×
Ad

ಟ್ರಂಪ್‌ 50% ಸುಂಕಾಸ್ತ್ರ: ಭಾರತದ ಮೇಲೆ ಯಾವ ಪರಿಣಾಮ ಬೀರಲಿದೆ? ವಿಶ್ಲೇಷಕರು ಹೇಳುವುದೇನು?

ಭಾರತದ ಮೇಲೆ 50% ಸುಂಕ ಇಂದಿನಿಂದಲೇ ಜಾರಿ

Update: 2025-08-27 13:14 IST

ಡೊನಾಲ್ಡ್‌ ಟ್ರಂಪ್‌ (Photo: PTI)

ಹೊಸದಿಲ್ಲಿ : ಭಾರತೀಯ ಸರಕುಗಳ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಧಿಸಿದ ಹೆಚ್ಚುವರಿ ಶೇ.25 ರಷ್ಟು ಸುಂಕ ಬುಧವಾರದಿಂದಲೇ ಜಾರಿಗೆ ಬಂದಿದೆ.

ಭಾರತ ರಷ್ಯಾದಿಂದ ತೈಲ ಖರೀದಿಯಿಂದ ಹಿಂದೆ ಸರಿಯಲು ನಿರಾಕರಿಸಿತ್ತು. ಇದರಿಂದ ಶೇ. 50 ರಷ್ಟು ಸುಂಕ ಜಾರಿಗೆ ಬಂದಿದೆ. ರಷ್ಯಾ- ಉಕ್ರೇನ್ ಯುದ್ಧ ನಿಲ್ಲಿಸುವ ತಂತ್ರದ ಭಾಗವಾಗಿ ಭಾರತದ ಮೇಲೆ ಹೆಚ್ಚುವರಿ ಸುಂಕ ವಿಧಿಸಲಾಗಿದೆ ಎಂದು ಅಮೆರಿಕ ಹೇಳಿಕೊಂಡಿದೆ. ಈ ಭಾರೀ ಸುಂಕ ಹೆಚ್ಚಳದಿಂದ ಭಾರತದ ರಫ್ತು ಕ್ಷೇತ್ರದ ಮೇಲೆ ದೊಡ್ಡ ಹೊಡೆತ ಬೀಳಲಿದೆ ಮತ್ತು ಆರ್ಥಿಕತೆಯ ಬೆಳವಣಿಗೆಯ ನಿರೀಕ್ಷೆಗಳನ್ನು ಕುಗ್ಗಿಸಬಹುದು ಎಂದು ವಿಶ್ಲೇಷಕರು ಎಚ್ಚರಿಸಿದ್ದಾರೆ.

ಜಾಗತಿಕ ವ್ಯಾಪಾರ ಸಂಶೋಧನಾ ಉಪಕ್ರಮ (GTRI) ಪ್ರಕಾರ, ಅಮೆರಿಕದ ಸುಂಕಗಳು 60.2 ಬಿಲಿಯನ್ ಡಾಲರ್ ಮೌಲ್ಯದ ಭಾರತೀಯ ರಫ್ತುಗಳ ಮೇಲೆ ಪರಿಣಾಮ ಬೀರಲಿವೆ. ಜವಳಿ, ರತ್ನಗಳು, ಆಭರಣಗಳು, ಮೀನು, ಕಾರ್ಪೆಟ್‌ಗಳು ಮತ್ತು ಪೀಠೋಪಕರಣಗಳ ಕ್ಷೇತ್ರಗಳಲ್ಲಿ ರಫ್ತು70%ವರೆಗೆ ಕುಸಿಯಬಹುದು. ಇದರಿಂದ ಲಕ್ಷಾಂತರ ಕಾರ್ಮಿಕರ ಉದ್ಯೋಗದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

2025ರ ಹಣಕಾಸು ವರ್ಷದಲ್ಲಿ 86.5 ಬಿಲಿಯನ್ ಡಾಲರ್ ಮೌಲ್ಯದ ವಸ್ತುಗಳನ್ನು ಅಮೆರಿಕಗೆ ರಫ್ತು ಮಾಡಲಾಗಿದೆ. ಆದರೆ, ಇದೇ ಸುಂಕಗಳು ಮುಂದುವರಿದರೆ ಮುಂದಿನ ವರ್ಷ 49.6 ಬಿಲಿಯನ್‌ಗೆ ಇಳಿಯಬಹುದು ಎಂದು ಅಂದಾಜಿಸಲಾಗಿದೆ. ಈ ಸ್ಥಿತಿಯನ್ನು ಬಳಸಿಕೊಂಡು ಚೀನಾ, ವಿಯೆಟ್ನಾಂ ಮತ್ತು ಮೆಕ್ಸಿಕೊದಂತಹ ದೇಶಗಳು ಅಮೆರಿಕದ ಮಾರುಕಟ್ಟೆಯಲ್ಲಿ ಲಾಭ ಪಡೆಯುವ ಸಾಧ್ಯತೆಯಿದೆ.

