ಜಾರ್ಖಂಡ್ | ಆರೋಗ್ಯ ಸಚಿವರ ಪುತ್ರನಿಂದ ಆಸ್ಪತ್ರೆ ತಪಾಸಣೆ: ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್!
ರಾಂಚಿ : ಜಾರ್ಖಂಡ್ ಆರೋಗ್ಯ ಸಚಿವ ಇರ್ಫಾನ್ ಅನ್ಸಾರಿಯವರ ಪುತ್ರ ಕ್ರಿಶ್ ಅನ್ಸಾರಿ ರಾಂಚಿಯ ಖಾಸಗಿ ಆಸ್ಪತ್ರೆಗೆ ನೀಡಿ ತಪಾಸಣೆ ಮಾಡಿರುವ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರಾಜ್ಯ ರಾಜಕಾರಣದಲ್ಲಿ ವಿವಾದದ ಬಿರುಗಾಳಿ ಎಬ್ಬಿಸಿದೆ.
ಇನ್ಸ್ಟಾಗ್ರಾಂನಲ್ಲಿ ಹಂಚಿಕೆಯಾಗಿದ್ದ ವಿಡಿಯೋದಲ್ಲಿ, ಕ್ರಿಶ್ ಅನ್ಸಾರಿ ಅಂಗರಕ್ಷಕರು ಹಾಗೂ ಸ್ನೇಹಿತರೊಂದಿಗೆ ಆಸ್ಪತ್ರೆಯ ಆವರಣದಲ್ಲಿ ಸಂಚರಿಸುತ್ತಿರುವುದು, ರೋಗಿಗಳೊಂದಿಗೆ ಮಾತನಾಡುತ್ತಿರುವುದು ಹಾಗೂ ಅವರ ಕುಂದುಕೊರತೆಗಳನ್ನು ಕೇಳುತ್ತಿರುವುದು ಕಂಡು ಬಂದಿದೆ. ಕ್ರಿಶ್ ಅನ್ಸಾರಿ ಅವರ ಸ್ನೇಹಿತರೊಬ್ಬರು "ಏನಾದರೂ ತೊಂದರೆ ಇದ್ದರೆ ಹೇಳಿ, ಸಚಿವರ ಪುತ್ರ ಬಂದಿದ್ದಾರೆ" ಎಂದು ಹೇಳುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ಈ ವಿಡಿಯೋ ವೈರಲ್ ಆದ ನಂತರ, ಹಲವಾರು ಬಳಕೆದಾರರು ಮತ್ತು ವಿರೋಧ ಪಕ್ಷದ ನಾಯಕರು ತೀವ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. “ಸಾಮಾನ್ಯ ನಾಗರಿಕನಿಗೆ ಪ್ರವೇಶ ನಿಷೇಧವಾಗಿರುವ ಆಸ್ಪತ್ರೆಯ ಒಳಾಂಗಣದಲ್ಲಿ ಸಚಿವರ ಪುತ್ರನಿಗೆ ವೀಕ್ಷಣೆ ನಡೆಸಲು ಅಧಿಕಾರ ಕೊಟ್ಟವರು ಯಾರು?” ಎಂದು ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.
ತೀವ್ರ ವಿರೋಧದ ಹಿನ್ನೆಲೆಯಲ್ಲಿ, ಕ್ರಿಶ್ ಅನ್ಸಾರಿ ತಮ್ಮ ಇನ್ಸ್ಟಾಗ್ರಾಂ ಖಾತೆಯಿಂದ ಸಂಬಂಧಿತ ವಿಡಿಯೋ ಅಳಿಸಿ ಹಾಕಿದ್ದಾರೆ.
ಆದರೆ ಸಚಿವ ಇರ್ಫಾನ್ ಅನ್ಸಾರಿ ತಮ್ಮ ಮಗನ ನಡೆಗೆ ಸಮರ್ಥನೆ ನೀಡುತ್ತಾ, “ಇದು ಕೇವಲ ಮಾನವೀಯತೆಯ ಭೇಟಿ. ಸಾರ್ವಜನಿಕ ಸೇವೆಯ ಕುರಿತ ಕಾಳಜಿಯಿಂದ ಈ ಭೇಟಿ ಮಾಡಲಾಗಿತ್ತು” ಎಂದು ಸ್ಪಷ್ಟಪಡಿಸಿದ್ದಾರೆ.
ಆರೋಗ್ಯ ಇಲಾಖೆ ಅಥವಾ ಆಸ್ಪತ್ರೆಯ ನಿರ್ವಹಣಾಧಿಕಾರಿಗಳಿಂದ ಈ ಸಂಬಂಧ ಯಾವುದೇ ಅಧಿಕೃತ ಪ್ರತಿಕ್ರಿಯೆ ಹೊರಬಿದ್ದಿಲ್ಲ.