×
Ad

ಅತ್ಯಾಚಾರ ಆರೋಪದಲ್ಲಿ 13 ವರ್ಷ ಕಾನೂನು ಕ್ರಮ ಎದುರಿಸಿದ ಯುವಕನಿಗೆ ಸುಪ್ರೀಂಕೋರ್ಟ್ ರಕ್ಷಣೆ

Update: 2025-07-18 07:34 IST

ಹೊಸದಿಲ್ಲಿ: ಕಾಲೇಜು ವಿದ್ಯಾರ್ಥಿನಿಯೊಬ್ಬಳ ಜತೆ ಓಡಿಹೋಗಿ ಎರಡು ತಿಂಗಳ ಕಾಲ ಹೈದ್ರಾಬಾದ್ ನಲ್ಲಿ ಆಕೆಯ ಜತೆ ವಾಸವಿದ್ದ ಕಾರಣಕ್ಕೆ ಮುಂದಿನ 13 ವರ್ಷ ಕಾಲ ಬಾಲಕಿಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದಲ್ಲಿ ಪೊಲೀಸ್ ತನಿಖೆ ಎದುರಿಸಿ ವಿಚಾರಣಾ ನ್ಯಾಯಾಲಯ ಹಾಗೂ ತೆಲಂಗಾಣ ಹೈಕೋರ್ಟ್ ನಿಂದ ಶಿಕ್ಷೆಗೆ ಒಳಗಾದ ಯುವಕನಿಗೆ ಸುಪ್ರೀಂಕೋರ್ಟ್ ರಕ್ಷಣೆ ನೀಡಿದೆ.

ನ್ಯಾಯಮೂರ್ತಿಗಳಾದ ಸಂಜಯ್ ಕರೋಲ್ ಮತ್ತು ಸಂದೀಪ್ ಮೆಹ್ತಾ ಅವರನ್ನೊಳಗೊಂಡ ಪೀಠ, ಆರೋಪಿ ಯುವಕನನ್ನು ದೋಷಮುಕ್ತಗೊಳಿಸಿದ್ದು, ಈ ಜೋಡಿ ಪರಸ್ಪರ ಸಹಮತದ ಸಂಬಂಧ ಹೊಂದಿತ್ತು ಹಾಗೂ ಸ್ವ-ಇಚ್ಛೆಯಿಂದ ಓಡಿ ಹೋಗಿದ್ದರು ಎಂಬ ಅಭಿಪ್ರಾಯಕ್ಕೆ ಬಂದಿದೆ. ಇದಕ್ಕೂ ಮುನ್ನ ವಿಚಾರಣಾ ನ್ಯಾಯಾಲಯ ಯುವಕನಿಗೆ ಏಳು ವರ್ಷಗಳ ಕಠಿಣ ಶಿಕ್ಷೆ ವಿಧಿಸಿತ್ತು. ಹೈಕೋರ್ಟ್ ಇದನ್ನು ಎರಡು ವರ್ಷಕ್ಕೆ ಇಳಿಸಿತ್ತು.

ಆರೋಪಿ ಯುವಕ 2012ರ ಆಗಸ್ಟ್ 4ರಂದು ಸ್ನೇಹಿತನ ಸಹೋದರಿಯ ಜತೆ ಓಡಿಹೋಗಿದ್ದ. ಈ ಜೋಡಿ ಹೈದ್ರಾಬಾದ್ ನ ಶಾದ್ ನಗರದಲ್ಲಿ ನೆಲೆಸಿತ್ತು. ಯುವತಿಯ ತಾಯಿ ಆಗಸ್ಟ್ 8ರಂದು ನಾಪತ್ತೆ ಪ್ರಕರಣ ದಾಖಲಿಸಿದ್ದರು. ಅಕ್ಟೋಬರ್ 12ರಂದು ಯುವಕ ಬೈಕ್ ನಲ್ಲಿ ತೆರಳುತ್ತಿದ್ದಾಗ ಅಪಘಾತ ಸಂಭವಿಸಿ ಆತ ಆಸ್ಪತ್ರೆ ಸೇರಿದ. ಆಗ ಯುವತಿ ತನ್ನ ತವರು ಮನೆಗೆ ತೆರಳಿದಳು. ಆಕೆಯ ಹೇಳಿಕೆಯನ್ನು ಆಧರಿಸಿ ಪೊಲೀಸರು, ಯುವಕನ ವಿರುದ್ಧ ಅಪಹರಣ ಮತ್ತು ಅತ್ಯಾಚಾರ ಪ್ರಕರಣ ದಾಖಲಿಸಿದರು.