ರಾಯಿಟರ್ಸ್ ಮತ್ತು ಎಕ್ಸ್ ಪೋರ್ಟರ್ಸ್‌ ಗ್ರೂಪ್ (exporter groups) ಪ್ರಕಾರ, ಅಮೆರಿಕ ವಿಧಿಸಿರುವ ಹೆಚ್ಚುವರಿ ಸುಂಕವು, ಭಾರತದಿಂದ ಅಮೆರಿಕಕ್ಕೆ ಸಾಗುವ ಒಟ್ಟು ರಫ್ತಿನ (87 ಬಿಲಿಯನ್) ಸುಮಾರು 55 ಪ್ರತಿಶತದ ಮೇಲೆ ಪರಿಣಾಮ ಬೀರಬಹುದು. ಇದರಿಂದ ಬಾಂಗ್ಲಾದೇಶ, ಚೀನಾ ಮತ್ತು ವಿಯೆಟ್ನಾಂ ಸೇರಿದಂತೆ ದೇಶಗಳಿಗೆ ಲಾಭವಾಗುವ ಸಾಧ್ಯತೆ ಇದೆ.

ಸುಂಕ ಹೆಚ್ಚಳ ಜವಳಿ, ಉಡುಪುಗಳು, ರತ್ನಗಳು ಮತ್ತು ಆಭರಣಗಳು, ಮೀನು ರಫ್ತು ಮತ್ತು ಚರ್ಮದ ಉತ್ಪನ್ನಗಳ ರಫ್ತಿನ ಮೇಲೆ ಪರಿಣಾಮ ಬೀರಲಿದೆ.

ಮೂಡೀಸ್ ಅನಾಲಿಟಿಕ್ಸ್(Moody’s Analytics) ನ ವಿಶ್ಲೇಷಣೆಯು ಭಾರತೀಯ ಸರಕುಗಳ ಮೇಲಿನ ಅಮೆರಿಕದ ಹೊಸ ಸುಂಕಗಳು ರಫ್ತಿನ ಬೇಡಿಕೆಯನ್ನು ತೀವ್ರವಾಗಿ ಕಡಿಮೆ ಮಾಡುತ್ತದೆ ಎಂದು ಎಚ್ಚರಿಸಿದೆ.

ಅಮೆರಿಕಾ ಭಾರತದ ಅತಿ ದೊಡ್ಡ ಗ್ರಾಹಕ. ಅಮೆರಿಕಗೆ ರಫ್ತು ಕಡಿಮೆಯಾದರೆ ಭಾರತಕ್ಕೆ ನಷ್ಟವಾಗುವುದು ಖಚಿತ ಎಂದು ವರದಿ ತಿಳಿಸಿದೆ. ಕೆಲವು ಕಂಪೆನಿಗಳು ಮಾರಾಟ ಉಳಿಸಿಕೊಳ್ಳಲು ಬೆಲೆ ಇಳಿಸಬಹುದು. ಆದರೆ ಇದರಿಂದ ಲಾಭಾಂಶ ಕಡಿಮೆಯಾಗುತ್ತದೆ, ವೇತನ ಹೆಚ್ಚಳವನ್ನು ಮಿತಿಗೊಳಿಸುತ್ತದೆ, ಹೂಡಿಕೆ ಕುಸಿತ ಸೇರಿದಂತೆ ಮುಂತಾದ ಸಮಸ್ಯೆಗಳಿಂದ ಒಟ್ಟಾರೆ ವ್ಯಾಪಾರ ಕುಗ್ಗುವ ಆತಂಕವಿದೆ ಎಂದು ಮೂಡೀಸ್ ಎಚ್ಚರಿಸಿದೆ.

ಔಷಧಗಳು, ಸ್ಮಾರ್ಟ್‌ಪೋನ್‌ಗಳು ಮತ್ತು ಉಕ್ಕು ಕ್ಷೇತ್ರಗಳ ಮೇಲೆ ಅಮೆರಿಕದ ಸುಂಕಗಳಿಂದ ಹೆಚ್ಚು ಪರಿಣಾಮ ಬೀರುವುದಿಲ್ಲ. ಅಮೆರಿಕವು ಔಷಧಗಳು ಮತ್ತು ಎಲೆಕ್ಟ್ರಾನಿಕ್ ಸರಕುಗಳಂತಹ ಕೆಲವು ಕ್ಷೇತ್ರಗಳನ್ನು ಹೆಚ್ಚುವರಿ ಸುಂಕಗಳಿಂದ ವಿನಾಯಿತಿ ನೀಡಿದೆ. ಈ ಸುಂಕ ವಿನಾಯಿತಿಗಳು ಮತ್ತು ಭಾರತದಲ್ಲಿ ಬಲವಾದ ದೇಶೀಯ ಬೇಡಿಕೆಯು ಆರ್ಥಿಕ ಆಘಾತದ ಒಂದು ಭಾಗವನ್ನು ಸುಧಾರಿಸಿಕೊಳ್ಳಲು ಸಹಾಯ ಮಾಡಲಿದೆ.

