ಮಣಿಪುರ: ರಾಷ್ಟ್ರಪತಿ ಆಳ್ವಿಕೆ 6 ತಿಂಗಳು ವಿಸ್ತರಣೆಗೆ ನಿರ್ಧಾರ
PC: PTI
ಹೊಸದಿಲ್ಲಿ: ಜನಾಂಗೀಯ ಸಂಘರ್ಷದಿಂದ ಜರ್ಜರಿತವಾಗಿರುವ ಮಣಿಪುರದಲ್ಲಿ ಮತ್ತೆ ಆರು ತಿಂಗಳ ವರೆಗೆ ರಾಷ್ಟ್ರಪತಿ ಆಡಳಿತವನ್ನು ಮುಂದುವರಿಸುವ ಸಂಬಂಧ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯಸಭೆಯಲ್ಲಿ ಶುಕ್ರವಾರ ನಿರ್ಣಯ ಮಂಡಿಸಲಿದ್ದಾರೆ.
ಆಗಸ್ಟ್ 13ರಿಂದ ಜಾರಿಯಾಗುವಂತೆ ರಾಷ್ಟ್ರಪತಿ ಆಡಳಿತ ವಿಸ್ತರಣೆಯಾಗಲಿದೆ.
"ಮಣಿಪುರಕ್ಕೆ ಸಂಬಂಧಿಸಿದಂತೆ ಸಂವಿಧಾನದ 356ನೇ ವಿಧಿ ಅನ್ವಯ 2025ರ ಫೆಬ್ರುವರಿ 13ರಂದು ರಾಷ್ಟ್ರಪತಿಗಳು ನೀಡಿದ ಸುಗ್ರೀವಾಜ್ಞೆಯನ್ನು 2025ರ ಆಗಸ್ಟ್ 13ರಿಂದ ಆರು ತಿಂಗಳ ಕಾಲ ಮುಂದುವರಿಸಲು ಸದನ ಒಪ್ಪಿಗೆ ನೀಡಬೇಕಿದೆ" ಎಂದು ರಾಜ್ಯಸಭೆಯ ಸಂಸದೀಯ ಬುಲೆಟಿನ್ ಹೇಳಿದೆ.
ಫೆಬ್ರುವರಿ 9ರಂದು ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ರಾಜೀನಾಮೆ ನೀಡಿದ ಬಳಿಕ ಆ ಹುದ್ದೆಗೆ ಹೊಸ ವ್ಯಕ್ತಿಯನ್ನು ನೇಮಕ ಮಾಡುವಲ್ಲಿ ಸಹಮತ ಮೂಡಿಸಲು ಬಿಜೆಪಿ ವಿಫಲವಾದ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲಾಗಿತ್ತು. ಸದನದಲ್ಲಿ ಅವಿಶ್ವಾಸ ನಿರ್ಣಯ ಮಂಡನೆಗೆ ಮುನ್ನಾ ದಿನ ಅವರು ರಾಜೀನಾಮೆ ನೀಡಿದ್ದರು.
2023ರ ಮೇ ತಿಂಗಳಲ್ಲಿ ಆರಂಭವಾದ ಜನಾಂಗೀಯ ಸಂಘರ್ಷದ ಹಿನ್ನೆಲೆಯಲ್ಲಿ ಬೀರೇನ್ ಸಿಂಗ್ ನಾಯಕತ್ವದ ಬಗ್ಗೆ ಅಪಸ್ವರಗಳು ಕೇಳಿಬಂದಿದ್ದವು. ಸಿಂಗ್ ಅವರ ಪದಚ್ಯುತಿಗೆ ವಿರೋಧ ಪಕ್ಷಗಳು ಒತ್ತಡ ಹೇರುತ್ತಲೇ ಬಂದಿದ್ದವು.
ರಾಜ್ಯದಲ್ಲಿ ಜನಪರ ಸರ್ಕಾರವನ್ನು ಸ್ಥಾಪಿಸುವಂತೆ ಆಗ್ರಹಿಸಿ ರಾಜ್ಯದ ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟದ 21 ಶಾಸಕರು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೆ ಏಪ್ರಿಲ್ ನಲ್ಲಿ ಪತ್ರ ಬರೆದಿದ್ದರು.
ಮಣಿಪುರ ಬಹುನಿರೀಕ್ಷೆಯಿಂದ ರಾಷ್ಟ್ರಪತಿ ಆಡಳಿತವನ್ನು ಸ್ವಾಗತಿಸಿತ್ತು. ಆದರೆ ಶಾಂತಿ ಮತ್ತು ಸಹಜ ಸ್ಥಿತಿ ನಿರ್ಮಾಣವಾಗುವಂತೆ ಯಾವುದೇ ಕ್ರಮ ಕೈಗೊಳ್ಳುತ್ತಿರುವುದು ಕಾಣಿಸುತ್ತಿಲ್ಲ ಎಂದು ಪತ್ರದಲ್ಲಿ ಅಸಮಾಧಾನ ವ್ಯಕ್ತಪಡಿಸಲಾಗಿತ್ತು.