ವಿಚಾರಣಾ ನ್ಯಾಯಾಲಯದ ಎದುರು ಸಲ್ಲಿಸಿದ ಪುರಾವೆಗಳನ್ನು ವಿಶ್ಲೇಷಿಸಿದ ಸುಪ್ರೀಂಕೋರ್ಟ್ ಪೀಠ, "ಆರೋಪಿ ಯುವಕ ಬಲವಂತವಾಗಿ, ವಂಚನೆಯಿಂದ ಅಥವಾ ಪುಸಲಾಯಿಸಿ ಯುವತಿಯನ್ನು ಪೋಷಕರ ಮನೆಯಿಂದ ಕರೆಯೊಯ್ದ ಎನ್ನುವುದನ್ನು ಸಾಬೀತುಪಡಿಸುವುದಿಲ್ಲ" ಎಂದು ಸ್ಪಷ್ಟಪಡಿಸಿದೆ.

2012ರ ಆಗಸ್ಟ್ 4ರಂದು ಯುವಕನ ಜತೆ ಬೈಕ್ ನಲ್ಲಿ ಸ್ವ ಇಚ್ಛೆಯಿಂದ ಹೋಗಿದ್ದಾಗಿ ಯುವತಿ ಒಪ್ಪಿಕೊಂಡಿದ್ದಾಳೆ. ಆದರೆ ಯುವತಿಯ ತಾಯಿ ದೂರು ನೀಡಲು ನಾಲ್ಕು ದಿನ ವಿಳಂಬ ಮಾಡಿದ್ದೇಕೆ ಎಂಬ ಬಗ್ಗೆ ಕೋರ್ಟ್ ಅಚ್ಚರಿ ವ್ಯಕ್ತಪಡಿಸಿದೆ. ಯುವತಿ ಎರಡು ತಿಂಗಳ ಕಾಲ ಯುವಕನ ಜತೆ ಸ್ವ ಇಚ್ಛೆಯಿಂದ ವಾಸವಿದ್ದಳು. ಇದು ಪೊಲೀಸರು ಪ್ರತಿಪಾದಿಸಿರುವ ಅಪಹರಣ ಸಿದ್ಧಾಂತದ ಬಗ್ಗೆ ಸಂದೇಹಗಳನ್ನು ಸೃಷ್ಟಿಸುತ್ತದೆ ಎಂದು ಹೇಳಿದೆ.

ಅಪಘಾತದಿಂದ ಯುವಕ ಆಸ್ಪತ್ರೆ ಸೇರಿ ಎರಡು ದಿನಗಳ ಕಾಲ ಯುವತಿ ಆತನ ಜತೆಗಿದ್ದಳು ಎಂದು ಹೇಳಿದೆ. ಅತ್ಯಾಚಾರ ಆರೋಪದ ಬಗ್ಗೆ ಪ್ರತಿಕ್ರಿಯಿಸಿ, "ಈ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಲೈಂಗಿಕ ಕ್ರಿಯೆ ಬಗ್ಗೆ ಆಕೆ ಧನಾತ್ಮಕ ಹೇಳಿಕೆಯನ್ನು ನೀಡಿದ್ದಾಳೆ ಹಾಗೂ ಆಕೆಯ ಇಚ್ಛೆಗೆ ವಿರುದ್ಧವಾಗಿ ಲೈಂಗಿಕ ಕ್ರಿಯೆ ನಡೆದಿದೆ ಎಂಬ ಸುಳಿವನ್ನೂ ಆಕೆ ನೀಡಿಲ್ಲ" ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News