ಭಾರತ-ಯುಎಸ್ ವ್ಯಾಪಾರ ಸಂಬಂಧಗಳು ಇತ್ತೀಚಿನ ವರ್ಷಗಳಲ್ಲಿ ವಿಸ್ತರಿಸಿವೆ. ಚೀನಾದ ವಿರುದ್ಧ ಆಸ್ಟ್ರೇಲಿಯಾ , ಜಪಾನ್, ಭಾರತವನ್ನು ಒಟ್ಟು ಗೂಡಿಸುವ ಮತ್ತು ಕ್ವಾಡ್ ನಂತಹ ವೇದಿಕೆ ಮೂಲಕ ಭಾರತವನ್ನು ಹತ್ತಿರಕ್ಕೆ ಸೆಳೆಯುವ ಗುರಿಯನ್ನು ಅಮೆರಿಕ ಬಹಳ ಹಿಂದಿನಿಂದಲೂ ಹೊಂದಿದೆ. ಈ ಸುಂಕ ಹೇರಿಕೆಯಿಂದ ಎರಡೂ ದೇಶಗಳ ಸಂಬಂಧಗಳ ಮೇಲೆ ಪರಿಣಾಮ ಬೀರಲಿದೆ.

ಅಹಮದಾಬಾದ್‌ನಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ರೈತರು, ಸಣ್ಣ ಕೈಗಾರಿಕೆಗಳು ಮತ್ತು ದೇಶೀಯ ಉತ್ಪಾದಕರ ಹಿತಾಸಕ್ತಿಯ ವಿಚಾರದಲ್ಲಿ ಭಾರತ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ. ನಮ್ಮ ಮೇಲಿನ ಒತ್ತಡ ಹೆಚ್ಚಾಗಬಹುದು, ಆದರೆ ನಾವು ಅದನ್ನೆಲ್ಲ ಸಹಿಸಿಕೊಳ್ಳುತ್ತೇವೆ. ಜನರು ಮತ್ತು ವ್ಯಪಾರಿಗಳು ಸ್ವದೇಶಿ ಸರಕುಗಳಿಗೆ ಆದ್ಯತೆ ನೀಡಬೇಕೆಂದು ಒತ್ತಾಯಿಸಿದರು. ಅಮೆರಿಕದ ಆರ್ಥಿಕ ಒತ್ತಡದ ನಡುವೆ ಭಾರತ ಒಂದು ಹಾದಿಯನ್ನು ಕಂಡುಕೊಳ್ಳಲಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ಭಾರತೀಯ ಸರಕುಗಳ ಮೇಲೆ ಹೆಚ್ಚುವರಿಯಾಗಿ ಶೇ. 25 ರಷ್ಟು ಸುಂಕ ವಿಧಿಸುವ ಕಾರ್ಯಕಾರಿ ಆದೇಶಕ್ಕೆ ಅಮೆರಿಕ ಅಧ್ಯಕ್ಷರು ಅಂಕಿತ ಹಾಕಿದ್ದಾರೆ. ಟ್ರಂಪ್ ಸಹಿ ಮಾಡಿದ ಆದೇಶದ ಪ್ರಕಾರ, ಹೆಚ್ಚುವರಿ ಸುಂಕಗಳು ಆಗಸ್ಟ್ 27ರಿಂದ ಜಾರಿಗೆ ಬಂದಿದೆ.

ರಷ್ಯಾದಿಂದ ತೈಲ ಖರೀದಿಯ ಕುರಿತು ಭಾರತ ಹೊಸದಾದ ಯಾವುದೇ ನಿರ್ದೇಶನ ನೀಡಿಲ್ಲ. ಭಾರತೀಯ ಸರಕುಗಳ ಮೇಲೆ ಅಮೆರಿಕ ಸುಂಕಗಳನ್ನು ಹೆಚ್ಚಿಸಿದ್ದರೂ ಭಾರತವು ರಷ್ಯಾದಿಂದ ತೈಲ ಖರೀದಿಯನ್ನು ಮುಂದುವರಿಸಲಿದೆ ಎಂದು ಮಾಸ್ಕೋದಲ್ಲಿನ ಭಾರತೀಯ ರಾಯಭಾರಿ ಹೇಳಿದ್ದಾರೆ. ನಮ್ಮ ಉದ್ದೇಶ ಭಾರತದ 1.4 ಶತಕೋಟಿ ಜನರ ಇಂಧನ ಸುರಕ್ಷತೆ ಮತ್ತು ರಷ್ಯಾ ಹಾಗೂ ಇತರ ಹಲವಾರು ದೇಶಗಳೊಂದಿಗೆ ಭಾರತದ ಸಹಕಾರವು ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಸ್ಥಿರತೆಯನ್ನು ತರಲು ಸಹಾಯ ಮಾಡಿದೆ ಎಂದು ಮಾಸ್ಕೋದಲ್ಲಿನ ಭಾರತೀಯ ರಾಯಭಾರಿ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News