ಮಹಾರಾಷ್ಟ್ರದಲ್ಲಿ ಕ್ಷೀಣಿಸಿದ ಹುಲಿ ಸಂತತಿ; 4 ವರ್ಷಗಳಲ್ಲಿ ಕಳೆದುಕೊಂಡದ್ದೆಷ್ಟು ಗೊತ್ತೇ?
ಸಾಂದರ್ಭಿಕ ಚಿತ್ರ PC: x.com/scroll_in
ನಾಗ್ಪುರ: ಅಪಘಾತ, ಕಳ್ಳಬೇಟೆ ಮತ್ತು ವಿದ್ಯುತ್ ಸ್ಪರ್ಶದಂಥ ದುರ್ಘಟನೆಗಳಿಂದ ಮಹಾರಾಷ್ಟ್ರದಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ 142 ಹುಲಿಗಳು ಮತ್ತು 537 ಚಿರತೆಗಳು ಮೃತಪಟ್ಟಿವೆ ಎಂಬ ಆತಂಕಕಾರಿ ಅಂಕಿ ಅಂಶ ಇದೀಗ ಬಹಿರಂಗವಾಗಿದೆ. 2022ರ ಜನವರಿಯಿಂದ 2025ರ ಸೆಪ್ಟೆಂಬರ್ ವರೆಗೆ ರಾಜ್ಯದಲ್ಲಿ ಹೇಗೆ ಹುಲಿಸಂತತಿ ಕ್ಷೀಣಿಸಿದೆ ಎಂಬ ಅಂಕಿ ಅಂಶ ಮಾಹಿತಿಹಕ್ಕು ಕಾಯ್ದೆಯಡಿ ಕಾರ್ಯಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷರು ನೀಡಿದ ಉತ್ತರದಿಂದ ತಿಳಿದುಬಂದಿದೆ.
ಈ ವರ್ಷದ ಮೊದಲ ಒಂಬತ್ತು ತಿಂಗಳಲ್ಲಿ ಮಹಾರಾಷ್ಟ್ರದಲ್ಲಿ 35 ಹುಲಿಗಳು ಹಾಗೂ 115 ಚಿರತೆಗಳು ಬಲಿಯಾಗಿವೆ. 2024ರಲ್ಲಿ 26 ಹುಲಿಗಳು, 2023ರಲ್ಲಿ 52 ಹಾಗೂ ಅದಕ್ಕೂ ಹಿಂದಿನ ವರ್ಷ 29 ಹುಲಿಗಳು ಬಲಿಯಾಗಿದ್ದವು. ಈ ವರ್ಷದ ಹುಲಿಗಳ ಸಾವಿನ ಪೈಕಿ 21 ಹುಲಿಗಳು ಸಹಜ ಕಾರಣದಿಂದ ಮೃತಪಟ್ಟಿದ್ದರೆ, ಐದು ಅಪಘಾತಗಳಲ್ಲಿ ಹಾಗೂ ಮತ್ತೈದು ವಿದ್ಯುತ್ಸ್ಪರ್ಶ ಮತ್ತು ಕಳ್ಳಬೇಟೆಯಿಂದ ಮೃತಪಟ್ಟಿವೆ. ಇತರ ನಾಲ್ಕು ಹುಲಿಗಳ ಸಾವಿಗೆ ಯಾವುದೇ ನಿರ್ದಿಷ್ಟ ಕಾರಣ ತಿಳಿದುಬಂದಿಲ್ಲ.
2022ರಿಂದೀಚೆಗೆ ಸಂಭವಿಸಿದ 142 ಹುಲಿಗಳ ಸಾವಿನ ಪೈಕಿ, 84 ಸಹಜ ಸಾವು ಸಂಭವಿಸಿದೆ. 23 ಹುಲಿಗಳು ಅಪಘಾತಗಳಲ್ಲಿ, 29 ಕಳ್ಳಬೇಟೆಯಲ್ಲಿ ಜೀವ ಕಳೆದುಕೊಂಡಿವೆ. ಆರು ಪ್ರಕರಣಗಳಲ್ಲಿ ಸಾವಿನ ನಿಖರ ಕಾರಣ ತಿಳಿದುಬಂದಿಲ್ಲ. ಕಳ್ಳಬೇಟೆಗಾರರು ಸಾಮಾನ್ಯವಾಗಿ ವಿದ್ಯುತ್ ಸ್ಪರ್ಶ ಅಥವಾ ಅರಣ್ಯ ಪ್ರದೇಶದಲ್ಲಿ ಬಲೆ ಬೀಸಿ ಗುಂಡು ಹಾರಿಸುವ ಮೂಲಕ ಹುಲಿಗಳನ್ನು ಹತ್ಯೆ ಮಾಡುತ್ತಿದ್ದಾರೆ ಎಂದು ತಜ್ಞರು ಹೇಳಿದ್ದಾರೆ.
"ಕಳ್ಳಬೇಟೆಗಾರರು ಮುಖ್ಯವಾಗಿ ಕಪ್ಪು ಮಾರುಕಟ್ಟೆಯಲ್ಲಿ ಅತ್ಯಧಿಕ ಮೌಲ್ಯ ಹೊಂದಿರುವ ಹುಲಿಯ ಅಂಗಾಂಗಗಳು ಮತ್ತು ಉಗುರಿಗಾಗಿ ಹತ್ಯೆ ಮಾಡುತ್ತಾರೆ. ಇಂದು ಕೆಲವೊಮ್ಮೆ ಸಾಕು ಪ್ರಾಣಿಗಳ ಮೇಲೆ ದಾಳಿ ಮಾಡುವುದನ್ನು ತಡೆಯುವ ಸಲುವಾಗಿಯೂ ಹುಲಿಗಳ ಹತ್ಯೆ ನಡೆಯುತ್ತದೆ" ಎಂದು ವನ್ಯಜೀವಿ ಅಪರಾಧ ವಿಶ್ಲೇಷಕರೊಬ್ಬರು ಹೇಳುತ್ತಾರೆ.
ಚಿರತೆಗಳ ಸಾವಿನ ವಿಚಾರಕ್ಕೆ ಬಂದರೆ 2025ರಲ್ಲಿ 115 ಸಾವಿಗೀಡಾಗಿದ್ದು, ಈ ಪೈಕಿ 42 ಸಹಜ ಕಾರಣಗಳಿಂದ, 42 ಅಪಘಾತಗಳಿಂದ, ಎರಡು ಬೇಟೆಯಿಂದ ಹಾಗೂ ಮೂರು ವಿದ್ಯುತ್ ಸ್ಪರ್ಶದಿಂದ ಜೀವ ಕಳೆದುಕೊಂಡಿವೆ. 21 ಚಿರತೆಗಳ ಸಾವಿಗೆ ಕಾರಣ ತಿಳಿದು ಬಂದಿಲ್ಲ. ಈ ಹಿಂದಿನ ಮೂರು ವರ್ಷಗಳಲ್ಲಿ ಅನುಕ್ರಮವಾಗಿ ರಾಜ್ಯದಲ್ಲಿ 144, 138 ಹಾಗೂ 140 ಚಿರತೆಗಳು ಜೀವ ಕಳೆದುಕೊಂಡಿದ್ದವು. ಅಭಯ್ ಕೋಲಾರಕರ ಎಂಬುವವರು ಸಲ್ಲಿಸಿದ ಆರ್‌ಟಿಐ ಅರ್ಜಿಗೆ ನೀಡಿದ ಉತ್ತರದಲ್ಲಿ ಈ ಅಂಕಿ ಅಂಶಗಳು ಬಹಿರಂಗವಾಗಿವೆ.