ಮೂವರು ಅಪ್ರಾಪ್ತ ವಯಸ್ಕರಿಂದ ಅತ್ಯಾಚಾರ: 14ರ ಬಾಲಕಿ ಆತ್ಮಹತ್ಯೆ
ಮೀರಠ್: ಉತ್ತರ ಪ್ರದೇಶದ ಬುಲಂದರ್‌ಶಾ ಜಿಲ್ಲೆಯಲ್ಲಿ ಮೂವರು ಅಪ್ರಾಪ್ತ ವಯಸ್ಸಿನ ಯುವಕರಿಂದ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದ 14 ವರ್ಷದ ಬಾಲಕಿಯೊಬ್ಬಳು ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಬೆಳಕಿಗೆ ಬಂದಿದೆ.
ಆರೋಪಿಗಳು 13 ರಿಂದ 17 ವರ್ಷದವರು ಎಂದು ಪೊಲೀಸರು ಹೇಳಿದ್ದಾರೆ. ಜೂನ್ 28ರಂದು ಬಾಲಾಪರಾಧಿಗಳು ಸಂತ್ರಸ್ತೆ ಬಾಲಕಿಯನ್ನು ಹಾಗೂ ಆಕೆಯ ಮೂರೂವರೆ ವರ್ಷದ ತಮ್ಮನನ್ನು ಬೈಕ್ ಸವಾರಿಗೆ ಕರೆದೊಯ್ದು ಈ ಕೃತ್ಯ ಎಸಗಿದ್ದಾರೆ. ಬೈಕ್ ಸವಾರಿ ನೆಪದಲ್ಲಿ ಬಾಲಕಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಮನೆಗೆ ಬಂದ ಬಳಿಕ ಬಾಲಕಿ ತನ್ನ ತಾಯಿಯಲ್ಲಿ ಘಟನೆಯನ್ನು ವಿವರಿಸಿದ್ದಾಳೆ. ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ ಹಿನ್ನೆಲೆಯಲ್ಲಿ ಬಾಲಾಪರಾಧಿಗಳ ವಿರುದ್ಧ ಭಾರತೀಯ ನ್ಯಾಯಸಂಹಿತೆ ಸೆಕ್ಷನ್ 70 (2) ಮತ್ತು ಪೋಕ್ಸೋ ಕಾಯ್ದೆಯ ಸೆಕ್ಷನ್ 5/6 ಅನ್ವಯ ಪ್ರಕರಣ ದಾಖಲಿಸಲಾಗಿದೆ. ಮೂವರ ಪೈಕಿ ಒಬ್ಬನನ್ನು ಬಾಲಾಪರಾಧಿ ಗೃಹಕ್ಕೆ ಕಳುಹಿಸಲಾಗಿದ್ದು, ಇಬ್ಬರು ತಲೆಮರೆಸಿಕೊಂಡಿದ್ದಾರೆ.
ಬಾಲಕಿಯ ತಾಯಿ ಮಂಗಳವಾರ ಬೆಳಿಗ್ಗೆ ಮಗಳನ್ನು ಮನೆಯಲ್ಲೇ ಬಿಟ್ಟು ಕೆಲಸಕ್ಕೆ ಹೋಗಿದ್ದರು. ಸಂಜೆ ವಾಪಸ್ಸಾದಾಗ ಮನೆಗೆ ಒಳಗಿನಿಂದ ಬೀಗ ಹಾಕಿರುವುದು ಪತ್ತೆಯಾಗಿದ್ದು, ಪದೇ ಪದೇ ಬಾಗಿಲು ಬಡಿದರೂ ತೆರೆಯಲಿಲ್ಲ ಅಥವಾ ಯಾವುದೇ ಪ್ರತಿಕ್ರಿಯೆ ಇರಲಿಲ್ಲ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ವಿವರಿಸಿದ್ದಾರೆ. ಪಕ್ಕದ ಮನೆಯ ಛಾವಣಿಯ ಮೂಲಕ ಮನೆ ಪ್ರವೇಶಿಸಿದಾಗ ಬಾಲಕಿ ನೇಣು ಬಿಗಿದು ಆತ್ಮಹತ್ಯೆ ಮಾಡಿರುವುದು ಪತ್ತೆಯಾಗಿದೆ.
"ಅತ್ಯಾಚಾರದ ಬಳಿಕ ಆಘಾತಕ್ಕೆ ಒಳಗಾಗಿದ್ದ ಬಾಲಕಿ ಹಲವು ದಿನಗಳಿಂದ ಮೌನವಾಗಿದ್ದಳು ಹಾಗೂ ಮನೆಯಲ್ಲೇ ಉಳಿದುಕೊಂಡಿದ್ದಳು. ಆಕೆಗೆ ತೀವ್ರ ಮಾನಸಿಕ ಒತ್ತಡ ಇತ್ತು" ಎಂದು ಸಂಬಂಧಿಕರು ವಿವರಿಸಿದ್ದಾರೆ.
"ಮಹಿಳೆ ತನ್ನ ಮಗನನ್ನು ಸಂಬಂಧಿಕರ ಮನೆಯಲ್ಲಿ ಬಿಟ್ಟು, ಬಾಲಕಿಯನ್ನು ಮಾತ್ರ ಮನೆಯಲ್ಲಿ ಬಿಟ್ಟುಹೋಗಿದ್ದರು. ಈ ಬಗ್ಗೆ ತನಿಖೆ ನಡೆಯುತ್ತಿದೆ. ಯಾವುದೇ ಆತ್ಮಹತ್ಯೆ ಟಿಪ್ಪಣಿ ಪತ್ತೆಯಾಗಿಲ್ಲ. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಕುಟುಂಬಕ್ಕೆ ನೀಡಲಾಗಿದೆ" ಎಂದು ವೃತ್ತ ನಿರೀಕ್ಷಕ ಅಧಿಕಾರಿ ಪೂರ್ಣಿಮಾ ಸಿಂಗ್ ಹೇಳಿದ್ದಾರೆ.