2005ರಂತೆ 2025ರಲ್ಲೂ ಮುಸ್ಲಿಮರೊಬ್ಬರನ್ನು ಸಿಎಂ ಮಾಡುವುದಕ್ಕೆ ಆರ್‌ಜೆಡಿ ಸಿದ್ಧವಿಲ್ಲ: ಚಿರಾಗ್ ಪಾಸ್ವಾನ್ ಟೀಕೆ
ಚಿರಾಗ್ ಪಾಸ್ವಾನ್ (Photo: PTI)
ಹೊಸದಿಲ್ಲಿ: ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮುಸ್ಲಿಮರಿಗೆ ಅರ್ಥಪೂರ್ಣ ರಾಜಕೀಯ ಪ್ರಾತಿನಿಧ್ಯ ನೀಡುವಲ್ಲಿ ರಾಷ್ಟ್ರೀಯ ಜನತಾ ದಳ (RJD) ವಿಫಲವಾಗಿದೆ ಎಂದು ಲೋಕ್ ಜನಶಕ್ತಿ ಪಕ್ಷದ ನಾಯಕ ಚಿರಾಗ್ ಪಾಸ್ವಾನ್ ಟೀಕಿಸಿದ್ದಾರೆ.
ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಹಾಗೂ ವಿಕಾಸ್ ಶೀಲ್ ಇನ್ಸಾನ್ ಪಕ್ಷದ ವರಿಷ್ಠ ಮುಕೇಶ್ ಸಹಾನಿ ಅವರನ್ನು ಉಪ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಮಹಾಘಟಬಂಧನ್ ಘೋಷಿಸಿದ ಬೆನ್ನಿಗೇ, ಅವರಿಂದ ಈ ಹೇಳಿಕೆ ಹೊರ ಬಿದ್ದಿದೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಚಿರಾಗ್ ಪಾಸ್ವಾನ್, “ಲೋಕ್ ಜನಶಕ್ತಿ ಪಕ್ಷದ ಸಂಸ್ಥಾಪಕರಾದ ನನ್ನ ತಂದೆ ರಾಮ್ ವಿಲಾಸ್ ಪಾಸ್ವಾನ್ ಅವರು ಮುಸ್ಲಿಮರೊಬ್ಬರನ್ನು ಮುಖ್ಯಮಂತ್ರಿ ಮಾಡಲು ತಮ್ಮ ಸ್ವಂತ ಪಕ್ಷವನ್ನೇ ತ್ಯಾಗ ಮಾಡಿದ್ದರು” ಎಂದು ಸ್ಮರಿಸಿದ್ದಾರೆ.
ಆಗ ಮುಸ್ಲಿಂ ಶಾಸಕರೊಬ್ಬರು ಮುಖ್ಯಮಂತ್ರಿ ಆಗುವುದನ್ನು ಆರ್‌ಜೆಡಿ ಬೆಂಬಲಿಸಿರಲಿಲ್ಲ ಹಾಗೂ ಈಗಲೂ ಕೂಡಾ ಮುಸ್ಲಿಮರಿಗೆ ನ್ಯಾಯಯುತ ಪಾಲು ನೀಡಲು ಅದು ಬಯಸುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ.
“ಮುಸ್ಲಿಮರೊಬ್ಬರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ನಮ್ಮ ತಂದೆ ದಿವಂಗತ ರಾಮ್ ವಿಲಾಸ್ ಪಾಸ್ವಾನ್ ಅವರು ತಮ್ಮ ಸ್ವಂತ ಪಕ್ಷವನ್ನೇ ತ್ಯಾಗ ಮಾಡಿದ್ದರು. ಆಗಲೂ ಕೂಡಾ ಆರ್‌ಜೆಡಿ ನಮ್ಮ ತಂದೆಗೆ ಬೆಂಬಲ ನೀಡಿರಲಿಲ್ಲ. 2005ರಲ್ಲೂ ಮುಸ್ಲಿಮರೊಬ್ಬರು ಮುಖ್ಯಮಂತ್ರಿಯಾಗಲು ಆರ್‌ಜೆಡಿ ಸಿದ್ಧವಿರಲಿಲ್ಲ, 2025ರಲ್ಲೂ ಕೂಡಾ ಮುಸ್ಲಿಮರೊಬ್ಬರು ಮುಖ್ಯಮಂತ್ರಿ ಅಥವಾ ಉಪ ಮುಖ್ಯಮಂತ್ರಿಯನ್ನಾಗಿಸಲು ಸಿದ್ಧವಿಲ್ಲ!” ಎಂದು ಅವರು ದೂರಿದ್ದಾರೆ.
“ನೀವು ಜೀತದ ಮತ ಬ್ಯಾಂಕ್ ಆಗಿಯೇ ಉಳಿದರೆ, ನೀವೇಗೆ ಗೌರವ ಮತ್ತು ಪ್ರಾತಿನಿಧ್ಯ್ವನ್ನು ಪಡೆಯುತ್ತೀರಿ?” ಎಂದೂ ಅವರು ಮುಸ್ಲಿಂ ಮತದಾರರನ್ನು ಪ್ರಶ್ನಿಸಿದ್ದಾರೆ.