ಉತ್ತರ ಪ್ರದೇಶ: ಪ್ರಯಾಣಿಕರಿಗೆ ನಮಾಝ್ ನಿರ್ವಹಿಸಲು ಬಸ್ ನಿಲ್ಲಿಸಿ ಅಮಾನತುಗೊಂಡಿದ್ದ ಬಸ್ ಕಂಡಕ್ಟರ್ ಆತ್ಮಹತ್ಯೆ
ಮೋಹಿತ್ ಯಾದವ್
ಲಕ್ನೋ : ಇತ್ತೀಚೆಗೆ ಇಬ್ಬರು ಪ್ರಯಾಣಿಕರಿಗೆ ಬಸ್‌ನಿಂದ ಇಳಿದು ನಮಾಝ್ ನಿರ್ವಹಿಸಲು ಅನುವು ಮಾಡಿಕೊಟ್ಟಿದ್ದಕ್ಕೆ ಅಮಾನತುಗೊಂಡಿದ್ದ ಬಸ್ ಕಂಡಕ್ಟರ್ ಮೋಹಿತ್ ಯಾದವ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆ ಬರೇಲಿಯ ಗುತ್ತಿಗೆ ಬಸ್ ಉದ್ಯೋಗಿಗಳಲ್ಲಿ ಅಪಾರ ದುಃಖ ಮೂಡಿಸಿದೆ.
ಮೂವತ್ತೆರಡು ವರ್ಷದ ಯಾದವ್ ಉತ್ತರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ನಿಗಮದ ಕೌಶಂಬಿ-ದಿಲ್ಲಿ ಮಾರ್ಗದ ಬಸ್ಸಿನಲ್ಲಿ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದರು. ಈ ವರ್ಷದ ಜೂನ್ 3ರಂದು ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಮುಸ್ಲಿಂ ಪ್ರಯಾಣಿಕರಿಗೆ ರಸ್ತೆ ಬದಿಯಲ್ಲಿ ನಮಾಝ್ ಸಲ್ಲಿಸಲು ಬಸ್ಸನ್ನು ರಾಮಪುರ್ ಸಮೀಪ ಒಂದೆರಡು ನಿಮಿಷ ನಿಲ್ಲಿಸುವಂತೆ ಅವರು ಬಸ್ ಚಾಲಕ ಕೆಪಿ ಸಿಂಗ್ ಬಳಿ ಮನವಿ ಮಾಡಿದ್ದರು. ಇದು ಇತರ ಪ್ರಯಾಣಿಕರಿಂದ ವ್ಯಾಪಕ ವಿರೋಧಕ್ಕೆ ಒಳಗಾಗಿತ್ತು.
ಈ ಘಟನೆಯ ನಂತರ ಬಸ್ ಚಾಲಕ ಮತ್ತು ಕಂಡಕ್ಟರ್ ಸೇವೆಯಿಂದ ಅಮಾನತುಗೊಂಡಿದ್ದರು. ಅಮಾನತುಗೊಂಡ ನಂತರ ಬಹಳಷ್ಟು ಸಮಸ್ಯೆಗೀಡಾಗಿದ್ದ ಯಾದವ್ ಆರ್ಥಿಕವಾಗಿಯೂ ಸಂಕಷ್ಟದಲ್ಲಿದ್ದರೆಂದು ತಿಳಿದು ಬಂದಿದೆ. ಅಮಾನತುಗೊಂಡಿದ್ದರಿಂದ ಪರ್ಯಾಯ ಉದ್ಯೋಗ ಗಳಿಸುವುದೂ ಕಷ್ಟವಾಗಿತ್ತು.
ಆಗಸ್ಟ್ 27ರಂದು ಯಾದವ್ ನಾಪತ್ತೆಯಾಗಿದ್ದರೆ ಮರುದಿನ ಅವರ ಮನೆ ಸಮೀಪದ ರೈಲ್ವೆ ಹಳಿಯಲ್ಲಿ ಯಾದವ್ ರ ಮೃತದೇಹ ಪತ್ತೆಯಾಗಿತ್ತು. ಪೊಲೀಸರು ಆತ್ಮಹತ್ಯೆ ಪ್ರಕರಣ ದಾಖಲಿಸಿದ್ದಾರೆ.
ಯಾದವ್ ಮತ್ತು ಸಿಂಗ್ ಇಬ್ಬರನ್ನೂ ಅಮಾನತುಗೊಳಿಸಿರುವುದು ಅಸಮರ್ಥನೀಯ ಎಂದು ಉತ್ತರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ನಿಗಮ ಉದ್ಯೋಗಿಗಳ ಯೂನಿಯನ್ ಹೇಳಿದೆಯಲ್ಲದೆ ಯಾದವ್ ಕುಟುಂಬಕ್ಕೆ ಸಂಪೂರ್ಣ ಬೆಂಬಲ ಘೋಷಿಸಿದೆ ಹಾಗೂ ಆತನ ಸಾವಿಗೆ ಕಾರಣವಾದ ಸನ್ನಿವೇಶಗಳನ್ನು ವಿವರಿಸಿ ದೂರು ದಾಖಲಿಸಿದ್ದೇ ಆದಲ್ಲಿ ಕುಟುಂಬಕ್ಕೆ ಸಹಕಾರ ನೀಡುವುದಾಗಿ ತಿಳಿಸಿದೆ.