ಮಣಿಪುರವನ್ನು ಶಾಂತಿಪಥದತ್ತ ಕೊಂಡೊಯ್ಯೋಣ : ಮೋದಿ ಕರೆ
2023ರಲ್ಲಿ ಜನಾಂಗೀಯ ಹಿಂಸಾಚಾರ ಭುಗಿಲೆದ್ದ ಬಳಿಕ ಮೊದಲ ಬಾರಿಗೆ ಮಣಿಪುರಕ್ಕೆ ಪ್ರಧಾನಿ ಭೇಟಿ
ಪ್ರಧಾನಿ ನರೇಂದ್ರ ಮೋದಿ (Photo: PTI)
ಐಝ್ವಾಲ್,ಸೆ.13: ಮಣಿಪುರದಲ್ಲಿ ಎರಡು ವರ್ಷಗಳ ಹಿಂದೆ ಜನಾಂಗೀಯ ಹಿಂಸಾಚಾರ ಭುಗಿಲೆದ್ದ ಬಳಿಕ ಶನಿವಾರ ಮೊದಲ ಬಾರಿಗೆ ಮಣಿಪುರಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು ಮಣಿಪುರವನ್ನು ಶಾಂತಿಯ ಪಥದೆಡೆಗೆ ಕೊಂಡೊಯ್ಯಬೇಕಾಗಿದೆ ಎಂದು ಸಂಘರ್ಷದಲ್ಲಿ ಭಾಗಿಯಾಗಿರುವ ಎಲ್ಲಾ ಸಂಘಟನೆಗಳಿಗೆ ಕರೆ ನೀಡಿದ್ದಾರೆ.
ರಾಜಧಾನಿ ಇಂಫಾಲದ ಕಾಂಗ್ಲಾ ಕೋಟೆಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು.
‘‘ಮಣಿಪುರದ ಹಿಂಸಾಚಾರವು ಅತ್ಯಂತ ದುರದೃಷ್ಟಕರವಾಗಿದೆ. ಇದು ನಮ್ಮ ಪೂರ್ವಜರಿಗೆ ಹಾಗೂ ಮುಂದಿನ ತಲೆಮಾರಿಗೆ ಎಸಗಿದ ಅನ್ಯಾಯವಾಗಿದೆ. ನಾವು ಮಣಿಪುರವನ್ನು ಶಾಂತಿ ಹಾಗೂ ಪ್ರಗತಿಯ ಪಥದೆಡೆಗೆ ಕೊಂಡೊಯ್ಯಬೇಕಾಗಿದೆ. ಸ್ವಾತಂತ್ರ್ಯ ಸಮರದಲ್ಲಿ ಪಾಲ್ಗೊಂಡಿದ್ದ ಮಣಿಪುರದ ಜನತೆಯಿಂದ ನಾವು ಪ್ರೇರಣೆ ಪಡೆಯಬೇಕಾಗಿದೆ’’ ಎಂದರು. ಸುಭಾಶ್‌ಚಂದ್ರ ಭೋಸ್ ಅವರ ಇಂಡಿಯನ್ ನ್ಯಾಶನಲ್ ಆರ್ಮಿಯು ಮೊತ್ತ ಮೊದಲ ಬಾರಿಗೆ ರಾಷ್ಟ್ರಧ್ವಜವನ್ನು ಅರಳಿಸಿದ್ದು ಮಣಿಪುರದಲ್ಲಿ ಎಂದು ಮೋದಿ ಹೇಳಿದರು.
ಮಣಿಪುರ ಕಣಿವೆ ನಿವಾಸಿಗಳಾದ ಮೈತೈ ಹಾಗೂ ಪರ್ವತಪ್ರದೇಶದಲ್ಲಿ ನೆಲೆಸಿರುವ ಕುಕಿ ಬುಡಕಟ್ಟು ಪಂಗಡಗಳ ನಡುವಿನ ಜನಾಂಗೀಯ ಸಂಘರ್ಷವನ್ನು ಪರೋಕ್ಷವಾಗಿ ಪ್ರಸ್ತಾವಿಸಿದ ಅವರು ಮಣಿಪುರದ ಪರ್ವತಪ್ರದೇಶ ಹಾಗೂ ಕಣಿವೆ ಪ್ರದೇಶಗಳ ಜನರ ನಡುವೆ ಸುಭದ್ರವಾದ ವಿಶ್ವಾಸದ ಸೇತುವೆಯನ್ನು ನಿರ್ಮಿಸಬೇಕಾಗಿದೆಯೆಂದು ಹೇಳಿದರು.
