿತ್ ಕುಮಾರ್ ಅವರು ತಕ್ಷಣವೇ ಅಧಿಕಾರ ವಹಿಸಿಕೊಳ್ಳಲು ಅನುವು ಮಾಡಿಕೊಡಬೇಕು," ಎಂದು ನ್ಯಾಯಾಲಯವು ಪಾಣಿಪತ್ ಜಿಲ್ಲಾಡಳಿತಕ್ಕೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News