ಪುತ್ರ ತೇಜ್ ಪ್ರತಾಪ್ ಯಾದವ್ ರನ್ನು ಆರ್‌ಜೆಡಿ ಪಕ್ಷದಿಂದ ಉಚ್ಚಾಟಿಸಿದ ಲಾಲು ಪ್ರಸಾದ್ ಯಾದವ್
ತೇಜ್ ಪ್ರತಾಪ್ ಯಾದವ್ (Photo: PTI)
ಹೊಸದಿಲ್ಲಿ : ಆರ್‌ಜೆಡಿ ಪಕ್ಷದಿಂದ ತೇಜ್ ಪ್ರತಾಪ್ ಯಾದವ್ ಅವರನ್ನು 6 ವರ್ಷಗಳ ಕಾಲ ಪಕ್ಷದ ಸ್ಥಾಪಕ ಲಾಲು ಪ್ರಸಾದ್ ಯಾದವ್ ಉಚ್ಛಾಟಿಸಿದ್ದಾರೆ.
ಈ ಕುರಿತು ಎಕ್ಸ್‌ನಲ್ಲಿ ಲಾಲು ಪ್ರಸಾದ್ ಯಾದವ್ ಮಾಹಿತಿ ಹಂಚಿಕೊಂಡಿದ್ದಾರೆ. ಪಕ್ಷದ ನೈತಿಕ ಮೌಲ್ಯಗಳನ್ನು ಉಲ್ಲಂಘಿಸಿರುವುದರಿಂದ ಪುತ್ರ ತೇಜ್ ಪ್ರತಾಪ್ ಅವರನ್ನು ಪಕ್ಷದಿಂದ ಉಚ್ಚಾಟಿಸಿರುವುದಾಗಿ ಹೇಳಿದ್ದಾರೆ.
ಶನಿವಾರ ತೇಜ್ ಪ್ರತಾಪ್ ಯಾದವ್ ಫೇಸ್‌ಬುಕ್‌ನಲ್ಲಿ ಪೋಸ್ಟ್‌ವೊಂದನ್ನು ಮಾಡಿದ್ದರು, ಅದರಲ್ಲಿ ಇಬ್ಬರ ಫೋಟೋವನ್ನು ಪೋಸ್ಟ್ ಮಾಡಿ, ʼನಾನು ತೇಜ್ ಪ್ರತಾಪ್ ಯಾದವ್, ಮತ್ತು ಈ ಚಿತ್ರದಲ್ಲಿರುವ ಯುವತಿ ಅನುಷ್ಕಾ ಯಾದವ್, ನಾವು ಕಳೆದ 12 ವರ್ಷಗಳಿಂದ ಪರಸ್ಪರ ತಿಳಿದಿದ್ದೇವೆ, ಪ್ರೀತಿಸುತ್ತಿದ್ದೇವೆ ಮತ್ತು ಸಂಬಂಧದಲ್ಲಿದ್ದೇವೆ. ನಾನು ಇದನ್ನು ಎಲ್ಲರೊಂದಿಗೆ ಹಂಚಿಕೊಳ್ಳಲು ಬಯಸಿದ್ದೆ, ಆದರೆ ಹೇಗೆ ಎಂದು ತಿಳಿದಿರಲಿಲ್ಲ. ಇಂದು, ಈ ಪೋಸ್ಟ್ ಮೂಲಕ ಹಂಚಿಕೊಳ್ಳಲು ನಾನು ಧೈರ್ಯವನ್ನು ಪಡೆದಿದ್ದೇನೆ. ನೀವು ನನ್ನನ್ನು ಅರ್ಥಮಾಡಿಕೊಳ್ಳುತ್ತೀರಿ ಎಂದು ನಾನು ಭಾವಿಸುತ್ತೇನೆ ಎಂದು ಬರೆದಿದ್ದರು.
ಈ ಕುರಿತು ವಿಭಿನ್ನ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದಂತೆ ಫೇಸ್ ಬುಕ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ, ಫೋಟೋಗಳನ್ನು ಎಡಿಟ್ ಮಾಡಿ ನನ್ನ ಮತ್ತು ಕುಟುಂಬದ ಮಾನಹಾನಿ ಮಾಡಲಾಗಿದೆ ಎಂದು ತೇಜ್ ಪ್ರತಾಪ್ ಯಾದವ್ ಹೇಳಿದ್ದರು.
ತೇಜ್‌ಪ್ರತಾಪ್ ಅವರಿಗೆ 2018ರಲ್ಲಿ ಬಿಹಾರದ ಮಾಜಿ ಮಂತ್ರಿ ಚಂದ್ರಿಕಾ ರಾಯ್ ಅವರ ಮಗಳು ಐಶ್ವರ್ಯಾ ರಾಯ್ ಅವರೊಂದಿಗೆ ವಿವಾಹವಾಗಿತ್ತು. ಆ ಬಳಿಕ ಅವರು ವಿಚ್ಛೇದನ ಪಡೆದುಕೊಂಡಿದ್ದರು.