ಬಿಹಾರ | ಸಸಾರಾಂನಿಂದ ರಾಹುಲ್ ಗಾಂಧಿ ನೇತೃತ್ವದಲ್ಲಿ ‘ವೋಟ್ ಅಧಿಕಾರ ಯಾತ್ರಾ’ ಪ್ರಾರಂಭ
Photo | PTI
ಪಾಟ್ನಾ: ಕಾಂಗ್ರೆಸ್ ನಾಯಕ ಹಾಗೂ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಸಸಾರಾಂನಲ್ಲಿ ‘ವೋಟ್ ಅಧಿಕಾರ ಯಾತ್ರಾ’ಗೆ ಚಾಲನೆ ನೀಡಿದರು.
ಬಿಹಾರ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆ ಮೂಲಕ ಮತಪಟ್ಟಿಯಲ್ಲಿನ ಅಕ್ರಮ ಹಾಗೂ ಚುನಾವಣೆಯಲ್ಲಿನ ಲೋಪದೋಷಗಳ ಕುರಿತು ಅವರು ಈ ಯಾತ್ರೆಯಲ್ಲಿ ಪ್ರಶ್ನಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಸಸಾರಾಂ ಬಳಿಯ ಸೌರಾ ಏರೋಡ್ರಮ್ ಮೈದಾನದಲ್ಲಿ ಹಮ್ಮಿಕೊಂಡಿರುವ ಸಾರ್ವಜನಿಕ ಸಭೆಯಲ್ಲಿ ರಾಹುಲ್ ಗಾಂಧಿ ಭಾಗವಹಿಸಿದ್ದಾರೆ. ನಂತರ ಆದಿವಾಸಿ ಸಮುದಾಯದ ಜನರನ್ನು ಭೇಟಿಯಾಗಲಿದ್ದಾರೆ. ರವಿವಾರ ಸಂಜೆ ಡಹ್ರಿ-ಆನ್-ಸೋನ್ ಬಳಿಯಿಂದ ರೋಡ್ ಶೋ ನಡೆಸಿ ಪಾದಯಾತ್ರೆಗೆ ಚಾಲನೆ ನೀಡಲಿದ್ದಾರೆ.
ಚುನಾವಣಾ ಸುಧಾರಣೆಯಲ್ಲಿನ ಲೋಪದೋಷ ಹಾಗೂ ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆಯಲ್ಲಿನ ಅಕ್ರಮದ ಕುರಿತು ತಮ್ಮ 16 ದಿನಗಳ ಪಾದಯಾತ್ರೆಯಲ್ಲಿ ಪ್ರಶ್ನೆಸಲಿರುವ ರಾಹುಲ್ ಗಾಂಧಿ, ಸೆಪ್ಟೆಂಬರ್ 1ರಂದು ಪಾಟ್ನಾದಲ್ಲಿ ಆಯೋಜನೆಗೊಂಡಿರುವ ಬೃಹತ್ ಸಮಾವೇಶದಲ್ಲಿ ಈ ಪಾದಯಾತ್ರೆಯನ್ನು ಮುಕ್ತಾಯಗೊಳಿಸಲಿದ್ದಾರೆ. ಈ ಪಾದಯಾತ್ರೆಯಲ್ಲಿ ಇಂಡಿಯಾ ಮೈತ್ರಿಕೂಟದ ನಾಯಕರಾದ ಆರ್‌ಜೆಡಿಯ ತೇಜಸ್ವಿ ಯಾದವ್, ಸಿಪಿಐ-ಎಂಎಲ್ ನ ದೀಪಂಕರ್ ಭಟ್ಟಾಚಾರ್ಯ ಪಾಲ್ಗೊಳ್ಳುವ ನಿರೀಕ್ಷೆ ಇದೆ.
ಈ ಪಾದಯಾತ್ರೆಯು ಗಯಾ, ನವಡ, ಶೇಖ್ ಪುರ್, ಲಖಿಸರಾಯಿ, ಮುಂಗೇರ್, ಕಟಿಹಾರ್, ಪುರ್ನಿಯಾ, ಸುಪೌಲ್, ಮಧುಬನಿ, ದರ್ಭಾಂಗ, ಸೀತಾಮಾರ್ಹಿ, ಪಶ್ಚಿಮ ಚಂಪಾರಣ್, ಸರಣ್, ಭೋಜ್ ಪುರ್ ಹಾಗೂ ಪಾಟ್ನಾ ಜಿಲ್ಲೆಗಳಲ್ಲಿ ಸಾಗಲಿದೆ. ಸೆಪ್ಟೆಂಬರ್ 1ರಂದು ಪಟ್ನಾದ ಗಾಂಧಿ ಮೈದಾನದಲ್ಲಿ ಬೃಹತ್ ವೋಟರ್ ಅಧಿಕಾರ್ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದ್ದು, ಈ ಸಮಾವೇಶದಲ್ಲಿ ಇಂಡಿಯಾ ಮೈತ್ರಿಕೂಟದ ನಾಯಕರು ಭಾಗವಹಿಸಲಿದ್ದಾರೆ.