ಮಣಿಪುರದಲ್ಲಿ ಸಾಮರಸ್ಯ ಹಾಗೂ ಅಭಿವೃದ್ಧಿಗಾಗಿ ತನ್ನ ಸರಕಾರವು ಅವಿಶ್ರಾಂತವಾಗಿ ಕೆಲಸ ಮಾಡುತ್ತಿದೆಯೆಂದು ಅವರು ಹೇಳಿದರು.
ರಾಜ್ಯವನ್ನು ಕಾಡುವ ಪ್ರವಾಹದ ಸಮಸ್ಯೆಯನ್ನು ನಿಭಾಯಿಸಲು ಕೇಂದ್ರ ಸರಕಾರವು ಹಲವಾರು ಯೋಜನೆಗಳನ್ನು ರೂಪಿಸುತ್ತಿದೆ ಎಂದರು. ಶುಕ್ರವಾರ ನೇಮಕಗೊಂಡ ನೇಪಾಳದ ಪ್ರಪ್ರಥಮ ಮಹಿಳಾ ಪ್ರಧಾನಿ ಸುಶೀಲಾ ಕರ್ಕಿ ಅವರನ್ನು ಅಭಿನಂದಿಸಿದ ಮೋದಿ ಅವರು, ‘ಮಹಿಳಾ ಸಬಲೀಕರಣಕ್ಕೆ ಇದೊಂದು ಉಜ್ವಲ ನಿದರ್ಶನವಾಗಿದೆ’ ಎಂದರು.
ನೇಪಾಳದ ಮಧ್ಯಂತರ ಪ್ರಧಾನಿಯಾಗಿ ಸುಶೀಲಾ ಕರ್ಕಿ ಅವರ ನೇಮಕವು ಶಾಂತಿ, ಸ್ಥಿರತೆ ಹಾಗೂ ಸಮೃದ್ಧಿಗೆ ಸುಗಮ ಹಾದಿ ಕಲ್ಪಿಸಲಿದೆ ಎಂದರು.
ಮಣಿಪುರದಲ್ಲಿ 2023ರಲ್ಲಿ ಜನಾಂಗೀಯ ಘರ್ಷಣೆ ಭುಗಿಲೆದ್ದ ಬಳಿಕ ತಾಂಡವವಾಡಿದ ಹಿಂಸಾಚಾರದಲ್ಲಿ 250ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ ಹಾಗೂ 60 ಸಾವಿರಕ್ಕೂ ಅಧಿಕ ಮಂದಿ ನಿರಾಶ್ರಿತರಾಗಿದ್ದಾರೆ.
ಪ್ರಧಾನಿ ಭಾಷಣದ ಮುಖ್ಯಾಂಶಗಳು
*21ನೇ ಶತಮಾನವು ಈಶಾನ್ಯಭಾರತಕ್ಕೆ ಸೇರಿದ್ದಾಗಿದೆ.
*ಇಂಫಾಲವು ಮಣಿಪುರದ ರಾಜಧಾನಿ ಹಲವು ಅವಕಾಶಗಳ ನಗರವಾಗಿದೆ.
*ಮಣಿಪುರವು ಭಾರತದ ಅಭಿವೃದ್ಧಿಗೆ ವೇಗೋತ್ಕರ್ಷವನ್ನು ನೀಡುವ ತಾಣಗಳಲ್ಲೊಂದಾಗಿದೆ.
*ಮಣಿಪುರ ಹಿಂಸಾಚಾರದಲ್ಲಿ ಮನೆಗಳನ್ನು ಕಳೆದುಕೊಂಡ ಕುಟುಂಬಗಳಿಗೆ ಏಳು ಸಾವಿರ ಮನೆಗಳನ್ನು ಕೇಂದ್ರ ಸರಕಾರ ನಿರ್ಮಿಸಿಕೊಡಲಿದೆ.
*ರಾಜ್ಯದ ಆರ್ಥಿಕ ಬೆಳವಣಿಗೆಯಲ್ಲಿ ಮಣಿಪುರ ಮಹಿಳೆಯರು ಮುಂಚೂಣಿಯಲ್ಲಿದ್ದಾರೆ.
