×
Ad

ರೊಹಿಂಗ್ಯಾ ನಿರಾಶ್ರಿತರಿಗೆ ಸರಕಾರಿ ಶಾಲೆ, ಆಸ್ಪತ್ರೆಗಳಿಗೆ ಪ್ರವೇಶ ಕೋರಿಕೆ : ನಾಳೆ ಸುಪ್ರೀಂ ಕೋರ್ಟ್ ವಿಚಾರಣೆ

Update: 2025-02-09 20:55 IST

ಸುಪ್ರೀಂ ಕೋರ್ಟ್ | PC : PTI 

ಹೊಸದಿಲ್ಲಿ: ದಿಲ್ಲಿಯಲ್ಲಿ ವಾಸಿಸುತ್ತಿರುವ ರೊಹಿಂಗ್ಯಾ ನಿರಾಶ್ರಿತರಿಗೆ ಸರಕಾರಿ ಶಾಲೆಗಳು ಮತ್ತು ಆಸ್ಪತ್ರೆಗಳಿಗೆ ಪ್ರವೇಶ ನೀಡುವಂತೆ ಕೇಂದ್ರ ಮತ್ತು ದಿಲ್ಲಿ ಸರಕಾರಗಳಿಗೆ ನಿರ್ದೇಶನ ನೀಡುವಂತೆ ಕೋರಿ ಸರಕಾರೇತರ ಸಂಘಟನೆಯೊಂದು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಸೋಮವಾರ ಕೈಗೆತ್ತಿಕೊಳ್ಳಲಿದೆ. ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಎನ್. ಕೋಟೀಶ್ವರ್ ಸಿಂಗ್ ಅವರನ್ನೊಳಗೊಂಡ ವಿಭಾಗೀಯ ಪೀಠವೊಂದು ಅರ್ಜಿಯ ವಿಚಾರಣೆ ನಡೆಸಲಿದೆ.

ರೊಹಿಂಗ್ಯಾ ನಿರಾಶ್ರಿತರು ದಿಲ್ಲಿಯಲ್ಲಿ ಎಲ್ಲಿ ನೆಲೆಸಿದ್ದಾರೆ ಮತ್ತು ಅವರಿಗೆ ಸಿಗುತ್ತಿರುವ ಸೌಲಭ್ಯಗಳ ಬಗ್ಗೆ ನ್ಯಾಯಲಯಕ್ಕೆ ಮಾಹಿತಿ ನೀಡುವಂತೆ ಸುಪ್ರೀಂ ಕೋರ್ಟ್ ಜನವರಿ 31ರಂದು ರೊಹಿಂಗ್ಯಾ ಹ್ಯೂಮನ್ ರೈಟ್ಸ್ ಇನಿಶಿಯೇಟಿವ್ ಎಂಬ ಎನ್‌ಜಿಒಗೆ ಸೂಚಿಸಿತ್ತು.

ದಿಲ್ಲಿಯಲ್ಲಿ ರೊಹಿಂಗ್ಯಾ ನಿರಾಶ್ರಿತರು ಎಲ್ಲೆಲ್ಲಿ ನೆಲೆಸಿದ್ದಾರೆ ಎಂಬ ಬಗ್ಗೆ ಅಫಿದಾವಿತ್ ಸಲ್ಲಿಸುವಂತೆ ನ್ಯಾಯಾಲಯವು ಎನ್‌ಜಿಒವನ್ನು ಪ್ರತಿನಿಧಿಸುವ ಹಿರಿಯ ವಕೀಲ ಕಾಲಿನ್ ಗೊನ್ಸಾಲ್ವಿಸ್‌ರಿಗೆ ಸೂಚಿಸಿತ್ತು.

ಆಧಾರ್ ಕಾರ್ಡ್ ಇಲ್ಲದ ಕಾರಣಕ್ಕಾಗಿ ರೊಹಿಂಗ್ಯಾ ನಿರಾಶ್ರಿತರಿಗೆ ಸರಕಾರಿ ಶಾಲೆಗಳು ಮತ್ತು ಆಸ್ಪತ್ರೆಗಳಿಗೆ ಪ್ರವೇಶ ನಿರಾಕರಿಸಲಾಗುತ್ತಿರುವುದರಿಂದ, ಅವರಿಗೆ ಪ್ರವೇಶ ನೀಡಬೇಕೆಂದು ಎನ್‌ಜಿಒ ಕೋರುತ್ತಿದೆ ಎಂದು ಗೊನ್ಸಾಲ್ವಿಸ್ ಹೇಳಿದ್ದರು.

‘‘ಅವರು ಯುಎನ್‌ಎಚ್‌ಸಿಆರ್ (ವಿಶ್ವಸಂಸ್ಥೆಯ ನಿರಾಶ್ರಿತರ ಹೈಕಮಿಶನರ್) ಕಾರ್ಡ್‌ಗಳನ್ನು ಹೊಂದಿರುವ ನಿರಾಶ್ರಿತರಾಗಿದ್ದಾರೆ. ಹಾಗಾಗಿ, ಅವರು ಆಧಾರ್ ಕಾರ್ಡ್‌ಗಳನ್ನು ಹೊಂದುವಂತಿಲ್ಲ. ಆದರೆ, ಆಧಾರ್ ಕಾರ್ಡ್ ಇಲ್ಲದ ಕಾರಣಕ್ಕಾಗಿ ಅವರಿಗೆ ಸರಕಾರಿ ಶಾಲೆಗಳು ಮತ್ತು ಆಸ್ಪತ್ರೆಗಳಿಗೆ ಪ್ರವೇಶ ನೀಡುತ್ತಿಲ್ಲ’’ ಎಂದು ಅವರು ಹೇಳಿದ್ದರು.

ರೊಹಿಂಗ್ಯಾ ಮಕ್ಕಳಿಗೆ ಸರಕಾರಿ ಶಾಲೆಗಳಿಗೆ ಉಚಿತ ಪ್ರವೇಶ ನೀಡಬೇಕು, ಆಧಾರ್ ಕಾರ್ಡ್ ಇಲ್ಲದೆ ಪರೀಕ್ಷೆ ಬರೆಯಲು ಅವರಿಗೆ ಅವಕಾಶ ನೀಡಬೇಕು ಹಾಗೂ ರೊಹಿಂಗ್ಯಾ ಕುಟುಂಬಗಳಿಗೆ ಉಚಿತ ಆರೋಗ್ಯಸೇವೆ, ರಿಯಾಯಿತಿ ದರದಲ್ಲಿ ಆಹಾರ ಮತ್ತು ಆಹಾರ ಭದ್ರತಾ ಕಾಯ್ದೆಯಡಿ ಬರುವ ಸೌಲಭ್ಯಗಳನ್ನು ಒದಗಿಸಬೇಕು ಎಂದು ಎನ್‌ಜಿಒ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಕೋರಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News