×
Ad

ಮಣಿಪುರ | ಮೈತೈ ಸಮುದಾಯದ ನಾಯಕನ ಬಂಧನ ಖಂಡಿಸಿ ತೀವ್ರಗೊಂಡ ಪ್ರತಿಭಟನೆ : ಐದು ಜಿಲ್ಲೆಗಳಲ್ಲಿ ಇಂಟರ್‌ನೆಟ್‌ ಸ್ಥಗಿತ

Update: 2025-06-08 13:08 IST

Photo | NDTV

ಇಂಫಾಲ್ : ಮಣಿಪುರದ ರಾಜಧಾನಿ ಇಂಫಾಲ್‌ನಲ್ಲಿ ಮೈತೈ ಸಮುದಾಯದ ಅರಾಂಬಾಯಿ ತೆಂಗೋಲ್ (Arambai Tenggol) ಸಂಘಟನೆಯ ನಾಯಕನ ಬಂಧನವನ್ನು ಖಂಡಿಸಿ ನಡೆಯುತ್ತಿರುವ ಪ್ರತಿಭಟನೆ ತೀವ್ರಗೊಂಡಿದೆ. ಗುಂಪೊಂದು ತಲೆಗೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚುವುದಾಗಿ ಬೆದರಿಕೆ ಹಾಕಿದೆ.

ಮಣಿಪುರ ಸಂಘರ್ಷಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಅರಾಂಬಾಯಿ ತೆಂಗೋಲ್ ನಾಯಕ ಕಾನನ್ ಸಿಂಗ್ ಅವರನ್ನು ಭದ್ರತಾ ಪಡೆಗಳು ಬಂಧಿಸಿದೆ. ಇದರ ಬೆನ್ನಲ್ಲೇ ಶನಿವಾರ ರಾತ್ರಿ ಮಣಿಪುರದಲ್ಲಿ ಪ್ರತಿಭಟನೆಗಳು ಭುಗಿಲೆದ್ದಿದೆ.

ಪ್ರತಿಭಟನಾಕಾರರು ರಸ್ತೆಯಲ್ಲಿ ಟೈರ್‌ಗಳನ್ನು ಸುಟ್ಟು ರಸ್ತೆ ತಡೆ ನಡೆಸಿದರು. ಈ ಪ್ರದೇಶದಲ್ಲಿ ಮತ್ತೆ ಗುಂಡಿನ ಶಬ್ಧ ಕೇಳಿಸಿದೆ ಎಂದು ಕೆಲ ಇಂಫಾಲ್ ನಿವಾಸಿಗಳು ಹೇಳಿದ್ದಾರೆ.

ಪ್ರತಿಭಟನೆಯ ವೀಡಿಯೊವೊಂದು ವೈರಲ್ ಆಗಿದೆ. ಅದರಲ್ಲಿ ಕಪ್ಪು ಟೀ ಶರ್ಟ್ ಧರಿಸಿದ ಯುವಕರ ಗುಂಪೊಂದು ಕೈಯ್ಯಲ್ಲಿ ಪೆಟ್ರೋಲ್ ಬಾಟಲಿಗಳನ್ನು ಹಿಡಿದಿರುವುದು ಕಂಡುಬಂದಿದೆ. ʼನಾವು ಶಸ್ತ್ರಾಸ್ತ್ರಗಳನ್ನು ತ್ಯಜಿಸಿದ್ದೇವೆ. ಪ್ರವಾಹದ ಸಮಯದಲ್ಲಿ ನೀವು ಮಾಡಬೇಕಾದದ್ದನ್ನು ನಾವು ಮಾಡಿದ್ದೇವೆ. ಈಗ ನೀವು ನಮ್ಮನ್ನು ಬಂಧಿಸುತ್ತಿದ್ದೀರಿ. ನಾವು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆʼ ಎಂದು ಪ್ರತಿಭಟನಾಕಾರನೋರ್ವ ಹೇಳುವುದು ವೀಡಿಯೊದಲ್ಲಿ ಸೆರೆಯಾಗಿದೆ.

2024ರ ಫೆಬ್ರವರಿಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮೊಯಿರಾಂಗ್ಥೆಮ್ ಅಮಿತ್ ನಿವಾಸದ ಮೇಲೆ ದಾಳಿ ಮತ್ತು ನಂತರ ಹಿರಿಯ ಪೊಲೀಸ್ ಅಧಿಕಾರಿಯ ಅಪಹರಣ ಪ್ರಕರಣದಲ್ಲಿ ಕಾನನ್ ಸಿಂಗ್ ಪ್ರಮುಖ ಆರೋಪಿಯಾಗಿದ್ದಾನೆ ಎಂದು ಹೇಳಲಾಗಿದೆ.

ಪ್ರತಿಭಟನೆಯ ಹಿನ್ನೆಲೆ ಬಿಷ್ಣುಪುರ, ಇಂಫಾಲ್ ಪಶ್ಚಿಮ, ಇಂಫಾಲ್ ಪೂರ್ವ, ತೌಬಲ್ ಮತ್ತು ಕಾಕ್ಚಿಂಗ್ ಜಿಲ್ಲೆಗಳಲ್ಲಿ ಐದು ದಿನಗಳವರೆಗೆ ಕರ್ಫ್ಯೂ ವಿಧಿಸಲಾಗಿದೆ ಮತ್ತು ಇಂಟರ್‌ನೆಟ್‌ ಸೇವೆ ಸ್ಥಗಿತಗೊಳಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News