ಎರಡು ಹಂತದ ತೆರಿಗೆ ರಚನೆಗೆ ಜಿಎಸ್‌ಟಿ ಮಂಡಳಿಯಿಂದ ಅನುಮೋದನೆ; ಸೆಪ್ಟೆಂಬರ್ 22ರಿಂದ ಜಾರಿಗೆ
ಇನ್ನು ಮುಂದೆ ಶೇ.5, 18 ರಷ್ಟು ಜಿ ಎಸ್ ಟಿ
PC | PTI
ಹೊಸದಿಲ್ಲಿ: ಜಿಎಸ್‌ಟಿ ಮಂಡಳಿಯು ಬುಧವಾರ ನಡೆದ 56ನೇ ಸಭೆಯಲ್ಲಿ ಶೇ.5 ಮತ್ತು ಶೇ.18ರ ಎರಡು ಹಂತದ ತೆರಿಗೆ ರಚನೆಗೆ ಅನುಮೋದನೆ ನೀಡಿದೆ. ಈ ಹಿಂದೆ ಇದ್ದ ಶೇ.12 ಮತ್ತು ಶೇ.28 ರಷ್ಟಿದ್ದ ತೆರಿಗೆ ವ್ಯವಸ್ಥೆ ರದ್ದು ಮಾಡಲಾಗಿದೆ. ಈ ಹೊಸ ಜಿ ಎಸ್ ಟಿ ವ್ಯವಸ್ಥೆ ಸೆಪ್ಟೆಂಬರ್ 22ರಿಂದ ಜಾರಿಗೆ ಬರಲಿದೆ.
56 ನೇ ಜಿ ಎಸ್ ಟಿ ಕೌನ್ಸಿಲ್ ಸಭೆಯ ನಂತರ ಮಾತನಾಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, "ನಾವು ಜಿ ಎಸ್ ಟಿ ದರಗಳನ್ನು ಕಡಿಮೆ ಮಾಡಿದ್ದೇವೆ. ಇನ್ನು ಮುಂದೆ ಕೇವಲ ಎರಡು ರೀತಿಯ ದರಗಳು ಮಾತ್ರ ಇರುತ್ತವೆ" ಎಂದು ಹೇಳಿದರು.
ಬಿಹಾರ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಈ ನಿರ್ಧಾರದ ಬಗ್ಗೆ ಮಾತನಾಡಿ, “ಜಿ ಎಸ್ ಟಿ ದರ ಬದಲಾವಣೆಯ ಕುರಿತು ಎಲ್ಲಾ ರಾಜ್ಯಗಳು ಒಮ್ಮತದ ಆಧಾರದ ಮೇಲೆ ಒಪ್ಪಿಗೆ ನೀಡಿವೆ. ಇದು ಸಂಪೂರ್ಣ ಒಮ್ಮತದ ನಿರ್ಧಾರ”, ಎಂದರು.
ಪಶ್ಚಿಮ ಬಂಗಾಳದ ಹಣಕಾಸು ಸಚಿವೆ ಚಂದ್ರಿಮಾ ಭಟ್ಟಾಚಾರ್ಯ ಅವರು, “ಜಿ ಎಸ್ ಟಿ ದರ ಬದಲಾವಣೆಯಿಂದ ಒಟ್ಟು 47,700 ಕೋಟಿ ರೂಪಾಯಿ ಆದಾಯ ನಷ್ಟ ಉಂಟಾಗುವ ನಿರೀಕ್ಷೆಯಿದೆ” ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಜಿ ಎಸ್ ಟಿ ಮಂಡಳಿಯ 56ನೇ ಸಭೆ ಸುಮಾರು 10.5 ಗಂಟೆಗಳ ಕಾಲ ನಡೆಯಿತು. ಇದರಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೆಲವು ಪ್ರಮುಖ ತೆರಿಗೆ ಪ್ರಸ್ತಾಪಗಳನ್ನು ತಿರಸ್ಕರಿಸಿದವು.