ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸುವ ಯೋಜನೆಯಿಲ್ಲ: ಕೇಂದ್ರ
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ,ಆ.12: ಗೋವುಗಳನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸುವ ಯಾವುದೇ ಕಾನೂನನ್ನು ತರುವ ಯೋಜನೆಯನ್ನು ಕೇಂದ್ರವು ಹೊಂದಿಲ್ಲ ಎಂದು ಸಹಾಯಕ ಮೀನುಗಾರಿಕೆ,ಪಶು ಸಂಗೋಪನೆ ಮತ್ತು ಹೈನುಗಾರಿಕೆ ಸಚಿವ ಎಸ್.ಪಿ.ಸಿಂಗ್ ಬಘೇಲ್ ಅವರು ಮಂಗಳವಾರ ಸಂಸತ್ತಿನಲ್ಲಿ ತಿಳಿಸಿದರು.
ಲೋಕಸಭೆಯಲ್ಲಿ ಹಿರಿಯ ಬಿಜೆಪಿ ನಾಯಕ ಹಾಗೂ ಮಾಜಿ ಉತ್ತರಾಖಂಡ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಅವರ ಪ್ರಶ್ನೆಗೆ ನೀಡಿದ ಲಿಖಿತ ಉತ್ತರದಲ್ಲಿ ಬಘೇಲ್, ಗೋವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಿಸುವ ಯಾವುದೇ ಪ್ರಸ್ತಾವ ಸರಕಾರದ ಮುಂದಿಲ್ಲ. ಸಂವಿಧಾನದ ವಿಧಿ 246(3)ರ ಪ್ರಕಾರ ಕೇಂದ್ರ ಮತ್ತು ರಾಜ್ಯಗಳ ನಡುವೆ ಶಾಸಕಾಂಗ ಅಧಿಕಾರಗಳ ಹಂಚಿಕೆಯಡಿ ಪ್ರಾಣಿಗಳ ಸಂರಕ್ಷಣೆಯು ರಾಜ್ಯ ಶಾಸಕಾಂಗವು ಶಾಸನವನ್ನು ತರಲು ವಿಶೇಷ ಅಧಿಕಾರ ಹೊಂದಿರುವ ವಿಷಯವಾಗಿದೆ ಎಂದು ತಿಳಿಸಿದರು.
ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಗೋ ಉತ್ತೇಜನ,ಸಂರಕ್ಷಣೆ ಮತ್ತು ಸಾಕಣೆಗಾಗಿ ಕೈಗೊಂಡಿರುವ ಉಪಕ್ರಮಗಳನ್ನು ಬೆಂಬಲಿಸಲು ಮತ್ತು ಬಲಗೊಳಿಸಲು ಕೇಂದ್ರ ಸರಕಾರವು ಡಿಸೆಂಬರ್ 2021ರಿಂದ ರಾಷ್ಟ್ರೀಯ ಗೋಕುಲ ಅಭಿಯಾನವನ್ನು ಜಾರಿಗೊಳಿಸಿದೆ ಎಂದು ಅವರು ಹೇಳಿದರು.
ಹಾಲು ಉತ್ಪಾದನೆಯ ಕುರಿತಂತೆ ಬಘೇಲ್, 2024ರಲ್ಲಿ ದೇಶದಲ್ಲಿ 239.30 ಮಿ.ಟನ್ ಒಟ್ಟು ಹಾಲು ಉತ್ಪಾದನೆಯಲ್ಲಿ ಗೋ ಹಾಲಿನ ಪಾಲು ಶೇ.53.12ರಷ್ಟಿತ್ತು ಮತ್ತು ಎಮ್ಮೆ ಹಾಲಿನ ಕೊಡುಗೆ ಶೇ.43.62ರಷ್ಟಿತ್ತು ಎಂದು ಸದನಕ್ಕೆ ಮಾಹಿತಿ ನೀಡಿದರು.