×
Ad

ಕೇಂದ್ರ ಸಚಿವರ ಸಮ್ಮುಖದಲ್ಲೇ ಟಿಎಂಸಿ- ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ: ಹಲವು ಮಂದಿಗೆ ಗಾಯ

Update: 2024-03-20 08:45 IST

Photo: PTI

ಕೊಲ್ಕತ್ತಾ: ಪಶ್ಚಿಮ ಬಂಗಾಳದ ಕೂಚ್ ಬೆಹಾರಿ ಜಿಲ್ಲೆಯ ದಿನ್ ಹತಾ ಪಟ್ಟಣದಲ್ಲಿ ಮಂಗಳವಾರ ರಾತ್ರಿ ತೃಣಮೂಲ ಕಾಂಗ್ರೆಸ್ ಪಕ್ಷ ಮತ್ತು ಭಾರತೀಯ ಜನತಾ ಪಕ್ಷದ ಕಾರ್ಯಕರ್ತರ ನಡುವೆ ಕೇಂದ್ರ ಸಚಿವರ ಸಮ್ಮುಖದಲ್ಲೇ ನಡೆದ ಘರ್ಷಣೆಯಲ್ಲಿ ಪೊಲೀಸರು ಸೇರಿದಂತೆ ಹಲವು ಮಂದಿ ಗಾಯಗೊಂಡಿದ್ದಾರೆ.

ಟಿಎಂಸಿಯ ಶಾಸಕ ಮತ್ತು ಉತ್ತರ ಬಂಗಾಳ ಅಭಿವೃದ್ಧಿ ಸಚಿವ ಉದಯನ್ ಗುಹಾ ಮತ್ತು ಕೂಚ್ ಬೆಹಾರಿ ಸಂಸದ ಹಾಗೂ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿಶಿತ್ ಪ್ರಾಮಾಣಿಕ್ ಅವರ ಸಮ್ಮುಖದಲ್ಲೇ ಈ ಘರ್ಷಣೆ ನಡೆದಿದೆ ಎಂದು ಉಭಯ ಮುಖಂಡರು ಒಪ್ಪಿಕೊಂಡಿದ್ದಾರೆ. ಆದರೆ ಇದಕ್ಕೆ ಕುಮ್ಮಕ್ಕು ನೀಡಿರುವ ಬಗ್ಗೆ ಪರಸ್ಪರರು ದೋಷಾರೋಪ ಮಾಡಿದ್ದಾರೆ.

ಏಳು ಹಂತದ ಲೋಕಸಭಾ ಚುಣಾವಣೆ ಘೋಷಣೆಯಾದ ಬಳಿಕ ಉಭಯ ಪಕ್ಷಗಳ ಕಾರ್ಯಕರ್ತರ ನಡುವೆ ನಡೆದ ಮೊದಲ ಘರ್ಷಣೆ ಇದಾಗಿದೆ. ಹಲವು ಅಂಗಡಿಗಳಿಗೆ ಇದರಿಂದ ಹಾನಿಯಾಗಿದೆ. ಉಪವಿಭಾಗ ಪೊಲೀಸ್ ಅಧಿಕಾರಿಯೊಬ್ಬರು ಗುಂಪು ಚದುರಿಸುವ ಪ್ರಯತ್ನದಲ್ಲಿದ್ದಾಗ ಅವರಿಗೆ ಗಾಯಗಳಾಗಿವೆ.

ಘಟನೆಯ ಹಿನ್ನೆಲೆಯಲ್ಲಿ ಬುಧವಾರ ಬೆಳಿಗ್ಗೆ ಒಂದು ದಿನದ ಬಂದ್ ಗೆ ಟಿಎಂಸಿ ಕರೆ ನೀಡಿದೆ. ಗುಹಾ ಬಂಧನಕ್ಕೆ ಆಗ್ರಹಿಸಿ ದಿನ್ ಹಾತ್ ಪೊಲೀಸ್ ಠಾಣೆ ಮುಂದೆ ಬಿಜೆಪಿ ಧರಣಿ ಆರಂಭಿಸಿದೆ.

ಘಟನೆ ಬಗ್ಗೆ ಜಿಲ್ಲೆಯ ಅಧಿಕಾರಿಗಳಿಂದ ಚುನಾವಣಾ ಆಯೋಗ ವರದಿ ಕೇಳಿದೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.

ಟಿಎಂಸಿಯನ್ನು ತೊರೆದು 2019ರಲ್ಲಿ ಕೂಚ್ ಬೆಹಾರ್ ನಿಂದ ಸ್ಪರ್ಧಿಸಿ ಗೆದ್ದ ನಿಶಿತ್ ಪ್ರಾಮಾಣಿಕ್, ಪ್ರಚಾರಕ್ಕೆ ಆಗಮಿಸಿದ್ದರು. ಉದಯನ್ ಗುಹಾ ಬೆಂಬಗಲಿರು ತಮ್ಮ ಬೆಂಗಲಿರ ಮೇಲೆ ಅಪ್ರಚೋದಿತ ದಾಳಿ ಮಾಡಿದ್ದಾರೆ ಎನ್ನುವುದು ಅವರ ಆರೋಪ.

ಇದನ್ನು ಗುಹಾ ನಿರಾಕರಿಸಿದ್ದು, "ಕಾರ್ಯಕರ್ತರು ಹಮ್ಮಿಕೊಂಡಿದ್ದ ಹುಟ್ಟುಹಬ್ಬದ ಕಾರ್ಯಕ್ರಮ ಮುಗಿಸಿ ನಾನು ಬರುತ್ತಿದ್ದೆ. ಪ್ರಾಮಾಣಿಕ್ ಅವರ ಬೆಂಗಾವಲು ವಾಹನ ಬರುವಾಗ ರಸ್ತೆ ಪಕ್ಕ ನಿಂತಿದ್ದೆ. ನಮ್ಮತ್ತ ಬಾಣಗಳನ್ನು ಬಿಟ್ಟು ನಮ್ಮ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದರು" ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News