*‘ಆಪರೇಶನ್ ಸಿಂಧೂರ್’ನಲ್ಲಿ ಮಣಿಪುರದ ವೀರಪುತ್ರರು ಪ್ರಮುಖ ಪಾತ್ರವಹಿಸಿದ್ದಾರೆ.
7300 ಕೋಟಿ ರೂ. ವೆಚ್ಚದ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ಶಿಲಾನ್ಯಾಸ
ರೈಲ್ವೆ,ರಸ್ತೆ, ಇಂಧನ, ಕ್ರೀಡೆ ಸೇರಿದಂತೆ ಮಣಿಪುರದಲ್ಲಿ ವಿವಿಧ ವಲಯಗಳ ಅಭಿವೃದ್ಧಿಗೆ ಉತ್ತೇಜನ ನೀಡುವ 7,300 ಕೋಟಿ ರೂ. ವೆಚ್ಚದ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಚುರಾಚಂದ್‌ಪುರದಲ್ಲಿ ಶಿಲಾನ್ಯಾಸ ಮಾಡಿದರು.
ಪ್ರಧಾನಮಂತ್ರಿಯವರ ಈಶಾನ್ಯಭಾರತ ಅಭಿವೃದ್ಧಿ ಉಪಕ್ರಮದಡಿ 500 ಕೋಟಿ ರೂ. ಮೌಲ್ಯದ 45 ಕಿ.ಮೀ. ಐಝವಲ್ ಬೈಪಾಸ್ ರಸ್ತೆಗೆ ಶಿಲಾನ್ಯಾಸ ಮಾಡಿದ್ದಾರೆ. ಈ ಯೋಜನೆಯು ಐಝಾವಲ್‌ನಲ್ಲಿ ವಾಹನದಟ್ಟಣೆಯನ್ನು ಕಡಿಮೆಗೊಳಿಸಲಿದೆ, ಲುಂಗ್ಲೆಯಿ, ಸಿಯಾಹ, ಲಾಗುಂತ್ಲಾಯಿ,, ಲೆಂಗ್‌ಪುಯಿ ವಿಮಾನನಿಲ್ದಾಣ ಮತ್ತು ಸೈರಾಂಗ್ ರೈಲು ನಿಲ್ದಾಣಗಳಿಗೆ ಸಂಪರ್ಕವನ್ನು ಸುಧಾರಿಸಲಿದೆ.
ಈಶಾನ್ಯ ಭಾರತ ವಿಶೇಷ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯು ಎನ್‌ಇಎಸ್‌ಐಡಿಎಸ್ (ರಸ್ತೆಗಳು) ಯೋಜನೆಯಡಿ ಥೆನ್‌ಝಾವಲ್-ಸಿಯಾಸುಕ್ ರಸ್ತೆ ಕಾಮಗಾರಿಗೂ ಅವರು ಶಿಲಾನ್ಯಾಸ ಮಾಡಿದರು. ಈ ರಸ್ತೆ ನಿರ್ಮಾಣದಿಂದಾಗಿ ತೋಟಗಾರಿಕೆ ಕೃಷಿಕರು, ಡ್ರ್ಯಾಗನ್ ಹಣ್ಣು ಬೆಳೆಗಾರರು, ಭತ್ತ ಕೃಷಿಕರು ಹಾಗೂ ಶುಂಠಿ ಸಂಸ್ಕರಣಾಗಾರರಿಗೆ ಪ್ರಯೋಜನವಾಗಲಿದೆ.
ಸೆರ್ಚಿಪ್ ಜಿಲ್ಲೆಯ ಕಾನ್‌ಕಾವ್ನ್-ರೊಂಗುರಾ ರಸ್ತೆಗೂ ಅವರು ಶಿಲಾನ್ಯಾಸ ಮಾಡಿದರು.
ಲಾಂಗ್‌ತ್ಲಾಯಿ-ಸಿಯಾ ರಸ್ತೆಗೆ ಸೇತುವೆ, ಖೇಲಾ ಇಂಡಿಯಾ ವಿವಿಧೋದ್ದೇಶ ಒಳಾಂಗಣ ಕ್ರೀಡಾ ಭವನ ಹಾಗೂ ಎಲ್‌ಪಿಜಿ ಪೂರಣ ಸ್ಥಾವರಕ್ಕೂ ಅವರು ಶಿಲಾನ್ಯಾಸಗೈದರು.
