ವಿಚಾರಣಾಧೀನ ಕೈದಿಗಳಿಗೆ ಮತದಾನದ ಹಕ್ಕು ಕೋರಿ ಅರ್ಜಿ : ಕೇಂದ್ರ, ಚುನಾವಣಾ ಆಯೋಗದ ಪ್ರತಿಕ್ರಿಯೆ ಕೇಳಿದ ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್ |Photo Credit ; sci.gov.in
ಹೊಸದಿಲ್ಲಿ, ಅ. 10: ದೇಶಾದ್ಯಂತ ಕಾರಾಗೃಹದಲ್ಲಿರುವ ಸುಮಾರು 4.5 ಲಕ್ಷ ವಿಚಾರಣಾಧೀನ ಕೈದಿಗಳ ಮತದಾನದ ಹಕ್ಕನ್ನು ಗುರುತಿಸಲು ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಕುರಿತು ಸುಪ್ರೀಂ ಕೋರ್ಟ್ ಶುಕ್ರವಾರ ಕೇಂದ್ರ ಸರಕಾರ ಹಾಗೂ ಚುನಾವಣಾ ಆಯೋಗದ ಪ್ರತಿಕ್ರಿಯೆ ಕೋರಿದೆ.
ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಹಾಗೂ ನ್ಯಾಯಮೂರ್ತಿ ಕೆ.ವಿನೋದ್ ಚಂದ್ರನ್ ಅವರನ್ನು ಒಳಗೊಂಡ ಪೀಠ, 1951ರ ಪ್ರಜಾ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 62 (5) ಅಡಿ ವಿಧಿಸಲಾದ ಪ್ರಸಕ್ತ ನಿಷೇಧ ಸಾಂವಿಧಾನಿಕ ಖಾತರಿ ಹಾಗೂ ಅಂತಾರಾಷ್ಟ್ರೀಯ ಪ್ರಜಾಸತ್ತಾತ್ಮಕ ನಿಯಮವನ್ನು ಉಲ್ಲಂಘಿಸುತ್ತದೆ ಎಂದು ನ್ಯಾಯವಾದಿ ಪ್ರಶಾಂತ್ ಭೂಷಣ್ ಅವರ ಪ್ರತಿಪಾದನೆಯನ್ನು ಗಮನಕ್ಕೆ ತೆಗೆದುಕೊಂಡಿತು.
ಪಂಜಾಬ್‌ನ ಪಾಟಿಯಾಲದ ನಿವಾಸಿ ಸುನಿತಾ ಶರ್ಮಾ ಸಲ್ಲಿಸಿದ ಈ ಅರ್ಜಿಯಲ್ಲಿ ಕಾನೂನು ಹಾಗೂ ನ್ಯಾಯ ಸಚಿವಾಲಯ, ಚುನಾವಣಾ ಆಯೋಗದ ಮೂಲಕ ಕೇಂದ್ರ ಸರಕಾರವನ್ನು ಪ್ರತಿವಾದಿಯನ್ನಾಗಿ ಮಾಡಲಾಗಿದೆ.
ಚುನಾವಣಾ ಅಪರಾಧಗಳು ಅಥವಾ ಭ್ರಷ್ಟಾಚಾರಗಳಲ್ಲಿ ಶಿಕ್ಷೆಗೊಳಗಾಗದ ಕೈದಿಗಳು ತಮ್ಮ ಪ್ರಜಾಸತ್ತಾತ್ಮಕ ಮತದಾನದ ಹಕ್ಕನ್ನು ನಿರಂಕುಶವಾಗಿ ಕಸಿದುಕೊಳ್ಳದಂತೆ ನೋಡಿಕೊಳ್ಳಲು ನ್ಯಾಯಾಂಗದ ಹಸ್ತಕ್ಷೇಪವನ್ನು ಅರ್ಜಿ ಕೋರಿದೆ.