×
Ad

ಮಹುವಾ ಮೊಯಿತ್ರಾ: ಹೂಡಿಕೆ ಬ್ಯಾಂಕರ್ ನಿಂದ ಉಚ್ಚಾಟಿತ ಲೋಕಸಭಾ ಸಂಸದೆವರೆಗೆ ; ಒಂದು ಹಿನ್ನೋಟ

Update: 2023-12-08 19:41 IST

ಮಹುವಾ ಮೊಯಿತ್ರಾ | Photo: PTI 

ಹೊಸದಿಲ್ಲಿ: ಸಂಸದೀಯ ನೈತಿಕ ಸಮಿತಿಯು ಮಂಡಿಸಿದ್ದ ‘ನಗದಿಗಾಗಿ ಪ್ರಶ್ನೆ’ ಪ್ರಕರಣ ಕುರಿತ ವರದಿಯ ಚರ್ಚೆಯ ನಂತರ ತೃಣಮೂಲ ಕಾಂಗ್ರೆಸ್ ಪಕ್ಷದ ಸಂಸದೆ ಮಹುವಾ ಮೊಯಿತ್ರಾ ಅವರನ್ನು ಇಂದು ಸಂಸತ್ತಿನಿಂದ ಉಚ್ಚಾಟಿಸಲಾಗಿದೆ. ಸಂಸತ್ತಿನ ಖಾತೆಯ ಗೋಪ್ಯತೆಯನ್ನು ಹಂಚಿಕೊಳ್ಳಲಾಗಿದೆ ಹಾಗೂ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಸಂಸತ್ತಿನಲ್ಲಿ ಪ್ರಶ್ನೆ ಕೇಳಲು ಉದ್ಯಮಿ ದರ್ಶನ್ ಹಿರಾನಂದನಿ ಅವರಿಂದ ಉಡುಗೊರೆಗಳನ್ನು ಸ್ವೀಕರಿಸಲಾಗಿದೆ ಎಂಬ ಆರೋಪಗಳಲ್ಲಿ ಸಂಸತ್ತು ಅವರನ್ನು ದೋಷಿ ಎಂದು ಘೋಷಿಸಿತು ಎಂದು ndtv.com ವರದಿ ಮಾಡಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಲೋಕಸಭಾ ಸ್ಪೀಕರ್ ಓಂ ಬಿರ್ಲಾ, “ಮಹುವಾ ಮೊಯಿತ್ರಾ ನಡತೆಯು ಅನೈತಿಕ ಹಾಗೂ ಅಸಭ್ಯ ಎಂದು ಸಮಿತಿಯು ನಿರ್ಧಾರಕ್ಕೆ ಬಂದಿರುವುದನ್ನು ಈ ಸದನವು ಅಂಗೀಕರಿಸುತ್ತದೆ. ಹೀಗಾಗಿ ಅವರು, ಸಂಸದರಾಗಿ ಮುಂದುವರಿಯವುದು ಸೂಕ್ತವಲ್ಲ” ಎಂದು ಹೇಳಿದರು.

ಲೋಕಸಭೆಯಲ್ಲಿ ನಡೆದ ಬಿಸಿಯೇರಿದ ಚರ್ಚೆಯ ಸಂದರ್ಭದಲ್ಲಿ ಮಹುವಾ ಮೊಯಿತ್ರಾರಿಗೆ ಮಾತನಾಡಲು ಅವಕಾಶ ದೊರೆಯಲಿಲ್ಲ. ಹೀಗಾಗಿ ಅವರು ತಮ್ಮ ಹೇಳಿಕೆಯನ್ನು ಸಂಸತ್ತಿನ ಹೊರಗೆ ಓದಿದರು. “ಸಂಸದೀಯ ನೈತಿಕ ಸಮಿತಿಯು ಎಲ್ಲ ನಿಯಮಗಳನ್ನೂ ಮುರಿದಿದೆ. ನಾಳೆ, ನನಗೆ ಕಿರುಕುಳ ನೀಡಲು ಸಿಬಿಐ ಅನ್ನು ಕಳುಹಿಸಲಾಗುತ್ತದೆ” ಎಂದು ಅವರು ಆರೋಪಿಸಿದರು.