ಪ್ರಧಾನಮಂತ್ರಿ ಜನವಿಕಾಸ(ಪಿಎಂಜೆವಿಕೆ) ಕಾರ್ಯಕ್ರಮದಡಿ ಪ್ರಧಾನಿಯವರು ಕಾವ್ರಾಥಾಹ್‌ನಲ್ಲಿರುವ ವಸತಿ ಶಾಲೆ ಹಾಗೂ ಏಕಲವ್ಯ ಮಾದರಿ ವಸತಿ ಶಾಲೆಗೆ ಶಿಲಾನ್ಯಾಸ ಮಾಡಿದರು.
ಚುರಾಚಂದ್‌ಪುರ: ಗಲಭೆ ಸಂತ್ರಸ್ತರನ್ನು ಭೇಟಿಯಾದ ಪ್ರಧಾನಿ
ಭೀಕರವಾದ ಜನಾಂಗೀಯ ಹಿಂಸಾಚಾರಕ್ಕೆ ಸಾಕ್ಷಿಯಾದ ಮಣಿಪುರದ ಚುರಾಚಂದ್‌ಪುರದಲ್ಲಿ ಗಲಭೆ ಸಂತ್ರಸ್ತರನ್ನು ಪ್ರಧಾನಿ ನರೇಂದ್ರ ಮೋದಿ ಭೇಟಿಯಾಗಿ ಮಾತುಕತೆ ನಡೆಸಿದರು. ನಿರಾಶ್ರಿತ ಶಿಬಿರಗಳಲ್ಲಿನ ಮಕ್ಕಳು ಪ್ರಧಾನಿಯವರನ್ನು ಸ್ವಾಗತಿಸಿ, ಅವರಿಗೆ ಪುಷ್ಪಗುಚ್ಛ ಹಾಗೂ ವರ್ಣಚಿತ್ರವೊಂದನ್ನು ಉಡುಗೊರೆಯಾಗಿ ನೀಡುತ್ತಿರುವ ದೃಶ್ಯಗಳ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ನಿರಾಶ್ರಿತ ಶಿಬಿರದ ಮಕ್ಕಳಿಂದ ಸ್ವೀಕರಿಸಿದ ಹಕ್ಕಿ ಗರಿಯ ಟೊಪ್ಪಿಯನ್ನು ಪ್ರಧಾನಿ ಧರಿಸಿರುವುದು ಕೂಡಾ ವೀಡಿಯೊದಲ್ಲಿ ಕಂಡುಬಂದಿದೆ.
ಚುರಾಚಂದಪುರದಲ್ಲಿ ನಿರಾಶ್ರಿತ ಶಿಬಿರದ ಮಕ್ಕಳನ್ನು ಭೇಟಿಯಾದ ಬಳಿಕ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಪ್ರಧಾನಿ ಮಾತನಾಡಿದರು.
ಪ್ರಧಾನಿಯಿಂದ ಕಾಟಾಚಾರದ ಪ್ರವಾಸ: ಕಾಂಗ್ರೆಸ್ ಟೀಕೆ
ಜನಾಂಗೀಯ ಹಿಂಸಾಚಾರ ಭುಗಿಲೆದ್ದ ಎರಡು ವರ್ಷಗಳ ಬಳಿಕ ಮಣಿಪುರಕ್ಕೆ ಪ್ರಧಾನಿ ನರೇಂದ್ರ ಮೋದಿಯವರು 3 ತಾಸುಗಳ ಭೇಟಿಯು, ‘ಒಂದು ಸಣ್ಣ ನಿಲುಗಡೆ’ಯಷ್ಟೇ ಆಗಿದೆ ಕಾಂಗ್ರೆಸ್ ಪಕ್ಷ ಶನಿವಾರ ಟೀಕಿಸಿದೆ. ಪ್ರಧಾನಿಯವರ ಈ ಪ್ರವಾಸವು ಕೇವಲ ಕಾಟಾಚಾರದ್ದಾಗಿದ್ದು, ಆ ರಾಜ್ಯದ ಜನತೆಗೆ ಮಾಡಿದಂತಹ ಘೋರ ಅವಮಾನವಾಗಿದೆ ಎಂದು ಅದು ಆಪಾದಿಸಿದೆ.
