ಕ್ರಿಕೆಟ್ ಆಟದ ಮಧ್ಯೆ ಎಲ್ಐಸಿ ಅಧಿಕಾರಿ ಕುಸಿದು ಬಿದ್ದು ಮೃತ್ಯು!
ರವೀಂದ್ರ ಅಹಿರ್ವಾರ್ PC: x.com/bstvlive
ಝಾನ್ಸಿ: ಕ್ರಿಕೆಟ್ ಆಡುತ್ತಿದ್ದ ಎಲ್ಐಸಿ ಅಭಿವೃದ್ಧಿ ಅಧಿಕಾರಿಯೊಬ್ಬರು ಮೈದಾನದಲ್ಲೇ ಕುಸಿದು ಬಿದ್ದು, ಮೃತಪಟ್ಟ ಘಟನೆ ವರದಿಯಾಗಿದೆ. ನಲ್ಗಂಜ್ ನಿವಾಸಿ ರವೀಂದ್ರ ಅಹಿರ್ವಾರ್ ಎಂಬುವವರು ಸೌಹಾರ್ದ ಪಂದ್ಯದಲ್ಲಿ ಬೌಲಿಂಗ್ ಮಾಡುವ ವೇಳೆ ಅಸ್ವಸ್ಥರಾಗಿ ಕುಸಿದು ಬಿದ್ದರು. ನೀರು ಕುಡಿತ ಕ್ಷಣ ವಾಂತಿ ಮಾಡಿಕೊಂಡು ಪ್ರಜ್ಞೆ ಕಳೆದುಕೊಂಡರು ಎನ್ನಲಾಗಿದೆ.
ಸರ್ಕಾರಿ ಅಂತರ ಕಾಲೇಜು ಮೈದಾನದಲ್ಲಿ ಈ ಘಟನೆ ಸಂಭವಿಸಿದ್ದು, ರವೀಂದ್ರ ಅವರು ಹಲವು ವಾರಗಳ ಬಳಿಕ ಆಡಲು ತೆರಳಿದ್ದರು. ಸಹ ಆಟಗಾರರು ತಕ್ಷಣ ರವೀಂದ್ರ ಅವರನ್ನು ಮಹರ್‌ಗಂಜ್ ಲಕ್ಷ್ಮಿ ಬಾಯಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕರೆದೊಯ್ದರು. ಆದರೆ ಆ ವೇಳೆಗಾಗಲೇ ಅವರು ಮೃತಪಟ್ಟಿದ್ದಾಗಿ ವೈದ್ಯರು ದೃಢಪಡಿಸಿದ್ದಾರೆ.
"ಅವರು ಆರೋಗ್ಯವಂತರಾಗಿದ್ದು, ಸಂತೋಷದಿಂದ ಇದ್ದರು. ಧೀರ್ಘಕಾಲದ ಬಳಿಕ ಇಂದು ಮುಂಜಾನೆ ಎದ್ದು, ತಂದೆ ಜತೆ ಚಹಾ ಸೇವಿಸಿದ್ದರು. ತಂದೆಗೆ ವಿದಾಯ ಹೇಳಿ ಜಿಐಸಿ ಮೈದಾನಕ್ಕೆ ಕ್ರಿಕೆಟ್ ಆಡಲು ತೆರಳಿದ್ದರು. ಒಂದು ಘಂಟೆ ಬಳಿಕ ಅವರ ಆರೋಗ್ಯ ಹದಗೆಟ್ಟಿತು. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ದರೂ, ಅವರು ಮೃತಪಟ್ಟಿದ್ದಾಗಿ ವೈದ್ಯರು ತಿಳಿಸಿದರು" ಎಂದು ಸಹೋದರ ಅರವಿಂದ್ ಅಹಿರ್ವಾರ್ ವಿವರಿಸಿದರು.
ಮೂವರು ಸಹೋದರರ ಪೈಕಿ ಎರಡನೆಯವರಾದ ಇವರು ಎರಡು ವರ್ಷ ಹಿಂದೆ ಎಲ್ಐಸಿ ಅಭಿವೃದ್ಧಿ ಅಧಿಕಾರಿಯಾಗಿ ಸೇರಿದ್ದರು. ಕೆಲಸ ಮತ್ತು ಕ್ರಿಕೆಟ್ ಬಗ್ಗೆ ಅಪಾರ ಪ್ರೀತಿ ಹೊಂದಿದ್ದರು ಎಂದು ಕುಟುಂಬದವರು ಹೇಳಿದ್ದಾರೆ.