×
Ad

ವಿಚ್ಚೇದಿತ ಪತ್ನಿಗೆ ದುಬಾರಿ ಜೀವನಾಂಶ ಪಾವತಿಸಲು ಕ್ರಿಕೆಟಿಗ ಮುಹಮ್ಮದ್ ಶಮಿಗೆ ಕಲ್ಕತ್ತಾ ಹೈಕೋರ್ಟ್‌ ಆದೇಶ

Update: 2025-07-01 23:20 IST

Photo : HT

ಕೋಲ್ಕತ್ತಾ: ಕ್ರಿಕೆಟಿಗ ಮುಹಮ್ಮದ್ ಶಮಿ, ತಮ್ಮ ವಿಚ್ಛೇದಿತ ಪತ್ನಿ ಹಸೀನ್ ಜಹಾನ್ ಗೆ ಮಾಸಿಕ 4 ಲಕ್ಷ ರೂಪಾಯಿಗಳ ಜೀವನಾಂಶ ಪಾವತಿಸಬೇಕು ಎಂದು ಕಲ್ಕತ್ತಾ ಹೈಕೋರ್ಟ್ ಆದೇಶ ನೀಡಿದೆ.

ಹಸೀನ್ ಜಹಾನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಜಯ್ ಕುಮಾರ್ ಮುಖರ್ಜಿ ಅವರಿದ್ದ ಏಕಸದಸ್ಯ ಪೀಠವು, ವಿಚ್ಛೇದಿತ ಪತ್ನಿಗೆ ಮಾಸಿಕ 1.5 ಲಕ್ಷ ರೂ. ಮತ್ತು ಮಗಳು ಐರಾಗೆ 2.5 ಲಕ್ಷ ರೂ. ನೀಡುವಂತೆ ಆದೇಶಿಸಿದೆ.

2023 ರಲ್ಲಿ ಶಮಿ ತನ್ನ ಪತ್ನಿಗೆ 50,000 ರೂ. ಮತ್ತು ಮಗಳಿಗೆ 80,000 ರೂ. ಪಾವತಿಸಬೇಕೆಂದು ನಿರ್ದೇಶಿಸಿದ್ದ ಜಿಲ್ಲಾ ಸೆಷನ್ಸ್ ನ್ಯಾಯಾಲಯದ ಆದೇಶದ ವಿರುದ್ಧ ಹಸೀನ್ ಜಹಾನ್ ಹೈಕೋರ್ಟ್‌ ಗೆ ಅರ್ಜಿ ಸಲ್ಲಿಸಿದ್ದರು. ತಮಗೆ ತಿಂಗಳಿಗೆ 7 ಲಕ್ಷ ರೂ. ಮತ್ತು ಮಗಳಿಗೆ 3 ಲಕ್ಷ ರೂ. ಪರಿಹಾರವನ್ನು ನೀಡುವಂತೆ ಅವರು ನ್ಯಾಯಾಲಯದಲ್ಲಿ ಕೋರಿದ್ದರು.

2014 ರಲ್ಲಿ ಶಮಿ ಅವರನ್ನು ವಿವಾಹವಾಗುವ ಮೊದಲು ಹಸೀನ್ ಜಹಾನ್ ಅವರು, ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಚಿಯರ್‌ ಲೀಡರ್‌, ರೂಪದರ್ಶಿಯಾಗಿ ಕೆಲಸ ಮಾಡುತ್ತಿದ್ದರು. 2015 ರಲ್ಲಿ ದಂಪತಿಗಳಿಗೆ ಹೆಣ್ಣು ಮಗು ಜನಿಸಿತ್ತು.

2018 ರಲ್ಲಿ,ಹಸೀನ್ ಜಹಾನ್, ಮುಹಮ್ಮದ್ ಶಮಿ ವಿರುದ್ಧ ಕೌಟುಂಬಿಕ ಹಿಂಸೆ, ವರದಕ್ಷಿಣೆ ಕಿರುಕುಳ ಮತ್ತು ಮ್ಯಾಚ್ ಫಿಕ್ಸಿಂಗ್ ಆರೋಪ ಹೊರಿಸಿದ್ದರು. ಪಾಕಿಸ್ತಾನಿ ಮಹಿಳೆಯೊಬ್ಬರಿಂದ ಶಮಿ ಹಣ ಪಡೆದಿದ್ದಾರೆ ಎಂದು ಅವರು ಹೇಳಿಕೊಂಡಿದ್ದರು. ಕುಟುಂಬದ ಖರ್ಚುಗಳನ್ನು ನಿಭಾಯಿಸಲು ತನ್ನ ಪತಿ ತನಗೆ ಹಣ ಪಾವತಿಸುವುದನ್ನು ನಿಲ್ಲಿಸಿದ್ದಾರೆ ಎಂದು ಹಸೀನ್ ಜಹಾನ್ ಆರೋಪಿಸಿದ್ದರು.

ಈ ಆರೋಪದ ಪರಿಣಾಮವಾಗಿ ಬಿಸಿಸಿಐ ಶಮಿಯವರನ್ನು ಗುತ್ತಿಗೆಯಿಂದ ಕೈ ಬಿಟ್ಟಿತ್ತು. ಬಳಿಕ ಅವರನ್ನು ಮ್ಯಾಚ್ ಫಿಕ್ಸಿಂಗ್ ಆರೋಪಗಳಿಂದ ಮುಕ್ತಗೊಳಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News