ಕೇರಳ | 2011ರ ಸೌಮ್ಯಾ ಅತ್ಯಾಚಾರ, ಕೊಲೆ ಪ್ರಕರಣದ ಅಪರಾಧಿ ಕಣ್ಣೂರು ಜೈಲಿನಿಂದ ಪರಾರಿ
Photo | indiatoday
ಕಣ್ಣೂರು : 2011ರ ಸೌಮ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅಪರಾಧಿ ಗೋವಿಂದಚಾಮಿ ಕೇರಳದ ಕಣ್ಣೂರು ಕೇಂದ್ರ ಕಾರಾಗೃಹದಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸರು ಶುಕ್ರವಾರ ದೃಢಪಡಿಸಿದ್ದಾರೆ.
ಬೆಳಗಿನ ಜಾವ ತಪಾಸಣೆ ನಡೆಸುತ್ತಿದ್ದಾಗ ಜೈಲು ಅಧಿಕಾರಿಗಳಿಗೆ ಗೋವಿಂದಚಾಮಿ ನಾಪತ್ತೆಯಾಗಿರುವುದು ಕಂಡು ಬಂದಿದೆ. ಜೈಲು ಅಧಿಕಾರಿಗಳು ತಕ್ಷಣ ಜೈಲು ಆವರಣದ ಸುತ್ತಮುತ್ತ ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಆದರೆ, ಆತ ಎಲ್ಲಿಯೂ ಪತ್ತೆಯಾಗಲಿಲ್ಲ. ಆತನಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಕಣ್ಣೂರು ಪಟ್ಟಣ ಪೊಲೀಸರು ತಿಳಿಸಿದ್ದಾರೆ.
2011ರ ಫೆಬ್ರವರಿ 1ರಂದು ಎರ್ನಾಕುಲಂನಿಂದ ಶೋರನೂರಿಗೆ ತೆರಳುತ್ತಿದ್ದ ರೈಲಿನಲ್ಲಿ ಒಂಟಿಯಾಗಿ ಪ್ರಯಾಣಿಸುತ್ತಿದ್ದಾಗ ಮಂಜಕ್ಕಾಡ್ ನಿವಾಸಿ 23ರ ಹರೆಯದ ಸೌಮ್ಯಾ ಅವರನ್ನು ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿತ್ತು.
ಗೋವಿಂದಚಾಮಿ ತಪ್ಪಿಸಿಕೊಂಡಿದ್ದೇಗೆ ಎಂಬ ಬಗ್ಗೆ ಅಧಿಕಾರಿಗಳು ಇನ್ನೂ ದೃಢಪಡಿಸಿಲ್ಲ.
ಸೌಮ್ಯಾ ತಾಯಿ ಗೋವಿಂದಚಾಮಿ ನಾಪತ್ತೆ ಬಗ್ಗೆ ಆಘಾತವನ್ನು ವ್ಯಕ್ತಪಡಿಸಿದ್ದಾರೆ. ʼಕಣ್ಣೂರು ಜೈಲು ಬಹಳ ದೊಡ್ಡದಾಗಿದೆ. ಅಲ್ಲಿಂದ ಅವನು ಹೇಗೆ ಹಾರಿ ತಪ್ಪಿಸಿಕೊಳ್ಳಲು ಸಾಧ್ಯ? ಯಾವುದೇ ಬೆಂಬಲವಿಲ್ಲದೆ ಅವನು ಪರಾರಿಯಾಗಲು ಸಾಧ್ಯವಿಲ್ಲ. ಒಳಗಿನಿಂದ ಯಾರೋ ಅವನಿಗೆ ಸಹಾಯ ಮಾಡಿದ್ದಾರೆ. ಅವನನ್ನು ತಕ್ಷಣ ಪತ್ತೆ ಹಚ್ಚಬೇಕು. ಅವನು ಇನ್ನೂ ಕಣ್ಣೂರು ಬಿಟ್ಟು ಹೋಗಿಲ್ಲ ಎಂದು ನಾನು ಭಾವಿಸುತ್ತೇನೆʼ ಎಂದು ಹೇಳಿದರು.