ರಷ್ಯಾ ಜತೆ ಅಮೆರಿಕ ವಹಿವಾಟು: ಭಾರತದ ಆರೋಪಕ್ಕೆ ಟ್ರಂಪ್ ಉತ್ತರ ಏನು ಗೊತ್ತೇ?
ವಾಷಿಂಗ್ಟನ್: ರಷ್ಯಾ ಜತೆ ವ್ಯಾಪಾರ ಸಂಬಂಧ ಹೊಂದದಂತೆ ಬೇರೆ ದೇಶಗಳಿಗೆ ತಾಕೀತು ಮಾಡುತ್ತಿರುವ ಅಮೆರಿಕ ಕೂಡಾ ರಷ್ಯಾ ಜತೆಗೆ ವ್ಯಾಪಾರ ಸಂಬಂಧ ಹೊಂದಿದೆ ಎಂಬ ಭಾರತದ ಹೇಳಿಕೆ ಬಗ್ಗೆ ಮಂಗಳವಾರ ಪ್ರತಿಕ್ರಿಯಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, "ಈ ಬಗ್ಗೆ ನನಗೇನೂ ತಿಳಿಯದು. ನಾನು ಈ ಬಗ್ಗೆ ಪರಿಶೀಲಿಸಿ ನಿಮ್ಮ ಬಳಿ ಮತ್ತೆ ಬರುತ್ತೇನೆ" ಎಂದು ಮಾಧ್ಯ ಪ್ರತಿನಿಧಿಗಳ ಪ್ರಶ್ನೆಗಳಿಗೆ ಉತ್ತರಿಸಿದರು. ಆದಾಗ್ಯೂ ರಷ್ಯಾ ಜತೆಗೆ ಭಾರತದ ವ್ಯಾಪಾರ- ವ್ಯವಹಾರವನ್ನು ಟ್ರಂಪ್ ಕಟುವಾಗಿ ಟೀಕಿಸಿದರು.
ಅಮೆರಿಕ ಜತೆಗಿನ ವ್ಯಾಪಾರ ಒಪ್ಪಂದದ ಬಗ್ಗೆ ಮಾತುಕತೆಗಳು ನಡೆಯುತ್ತಿರುವ ನಡುವೆಯೇ ಕಳೆದ ವಾರ ಭಾರತದಿಂದ ಆಮದಾಗುವ ಸರಕುಗಳ ಮೇಲೆ ಶೇಕಡ 25ರಷ್ಟು ಸುಂಕ ಮತ್ತು ಅನಿರ್ದಿಷ್ಟ ದಂಡವನ್ನು ವಿಧಿಸಿ ಆದೇಶ ಹೊರಡಿಸಿದ ಟ್ರಂಪ್ ಆಗಸ್ಟ್ 1ರ ಗಡುವು ನೀಡಿದ್ದರು. ಚೀನಾ ಜತೆಗೆ ರಷ್ಯಾದಿಂದ ಅತ್ಯಧಿಕ ಇಂಧನ ಮತ್ತು ಸೇನಾ ಸಾಮಗ್ರಿ ಖರೀದಿಸುತ್ತಿರುವ ಭಾರತದ ಮೇಲೆ ಸುಂಕವನ್ನು ಹೆಚ್ಚಿಸುವ ಬೆದರಿಕೆ ಹಾಕಿದ್ದರು.
ಟ್ರಂಪ್ ನಡೆಗೆ ತಿರುಗೇಟು ನೀಡಿದ ಭಾರತ, ರಷ್ಯಾದಿಂದ ಅಮೆರಿಕ ಕೂಡಾ ಆಮದು ಮಾಡಿಕೊಳ್ಳುತ್ತಿದೆ ಎಂದು ಬಹಿರಂಗಪಡಿಸಿತ್ತು. ಅಮೆರಿಕ ತನ್ನ ಅಣ್ವಸ್ತ್ರ ಉದ್ಯಮಕ್ಕಾಗಿ ರಷ್ಯಾದಿಂದ ಯುರೇನಿಯಂ ಹೆಕ್ಸಾಫ್ಲೋರೈಡ್ ಮತ್ತು ಇವಿ ಉದ್ಯಮ, ರಸಗೊಬ್ಬರ ಮತ್ತು ರಾಸಾಯನಿಕಗಳಿಗಾಗಿ ಪಲ್ಲಾಡಿಯಂ ಖರೀದಿಸುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಆಪಾದಿಸಿದ್ದರು.
ಅಮೆರಿಕದ ಎಚ್ಚರಿಕೆಯ ಹೊರತಾಗಿಯೂ ಭಾರತ, ರಷ್ಯಾ ಜತೆಗಿನ ವಹಿವಾಟು ಕಡಿತಗೊಳಿಸುವ ಯಾವುದೇ ನಿರ್ಧಾರ ಪ್ರಕಟಿಸಿಲ್ಲ.