‘‘ಮಣಿಪುರ ಭೇಟಿ ಸಂದರ್ಭ ಮೋದಿಯವರೇ ಸ್ವತಃ ಅವರಿಗಾಗಿ ಸ್ವಾಗತ ಸಮಾರಂಭವನ್ನು ಆಯೋಜಿಸಿದ್ದಾರೆ. ಇದು ಗಲಭೆಯಿಂದ ಯಾತನೆಗೀಡಾದವರ ಗಾಯಗಳ ಮೇಲೆ ಮುಳ್ಳಿನಿಂದ ಚುಚ್ಚಿದಂತಾಗಿದೆ’’ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.
ನರೇಂದ್ರ ಮೋದಿಜೀ, ಮಣಿಪುರಕ್ಕೆ ನಿಮ್ಮ ಮೂರು ತಾಸುಗಳ ಕಿರುಭೇಟಿಯು ದಯಾಪೂರಿತವಾದುದಲ್ಲ. ಇದೊಂದು ಪ್ರಹಸನ ಮತ್ತು ಕಾಟಾಚಾರದ್ದಾಗಿದ ಹಾಗೂ ಗಲಭೆಯಲ್ಲಿ ನೋವುಂಡ ಜನರಿಗೆ ಮಾಡಿದ ಘೋರ ಅಪಮಾನವಾಗಿದೆ. ಇಂಫಾಲ ಹಾಗೂ ಚುರಾಚಂದಪುರದಲ್ಲಿ ನೀವು ನಡೆಸಿದ ತಥಾಕಥಿತ ರೋಡ್‌ಶೋ, ನಿರಾಶ್ರಿತ ಶಿಬಿರಗಳಲ್ಲಿ ಜನರ ರೋದನವನ್ನು ಆಲಿಸುವುದರಿಂದ ಪಾರಾಗಲು ನೀವು ನಡೆಸಿದ ಹೇಡಿತನದ ಪಲಾಯನವಲ್ಲದೆ ಮತ್ತೇನೂ ಅಲ್ಲವೆಂದು ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾಗಾಂಧಿ ವಾದ್ರಾ ಅವರು ಪ್ರಧಾನಿ ವಿರುದ್ಧ ಟೀಕಾಪ್ರಹಾರ ನಡೆಸಿದ್ದು, ಬಹಳಷ್ಟು ಸಮಯಕ್ಕೆ ಮೊದಲೇ ಅವರು ಮಣಿಪುರಕ್ಕೆ ಭೇಟಿ ನೀಡಬೇಕಿತ್ತು ಎಂದು ಹೇಳಿದ್ದಾರೆ.
ಚುರಾಚಂದ್‌ಪುರಕ್ಕೆ ಒಂದೂವರೆ ತಾಸು ಕಾರಿನಲ್ಲಿ ಪ್ರಯಾಣಿಸಿದ ಮೋದಿ
ಪ್ರಧಾನಿ ಮೋದಿಯವರು ಜನಾಂಗೀಯ ಹಿಂಸಾಚಾರ ಪೀಡಿತ ಚುರಾಚಂದ್‌ಪುರಕ್ಕೆ ಹೆಲಿಕಾಪ್ಟರ್‌ನಲ್ಲಿ ಆಗಮಿಸಲಿದ್ದರು. ಆದರೆ ಅವರು ಬೆಳಗ್ಗೆ ಇಂಫಾಲಕ್ಕೆ ವಿಮಾನದಲ್ಲಿ ಬಂದಿಳಿಯುತ್ತಿದ್ದಾಗಲೇ ಭಾರೀ ಮಳೆ ಸುರಿಯುತ್ತಿದ್ದುದರಿಂದ ಅವರು ಇಂಫಾಲದಿಂದ ಕಾರಿನಲ್ಲಿಯೇ ಚುರಾಚಂದ್‌ಪುರಕ್ಕೆ ಪ್ರಯಾಣಿಸಬೇಕಾಯಿತು.
ಪ್ರಧಾನಿಯವರು ಕಾರಿನಲ್ಲಿ ಒಂದೂವರೆ ತಾಸು ಸಂಚರಿಸಿ ಚುರಾಚಂದ್‌ಪುರವನ್ನು ತಲುಪಿದ್ದಾರೆ.