×
Ad

ನಟ, ರಾಜಕಾರಣಿ ವಿಜಯ್‌ಗೆ 1.5 ಕೋಟಿ ರೂ.ದಂಡ: ಆದಾಯ ತೆರಿಗೆ ಇಲಾಖೆಯ ಕ್ರಮವನ್ನು ಎತ್ತಿ ಹಿಡಿದ ಮದ್ರಾಸ್ ಹೈಕೋರ್ಟ್

Update: 2026-02-06 15:09 IST

ಟಿವಿಕೆ ಮುಖ್ಯಸ್ಥ ವಿಜಯ್ (Photo: PTI)

ಚೆನ್ನೈ: ನಟ ಹಾಗೂ ತಮಿಳಗ ವೆಟ್ರಿ ಕಳಗಂ ಪಕ್ಷದ ಮುಖ್ಯಸ್ಥ ವಿಜಯ್ ಅವರಿಗೆ ಮದ್ರಾಸ್ ಹೈಕೋರ್ಟ್‌ನಲ್ಲಿ ಹಿನ್ನಡೆಯಾಗಿದೆ. 2015–16ನೇ ಸಾಲಿನಲ್ಲಿ ಆದಾಯ ಘೋಷಣೆ ಮಾಡದಿದ್ದಕ್ಕೆ ಆದಾಯ ತೆರಿಗೆ ಇಲಾಖೆಯು ವಿಧಿಸಿದ್ದ 1.5 ಕೋಟಿ ರೂ. ದಂಡದ ಕ್ರಮವನ್ನು ನ್ಯಾಯಾಲಯ ಎತ್ತಿ ಹಿಡಿದಿದೆ.

2015–16ನೇ ಸಾಲಿನಲ್ಲಿ 15 ಕೋಟಿ ರೂ. ಹೆಚ್ಚುವರಿ ಆದಾಯವನ್ನು ಸೂಕ್ತವಾಗಿ ಬಹಿರಂಗಪಡಿಸದ ಕಾರಣ, ಆದಾಯ ತೆರಿಗೆ ಇಲಾಖೆಯು ಅವರಿಗೆ ಆ ಸಾಲಿನಲ್ಲಿ 1.5 ಕೋಟಿ ರೂ. ದಂಡ ವಿಧಿಸಿತ್ತು. ಸೆಪ್ಟೆಂಬರ್ 2015ರಲ್ಲಿ ಆದಾಯ ತೆರಿಗೆ ಇಲಾಖೆಯು ಅವರ ನಿವಾಸದ ಮೇಲೆ ದಾಳಿ ನಡೆಸಿದ ಬಳಿಕ ಈ ದಂಡ ವಿಧಿಸಲಾಗಿತ್ತು.

ಈ ದಂಡದ ಆದೇಶದ ವಿರುದ್ಧ 2022ರಲ್ಲಿ ನಟ ವಿಜಯ್ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾ. ಸೆಂಥಿಲ್ ಕುಮಾರ್ ರಾಮಮೂರ್ತಿ ಕಳೆದ ತಿಂಗಳು ತೀರ್ಪನ್ನು ಕಾಯ್ದಿರಿಸಿದ್ದರು. ಇಂದು ಅವರು ತೀರ್ಪು ಪ್ರಕಟಿಸಿದರು.

ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 263ರ ಅಡಿ ನಿಗದಿಪಡಿಸಲಾಗಿರುವ ಕಾಲಾವಕಾಶದೊಳಗೆ ತೆರಿಗೆ ಇಲಾಖೆಯ ಅಧಿಕಾರಿಗಳು ನಟ ವಿಜಯ್‌ಗೆ ಶೋಕಾಸ್ ನೋಟಿಸ್ ನೀಡಿರುವುದನ್ನು ನ್ಯಾಯಾಲಯ ಎತ್ತಿ ಹಿಡಿದಿದ್ದು, ಈ ನೋಟಿಸ್ ಜಾರಿಗೊಳಿಸುವಲ್ಲಿ ಯಾವುದೇ ಲೋಪವಾಗಿಲ್ಲ ಎಂದು ಅಭಿಪ್ರಾಯಪಟ್ಟಿದೆ ಎಂದು livelaw.in ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News