ಚುನಾವಣೋತ್ತರ ಸಮೀಕ್ಷೆ ಪ್ರಕಟ; ಯಾರಿಗೆ ಬಿʼಹಾರʼ?
Photo: timesofindia
ಹೊಸದಿಲ್ಲಿ: ಬಿಹಾರದಲ್ಲಿ ಎರಡನೇ ಹಾಗೂ ಅಂತಿಮ ಹಂತದ ಮತದಾನ ಪೂರ್ಣಗೊಂಡಿದ್ದು, ಚುನಾವಣೋತ್ತರ ಸಮೀಕ್ಷೆ ಪ್ರಕಟಗೊಂಡಿದೆ. ಬಹುತೇಕ ಸಮೀಕ್ಷೆಗಳು ಎನ್ ಡಿ ಎ ಒಕ್ಕೂಟಕ್ಕೆ ಹೆಚ್ಚಿನ ಸ್ಥಾನಗಳು ಸಿಗಲಿವೆ ಎಂದು ಭವಿಷ್ಯ ನುಡಿದಿವೆ.
ದೈನಿಕ್ ಭಾಸ್ಕರ್, ಮ್ಯಾಟ್ರಿಝ್, ಪೀಪಲ್ಸ್ ಇನ್ಸೈಟ್, ಪೀಪಲ್ಸ್ ಪಲ್ಸ್, ಜೆವಿಸಿ ಪೋಲ್ಸ್, ಚಾಣಕ್ಯ ಸಮೀಕ್ಷೆಗಳು ಬಿಹಾರದ ಮತದಾರ ಎನ್ ಡಿ ಎ ಮೈತ್ರಿಕೂಟದ ಕೈಹಿಡಿದಿದ್ದಾನೆ ಎಂದು ಸಮೀಕ್ಷೆಯಲ್ಲಿ ಹೇಳಿವೆ.
ದೈನಿಕ್ ಭಾಸ್ಕರ್ ಸಮೀಕ್ಷೆಯಂತೆ ಎನ್ ಡಿ ಎ ಒಕ್ಕೂಟಕ್ಕೆ 145-160 ಸ್ಥಾನಗಳು ಬರಲಿದೆ. ಮಹಾಘಟಬಂಧನ್ ಗೆ 73-91 ಸ್ಥಾನಗಳು ಸಿಗಲಿದೆ. ಜೆವಿಸಿ ಪೋಲ್ಸ್ ಎನ್ಡಿಎ ಗೆ 135-150 ಸ್ಥಾನಗಳು ಎಂದು ಹೇಳಿದೆ. ಮಹಾಘಟಬಂಧನ್ 88-103 ಸ್ಥಾನಗಳು ಪಡೆಯಬಹುದು ಎಂದು ಅಂದಾಜಿಸಿದೆ. ಮ್ಯಾಟ್ರಿಝ್ ಸಮೀಕ್ಷೆಯು ಎನ್ ಡಿ ಎ ಗೆ 147-167 ಸ್ಥಾನಗಳನ್ನು ನೀಡಿದ್ದರೆ, ಮಹಾಘಟಬಂಧನ್ ಗೆ 70 ರಿಂದ 90 ಸ್ಥಾನಗಳು ಸಿಗಬಹುದು ಎಂದು ಹೇಳಿದೆ.
ಪೀಪಲ್ಸ್ ಇನ್ಸೈಟ್ ಎನ್ ಡಿ ಎ ಗೆ 133-159, ಮಹಾಘಟಬಂಧನ್ ಗೆ 75-101 ಎಂದು ಸಮೀಕ್ಷೆ ಮಾಡಿದೆ. ಪೀಪಲ್ಸ್ ಪಲ್ಸ್ ಎನ್ ಡಿ ಎ ಗೆ 145-160, ಮಹಾಘಟಬಂಧನ್ ಗೆ 73-91 ಸ್ಥಾನಗಳು ಸಿಗಬಹುದು ಎಂದು ಅಂದಾಜಿಸಿದೆ. ಚಾಣಕ್ಯ ಸಮೀಕ್ಷೆಯು ಎನ್ ಡಿ ಎ ಗೆ 130-138 ಸ್ಥಾನಗಳನ್ನು ಅಂದಾಜಿಸಿದೆ. ಮಹಾಘಟಬಂಧನ್ 100-108 ಸ್ಥಾನ ಪಡೆಯಬಹುದು ಎಂದು ಹೇಳಿದೆ.