×
Ad

ಮೇಘಾಲಯ ಸಿಎಂ ಕಚೇರಿ ಮೇಲೆ ಪ್ರತಿಭಟನಾಕಾರರ ದಾಳಿ

Update: 2023-07-25 07:57 IST

Photo: Times Of India

ಶಿಲ್ಲಾಂಗ್: ಅನಿರೀಕ್ಷಿತ ಬೆಳವಣಿಗೆಯೊಂದರಲ್ಲಿ ಉದ್ರಿಕ್ತ ಪ್ರತಿಭಟನಾಕಾರರು, ಮೇಘಾಲಯ ಮುಖ್ಯಮಂತ್ರಿ ಕೊರ್ನಾಡ್ ಸಂಗ್ಮಾ ಅವರು ಸಭೆ ನಡೆಸುತ್ತಿದ್ದ ವೇಳೆ ಮಿನಿ ಸೆಕ್ರೇಟ್ರಿಯೇಟ್ ಮೇಲೆ ಸೋಮವಾರ ಸಂಜೆ 6 ಗಂಟೆಯ ವೇಳೆ ದಾಳಿ ನಡೆಸಿರುವ ಬಗ್ಗೆ ವರದಿಯಾಗಿದೆ.

ಸಂಪುಟ ಸಹೋದ್ಯೋಗಿ ಮಾಕ್ರ್ಯೂಸ್ ಮರಕ್ ಮತ್ತು ಹಿರಿಯ ಸರ್ಕಾರಿ ಅಧಿಕಾರಿಗಳ ಜತೆ ಚರ್ಚೆಗಾಗಿ ಸಿಎಂ ಸಭೆ ಕರೆದಿದ್ದರು. ತುರಾ ಪಟ್ಟಣವನ್ನು ರಾಜ್ಯದ ಚಳಿಗಾಲದ ರಾಜಧಾನಿಯಾಗಿ ಘೋಷಿಸಬೇಕು ಎಂಬ ಬೇಡಿಕೆ ಬಗ್ಗೆ ಗ್ಯಾರೊ ಜನಾಂಗದ ಮುಖಂಡರ ಜತೆ ಮಾತುಕತೆ ನಡೆಸುವ ಸಂಬಂಧ ಈ ಸಭೆ ಆಯೋಜಿಸಲಾಗಿತ್ತು. ಈ ದಾಳಿಯಲ್ಲಿ ಕನಿಷ್ಠ ಏಳು ಮಂದಿ ಪೊಲೀಸರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಪಶ್ಚಿಮ ಗ್ಯಾರೊ ಬೆಟ್ಟ ಜಿಲ್ಲೆಯ ಕೇಂದ್ರವಾದ ತುರಾ ನಗರವನ್ನು ರಾಜ್ಯದ ಚಳಿಗಾಲದ ರಾಜಧಾನಿಯಾಗಿ ಘೋಷಿಸಬೇಕು ಎಂದು ಅಚಿಕ್ ಕಾನ್ಷಿಯಸ್ ಹೋಲಿಸ್ಟಿಕಲಿ ಇಂಟಗ್ರೇಟೆಡ್ ಕ್ರಿಮಾ (ಎಸಿಎಚ್ಐಕೆ) ಆಗ್ರಹಿಸಿತ್ತು. ಆದರೆ ಹಲವು ಗುಂಪುಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿ, ಶಿಲ್ಲಾಂಗ್ ಏಕೈಕ ರಾಜಧಾನಿಯಾಗಿರಬೇಕು ಎಂದು ಪ್ರತಿಪಾದಿಸಿದ್ದವು. ಜತೆಗೆ ರಾಜ್ಯದ ಉದ್ಯೋಗ ಮೀಸಲಾತಿ ನೀತಿಯ ಸಮಗ್ರ ಪರಾಮರ್ಶೆಗೂ ಅಚಿಕ್ ಆಗ್ರಹಿಸಿತ್ತು.

ಸಿಎಂ ಕಚೇರಿ ಮೇಳೆ ನಡೆದ ದಾಳಿಯಲ್ಲಿ ತಾನು ಶಾಮೀಲಾಗಿಲ್ಲ ಎಂದು ಅಚಿಕ್ ಸ್ಪಷ್ಟಪಡಿಸಿದೆ. ಎಲ್ಲರನ್ನು ಒಳಗೊಂಡ ಮತ್ತು ಪಾರದರ್ಶಕ ಸಂಧಾನ ಪ್ರಕ್ರಿಯೆಗೆ ಆಗ್ರಹಿಸಿ ಕಳೆದ 13 ದಿನಗಳಿಂದ ಅಚಿಕ್ ಮುಖಂಡರು ಪ್ರತಿಭಟನೆ ನಡೆಸುತ್ತಿದ್ದರು.

ಘಟನೆಯ ಬೆನ್ನಲ್ಲೇ ದೊಡ್ಡ ಪೊಲೀಸ್ ಪಡೆ ಮತ್ತು ಸಿಆರ್ಪಿಎಫ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. 1000 ಮಂದಿ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗ ಮಾಡಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗಲು ಕಾರಣವಾಯಿತು. ಘಟನೆ ಬಗ್ಗೆ ತನಿಖೆ ನಡೆಯುತ್ತಿದೆ. ಈ ದುರದೃಷ್ಟಕರ ಘಟನೆ ಬಗ್ಗೆ ತೀವ್ರ ವಿಷಾದ ವ್ಯಕ್ತಪಡಿಸಿರುವ ಸಿಎಂ ಸಂಗ್ಮಾ, ಹಿಂಸಾಕೃತ್ಯದ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News