ಬ್ಯಾಂಕರ್ ನಿಂದ ರಾಜಕಾರಣಿಯಾಗುವವರೆಗೆ ಮೊಯಿತ್ರಾರ ಹಾದಿ

ಲೋಕಸಭೆಯಲ್ಲಿ ತಮ್ಮ ತೀಕ್ಷ್ಣ ಮಾತುಗಳಿಗೆ ಹೆಸರು ವಾಸಿಯಾಗಿರುವ 49 ವರ್ಷದ ಮಹುವಾ ಮೊಯಿತ್ರಾ, ರಾಜಕೀಯಕ್ಕೆ ಸೇರ್ಪಡೆಯಾಗುವುದಕ್ಕೂ ಮುನ್ನ ಹೂಡಿಕೆ ಬ್ಯಾಂಕರ್ ಆಗಿದ್ದರು. 2009ರಲ್ಲಿ ಲಂಡನ್ ನ ಜೆಪಿ ಮೋರ್ಗನ್ ಚೇಸ್ ನಲ್ಲಿನ ತಮ್ಮ ಉಪಾಧ್ಯಕ್ಷ ಹುದ್ದೆ ತೊರೆದಿದ್ದ ಅವರು, ನಂತರ ಕಾಂಗ್ರೆಸ್ ಪಕ್ಷದ ಯುವ ಘಟಕವಾದ ಭಾರತೀಯ ಯುವ ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದರು.

‘ಜನಸಾಮಾನ್ಯರ ಸಿಪಾಯಿ’ ಯೋಜನೆಯಲ್ಲಿ ಮಹುವಾ ಮೊಯಿತ್ರಾ ಅವರು ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ನಂಬಿಕಸ್ಥ ಅನುಯಾಯಿಯಾಗಿದ್ದರು.

ಕಾಂಗ್ರೆಸ್ ಪಕ್ಷದಲ್ಲಿ ಕೆಲ ಕಾಲ ಮಾತ್ರ ಇದ್ದ ಅವರು, ನಂತರ 2010ರಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಯಾಗಿದ್ದರು ಹಾಗೂ ಆಕೆ ತೀರಾ ಆಧುನಿಕ ಮಹಿಳೆ ಎಂಬ ಕಾರಣಕ್ಕೆ ತೃಣಮೂಲ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ತೀವ್ರ ವಿರೋಧ ವ್ಯಕ್ತಪಡಿಸಿದರೂ, ಅವರಿಗೆ 2016ರಲ್ಲಿ ಪಶ್ಚಿಮ ಬಂಗಾಳದ ಕರೀಂಪುರ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ನೀಡಲಾಗಿತ್ತು. ಆದರೆ, ಆ ಸವಾಲನ್ನು ಸ್ವೀಕರಿಸಿದ್ದ ಮೊಯಿತ್ರಾ, ಆ ಚುನಾವಣೆಯಲ್ಲಿ ಯಶಸ್ವಿಯಾಗಿ ಗೆಲುವು ಸಾಧಿಸಿದ್ದರು.

ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾದ ಮಮತಾ ಬ್ಯಾನರ್ಜಿ ಅವರ ನಗರ ಮುಖ ಎಂದೇ ಹಲವಾರು ಮಂದಿ ಮಹುವಾ ಮೊಯಿತ್ರಾರನ್ನು ನೋಡುತ್ತಾರೆ. 2019ರಲ್ಲಿ ಕೃಷ್ಣಾನಗರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಮಹುವಾ ಮೊಯಿತ್ರಾ, ಬಿಜೆಪಿ ಅಭ್ಯರ್ಥಿ ಕಲ್ಯಾಣ್ ಚೌಬೆ ವಿರುದ್ಧ ಜಯಭೇರಿ ಬಾರಿಸಿದ್ದರು.

ನಂತರ ಅವರನ್ನು 2022ರಲ್ಲಿ ನಡೆದ ಗೋವಾ ವಿಧಾನಸಭಾ ಚುನಾವಣೆಯಲ್ಲಿ ಗೋವಾ ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿತ್ತು.

ತಮ್ಮ ತೀಕ್ಷ್ಣ ಹಾಗೂ ಹರಿತ ಮಾತುಗಳಿಂದ ನರೇಂದ್ರ ಮೋದಿ ಸರ್ಕಾರದ ನಿದ್ದೆಗೆಡಿಸಿದ್ದ ಮಹುವಾ ಮೊಯಿತ್ರಾರನ್ನು ಸದ್ಯ ನಗದಿಗಾಗಿ ಪ್ರಶ್ನೆ ಪ್ರಕರಣದಲ್ಲಿ ಸಂಸತ್ತಿನಿಂದ ಉಚ್ಚಾಟಿಸಲಾಗಿದೆ. ಈ ಕ್ರಮದ ವಿರುದ್ಧ ಅವರು ನ್ಯಾಯಾಲಯದ ಮೊರೆ ಹೋಗಲಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News