ರಾಯಿಟರ್ಸ್ ಎಕ್ಸ್ ಖಾತೆಯನ್ನು ನಿರ್ಬಂಧಿಸುವಂತೆ ಸರಕಾರ ಸೂಚಿಸಿದೆ: ಎಕ್ಸ್ ಸ್ಪಷ್ಟನೆ
PC : Reuters | X.com
ಹೊಸದಿಲ್ಲಿ: ಇತರ 2,000 ಖಾತೆಗಳಲ್ಲದೆ, ನ್ಯೂಸ್ವೈರ್ ಸಂಸ್ಥೆಯಾದ ರಾಯಿಟರ್ಸ್ ನ ಖಾತೆಗಳನ್ನೂ ನಿರ್ಬಂಧಿಸುವಂತೆ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ನಮಗೆ ನಿಜಕ್ಕೂ ಮನವಿ ಮಾಡಿತ್ತು ಎಂದು ಮಂಗಳವಾರ ಎಕ್ಸ್ ಸಾಮಾಜಿಕ ಮಾಧ್ಯಮ ಸ್ಪಷ್ಟನೆ ನೀಡಿದೆ. ಎಕ್ಸ್ ನ ಈ ಹೇಳಿಕೆಯಿಂದಾಗಿ, ರಾಯಿಟರ್ಸ್ ಎಕ್ಸ್ ಖಾತೆಯನ್ನು ನಿರ್ಬಂಧಿಸಲಾಗಿಲ್ಲ ಎಂದು ಹೇಳಿಕೆ ನೀಡಿದ್ದ ಕೇಂದ್ರ ಸರಕಾರವೀಗ ಮುಜುಗರಕ್ಕೀಡಾಗಿದೆ.
"ಇಂತಹ ಕಾರ್ಯಕಾರಿ ಆದೇಶಗಳನ್ನು ಪ್ರಶ್ನಿಸುವ ನಮ್ಮ ಕಾನೂನಾತ್ಮಕ ಸಾಮರ್ಥ್ಯಕ್ಕೆ ಭಾರತೀಯ ಕಾನೂನುಗಳು ನಿರ್ಬಂಧ ಹೇರಿವೆ. ನಿರ್ಬಂಧ ಹೇರುವಂತೆ ನೀಡಲಾಗುತ್ತಿರುವ ಆದೇಶಗಳಿಂದ ಆಗುತ್ತಿರುವ ಪತ್ರಿಕಾ ಸ್ವಾತಂತ್ರ್ಯ ಹರಣದ ಬಗ್ಗೆ ನಾವು ತೀವ್ರ ಕಳವಳಕ್ಕೀಡಾಗಿದ್ದೇವೆ" ಎಂದೂ ಎಕ್ಸ್ ಆತಂಕ ವ್ಯಕ್ತಪಡಿಸಿದೆ.
2,355 ಖಾತೆಗಳನ್ನು ನಿರ್ಬಂಧಿಸಬೇಕು ಹಾಗೂ ಈ ಕ್ರಮವನ್ನು ಇನ್ನು ಕೇವಲ ಒಂದು ಗಂಟೆಯೊಳಗಾಗಿ ಜಾರಿಗೊಳಿಸಬೇಕು ಎಂದು ಜುಲೈ 3ರಂದು ನಮಗೆ ಆದೇಶಿಸಲಾಗಿತ್ತು. ಈ ವಿಷಯಕ್ಕೆ ಸಂಬಂಧಿಸಿದಂತೆ ನಮ್ಮ ಸಂಸ್ಥೆ ಜುಲೈ 5ರ ಸಂಜೆಯ ನಂತರವಷ್ಟೇ ಕ್ರಮ ಜರುಗಿಸಿತು. ಈ ಪೈಕಿ, @Reuters ಹಾಗೂ @ReutersWorld ನ್ಯೂಸ್ವೈರ್ ಖಾತೆಗಳೂ ಸೇರಿದ್ದವು. ಈ ಖಾತೆಗಳು ಬ್ರಿಟಿಷ್ ನ್ಯೂಸ್ವೈರ್ ಸುದ್ದಿ ಸಂಸ್ಥೆಗಳ ಲೇಖನಗಳನ್ನು ತಮ್ಮ ವೇದಿಕೆಗಳಲ್ಲಿ ಪ್ರಕಟಿಸುತ್ತಿದ್ದವು ಎಂದು ಎಕ್ಸ್ ಹೇಳಿದೆ.
ಈ ವೇಳೆ ಪ್ರತಿಕ್ರಿಯೆಗಾಗಿ ಮನವಿ ಮಾಡಿದ್ದ The Hindu ಸುದ್ದಿ ಸಂಸ್ಥೆಗೆ ರಾಯಿಟರ್ಸ್ ಸುದ್ದಿ ಸಂಸ್ಥೆ ಹಾಗೂ ವಿದೇಶಾಂಗ, ಕಾಮನ್ ವೆಲಕ್ತ್ ಹಾಗೂ ಅಭಿವೃದ್ಧಿ ಕಚೇರಿಯ ವಕ್ತಾರರು ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದರು.
ಈ ಕುರಿತು ಸಾರ್ವಜನಿಕ ಆಕ್ರೋಶ ವ್ಯಕ್ತವಾದ ನಂತರವಷ್ಟೇ, @Reuters ಹಾಗೂ @ReutersWorld ಖಾತೆಗಳ ಮೇಲಿನ ನಿರ್ಬಂಧಗಳನ್ನು ತೆಗೆದು ಹಾಕುವಂತೆ ಸರಕಾರ ನಮಗೆ ಮನವಿ ಮಾಡಿತು ಎಂದು ಎಕ್ಸ್ ಬಹಿರಂಗಪಡಿಸಿದೆ.