×
Ad

ಅಧಿಕ ಮಳೆ ಹಿನ್ನೆಲೆ: ಈರುಳ್ಳಿ ಬೆಲೆ ಕುಸಿತ; 66 ಸಾವಿರ ಖರ್ಚು ಮಾಡಿದ ರೈತನಿಗೆ 7.5 ಕ್ವಿಂಟಾಲ್‌ಗೆ ಸಿಕ್ಕಿದ್ದು ಕೇವಲ 664 ರೂ!

Update: 2025-10-21 08:16 IST

ಸಾಂದರ್ಭಿಕ ಚಿತ್ರ PC: x.com/TelanganaToday

ಪುಣೆ: ಜಿಲ್ಲೆಯ ಪುರಂದರ್ನ ರೈತ ಸುದಾಮ ಇಂಗಳೆ ಪ್ರಸಕ್ತ ಋತುವಿನಲ್ಲಿ ಈರುಳ್ಳಿ ಬೆಳೆಯಲು 66 ಸಾವಿರ ರೂಪಾಯಿ ಖರ್ಚು ಮಾಡಿದ್ದರು. ಧಾರಾಕಾರ ಮಳೆಯಿಂದಾಗಿ ಅವರ ಬೆಳೆ ಬಹುತೇಕ ನಾಶವಾಯಿತು. ಆದರೆ ಒಂದಷ್ಟು ಭಾಗವನ್ನು ಉಳಿಸಿಕೊಂಡು ಅದನ್ನು ಪ್ಯಾಕ್ ಮಾಡಲು ಹಾಗೂ ಮಾರುಕಟ್ಟೆಗೆ ಸಾಗಿಸಲು 1500 ರೂಪಾಯಿ ವೆಚ್ಚ ಮಾಡಿದರು. ಆದರೆ ಮಾರುಕಟ್ಟೆಗೆ 7.5 ಕ್ವಿಂಟಲ್ ಈರುಳ್ಳಿ ಒಯ್ದ ಅವರಿಗೆ ಆಘಾತ ಕಾದಿತ್ತು. ಸಿಕ್ಕಿದ್ದು ಕೇವಲ 664 ರೂಪಾಯಿ!

"ಇದು ಒಂದು ಎಕರೆಯಲ್ಲಿ ಈರುಳ್ಳಿ ಬೆಳೆದ ಕಥೆ. ಇನ್ನೂ 1.5 ಎಕರೆಯಲ್ಲಿ ಈರುಳ್ಳಿ ಇದೆ. ಆದರೆ ನಾನು ಮಾರಾಟ ಮಾಡುವುದಿಲ್ಲ. ಅದನ್ನು ಅಲ್ಲೇ ಉಳಿಸಿ ಮುಂದಿನ ವರ್ಷಕ್ಕೆ ಗೊಬ್ಬರವಾಗಿ ಬಳಸುತ್ತೇನೆ. ಇದು ಮಾರುವುದಕ್ಕಿಂತ ಹೆಚ್ಚು ಲಾಭದಾಯಕ" ಎಂದು ಅವರು ಹೇಳುತ್ತಾರೆ. "ನಾನು ದೊಡ್ಡ ರೈತ; ಕೇವಲ ಒಂದು ಅಥವಾ ಎರಡು ಎಕರೆ ಹೊಂದಿರುವ ರೈತರ ಕಥೆ ಏನು ಗೊತ್ತಿಲ್ಲ. ಈ ಪೈಕಿ ಹಲವು ಮಂದಿ ಸಾಲಗಳನ್ನು ತೆಗೆದುಕೊಂಡಿದ್ದಾರೆ. ಅವರು ಹೇಗೆ ಉಳಿಯುತ್ತಾರೆ? ಸರ್ಕಾರ ಹಸ್ತಕ್ಷೇಪ ಮಾಡದಿದ್ದರೆ ರೈತರ ಆತ್ಮಹತ್ಯೆ ಹೆಚ್ಚುತ್ತದೆ" ಎನ್ನುವುದು ಅವರ ಅಭಿಮತ.

ಇಂಗಳೆಯವರ ಕಣ್ಣೀರ ಕಥೆ ಮಹಾರಾಷ್ಟ್ರದ ಎಲ್ಲ ಹೊಲಗಳಲ್ಲಿ ಪ್ರತಿಧ್ವನಿಸುತ್ತಿದೆ. ಧಾರಾಕಾರ ಮಳೆ ಮತ್ತು ಬೆಲೆ ಕುಸಿತದಿಂದ ರೈತರು ಕಂಗಾಲಾಗಿದ್ದು, ಅಸ್ತಿತ್ವಕ್ಕಾಗಿ ಹೆಣಗಾಡುತ್ತಿದ್ದಾರೆ. ಈರುಳ್ಳಿ, ಟೊಮ್ಯಾಟೊದಿಂದ ಹಿಡಿದು, ಆಲೂಗಡ್ಡೆ, ದಾಳಿಂಬೆ, ಸೀತಾಫಲ, ಸೋಯಾಬಿನ್ ಹೀಗೆ ಎಲ್ಲ ಬೆಳೆಗಳೂ ಮುಂಗಾರು ಹಂಗಾಮಿನಲ್ಲಿ ನಾಶವಾಗಿವೆ.

ಕೈಯಲ್ಲಿ ಬಿಡಿಗಾಸು ಇಲ್ಲದ ರೈತರು ಖರೀದಿ ಸಾಮರ್ಥ್ಯ ಹೊಂದಿಲ್ಲ. ಇದರಿಂದ ದೀಪಾವಳಿ ಸಮಯದಲ್ಲಿ ವ್ಯಾಪಾರ ವಹಿವಾಟು ಹೆಚ್ಚುವ ಗ್ರಾಮೀಣ ಮಾರುಕಟ್ಟೆಗಳಲ್ಲಿ ಶೂನ್ಯ ಅವರಿಸಿದೆ.

"ಈ ಬಾರಿ ದೀಪಾವಳಿ ನಗರಗಳಲ್ಲಿ ಮಾತ್ರ ಆಚರಿಸಲ್ಪಡುತ್ತಿದೆ. ಏಕೆಂದರೆ ಹಳ್ಳಿಗಳಲ್ಲಿ ದೀಪ ಖರೀದಿಸಲು ಕೂಡಾ ಹಣ ಇಲ್ಲ" ಎಂದು ನಾಸಿಕ್ನ ಎಪಿಎಂಸಿ ಸದಸ್ಯರೊಬ್ಬರು ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News